Pages

Ads 468x60px

Saturday 24 February 2018

ಹುಣಸೆ ಹಣ್ಣಿನ ಬಾತ್





ಹೊಸ ಹುಣಸೆ ಹಣ್ಣು ನಮ್ಮ ಮುಂದಿದೆ, ಏನಾದರೂ ಹೊಸತನದಲ್ಲಿ ತಿಂಡಿ ಮಾಡಲೇಬೇಕು.
ಮುಂಜಾನೆಗೊಂದು ಚಿತ್ರಾನ್ನ ಮಾಡೋಣ.
“ ಏನೂ ನಿನ್ನೆಯ ತಂಗಳನ್ನದ್ದೇ! “

ಶ್ರೀಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಹೇಳಿರುವ ತತ್ವದಂತೆ ನಿನ್ನೆಯ ಉಳಿಕೆಯನ್ನು ನಾಳೆಗೆ ಬಳಸುವ ಪದ್ಧತಿ ನಮ್ಮದಲ್ಲ, ತಂಗಳನ್ನದ ಪೆಟ್ಟಿಗೆಯೂ ಭಾರತೀಯರ ಅವಿಷ್ಕಾರವಲ್ಲ.

ಒಂದು ಲೋಟ ಅಕ್ಕಿಯಿಂದ ಅನ್ನ ಉದುರುದುರಾಗಿ ಮಾಡಿಟ್ಟು ಬಿಸಿ ಆರಲು ಬಿಡಬೇಕು.

ಅದ್ಸರೀ, ಅನ್ನ ಮಾಡುವುದು ಹೇಗೆ?

ಒಂದು ಲೋಟ ಸೋನಾ ಮಸೂರಿ ಅಕ್ಕಿಯನ್ನು ಐದಾರು ಸರ್ತಿ ತೊಳೆಯಿರಿ, ನೀರು ಬಸಿಯಿರಿ.
ಮೂರು ಲೋಟ ನೀರು ಕುಕ್ಕರಿಗೆ ಎರೆದು ಸ್ಟವ್ ಮೇಲೇರಿಸಿ,
ತೊಳೆದ ಅಕ್ಕಿಯನ್ನು ಹಾಕಿ ಬೇಯಿಸಿ.  
ಮೊದಲ ಸೀಟಿ ಬಂದೊಡನೆ ಉರಿ ತಗ್ಗಿಸಿ,
 10 ನಿಮಿಷ ಬಿಟ್ಟು ಸ್ಟವ್ ಆರಿಸಿ,
ಪ್ರೆಶರ್ ಇಳಿದ ನಂತರವೇ ಮುಚ್ಚಳ ತೆರೆದು ಆರಲು ಬಿಡಬೇಕು, ಅನ್ನ ಆಯ್ತು.

ಅನ್ನ ಸಿದ್ಧವಾಗುವ ಮೊದಲೇ ತೆಂಗಿನ ಮಸಾಲೆ ತಯಾರು ಮಾಡಬೇಕಾಗಿದೆ.

ಒಂದು ಕಡಿ ತೆಂಗಿನಕಾಯಿ ತುರಿಯಿರಿ.
ನಾಲ್ಕು ಒಣಮೆಣಸು,
ಒಂದು ಚಮಚ ಸಾಸಿವೆ,
ರುಚಿಗೆ ತಕ್ಕಷ್ಟು ಉಪ್ಪು,
ಲಿಂಬೆ ಗಾತ್ರದ ಬೆಲ್ಲ, ಪುಡಿ ಮಾಡಿದ್ದು,
ಹೊಸ ಹುಣಸೆಹಣ್ಣು ಬಂದಿದೆ, ನೆಲ್ಲಿಕಾಯಿ ಗಾತ್ರದ ಹುಣಸೆಹಣ್ಣು,
ಚಿಕ್ಕ ಚಮಚ ಅರಸಿಣ,
ಇಷ್ಟೂ ಸಾಮಗ್ರಿಗಳನ್ನು ನೀರು ಹಾಕದೆ ತೆಂಗಿನತುರಿಯೊಂದಿಗೆ ಅರೆಯಿರಿ.

ಒಂದು ಕಟ್ಟು ಕೊತ್ತಂಬರಿ ಸೊಪ್ಪು ಹೆಚ್ಚಿಟ್ಟು,
ಒಂದು ದೊಡ್ಡ ನೀರುಳ್ಳಿ ಹೆಚ್ಚಿಟ್ಟು,
ಪುನಃ ಮಿಕ್ಸಿಗೆ ಹಾಕಿ, ಈಗಾಗಲೇ ಅರೆದಿರುವ ಸಾಮಗ್ರಿಗಳ ಕೂಡಾ ಎರಡು ಸುತ್ತು ತಿರುಗಿಸಿ,
ತೆಂಗಿನ ಅರಪ್ಪು ಮಿಕ್ಸಿಯಿಂದ ಹೊರಗೆ ಬರಲಿ.



ಇನ್ನು,
ಬಾಣಲೆಗೆ ನಾಲ್ಕು ಚಮಚ ಶುದ್ಧವಾದ ತೆಂಗಿನೆಣ್ಣೆ ಎರೆದು,
2 ಚಮಚ ಸಾಸಿವೆ,
1 ಚಮಚ ಉದ್ದಿನಬೇಳೆ,
2 ಚೂರು ಒಣಮೆಣಸು,
ಸಾಸಿವೆ ಸಿಡಿದ ನಂತರ ಒಂದೆಸಳು ಕರಿಬೇವು ಹಾಕಿ,
ತೆಂಗಿನ ಅರಪ್ಪನ್ನು ಬೀಳಿಸಿ,
ಸೌಟಾಡಿಸಿ,
ಉರಿ ತಗ್ಗಿಸಿ,
ಮಾಡಿಟ್ಟ ಅನ್ನ ತಣಿದಿದೆ,
ಅವಶ್ಯವಿರುವಷ್ಟು ಅನ್ನ ಸೇರಿಸಿ,
ಸೌಟಿನಲ್ಲಿ ಕೆದಕಿ,
ಮೇಲಿನಿಂದ ತುಸು ನೀರು ಸಿಡಿಸಿದಂತೆ ಎರೆದು,
ಒಂದರೆಗಳಿಗೆ ಮುಚ್ಚಿ ಇಟ್ಟು ಸ್ಟವ್ ನಂದಿಸಿ.

ಇದೀಗ ಚಿತ್ರಾನ್ನವೆಂಬ ಹೆಸರಿನ ಕೊತ್ತಂಬರಿ ಸೊಪ್ಪಿನ ಬಾತ್/ ಹುಣಸೆ ಹಣ್ಣಿನ ಬಾತ್/ ನೀರುಳ್ಳಿಬಾತ್ ನಮ್ಮ ಮುಂದಿದೆ.



ಹುಣಸೆಯು tamarindus indica ಎಂಬ ಹೆಸರಿನಲ್ಲಿ ಸಸ್ಯಲೋಕದಲ್ಲಿ ಖ್ಯಾತಿ ಪಡೆಡಿದೆ. ಜಾಗತಿಕ ಮಟ್ಟದಲ್ಲಿ ಭಾರತವೇ ಹೆಚ್ಚು ಹುಣಸೆ ಹಣ್ಣಿನ ಉತ್ಪಾದಕ ರಾಷ್ಟ್ರವಾಗಿದೆ. ಅಡುಗೆ ಉಪಯೋಗದಲ್ಲಿ ಹಾಗೂ ಔಷಧಿಯಾಗಿ ಬಳಸುವಲ್ಲಿಯೂ ನಾವೇ ಮುಂದು.

 ಕ್ಯಾಲ್ಸಿಯಂ ಸಮೃದ್ಧಿಯ ಹುಣಸೆ ಹಣ್ಣು ಪಿತ್ತಶಾಮಕ. ಹಳೆಯ ಹುಳಿ ಆದಷ್ಟೂ ಉತ್ತಮ. ಹಳೆಯ ಹುಣಸೆ ಹುಳಿಗೆ ಕೂಡಾ ಬೇಡಿಕೆ ಇದೆ. ಲೋಹದ ಪಾತ್ರೆ ಉಪಕರಣಗಳನ್ನು ತೊಳೆದು ಝಗಮಗಿಸುವ ಹೊಳಪು ನೀಡುವ ಶಕ್ತಿ ಈ ಹಣ್ಣಿನಲ್ಲಿದೆ.

ಹಳೆಯ ಹುಣಸೆ ಹಣ್ಣಿನ ಪಾನಕ, ಬೇಸಿಗೆಯ ದಾಹ ನಿವಾರಕ. ಇದನ್ನು ಮಾಡುವುದು ಹೇಗೆ?

ಲಿಂಬೆ ಗಾತ್ರದ ಹುಳಿ
ಮೂರು ಅಚ್ಚು ಬೆಲ್ಲ
2 ಚಮಚ ಕಾಳುಮೆಣಸು
1 ಚಮಚ ಜೀರಿಗೆ

ಹುಳಿಯನ್ನು ನೀರೆರೆದು ಚೆನ್ನಾಗಿ ಕಿವುಚಿ, ನಿರುಪಯುಕ್ತ ಚರಟವನ್ನು ಶೋಧಿಸಿ,
ಬೆಲ್ಲವನ್ನು ನೀರೆರೆದು ಕುದಿಸಿ ಕರಗಿಸಿ,
ಹುಣಸೆ ರಸವನ್ನು ಎರೆದು,
ಸಾಂದ್ರವಾದ ಈ ದ್ರಾವಣಕ್ಕೆ ಹುಡಿ ಮಾಡಿದ ಕಾಳುಮೆಣಸು ಹಾಗೂ ಜೀರಿಗೆ ಹಾಕಿ ಕುದಿಸಿ.
ಪಾನಕದಂತೆ ಕುಡಿಯಲು ಸೂಕ್ತವಾಗುವಂತೆ ನೀರು ಎರೆಯಿರಿ.
ಉಪ್ಪು ಹಾಕದೇ ರುಚಿಯಿಲ್ಲ ಎಂಬ ಸೂಕ್ತಿಯಂತೆ ತುಸು ಉಪ್ಪು ಹಾಕುವಲ್ಲಿಗೆ ಪಾನಕ ತಯಾರಾಗಿದೆ.
ಬಿಸಿ ಇರುವಾಗಲೂ ಕುಡಿಯಿರಿ, ಆರಿದ ನಂತರವೂ ಕುಡಿಯಿರಿ, ಮನೆಗೆ ಬರುವ ಅತಿಥಿಗಳನ್ನು ಇದೇ ಪಾನಕದಿಂದ ಸತ್ಕರಿಸಿ.




Thursday 15 February 2018

ಬೀಂಬುಳಿ ಉಪ್ಪಿನಕಾಯಿ






ಉಪ್ಪಿನಕಾಯಿ ಜಾಡಿಗೆ ತುಂಬಿಸಿ ಆಯ್ತು.
“ ಓಹೋ, ಯಾರಿಗೆ ಪ್ಯಾಕ್ ಮಾಡ್ತಾ ಇದ್ದೀರಾ… ? “
“ ಮಗಳು ಬಂದಿದ್ದಾಳೆ, ಇವತ್ತು ಭಾನುವಾರ ಅಲ್ವೇ, ಹೊರಟು ನಿಂತಿದ್ದಾಳೆ, ಉಪ್ಪಿನ್ಕಾಯಿ ಇಲ್ಲದೆ ಹೋಗುವುದುಂಟೇ… ? “
 “ ಅದ್ಸರೀ, ಈ ಬಾರಿ ಯಾವ ಉಪ್ಪಿನಕಾಯಿ? ಮಾವಿನಕಾಯಿ ಸೀಸನ್ ಬಂತಲ್ಲ! “
“ ಅಯ್ಯೋ, ಮಾವಿನಮರ ಹೂ ಬಿಟ್ಟಿದೆಯಷ್ಟೇ, ಇದು ಬೀಂಬುಳಿಯದು. “
“ ಬೀಂಬುಳಿಯಾ… “
“ ಹ್ಞೂ, ಶುಂಠಿ, ಹಸಿಮೆಣಸು ಕೂಡಾ ಬಿದ್ದಿದೆ. “
“ ಹೌದಾ, ಹಾಗಿದ್ರೆ ಮಸಾಲೆ ಹೇಗೆ, ಕೊಂಡು ತಂದಿದ್ದಾ… “
“ ತಂದಿಟ್ಟದ್ದು ಇರಲಿಲ್ಲ ಕಣ್ರೀ… ಮನೆಯಲ್ಲೇ ಮಾಡಿದ ಮಸಾಲೆ ರುಚಿಯೇ ಬೇರೆ ಅಲ್ವಾ… “




15 ಬೀಂಬುಳಿ, ಕಾಯಿ ಇರೂದನ್ನು ಕೊಯ್ದು ತರುವುದು.
ಒಂದೇ ಗಾತ್ರದಲ್ಲಿ ಕತ್ತರಿಸಿ ಇಡುವುದು.
ಒಂದು ಇಂಚು ಉದ್ದದ ಶುಂಠಿಯ ಸಿಪ್ಪೆ ತೆಗೆದು ಚಿಕ್ಕದಾಗಿ ಕತ್ತರಿಸಿ,
ನಾಲ್ಕಾರು ಹಸಿಮೆಣಸು ಕೂಡಾ ಕತ್ತರಿಸಿ ಇಟ್ಟಾಗ ಒಂದನೇ ಸಿದ್ಧತೆ ಮುಗಿಯಿತು.

ಹೆಚ್ಚಿಟ್ಟ ಸಾಮಗ್ರಿಗಳನ್ನು ನೋಡಿಕೊಂಡು, ಎಲ್ಲವೂ ಕಣ್ಣಂದಾಜಿನ ಆಯ್ಕೆ ನಮ್ಮದು, ಅಳತೆಗಾಗಿ ಒಂದು ದೊಡ್ಡ ಚಮಚ ಹಾಗೂ ಪುಟ್ಟ ಚಮಚ ಇರಲಿ.

ಒಂದೂವರೆ ದೊಡ್ಡ ಚಮಚ ಸಾಸಿವೆ,
3 ದೊಡ್ಡ ಚಮಚ ಪುಡಿಯುಪ್ಪು,
ಒಂದು ಚಿಕ್ಕ ಚಮಚ ಜೀರಿಗೆ ಹಾಗೂ ಮೆಂತ್ಯ, ಅರಸಿಣ,
ಕಡ್ಲೆ ಗಾತ್ರದ ಇಂಗು,
10 - 12 ಒಣಮೆಣಸು.

ನಾನ್ ಸ್ಟಿಕ್ ಬಾಂಡ್ಲಿಗೆ ಎಣ್ಣೆ ಸವರಿ, ಮೇಲೆ ಹೇಳಿದಂತಹ ಮಸಾಲಾ ಸಾಮಗ್ರಿಗಳನ್ನು ಹುರಿಯಿರಿ.
ಸಾಸಿವೆ ಚಟಪಟ ಅನ್ನಬೇಕು.
ಮೆಂತ್ಯ ಜೀರಿಗೆಗಳ ಸುವಾಸನೆ ಬರಬೇಕು.
ಮೆಣಸು ಪರಪರ ಅನ್ನಬೇಕು, ಕೈಯಲ್ಲಿ ಮುಟ್ಟಿದಾಗ ಪುಡಿ ಆಗಬೇಕು.
ಹುರಿಯುವಿಕೆಯ ಕೊನೆಯ ಹಂತದಲ್ಲಿ ಪುಡಿಯುಪ್ಪು ಕೂಡಾ ಹಾಕಿ ಹುರಿಯಿರಿ, ಸ್ಟವ್ ಆರಿಸಿ, ಅರಸಿಣ ಉದುರಿಸಿ, ಆರಲು ಬಿಡಿ.

ಆರಿದ ನಂತರ ಮಿಕ್ಸಿಯ ಒಣ ಜಾಡಿಯಲ್ಲಿ ಹುಡಿ ಮಾಡಿ ಇಡುವುದು, ಹುರಿದ ಮಸಾಲೆ ಅಲ್ವೇ, ನುಣ್ಣಗಿನ ಪುಡಿ ಆಯ್ತು ಅನ್ನಿ.

ಬೀಂಬುಳಿ ಹೋಳುಗಳಿಗೆ ಈ ಹುರಿದ ಮಸಾಲೆ ಬೆರೆಸಿ ಇಡುವುದು.
ಅರ್ಧ ಗಂಟೆಯೊಳಗೆ ಮಸಾಲೆ ರಸಯುಕ್ತವಾಗಿ, ಉಪ್ಪಿನಕಾಯಿ ಸಿದ್ಧವಾಗಿದೆ.

ನಿನ್ನೆ ಸಂಜೆಗೆಲ್ಲ ಹಾಕಿಟ್ಟಿದ್ದು, ರಾತ್ರಿ ಊಟ ಮಾಡುವಾಗ ತಿಂದು ರುಚಿ ನೋಡಿಯೂ ಆಯ್ತು. “ ಈ ಉಪ್ಪಿನಕಾಯಿ ಆದೀತಾ ಮಗಳೇ… “ ಕೇಳಿ, ಒಪ್ಪಿಗೆಯೂ ಸಿಕ್ಕಿ, ಈಗ ಜಾಡಿಯಲ್ಲಿ ತುಂಬಿಸಿಟ್ಟೂ ಆಯ್ತು.

Averrhoa bilimbi ಎಂದು ಸಸ್ಯವಿಜ್ಞಾನದಲ್ಲಿ ಖ್ಯಾತವಾಗಿರುವ ಬೀಂಬುಳಿಯು ದಾರೆಹುಳಿಯ ಸಮೀಪವರ್ತಿ ಸಸ್ಯವಾಗಿರುತ್ತದೆ.

ಯಾವುದೇ ಮಾದರಿಯ ಉಪ್ಪಿನಕಾಯಿಗೂ ಬೀಂಬುಳಿಯು ಹೊಂದಿಕೆಯಾಗುತ್ತದೆ.  

ಬೀಂಬುಳಿ ಇಲ್ಲವೆಂದು ಬೇಸರಿಸದಿರಿ, ಮೇಲೆ ಹೇಳಿದಂತಹ ಮಸಾಲೆಯಿಂದ ಮಾವಿನಕಾಯಿ, ನಿಂಬೆಹಣ್ಣುಗಳನ್ನು ಬಳಸಿಯೂ ಉಪ್ಪಿನಕಾಯಿ ಮಾಡಿಕೊಳ್ಳಬಹುದು. 10 - 12 ನಿಂಬೆಹಣ್ಣು ಇದ್ದರೆ ಸಾಕು. ಮಾವಿನಕಾಯಿ ಇದ್ದರೆ ಎರಡು ತೋತಾಪುರಿ ಮಾವಿನಕಾಯಿ ಸಾಕಾದೀತು. ಆದರೆ ಉಪ್ಪನ್ನು ಹುರಿಯುವುದು ಬೀಂಬುಳಿಗೆ ಮಾತ್ರವಾಗಿದೆ, ಅತಿಯಾಗಿ ರಸ ಒಸರುವ ಬೀಂಬುಳಿ ಬೇಗನೆ ಹಾಳಾಗದಿರಲು ಈ ಉಪಾಯ ಅನುಸರಿಸಲು ಗೌರತ್ತೆ ಹೇಳಿಕೊಟ್ಟಿದ್ದು, ತಿಳಿಯಿತಲ್ಲ.





Friday 9 February 2018

ಹರಿವಾಣ ತತ್ವ



ಹಿರಣ್ಯದ ನಾಗಬನದ ಸಾನ್ನಿಧ್ಯದಲ್ಲಿ ಇನ್ನೊಂದು ದೈವಪ್ರಶ್ನೆಯ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಆಗಮಿಸುವ ಭಕ್ತಾದಿಗಳಿಗೆ, ದೈವಜ್ಞರಿಗೆ ಆದರದ ಸತ್ಕಾರದ ವ್ಯವಸ್ಥೆಯೂ ಇದ್ದಿತು. ಆ ಸಮಯದಲ್ಲಿ ಉಳಿಕೆಯಾದ ಹಾಲನ್ನು     ‘ ಅಮೃತಫಲ ‘ ವಾಗಿಸಿ ಬ್ಲಾಗಿನಲ್ಲಿ ಬರೆದೂ ಇದ್ದೇನೆ.

ಈಗೇನಪ್ಪಾ ವಿಷಯ ಅಂದರೆ, ದೈವಸನ್ನಿಧಿಯಲ್ಲವೇ, ಎಲೆ ಅಡಿಕೆ, ಹೂ, ಗಂಧ, ಕುಂಕುಮ, ಆರತಿ, ದೀಪ ಇತ್ಯಾದಿಯಾಗಿ ಹಲವು ಹಿತ್ತಾಳೆಯ ಹರಿವಾಣ, ಗಿಂಡಿ, ಸಕ್ಕಣಗಳೂ ಒಯ್ಯಲ್ಪಟ್ಟವು.

ಸಮಾರಂಭ ಮುಗಿದೊಡನೆ ಮನೆಯ ಒಳಗೆ ತಂದಿಟ್ಟ ಸಾಮಗ್ರಿಗಳನ್ನು ತೆಗೆದಿರಿಸುತ್ತಿದ್ದಂತೆ,   “ ಅರೆ, ಒಂದು ಹರಿವಾಣ ಇಲ್ಲ! “  ಎಂದು ಗೋಚರವಾಯಿತು.

ಆದರೂ ಸಾವಧಾನವಾಗಿ ಹುಡುಕಿದರಾಯ್ತು ಎಂದು ಸುಮ್ಮನಿದ್ದರಾಗದು, “ ಚೆನ್ನಪ್ಪ, ಇನ್ನೊಮ್ಮೆ ಹೋಗಿ ಆ ಜಾಗದಲ್ಲಿ ಹುಡುಕಿ ಬಾ, ಹರಿವಾಣ ಸಿಕ್ಕಬೇಕಲ್ಲ. “

ಅವನೂ ತಿರುಗಾ ಹೋಗಿ ಬಂದ, “ ಅಲ್ಲೇನೂ ಇಲ್ಲ ಅಕ್ಕ… “

ಛೇ, ಚಿಂತೆಗಿಟ್ಟುಕೊಂಡಿತು, ಅದು ಸೊಗಸಾದ ವಿವ್ಯಾಸವುಳ್ಳ ಹರಿವಾಣ, ಬಳ್ಳಿಯಂತಹ ಚಿತ್ತಾರವೂ ಅದರ ಮೇಲೆ ಇತ್ತು. ಮಗನ ಉಪನಯನದಲ್ಲಿ ಬಂಧುಗಳು ಕೊಟ್ಟಂತಹ ಉಡುಗೊರೆಯೂ ಆಗಿದ್ದ ಆ ಹರಿವಾಣವು ನನ್ನ ಅಚ್ಚುಮೆಚ್ಚಿನದು. ಏನೇ ವಿಶೇಷ ಖಾದ್ಯ ವಸ್ತುಗಳಿದ್ದರೂ ಅದೇ ಹರಿವಾಣದಲ್ಲಿಟ್ಟು ಫೊಟೋ ತೆಗೆದು ಇನ್ ಸ್ಟಾಗ್ರಾಮ್ ಗೆ ಅಪ್ ಲೋಡ್ ಮಾಡುವ ಹವ್ಯಾಸ ನನ್ನದಾಗಿತ್ತು. ಹೆಚ್ಚಾಗಿ ಬಳಸಲ್ಪಡುತ್ತಿದ್ದುದರಿಂದ ಫಳಫಳಾ ಅಂತಿತ್ತು. ಮೂಲೆಯಲ್ಲಿಟ್ಟಂತಹ ಓಬೀರಾಯನ ಕಾಲದ ಹರಿವಾಣಗಳು ಅದೆಷ್ಟೇ ಇದ್ದರೂ, ಕಿಲುಬು ಹಿಡಿದಂತಹ ಹಳೆಯ ಹರಿವಾಣಗಳ ಉಪಯೋಗ ಇಲ್ಲ.

ನಮ್ಮೆಜಮಾನ್ರ ತನಕ ದೂರು ಹೋಯಿತು.
“ ಕಾಣೆಯಾಗಿದೆ ಅಂತ ಅನ್ಬೇಡ. “ ಎಂದು ಸುಮ್ಮನಾದರು.

ಆಯಿತು. ನಾನು ಬಾಯಿ ಮುಚ್ಚಲೇಬೇಕಾಯ್ತು, ದಿನಗಳು ಕಳೆದಂತೆ ನನ್ನ ತಲೆಯಿಂದಲೂ ಹರಿವಾಣ ಕಣ್ಮರೆ ಆಯ್ತು.




ನಿನ್ನೆ ಸಂಜೆ ನಮ್ಮವರನ್ನು ಭೇಟಿಯಾಗಲು ಬಾಲಕೃಷ್ಣ ಶೆಟ್ಟಿ ಬಂದದ್ದು ಧ್ವನಿಯಿಂದಲೇ ತಿಳಿಯಿತು. ಹೊರಚಾವಡಿಗೆ ಬಂದು “ ಆಸರಿಗೆ ತರಲೇ… “ ಕೇಳಿದಾಗ, ನಮ್ಮವರು ಟೇಬಲ್ ಮೇಲೆ ಕೈಯಿಟ್ಟು ಸನ್ನೆ ಮಾಡಿದಾಗ,

ಹರಿವಾಣ ಬೆಚ್ಚಗೆ ಪ್ಲಾಸ್ಟಿಕ್ ಕವರಿನ ಹೊದಿಕೆಯೊಳಗೆ ಕುಳಿತಿತ್ತು!

“ ಅದೇನಾಯ್ತಕ್ಕಾ ಅಂದರೆ, ನಾವು ಎಲ್ಲಾ ಪ್ಯಾಕ್ ಮಾಡಿಕೊಂಡು ಹೋದೆವಾ…. ಮನೆ ತಲಪಿದ ನಂತರವೇ ತಿಳಿದದ್ದು ಹರಿವಾಣ ಹೂ ಕುಂಕುಮದ ಒಟ್ಟಿಗೆ…. ಬಂದದ್ದು. ಅದೂ ನಮ್ಮ ಮಾವ ಇದಾರಲ್ಲ ವೆಕಪ್ಪ ಶೆಟ್ರು, ಯಾವ ಪ್ರಸಾದವನ್ನೂ ಬಿಡಬಾರದೂ ಅಂತ ಹಿಡ್ಕೊಂಡು ಬಂದಿದಾರೆ, ನಾನೂ ಆವತ್ತೇ ಹೇಳ್ಬೇಕಿತ್ತು, ದಿನಾ ಮೊಬೈಲಲ್ಲಿ ಮಾತಾಡ್ತೇವೆ, ಆದ್ರೂ ನೆನಪಾಗಬೇಕಲ್ಲ, ಹೇಗೂ ಇಲ್ಲಿಗೆ ಬರುವುದೂ ಉಂಟಲ್ಲ… “

“ ಅದೇ ವಿಷಯ, ಇವರೂ ಏನಂದ್ರು ಗೊತ್ತಾ, ಕಾಣೆಯಾಗಿದೆ ಅಂತ ಹೇಳ್ಬೇಡ… “ ನಾನೂ ಮಾತು ಮುಗಿಸಿ, ಚಹಾ ಪಾನೀಯದೊಂದಿಗೆ ‘ ಸರಳ ಅಡುಗೆಗಳು ‘ ಪುಸ್ತಕದ ಕೊಡುಗೆಯೂ ಬಾಲಕೃಷ್ಣ ಶೆಟ್ಟರಿಗೆ ಸಂದಿತು.

ಹೌದೂ, ಈ ಕಾಣೆಯಾಗುವುದೆಂದರೇನು, ಹರಿವಾಣ ಇಟ್ಟಲ್ಲಿ ಇದ್ದೀತು, ಮನುಷ್ಯ ಶರೀರ ಒಂದು ದಿನ ಕಣ್ಮರೆಯಾಗುವುದಂತೂ ನಿಜ ಅಲ್ವೇ, ಏನಂತೀರ?






Thursday 1 February 2018

ಮೈಸೂರ್ ಪಾಕ್




                                              


ದೀಪಾವಳಿಗೆ ಏನೂ ಸಿಹಿ ಇಲ್ವೇ… “
“ ಇಲ್ಲದೇ ಉಂಟೇ, ಮೈಸೂರು ಪಾಕ್ ಮಾಡಿ ತಿಂದೆವು. “
“ ಕಷ್ಟ ಅಲ್ಲವೇ ಮೈಸೂರು ಪಾಕು ಮಾಡೋದು… “
“ ಹಾಗೇನೂ ಇಲ್ಲ, ಅಳತೆ ಲೆಕ್ಕಾಚಾರ ತಿಳಿದಿದ್ದರೆ, ಹಿಂದೆ ಮಾಡಿದ ಅನುಭವ ಇದ್ದರೆ… “
“ ಹೌದಾ, ನೀವು ಹ್ಯಾಗೆ ಮಾಡಿದ್ದೂ? “

ಕಡಲೆ ಹಿಟ್ಟು, ಸಕ್ಕರೆ ಹಾಗೂ ತುಪ್ಪ. ಇವಿಷ್ಟು ಸಾಮಗ್ರಿಗಳು ನಮ್ಮಲ್ಲಿದ್ದರಾಯಿತು. ತುಪ್ಪ ಹಾಗೂ ಕಡಲೆ ಹಿಟ್ಟು ತಾಜಾ ಆಗಿರಬೇಕು.
ಮೂದಲ ಬಾರಿ ಮಾಡುವಾಗ ದೊಡ್ಡ ಅಳತೆಯಲ್ಲಿ ಹೊರಡಬಾರದು. ಮನೆಯೊಳಗೆ ಇರುವ ನಾಲ್ಕು ಜನ ಎರಡು ಬಾರಿ ಕೈಯಾಡಿಸಿ ತಿಂದಾಗ, “ ಮುಗಿಯಿತು. “ ಅನ್ನುವಂತಿರಬೇಕು.

ಒಂದು ಲೋಟ ಕಡಲೆ ಹಿಟ್ಟು.
ಒಂದು ಲೋಟ ಸುವಾಸನೆಯುಳ್ಳ ತುಪ್ಪ.
ಒಂದೂ ಕಾಲು ಲೋಟ ಸಕ್ಕರೆ.
ಈ ಅಳತೆ ಪ್ರಮಾಣ ಕಡಂಬಿಲ ಸರಸ್ವತಿಯವರ ‘ ಅಡಿಗೆ ‘ ಪುಸ್ತಕದಿಂದ ತೆಗೆದುಕೊಂಡಿದ್ದು.

 ಕಡಲೆ ಹಿಟ್ಟನ್ನು ತುಪ್ಪದಲ್ಲಿ ಪರಿಮಳ ಬರುವಂತೆ ಹುರಿಯಿರಿ.  
ದಪ್ಪ ತಳದ ಬಾಣಲೆಗೆ ಸಕ್ಕರೆ ಸುರುವಿ, ಮುಳುಗುವಷ್ಟು ನೀರೆರೆದು ಕುದಿಸಿ. ಸಕ್ಕರೆ ಕರಗಿ ಸಾಂದ್ರವಾಗುತ್ತ ಬಂದಾಗ, ಕೈ ಬೆರಳುಗಳೆಡೆಯಲ್ಲಿ ನೂಲಿನಂತೆ ಅಂಟುವಂತಾದಾಗ, ಕರಗಿಸಿಟ್ಟುಕೊಂಡಿರುವ ತುಪ್ಪ ಎರೆಯಿರಿ.

ಹುರಿದಿಟ್ಟುಕೊಂಡಿರುವ ಕಡಲೆಹಿಟ್ಟನ್ನು ಹಾಕಿ, ಮರದ ಸಟ್ಟುಗದಲ್ಲಿ ಕೈಯಾಡಿಸುತ್ತಾ ಇರಿ. ಅತ್ತ ಇತ್ತ ಹೋಗದಿರಿ, ಬಹು ಬೇಗನೆ ಆಗುವ ತಿಂಡಿ ಇದು.

ಕುದಿಯುತ್ತ, ನೊರೆ ನೊರೆಯೇಳುತ್ತ, ಸೌಟಾಡಿಸುತ್ತಾ ಇರುವಾಗ ಅಂಚುಗಳಿಂದ ಬಿಡುತ್ತಾ ಬರುವಾಗ, ಇನ್ನೇನು ಗಟ್ಟಿಯಾಗಲಿದೆ ಎಂದೆನಿಸಿದಾಗ ಒಲೆಯಿಂದ ಇಳಿಸಿ ಕೂಡಲೇ ತಟ್ಟೆಗೆ ಸುರಿಯಿರಿ ಹಾಗೂ ತಟ್ಟೆಯನ್ನು ಅಲುಗಾಡಿಸಿ ಹಿಟ್ಟು ಏಕಪ್ರಕಾರವಾಗಿ ಹರಡುವಂತೆ ಮಾಡುವಲ್ಲಿ ಹಾಗೂ ಹರಿತವಾದ ಚೂರಿ ಮೊನೆಯಲ್ಲಿ ಗೆರೆ ಎಳೆಯುವಲ್ಲಿ ನಮ್ಮ ಜಾಣತನ ಅಡಗಿದೆ ಎಂದು ತಿಳಿದಿರಲಿ. ಯಾವುದೇ ಕಾರಣಕ್ಕೂ ಸಟ್ಟುಗದಿಂದ ತಟ್ಟಿ ಸಪಾಟಾಗಿಸಲು ಪ್ರಯತ್ನಿಸದಿರಿ. ಸಟ್ಟುಗದಲ್ಲಿ ತಟ್ಟಿದಿರಾ, ಮೈಸೂರ್ ಪಾಕ್ ತನ್ನ ಸೌಂದರ್ಯವನ್ನು ಕಳೆದುಕೊಂಡಿತೆಂದು ತಿಳಿಯಿರಿ.

ಗಟ್ಟಿಯಾಗುವ ಮೊದಲೇ ಚೂರಿಯಿಂದ ಗೆರೆಗಳನ್ನು ಎಳೆದು ಬಿಡಬೇಕು. ಆರಿದ ನಂತರ ಬೇಕಾದ ಆಕೃತಿಯಲ್ಲಿ ಕತ್ತರಿಸಲು ಸಾಧ್ಯವಾಗದು, ಹೇಗೆ ಬಂದಿತೋ ಹಾಗೆ ಮುರಿದು ತಿನ್ನಬೇಕಾದೀತು.

ಒಲೆಯಿಂದ ಇಳಿಸುವ ಈ ಹಂತದಲ್ಲಿ ಎಷ್ಟೇ ಜಾಗ್ರತೆ ವಹಿಸಿದರೂ ಸಾಲದು,  
ತುಸು ಬೇಗ ಇಳಿಸಿದ್ದೀರಾ, ಮೈಸೂರ್ ಪಾಕ್ ಅನ್ನುವ ಹಾಗಿಲ್ಲ, ಕಡಲೆ ಹಿಟ್ಟಿನ ಬರ್ಫಿ ಎಂದೆನ್ನಬೇಕಾದೀತು.
ಕಾಯಿಸಿದ್ದು ಜಾಸ್ತಿ ಆದರೂ, ಆರಿದ ನಂತರ ರಣಕಲ್ಲಿನಂತಾಗಿ ತಿನ್ನಲಾಗದೆ ಎಸೆಯಬೇಕಾದೀತು.

ಕಡಲೆ ಹಿಟ್ಟನ್ನು ಹುರಿಯುವಾಗಲೂ ತುಪ್ಪದ ಶಾಖದಲ್ಲಿ ಹುರಿದರೆ ಉತ್ತಮ, ಹಾಗೇ ಸುಮ್ಮನೆ ಬಾಂಡ್ಲಿಗೆ ಸುರಿದು ಕರಟಿದಂತಾಗಬಾರದು, ಹುರಿದದ್ದು ಕಡಿಮೆಯಾದರೂ ಹಸಿವಾಸನೆ ಬಂದೀತು.
ಇದಕ್ಕೆ ಸುವಾಸನಾದ್ರವ್ಯವಾದ ಏಲಕ್ಕಿಯ ಅಗತ್ಯವಿಲ್ಲ.

ನನಗೆ ಮೊದಲ ಬಾರಿ ಮೈಸೂರು ಪಾಕ್ ಮಾಡುವ ಕೈಚಳಕವನ್ನು ನನ್ನ ಅತ್ತೆಯವರೇ ಮಾಡಿ ತೋರಿಸಿ ಕೊಟ್ಟರು. ಹಸುಗಳೂ ಎಮ್ಮೆಗಳೂ ಇದ್ದಂತಹ ಕಾಲ ಅದು. ಈಗಲೂ ತುಪ್ಪಕ್ಕೇನೂ ಕೊರತೆಯಿಲ್ಲ, ಸಂದರ್ಭ ಸಿಕ್ಕಾಗ ಮಾಡುತ್ತಿರುತ್ತೇನೆ.

                           


ಟಿಪ್ಪಣಿ: ಉತ್ಥಾನ ಮಾಸಪತ್ರಿಕೆಯಲ್ಲಿ ಪ್ರಕಟಿತವಾಗಿರುವ ಬರಹ, ಡಿಸೆಂಬರ್, 2017.