Pages

Ads 468x60px

Saturday 13 January 2018

ದಿಢೀರ್ ಉಪ್ಪಿನಕಾಯಿ






ಮಗಳು ರಜೆ ಮುಗಿಯಿತೆಂದು ಬೆಂಗಳೂರಿಗೆ ತೆರಳಲು ಸಿದ್ಧತೆ ನಡೆಸಿದ್ದಾಳೆ. ಮುಖ್ಯವಾಗಿ ಸಿದ್ಧತೆಯ ವ್ಯವಸ್ಥೆ ನನ್ನದೇ, ಉಪ್ಪಿನಕಾಯಿ ಹಾಗೂ ತಾಜಾ ತುಪ್ಪದ ತಯಾರಿ. ತುಪ್ಪ ಹೊಸತಾಗಿ ಕಾಯಿಸಿದ್ದಾಗಿದೆ, ಇದೀಗ ಸೌತೆಕಾಯಿ ಉಪ್ಪಿನಕಾಯಿ ಆಗಬೇಕಿದೆ. ಸೌತೆಕಾಯಿ ಅಪ್ಪನ ಮೂಲಕ ತರಿಸಿಟ್ಕೊಂಡಿದಾಳೆ ಮಗಳು. ಅವಳು ಹೊರಡುವ ಮುಂಚಿತವಾಗಿ ಜಾಡಿ ತುಂಬಿಸಿಕೊಟ್ಟರೆ ಸಾಕು.

ಮಾಡಿದ್ದು ಹೇಗೆ?

ಸೌತೆಕಾಯಿಯನ್ನು ಚಿಕ್ಕ ಚಿಕ್ಕ ಗಾತ್ರದಲ್ಲಿ ಕತ್ತರಿಸಿಡುವುದು.

ಹೌದೂ, ಸೌತೆಕಾಯಿಗೆ ಉಪ್ಪು ಎಷ್ಟೂ?
ಇದೀಗ ಒಂದು ಹದ ಗಾತ್ರದ ಸೌತೆಕಾಯಿ, ಹೋಳುಗಳನ್ನು ನೋಡಿಕೊಂಡು ಅಂದಾಜು ಐದು ಚಮಚ ಪುಡಿ ಉಪ್ಪು ಹಾಕುವುದು, ಕಲ್ಲುಪ್ಪು ಬೇಡ. ಉಪ್ಪು ಕಡಿಮೆಯಾದರೆ ನಂತರ ಹಾಕಿಕೊಳ್ಳಬಹುದು. ಆರಂಭದಲ್ಲೇ ಉಪ್ಪು ಜಾಸ್ತಿ ಆಗಿ ಬಿಟ್ಟರೆ ಮಾಡಿದ್ದೆಲ್ಲವೂ ದಂಡವಾದೀತು.

ಉಪ್ಪಿನ ಅಳತೆಯಷ್ಟೇ ಸಾಸಿವೆ ಅಳೆಯಿರಿ, ಅಂದರೆ ಐದು ಚಮಚ.
ತವಾದಲ್ಲಿ ತುಸು ಬೆಚ್ಚಗೆ ಮಾಡಿಕೊಳ್ಳಿ, ಎಣ್ಣೆ ಹಾಕೋದೇನೂ ಬೇಡ, ಮಿಕ್ಸಿಯಲ್ಲಿ ಪುಡಿ ಮಾಡ್ಕೊಳ್ಳಿ. ಸಾಸಿವೆಯನ್ನು ಅಂಗಳ ಅಥವಾ ಟೆರೇಸ್ ಬಿಸಿಲಿಗಿಟ್ಟರೂ ಸಾಕಾಗುತ್ತದೆ, ಒಟ್ಟಿನಲ್ಲಿ ನುಣ್ಣಗಿನ ಪುಡಿ ಆದರಾಯಿತು.

ಹುಡಿ ಆಯ್ತು.  
ಹಾಗಿದ್ರೆ ಮೆಣಸು ಹಾಕಲಿಕ್ಕಿಲ್ಲವೇ?
ಉಂಟೇ, ಮೆಣಸಿಲ್ಲದ ಉಪ್ಪಿನಕಾಯಿಯುಂಟೇ? ಮೆಣಸಿನ ಹುಡಿ ಐದು ಚಮಚ ಅಳೆಯಿರಿ.
ಪುಟ್ಟ ಚಮಚದಲ್ಲಿ ಅರ್ಧದಷ್ಟು ಅರಸಿಣ ಅಳೆಯುವಲ್ಲಿಗೆ ಉಪ್ಪಿನಕಾಯಿ ಲೆಕ್ಕಾಚಾರ ಸಂಪೂರ್ಣವಾಗಿದೆ.

ಈ ಎಲ್ಲ ಹುಡಿಗಳನ್ನು ಉಪ್ಪು ಬೆರೆಸಿದ ಸೌತೆ ಹೋಳುಗಳಿಗೆ ಬೆರೆಸಿ, ಜಾಡಿ ಮುಚ್ಚಿ ಕುಲುಕಿ ಇಡುವುದು. ಅರ್ಧ ಗಂಟೆ ಬಿಟ್ಟು ಇನ್ನೊಮ್ಮೆ ಜಾಡಿ ಕುಲುಕಿದಾಗ ಉಪ್ಪಿನಕಾಯಿ ಮಿಶ್ರಣ ಸೌತೆಯೊಂದಿಗೆ ಬೆರೆತು ರಸಭರಿತವಾಗಿರುವುದನ್ನು ಕಾಣುತ್ತಲೇ ನನ್ನ ಮಗಳು ಓಡಿ ಬಂದು ಚಮಚದಲ್ಲಿ ಒಂದೆರಡು ಸೌತೆ ಹೋಳುಗಳನ್ನು ತೆಗೆದು ತಿಂದೂ ಆಯ್ತು.

ಬಪ್ಪಂಗಾಯಿಯ ಉಪ್ಪಿನಕಾಯಿ ಹಾಕೋಣ ಅಂತ ನಾನಿದ್ದೆ. ತೋಟದಲ್ಲಿ ಪಪ್ಪಾಯಿ ಮರ ಇದೆ, ಕೊಯ್ದು ಕೊಡಲು ಚೆನ್ನಪ್ಪನಿದ್ದಾನೆ, ಸುಮ್ಮನೇ ಯಾಕಾದರೂ ಅಂಗಡಿಯಿಂದ ಸೌತೆಕಾಯಿ ತರೋಣ ಅಲ್ವೇ…
ಮಗಳು ಕೇಳಬೇಕಲ್ಲ, “ ಅಮ್ಮ, ಬಪ್ಪಂಗಾಯೀದು ಕಳೆದ ಸಲ ಬಂದಿದ್ದಾಗ ಮಾಡಿಕೊಟ್ಟಿದ್ದೀ, ಈ ಬಾರಿ ಸೌತೆಕಾಯೀದು ಮಾಡ್ಕೊಡು… “

“ ಹೌದಾ, ಬಪ್ಪಂಗಾಯಿ ಅಂದ್ರೆ ಪಪ್ಪಾಯಿ ಅಲ್ವ, ಅದನ್ನು ಹೇಗೆ ಉಪ್ಪಿನಕಾಯಿ ಮಾಡಿದ್ದು? “

ಬಪ್ಪಂಗಾಯಿ ಕೂಡಾ ಈಗ ಸೌತೆಯನ್ನು ಮಾಡಿದ ವಿಧಾನದಲ್ಲೇ ಉಪ್ಪಿನಕಾಯಿ ಹಾಕಿದ್ದು, ತಿಂದವರಿಗೆ ಬಪ್ಪಂಗಾಯಿ ಅಂತ ತಿಳಿಯಲೇ ಇಲ್ಲ ಕಣ್ರೀ…. ತುಸು ಎಳೆಯ ಪಪ್ಪಾಯಿ ಆದರಾಯಿತು. ಪಪ್ಪಾಯಿ ಕಾಯಿಯ ಸಿಪ್ಪೆ ತೆಗೆದರಾಯಿತು. ಸೌತೆಯ ಸಿಪ್ಪೆ ತೆಗೆಯುವ ಕ್ರಮ ಇಲ್ಲ. ಕೆಲವೊಮ್ಮೆ ಸೌತೆ ಕಹಿ ಇರುತ್ತದೆ. ಕಹಿ ರುಚಿ ಇರುವ ಸೌತೆಯ ತಿರುಳು ತೆಗೆದು ಅಕ್ಕಿ ತೊಳೆದ ನೀರಿನಲ್ಲಿ ಹತ್ತು ನಿಮಿಷ ಇರಿಸಿದ್ದೇ ಆದಲ್ಲಿ ಕಹಿಯೆಲ್ಲವೂ ಹೋಗುತ್ತದೆ.  

ಇಂತಹ ಉಪ್ಪಿನಕಾಯಿಗಳಿಗೆ ದೀರ್ಘಕಾಲದ ಬಾಳ್ವಿಕೆ ಇಲ್ಲ, ಹೆಚ್ಚೆಂದರೆ ಒಂದು ವಾರ ಇಟ್ಟುಕೊಳ್ಳಬಹುದು.
ಹಸಿಯಾಗಿ ಬಳಸಬಹುದಾದ ತರಕಾರಿಗಳನ್ನು ಅಂದರೆ ಕ್ಯಾಪ್ಸಿಕಂ, ಹಸಿಮೆಣಸು, ಸೀಮೆ ಬದನೆ, ಕ್ಯಾರೆಟ್, ಕಾಲಿಪ್ಲವರ್, ಮೂಲಂಗಿ… ಪಟ್ಟಿ ಮಾಡುತ್ತ ಹೋದರೆ ಎಲ್ಲ ತರಕಾರಿಗಳೂ ಆದೀತು, ಮಿಶ್ರ ತರಕಾರಿಗಳ ಉಪ್ಪಿನಕಾಯಿ ಬಹಳ ರುಚಿಕರವಾಗಿರುತ್ತದೆ. ಹಸಿ ತರಕಾರಿಗಳನ್ನು ತಿನ್ಬೇಕೆಂಬ ಆರೋಗ್ಯತಜ್ಞರ ಅಭಿಪ್ರಾಯದಂತೆ ತರಕಾರಿಗಳನ್ನು ತಿಂದ ಹಾಗೂ ಆಯ್ತು, ಉಪ್ಪಿನಕಾಯಿಯೂ ಸಿಕ್ಕಿತು!   ಏನಂತೀರ? ಹೌದೂ ಅನ್ನಿ.

0 comments:

Post a Comment