Pages

Ads 468x60px

Saturday 20 January 2018

ಉಪ್ಪು ಸೊಳೆಯ ವಡೆ






ಭಾನುವಾರ ಮಜಾ,
ಕ್ರಿಸ್ಮಸ್ ರಜಾ
ಮುಂಜಾನೆ ತಿಂಡಿ
ಉಪ್ವು ಸೊಳೆ ವೈಭವ...

ಮುಂಜಾನೆಯ ತಿಂಡಿ ಆಗಬೇಕಲ್ಲ, “ ಉಪ್ಪು ಸೊಳೆಯ ರೊಟ್ಟಿ ಆದೀತೇ, ರಾತ್ರಿಯೂಟಕ್ಕೆ ಮಾಡಲೇ… “ ಮಕ್ಕಳ ಅನುಮತಿ ಸಿಗದೆ ಮಾಡುವುದುಂಟೇ…
 ಉಪ್ಪು ಸೊಳೆಯ ರೊಟ್ಟಿಗೆ ಎಲ್ಲರ ಅನುಮೋದನೆ ದೊರೆಯಿತು. “ ಈಗ ರಾತ್ರಿಯೂಟಕ್ಕೆ ಬೇಡ, ನಮಗ್ಯಾರಿಗೂ ಹಸಿವಿಲ್ಲ. “

ರೊಟ್ಟಿ ಮಾಡಿದ್ದು ಹೇಗೆ ಎಂದು ಕೇಳದಿರಿ, ಈ ಹಿಂದೆಯೇ ಮಾಡೋ ಕ್ರಮ, ತಿನ್ನೋ ಕ್ರಮ ಬರೆದಾಗ್ಬಿಟ್ಟಿದೆ. ಅದೆಷ್ಟೋ ಮಂದಿ ಅಡುಗೆ ಓದುಗರು ‘ ಸೊಳೆ ‘ ಎಂಬ ಪದ ಪದಾರ್ಥವೇ ತಿಳಿಯದೆ ಹೋದವರಿದ್ದಾರೆ. ಇದೇನು ಅಡುಗೆ ಬರಹವೇ, ಅಥವಾ ಸೊಳ್ಳೆಕಾಟದ ಬಗ್ಗೆ ಲೇಖನವೋ ಎಂದು ತಲೆ ತುರಿಸಿದ್ದಿದೆ.

ಘನ ಹಲಸಿನಕಾಯಿಯ ಒಳಗೆ ಇರುವಂತಹ ಹಲಸಿನ ಬಿಡಿ ಬಿಡಿ ಎಸಳುಗಳನ್ನು ‘ ಸೊಳೆ ‘ ಅನ್ನುವ ವಾಡಿಕೆ. ಹಲಸಿನ ಬೀಜವು ದಕ್ಷಿಣ ಕನ್ನಡಿಗರ ಪಾಲಿಗೆ ‘ ಬೇಳೆ ‘ಯಾಗಿದೆ. ಹಲಸಿನ ಕಾಯಿಯ ನಿರುಪಯುಕ್ತ ಭಾಗಗಳಿಗೂ ಪ್ರತ್ಯೇಕ ನಾಮಕರಣ ನಮ್ಮಲ್ಲಿ ಇದೆ. ಜಾನುವಾರುಗಳ ಮೇವು ಹಾಗೂ ಗೊಬ್ಬರವಾಗಿ ಬಳಸಬಹುದಾದ ರೆಚ್ಚೆ, ಗೂಂಜು, ಮಯಣ, ಪೊದುಂಕುಳು, ಸಾರೆ, ಹೂಸಾರೆ… ಇತ್ಯಾದಿಗಳಿಗೆ ಕರ್ನಾಟಕದ ಇತರ ಪ್ರದೇಶಗಳಲ್ಲಿ ಏನೇನು ಹೆಸರುಗಳಿವೆಯೋ ತಿಳಿಯದು.

ನಾವು ಮನೆಯೊಳಗೆ ಈ ದಿನ ಆರು ಮಂದಿ ಇದ್ದೇವೆ, ಚೆನ್ನಪ್ಪನೂ ಸೇರಿ ಏಳು ಜನ ಅಯ್ತು,
 ಜಾಡಿಯಿಂದ ಏಳು ಹಿಡಿ ಉಪ್ಪು ಸೊಳೆಗಳನ್ನು ತೆಗೆದು,
ಉಪ್ಪು ಬಿಡಿಸಲು ನೀರಿನಲ್ಲಿಟ್ಟು,
ಉಪ್ಪೆಲ್ಲವೂ ನೀರಿನಲ್ಲಿ ತೊಳೆದು ಹೋದ ಮೇಲೆ,
ನೀರು ಬಸಿದು,
ನುಣ್ಣಗೆ ಅರೆದು ಇಟ್ಟಾಯ್ತು.

ಎರಡು ಪಾವು ಅಕ್ಕಿ ಹುಡಿ,
ಅರ್ಧ ಕಡಿ ಕಾಯಿತುರಿ,
ಕೊತ್ತಂಬರಿ ಸೊಪ್ಪು, ನೀರುಳ್ಳಿ, ಹಸಿಮೆಣಸು, ಶುಂಠಿ ಚಿಕ್ಕದಾಗಿ ಕತ್ತರಿಸಿ,
ಅರೆದಿಟ್ಟ ಉಪ್ಪು ಸೊಳೆಯ ಮುದ್ದೆಗೆ ಬೆರೆಸಿ,
ರೊಟ್ಟಿ ಹದಕ್ಕೆ ಕಲಸಿ,
ಬಾಳೆ ಎಲೆಯಲ್ಲಿ ರೊಟ್ಟಿ ತಟ್ಟಿ,
ಬೆಣ್ಣೆ, ಹುಡಿಬೆಲ್ಲದೊಂದಿಗೆ ತಿಂದೆವು.

ಎಲ್ಲರ ಹೊಟ್ಟೆಗೂ ರೊಟ್ಟಿ ಹೋಯ್ತು, “ ನಮಗಿನ್ನು ಸಾಕು… “ ಅಂದಾಗ ಒಂದು ಮುಸುಂಬಿ ಗಾತ್ರದ ರೊಟ್ಟಿ ಮುದ್ದೆ ಉಳಿಯಿತು.

“ ಇದನ್ನೇನು ಮಾಡ್ತೀರಾ? “
ಬಿಸಾಡಬೇಕಿಲ್ಲ. ಸಂಜೆಗೊಂದು ತಿಂಡಿ ಆಗಲೇಬೇಕಲ್ಲ, ಅದೂ ನಾವು ಮನೆ ತುಂಬ ಜನ ಇರುವಾಗ ಇನ್ನೊಂದು ಸವಿರುಚಿ ಮಾಡಿ ಇಟ್ಕೊಳ್ಳೋಣ, ಹೇಗೆ?

2 ಚಮಚ ಅಕ್ಕಿ ಹುಡಿ,
2 ಚಮಚ ಮೈದಾ,
2 ಚಮಚ ಕಡ್ಲೆ ಹುಡಿ,
ಒಂದು ನೀರುಳ್ಳಿ, ಚಿಕ್ಕದಾಗಿ ಹೆಚ್ಚಿಟ್ಟು,
ಎಲ್ಲವನ್ನೂ ನಮ್ಮ ಉಳಿಕೆಯಾಗಿರುವ ರೊಟ್ಟಿ ಹಿಟ್ಟಿಗೆ ಸೇರಿಸಿ, ಚೆನ್ನಾಗಿ ಬೆರೆಸಿ ಪುನಃ ಮುದ್ದೆ ಆಯ್ತು. ಈಗ ಕಲಸಿದ ಹಿಟ್ಟು ಕೈಗಳಿಗೆ ಅಂಟಿಕೊಳ್ಳುವಂತಿರಬಾರದು. ಚಕ್ಕುಲಿ ಕೋಡುಬಳೆಗೆ ಕಲಸಿದಂತಿದ್ದರೆ ಸರಿ ಹೋದೀತು.

ಲಿಂಬೆ ಗಾತ್ರದ ಉಂಡೆ ಮಾಡಿಟ್ಟು,
ಪ್ಲಾಸ್ಟಿಕ್ ಶೀಟ್ ಮೇಲೆ ಎಣ್ಣೆ ಸವರಿ ವಡೆಯಂತೆ ತಟ್ಟಿ,
ಕಾದ ಎಣ್ಣೆಗೆ ಹಾಕಿ,
ಕವುಚಿ ಹಾಕಿ,
ಹೊಂಬಣ್ಣ ಬರುವಾಗ ತೆಗೆದು,
ತಟ್ಟೆಯಲ್ಲಿ ಜೋಡಿಸಿಟ್ಟು,
ಬಿಸಿ ಆರಿದ ನಂತರ ಡಬ್ಬದಲ್ಲಿ ತುಂಬಿದ
ಉಪ್ಪು ಸೊಳೆಯ ವಡೆ!

ಇದನ್ನು ಮಾಡುತ್ತಿರಬೇಕಾದರೆ ನಮ್ಮ ಮಕ್ಕಳ ಸವಾರಿ ಕಾಸರಗೋಡಿನ ಸಮುದ್ರ ಕಿನಾರೆಯ ವೀಕ್ಷಣೆಗೆಂದು ತೆರಳಿತ್ತು, ಕಾಸರಗೋಡಿನ ಪಕ್ಕ ನೀಲೇಶ್ವರ, ಒಂದು ಪ್ರವಾಸಿ ತಾಣ, ಸಮುದ್ರದ ಹಿನ್ನೀರಿನಲ್ಲಿ ಬೋಟ್ ಪ್ರಯಾಣದ ವಿಹಾರ…

ಮಧ್ಯಾಹ್ನದ ಸವಿನಿದ್ದೆಗೆ ಜಾರುವ ಹೊತ್ತು, ಫೋನ್ ರಿಂಗಣಿಸಿತು. “ಅಮ್ಮ, ನಾವು ಸಂಜೆ ಐದಾಗುವಾಗ ಮನೆ ತಲಪ್ತೀವಿ… “

ಚಹಾದೊಂದಿಗೆ ವಡೆ ತಿನ್ನುತ್ತ ಮೈತ್ರಿ ಅಂದಳು, “ ಅತ್ತೇ, ಮದ್ದೂರು ವಡೆಯಲ್ವ ಇದು… “
“ ಹೌದಾ, ಮದ್ದೂರು ವಡೆ ನಾನು ತಿಂದೇ ಇಲ್ಲ, ಇದು ಉಪ್ಪು ಸೊಳೆಯ ವಡೆ… “
“ ವಾವ್, ಗೊತ್ತೇ ಆಗಲಿಲ್ಲ, ಮದ್ದೂರು ವಡೆ ಹೀಗೇ ಇರುತ್ತೆ… “

ಮೈತ್ರಿಯ ಟಿಪ್ಪಣಿ: ಮಾಮೂಲಿಯಾಗಿ ಮಾಡುವ ಅಕ್ಕಿ ರೊಟ್ಟಿಯ ಹಿಟ್ಟಿನಿಂದಲೂ ಈ ಥರ ವಡೆ ಮಾಡಿಕೊಳ್ಳಬಹುದು, ಉಪ್ಪು ಸೊಳೆ ಇಲ್ಲವೆಂದು ಚಿಂತಿಸಬೇಕಿಲ್ಲ.





Saturday 13 January 2018

ದಿಢೀರ್ ಉಪ್ಪಿನಕಾಯಿ






ಮಗಳು ರಜೆ ಮುಗಿಯಿತೆಂದು ಬೆಂಗಳೂರಿಗೆ ತೆರಳಲು ಸಿದ್ಧತೆ ನಡೆಸಿದ್ದಾಳೆ. ಮುಖ್ಯವಾಗಿ ಸಿದ್ಧತೆಯ ವ್ಯವಸ್ಥೆ ನನ್ನದೇ, ಉಪ್ಪಿನಕಾಯಿ ಹಾಗೂ ತಾಜಾ ತುಪ್ಪದ ತಯಾರಿ. ತುಪ್ಪ ಹೊಸತಾಗಿ ಕಾಯಿಸಿದ್ದಾಗಿದೆ, ಇದೀಗ ಸೌತೆಕಾಯಿ ಉಪ್ಪಿನಕಾಯಿ ಆಗಬೇಕಿದೆ. ಸೌತೆಕಾಯಿ ಅಪ್ಪನ ಮೂಲಕ ತರಿಸಿಟ್ಕೊಂಡಿದಾಳೆ ಮಗಳು. ಅವಳು ಹೊರಡುವ ಮುಂಚಿತವಾಗಿ ಜಾಡಿ ತುಂಬಿಸಿಕೊಟ್ಟರೆ ಸಾಕು.

ಮಾಡಿದ್ದು ಹೇಗೆ?

ಸೌತೆಕಾಯಿಯನ್ನು ಚಿಕ್ಕ ಚಿಕ್ಕ ಗಾತ್ರದಲ್ಲಿ ಕತ್ತರಿಸಿಡುವುದು.

ಹೌದೂ, ಸೌತೆಕಾಯಿಗೆ ಉಪ್ಪು ಎಷ್ಟೂ?
ಇದೀಗ ಒಂದು ಹದ ಗಾತ್ರದ ಸೌತೆಕಾಯಿ, ಹೋಳುಗಳನ್ನು ನೋಡಿಕೊಂಡು ಅಂದಾಜು ಐದು ಚಮಚ ಪುಡಿ ಉಪ್ಪು ಹಾಕುವುದು, ಕಲ್ಲುಪ್ಪು ಬೇಡ. ಉಪ್ಪು ಕಡಿಮೆಯಾದರೆ ನಂತರ ಹಾಕಿಕೊಳ್ಳಬಹುದು. ಆರಂಭದಲ್ಲೇ ಉಪ್ಪು ಜಾಸ್ತಿ ಆಗಿ ಬಿಟ್ಟರೆ ಮಾಡಿದ್ದೆಲ್ಲವೂ ದಂಡವಾದೀತು.

ಉಪ್ಪಿನ ಅಳತೆಯಷ್ಟೇ ಸಾಸಿವೆ ಅಳೆಯಿರಿ, ಅಂದರೆ ಐದು ಚಮಚ.
ತವಾದಲ್ಲಿ ತುಸು ಬೆಚ್ಚಗೆ ಮಾಡಿಕೊಳ್ಳಿ, ಎಣ್ಣೆ ಹಾಕೋದೇನೂ ಬೇಡ, ಮಿಕ್ಸಿಯಲ್ಲಿ ಪುಡಿ ಮಾಡ್ಕೊಳ್ಳಿ. ಸಾಸಿವೆಯನ್ನು ಅಂಗಳ ಅಥವಾ ಟೆರೇಸ್ ಬಿಸಿಲಿಗಿಟ್ಟರೂ ಸಾಕಾಗುತ್ತದೆ, ಒಟ್ಟಿನಲ್ಲಿ ನುಣ್ಣಗಿನ ಪುಡಿ ಆದರಾಯಿತು.

ಹುಡಿ ಆಯ್ತು.  
ಹಾಗಿದ್ರೆ ಮೆಣಸು ಹಾಕಲಿಕ್ಕಿಲ್ಲವೇ?
ಉಂಟೇ, ಮೆಣಸಿಲ್ಲದ ಉಪ್ಪಿನಕಾಯಿಯುಂಟೇ? ಮೆಣಸಿನ ಹುಡಿ ಐದು ಚಮಚ ಅಳೆಯಿರಿ.
ಪುಟ್ಟ ಚಮಚದಲ್ಲಿ ಅರ್ಧದಷ್ಟು ಅರಸಿಣ ಅಳೆಯುವಲ್ಲಿಗೆ ಉಪ್ಪಿನಕಾಯಿ ಲೆಕ್ಕಾಚಾರ ಸಂಪೂರ್ಣವಾಗಿದೆ.

ಈ ಎಲ್ಲ ಹುಡಿಗಳನ್ನು ಉಪ್ಪು ಬೆರೆಸಿದ ಸೌತೆ ಹೋಳುಗಳಿಗೆ ಬೆರೆಸಿ, ಜಾಡಿ ಮುಚ್ಚಿ ಕುಲುಕಿ ಇಡುವುದು. ಅರ್ಧ ಗಂಟೆ ಬಿಟ್ಟು ಇನ್ನೊಮ್ಮೆ ಜಾಡಿ ಕುಲುಕಿದಾಗ ಉಪ್ಪಿನಕಾಯಿ ಮಿಶ್ರಣ ಸೌತೆಯೊಂದಿಗೆ ಬೆರೆತು ರಸಭರಿತವಾಗಿರುವುದನ್ನು ಕಾಣುತ್ತಲೇ ನನ್ನ ಮಗಳು ಓಡಿ ಬಂದು ಚಮಚದಲ್ಲಿ ಒಂದೆರಡು ಸೌತೆ ಹೋಳುಗಳನ್ನು ತೆಗೆದು ತಿಂದೂ ಆಯ್ತು.

ಬಪ್ಪಂಗಾಯಿಯ ಉಪ್ಪಿನಕಾಯಿ ಹಾಕೋಣ ಅಂತ ನಾನಿದ್ದೆ. ತೋಟದಲ್ಲಿ ಪಪ್ಪಾಯಿ ಮರ ಇದೆ, ಕೊಯ್ದು ಕೊಡಲು ಚೆನ್ನಪ್ಪನಿದ್ದಾನೆ, ಸುಮ್ಮನೇ ಯಾಕಾದರೂ ಅಂಗಡಿಯಿಂದ ಸೌತೆಕಾಯಿ ತರೋಣ ಅಲ್ವೇ…
ಮಗಳು ಕೇಳಬೇಕಲ್ಲ, “ ಅಮ್ಮ, ಬಪ್ಪಂಗಾಯೀದು ಕಳೆದ ಸಲ ಬಂದಿದ್ದಾಗ ಮಾಡಿಕೊಟ್ಟಿದ್ದೀ, ಈ ಬಾರಿ ಸೌತೆಕಾಯೀದು ಮಾಡ್ಕೊಡು… “

“ ಹೌದಾ, ಬಪ್ಪಂಗಾಯಿ ಅಂದ್ರೆ ಪಪ್ಪಾಯಿ ಅಲ್ವ, ಅದನ್ನು ಹೇಗೆ ಉಪ್ಪಿನಕಾಯಿ ಮಾಡಿದ್ದು? “

ಬಪ್ಪಂಗಾಯಿ ಕೂಡಾ ಈಗ ಸೌತೆಯನ್ನು ಮಾಡಿದ ವಿಧಾನದಲ್ಲೇ ಉಪ್ಪಿನಕಾಯಿ ಹಾಕಿದ್ದು, ತಿಂದವರಿಗೆ ಬಪ್ಪಂಗಾಯಿ ಅಂತ ತಿಳಿಯಲೇ ಇಲ್ಲ ಕಣ್ರೀ…. ತುಸು ಎಳೆಯ ಪಪ್ಪಾಯಿ ಆದರಾಯಿತು. ಪಪ್ಪಾಯಿ ಕಾಯಿಯ ಸಿಪ್ಪೆ ತೆಗೆದರಾಯಿತು. ಸೌತೆಯ ಸಿಪ್ಪೆ ತೆಗೆಯುವ ಕ್ರಮ ಇಲ್ಲ. ಕೆಲವೊಮ್ಮೆ ಸೌತೆ ಕಹಿ ಇರುತ್ತದೆ. ಕಹಿ ರುಚಿ ಇರುವ ಸೌತೆಯ ತಿರುಳು ತೆಗೆದು ಅಕ್ಕಿ ತೊಳೆದ ನೀರಿನಲ್ಲಿ ಹತ್ತು ನಿಮಿಷ ಇರಿಸಿದ್ದೇ ಆದಲ್ಲಿ ಕಹಿಯೆಲ್ಲವೂ ಹೋಗುತ್ತದೆ.  

ಇಂತಹ ಉಪ್ಪಿನಕಾಯಿಗಳಿಗೆ ದೀರ್ಘಕಾಲದ ಬಾಳ್ವಿಕೆ ಇಲ್ಲ, ಹೆಚ್ಚೆಂದರೆ ಒಂದು ವಾರ ಇಟ್ಟುಕೊಳ್ಳಬಹುದು.
ಹಸಿಯಾಗಿ ಬಳಸಬಹುದಾದ ತರಕಾರಿಗಳನ್ನು ಅಂದರೆ ಕ್ಯಾಪ್ಸಿಕಂ, ಹಸಿಮೆಣಸು, ಸೀಮೆ ಬದನೆ, ಕ್ಯಾರೆಟ್, ಕಾಲಿಪ್ಲವರ್, ಮೂಲಂಗಿ… ಪಟ್ಟಿ ಮಾಡುತ್ತ ಹೋದರೆ ಎಲ್ಲ ತರಕಾರಿಗಳೂ ಆದೀತು, ಮಿಶ್ರ ತರಕಾರಿಗಳ ಉಪ್ಪಿನಕಾಯಿ ಬಹಳ ರುಚಿಕರವಾಗಿರುತ್ತದೆ. ಹಸಿ ತರಕಾರಿಗಳನ್ನು ತಿನ್ಬೇಕೆಂಬ ಆರೋಗ್ಯತಜ್ಞರ ಅಭಿಪ್ರಾಯದಂತೆ ತರಕಾರಿಗಳನ್ನು ತಿಂದ ಹಾಗೂ ಆಯ್ತು, ಉಪ್ಪಿನಕಾಯಿಯೂ ಸಿಕ್ಕಿತು!   ಏನಂತೀರ? ಹೌದೂ ಅನ್ನಿ.

Saturday 6 January 2018

ಉಪ್ಪುಸೊಳೆಯ ಸ್ಟ್ಯೂ








“ ತರಕಾರಿಗಳಿಗೆ ಸಿಕ್ಕಾಪಟ್ಟೆ ಕ್ರಯ, ಇದ್ದ ಮಾಲೂ ಚೆನ್ನಾಗಿರಲಿಲ್ಲ. ಈಗ ಏನಾದ್ರೂ ಸುಲಭದ್ದು ಮಾಡು… “

ನಿನ್ನೆಯೂ ಉಪ್ಪುಸೊಳೆಯ ಬೋಳುಹುಳಿ, ಇವತ್ತೂ ತರಕಾರಿಗೆ ಗತಿಯಿಲ್ಲ. ನಾಲ್ಕು ನೀರುಳ್ಳಿ, ಬೆಳ್ಳುಳ್ಳಿ ಗೆಡ್ಡೆಗಳೂ, ಒಣಕಲು ಶುಂಠಿಯೂ ನನ್ನನ್ನು “ ಅದೇನು ಮಾಡ್ತೀಯಾ ನೋಡೇ ಬಿಡೋಣ. “ ಎಂದು ಅಣಕಿಸಿದಂತಾಯ್ತು. ಇರಲಿ, ಈ ದಿನವೂ ಉಪ್ಪುಸೊಳೆಯನ್ನೇ ತಿನ್ನೋಣ, ಅಡುಗೆಯ ವಿಧಾನದಲ್ಲಿ ಹೊಸತನ ತರೋಣ.

“ ಮೇಲಾರ ಮಾಡ್ತೀರಾ ಹೇಗೆ? “
ಮಜ್ಜಿಗೆ ಹಾಕಿದ ಮೇಲಾರ ಬೇಡ, ಈಗ ಚಳಿ ಬೇರೆ ಶುರುವಾಗಿದೆ, ಧಾರಾಳ ಮಸಾಲೆ ಬಿದ್ದ ಪದಾರ್ಥಗಳು ತಿನ್ನಲೂ ಹಿತ, ದೇಹವನ್ನು ಬೆಚ್ಚಗಿರಿಸಲೂ ಉತ್ತಮ.

ಮೊದಲು ಒಂದು ಹಿಡಿ ಉಪ್ಪುಸೊಳೆಯನ್ನು ನೀರಿನಲ್ಲಿ ಹಾಕಿರಿಸಿ, ತೊಳೆದು ಸಮಗಾತ್ರದಲ್ಲಿ ಹೆಚ್ಚಿಟ್ಟುಕೊಳ್ಳುವುದು.
ದೊಡ್ಡದಾದ ತೆಂಗಿನಕಾಯಿ ಇದೆ, ಅರ್ಧ ಕಡಿ ತುರಿದಿಟ್ಟುಕೊಳ್ಳುವುದು.
ತೋಟದಿಂದ ಗಾಂಧಾರಿ ಮೆಣಸು ಕೊಯ್ದು ತಂದಿದ್ದು ಇದೆ.
ತೋಟದ ಕಾಳುಮೆಣಸು ಇನ್ನೂ ಮಾರಾಟವಾಗದೆ ಗೋಣಿಯಲ್ಲಿ ತುಂಬಿಟ್ಟಿದ್ದೂ ಇದೆ, ಗರಂ ಮಸಾಲಾ ಪುಡಿಯನ್ನು ಅಂಗಡಿಯಿಂದ ತರಬೇಕಾದ ಅಗತ್ಯ ನಮಗಿಲ್ಲ.

ಈಗ ಅಡುಗೆ ಶುರು ಮಾಡೋಣ.

ಹೆಚ್ಚಿಟ್ಟ ಉಪ್ಪುಸೊಳೆಯನ್ನು ಬೇಯಿಸುವುದು. ಕುಕರ್ ಉತ್ತಮ, ಒಂದು ಸೀಟಿ ಸಾಕು.
ಕಾಳುಮೆಣಸು, 10 ಕಾಳು ಸಾಕು.
1 ಚಮಚ ಜೀರಿಗೆ
1ಚಮಚ ಕೊತ್ತಂಬರಿ
ಚಿಟಿಕೆ ಅರಸಿಣ

2 ನೀರುಳ್ಳಿ
10 ಎಸಳು ಬೆಳ್ಳುಳ್ಳಿ
ಒಂದು ತುಂಡು ಶುಂಠಿ
ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳುವುದು.

ಬಾಣಲೆಗೆ ತುಸು ಎಣ್ಣೆಯೆರೆದು, ತುಪ್ಪವೂ ಆದೀತು.
ಹುರಿಯಿರಿ, ಜೀರಿಗೆ ಕೊತ್ತಂಬ್ರಿ ಕಾಳುಮೆಣಸು,
 ನೀರುಳ್ಳಿ ಬೆಳ್ಳುಳ್ಳಿ ಶುಂಠಿಗಳನ್ನು ಹಾಕಿ ಬಾಡಿಸಿ,
ಚಿಟಿಕೆ ಅರಸಿಣ ಬೀಳಿಸಿ,
ಸ್ಟವ್ ಆರಿಸಿ.

ಮಿಕ್ಸಿ ಯಂತ್ರದೊಳಗೆ ತೆಂಗಿನತುರಿ ತುಂಬಿ, ಮೂರು ಯಾ ನಾಲ್ಕು ಗಾಂಧಾರಿ ಮೆಣಸು, ಹುರಿದ ಮಸಾಲೆಯೊಂದಿಗೆ ಅರೆಯಿರಿ. ನೀರು ಹಾಕದಿರಿ. ಮಸಾಲೆಯುಕ್ತ ತೆಂಗಿನ ಅರಪ್ಪು ಸಿದ್ಧವಾಗಿದೆ.
ಈ ಅಡುಗೆಗೆ ನಾನು ಹುಣಸೆಹುಳಿಯನ್ನೂ ಹಾಕಿಲ್ಲ, ಬೆಲ್ಲವೂ ಬೇಕಿಲ್ಲ, ಉಪ್ಪನ್ನೂ ತೋರಿಸಿಲ್ಲ.

ಬೇಯಿಸಿಟ್ಟ ಉಪ್ಪು ಸೊಳೆಗೆ ಮಸಾಲೆ ಕೂಡಿಸಿ, ಕುದಿಸಿ.
ಒಗ್ಗರಣೆಯಿಲ್ಲದೆ ಅಲಂಕಾರವಿಲ್ಲ, ಕರಿಬೇವಿನ ಒಗ್ಗರಣೆಯೊಂದಿಗೆ ಉಪ್ಪು ಸೊಳೆಯ ರಸರುಚಿ ಸಿದ್ಧವಾಗಿದೆ.


ಈ ಮಾದರಿಯ ರಸರುಚಿಯನ್ನು ಕೇರಳ ಶೈಲಿಯ ವೆಜಿಟಬಲ್ ಸ್ಟ್ಯೂ ಎಂಬ ಪಾಕವಿಧಾನವನ್ನು ಅನುಸರಿಸಿ ಮಾಡಿ, ಬರೆದದ್ದಾಗಿದೆ. ವಿದೇಶೀ ಅಡುಗೆಯನ್ನು ಕರಾವಳಿಯ ತೆಂಗು ಪ್ರಿಯರಿಗೆ ಹಿತವಾಗುವಂತೆ ಪರಿವರ್ತಿಸಿದ ಕೇರಳದ ಪಾಕತಜ್ಞರನ್ನು ಮೆಚ್ಚಲೇ ಬೇಕು.

ಸರಳವಾದ ವೆಜಿಟಬಲ್ ಸ್ಟ್ಯೂ ಮಾಡುವುದಾದರೂ ಹೇಗೆ?

ತರಕಾರಿ ಹಾಗೂ ತೆಂಗಿನಕಾಯಿ ಹಾಲು ಇಲ್ಲಿ ಪ್ರಮುಖವಾಗಿವೆ. ಉಳಿದಂತೆ ಗರಂ ಮಸಾಲಾ ಸಾಮಗ್ರಿಗಳೂ, ನೀರುಳ್ಳಿಗಳು ಇಲ್ಲದಿದ್ದರೂ ಆದೀತು.

ನಾಲ್ಕು ಬಟಾಟೆಗಳನ್ನು ಬೇಯಿಸಿ, ಸಿಪ್ಪೆ ತೆಗೆದು ದೊಡ್ಡ ಗಾತ್ರದ ಹೋಳು ಮಾಡಿ ಇಡುವುದು.
ಹಿತ್ತಲ ತಾಜಾ ತರಕಾರಿಯಾದ ಅಲಸಂಡೆಯನ್ನೂ ಸಮಗಾತ್ರದಲ್ಲಿ ಕತ್ತರಿಸಿ ನೀರು ಕಾಯಿಹಾಲಿನಲ್ಲಿ ಬೇಯಿಸಿ, ಬಟಾಟೆ ಹೋಳುಗಳನ್ನೂ ಕೂಡಿಸಿ, ಎರಡು ಹಸಿಮೆಣಸು ಸಿಗಿದು ಹಾಕಿ, ರುಚಿಗೆ ಬೇಕಾದ ಉಪ್ಪು ಹಾಕಿ ಕುದಿಸಿರಿ. ದಪ್ಪ ಕಾಯಿಹಾಲು ಎರೆದು ಕುದಿ ಬಂದೊಡನೆ ಸ್ಟವ್ ನಂದಿಸಿ ಒಂದೆಸಳು ಕರಿಬೇವು ಬೀಳಿಸಿ, ಎರಡು ಚಮಚ ತೆಂಗಿನೆಣ್ಣೆ ಎರೆಯುವಲ್ಲಿಗೆ ನಮ್ಮ ವೆಜಿಟಬಲ್ ಸ್ಟ್ಯೂ ಸಿದ್ಧವಾಗಿದೆ. ಈ ಪದಾರ್ಥವನ್ನು ಅಪ್ಪಂ, ಇಡಿಯಪ್ಪಂ, ದೋಸೆ, ಚಪಾತಿ, ಅನ್ನದೊಂದಿಗೆ ಸವಿಯಿರಿ. ಬ್ರೆಡ್ ಜೊತೆ ಸವಿಯಲು ಇನ್ನೂ ಸೊಗಸು.



Monday 1 January 2018

ತಗತೇ ಕೂರ್ಮಾ





ಸೊಸೆ ಅಡುಗೆಮನೆಗೆ ಬಂದಳೆಂದರೆ ಏನೇನೋ ಮಸಾಲಾ ಪೊಟ್ಟಣಗಳೂ ಒಳ ಬರುತ್ತವೆ, ಅವಳೇ ತನಗೆ ಬೇಕಾದ್ದನ್ನು ತರುತ್ತಾಳೆ ಅಷ್ಟೇ. ಅನ್ನದಿಂದ ತಯಾರಿಸುವ ಖಾದ್ಯಗಳು ಅವಳ ಆಯ್ಕೆ. ಪುಲಾವ್ ಮಾಡಲೆಂದು ತಂದಿರಿಸಿದ ತರಕಾರಿಗಳೂ, ಕೊತ್ತಂಬರಿ ಸೊಪ್ಪಿನ ಕಟ್ಟೂ, ಪುಲಾವ್ ಮಸಾಲೆಯೂ, ಶುಂಠಿ ಬೆಳ್ಳುಳ್ಳಿ ಪೇಸ್ಟೂ, ಗರಂ ಮಸಾಲಾ ಹುಡಿಯೂ, ಲವಂಗ ಚಕ್ಕೆ ಗಸಗಸೆಯಂತಹ ಸಿದ್ಧ ವಸ್ತುಗಳ ಪ್ಯಾಕೇಟೂ....

ಅವಳು ಬೆಂಗಳೂರಿಗೆ ತೆರಳಿದ ನಂತರ " ನಮ್ಮನ್ಯಾರೂ ಕೇಳೋರಿಲ್ವೇ... " ಎಂಬಂತೆ ಈ ಪೊಟ್ಟಣಗಳು ಬಾಯ್ಬಿಟ್ಟು ಕೂತಿದ್ದುವು. ಎಲ್ಲವನ್ನೂ ತೆಗೆದಿಟ್ಟು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಗೆ ಒಂದು ಗತಿಗಾಣಿಸಲು ನಿರ್ಧಾರ ಮಾಡಿದ್ದಾಯ್ತು. ಅದೇ ಹೊತ್ತಿಗೆ ನಮ್ಮವರೂ ಸಂತೇ ತರಕಾರಿಗಳನ್ನು ತಂದಿಟ್ಟರು. ಏನೇನಿದೆ? ಪುಟಾಣಿ ಆಲೂಗೆಡ್ಡೆಗಳು, ಬಜ್ಜಿ ಮೆಣಸಿನಕಾಯಿಗಳು, ಸೀಮೆ ಬದನೆ...

ಎರಡು ದಿನ ಮೊದಲು ಚೆನ್ನಪ್ಪ ತಂದಿಟ್ಟಿದ್ದ ತಗತೇ ಸೊಪ್ಪು, ಉಪ್ಪಳಿಕ ಸೊಪ್ಪಿನ ಚೀಲದೊಳಗೆ ಅಡಗಿ ಕುಳಿತಿದ್ದದು ಹೊರಗೆ ಬಂತು, ಸ್ವಲ್ಪವೂ ಬಾಡಿಲ್ಲ. ತಗತೇ ಸೊಪ್ಪು ಹಾಗೂ ಆಲೂ ಸೇರಿಸಿ ಒಂದು ಪದಾರ್ಥ ಮಾಡೋಣ.

ಏನೇ ಪದಾಥ೯ ಮಾಡುವುದಿದ್ದರೂ ತೆಂಗಿನಕಾಯಿ ತುರಿಯಿರಿ, ಅರ್ಧ ಕಡಿ ಸಾಕು.
ಬೇಳೆಕಾಳುಗಳ ಬೆಲೆ ಸಿಕ್ಕಾಪಟ್ಟೆ ಇಳಿದಿದೆ, ತೊಗರಿಬೇಳೆ ಒಂದು ಹಿಡಿ ಜಾಸ್ತಿಯೇ ಬೇಯಿಸೋಣ.
ಪುಟಾಣಿ ಆಲೂ ಅಲ್ವೇ, ಹತ್ತರಿಂದ ಹದಿನೈದು ಗೆಡ್ಡೆಗಳು ಸಾಕು. ಮಣ್ಣು ಹೋಗುವಂತೆ ತೊಳೆದು ಕುಕ್ಕರಿನಲ್ಲಿ ಬೇಯಿಸಿ. ಮೂರು ಸೀಟಿ ಕೂಗಿದ್ರೆ ಸಾಕು.
ಆರಿದ ನಂತರ ಸಿಪ್ಪೆ ತೆಗೆಯಿರಿ.
ತಗತೇ ಸೊಪ್ಪನ್ನು ಆಯ್ದು ಚಿಕ್ಕದಾಗಿ ಹೆಚ್ಚಿಟ್ಟು, ತೊಗರಿಬೇಳೆಯೊಂದಿಗೆ ರುಚಿಗೆ ಉಪ್ಪು ಸಹಿತವಾಗಿ ಬೇಯಲಿ.

ಒಂದು ನೀರುಳ್ಳಿ, ಮೂರು ಬಜ್ಜಿ ಮೆಣಸು ಹೆಚ್ಚಿಟ್ಟು,
ತವಾ ಬಿಸಿ ಮಾಡಿಟ್ಟು ತುಪ್ಪದ ಪಸೆಯಲ್ಲಿ ಹುರಿಯಿರಿ. ಆರಿದ ನಂತರ ಅರೆದು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಜೊತೆ ಇರಿಸಿಕೊಳ್ಳಿ. ಶುಂಠಿ ಬೆಳ್ಳುಳ್ಳಿ ಪೇಸ್ಟ್ ಇಲ್ಲವೇ, ನೀರುಳ್ಳಿ ಅರೆಯುವಾಗ ಒಂದು ತುಂಡು ಶುಂಠಿ ಹಾಗೂ ನಾಲ್ಕು ಎಸಳು ಬೆಳ್ಳುಳ್ಳಿಗಳನ್ನು ಕೂಡಿ ಅರೆಯಿರಿ.

ತೆಂಗಿನ ಮಸಾಲೆ ಏನೇನು?
2 ಚಮಚ ಕೊತ್ತಂಬರಿ
ಒಂದು ಚಮಚ ಜೀರಿಗೆ
3 ಒಣಮೆಣಸು
ನೆಲ್ಲಿ ಗಾತ್ರದ ಹುಣಿಸೆ ಹುಳಿ ( ಟೊಮ್ಯಾಟೋ ಇರಲಿಲ್ಲ )
ಚಿಟಿಕೆ ಅರಸಿಣ
ಹುರಿಯುವುದೇನೂ ಬೇಡ, ನೀರು ಹಾಕದೆ ಅರೆಯಿರಿ.

ಬಾಣಲೆಗೆ ಎರಡು ಚಮಚ ತುಪ್ಪ ಎರೆದು ಬಿಸಿಯಾದಾಗ ತುಸು ಜೀರಿಗೆ ಬೀಳಲಿ. ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಗೂ ನೀರುಳ್ಳಿ ಮೆಣಸುಗಳನ್ನು ಅರೆದು ಇಟ್ಟದ್ದನ್ನು ಹಾಕಿ ಪರಿಮಳ ಬರುವಷ್ಟು ಹುರಿಯಿರಿ. ಗರಂ ಮಸಾಲಾ ಹುಡಿ ಕೂಡಾ ಇದೆ, ಅದನ್ನೂ ಹಾಕುವುದು. ಅರೆದಿಟ್ಟ ತೆಂಗಿನ ಅರಪ್ಪನ್ನೂ ಹಾಕಿ ಹುರಿಯುವುದು. ಹುರಿಯುವಿಕೆಯ ಈ ಹಂತದಲ್ಲಿ ನೀರು ಎರೆಯಬೇಕಾಗಿದೆ. ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸಿಹಿಗೆ ತಕ್ಕಷ್ಟು ಬೆಲ್ಲ ಹಾಕುವುದು.
ಕುದಿಯಲು ಪ್ರಾರಂಭವಾದಾಗ -
ಬೇಯಿಸಿಟ್ಟ ತೊಗರಿಬೇಳೆ, ತಗತೆ, ಆಲೂಗಡ್ಡೆಗಳನ್ನು ಹಾಕುವ ಸಮಯ ಬಂದಿದೆ.
ಎಲ್ಲವೂ ಸೇರಿ ರಸಪಾಕವಾಗುತ್ತ ಬಂದಾಗ -
ಕೊತ್ತಂಬರಿ ಸೊಪ್ಪು ಬಿದ್ದಿದೆ.  
ಈಗ ತಗತೇ ಕೂರ್ಮಾ ಅನ್ನ ಚಪಾತಿ, ದೋಸೆ ಇಡ್ಲಿಗಳೊಂದಿಗೆ ಸವಿಯಲು ಸಿದ್ಧವಾಗಿದೆ.


" ತಗತೇ ಸೊಪ್ಪು ಅಂದರೆ ಯಾವುದೂ? "

ಇದಪ್ಪ ಪ್ರಶ್ನೆ ಅಂದರೆ, ಸಾಮಾನ್ಯವಾಗಿ ಮೊದಲ ಮಳೆ ಬಿದ್ದೊಡನೆ ನೆಲದಿಂದ ಪುಟಿದೇಳುವ ಸಸ್ಯರಾಶಿಗಳಲ್ಲಿ ತಗತೆಯೂ ಒಂದು. ಸಸ್ಯ ವಿಜ್ಞಾನವು ಇದಕ್ಕೆ cassia tora ಎಂದು ಹೆಸರಿಟ್ಟಿದೆ.

ಗ್ರಾಮೀಣ ಜನಸಮುದಾಯ ಇದರ ಅಡುಗೆಯಲ್ಲಿ ಪರಿಣತರು. ತಂಬುಳಿ, ಚಟ್ಣಿ ಮಾತ್ರವಲ್ಲದೆ ಪತ್ರೊಡೆ, ಪಲ್ಯ, ಸಾಂಬಾರುಗಳನ್ನು ಮಾಡಿ ಉಣಬಹುದು. ರೋಟಿ, ಪರೋಟಾ ಕೂಡಾ ಮಾಡಿಸಿಕೊಳ್ಳಬಹುದಾದ ತಗತೇ ಸೊಪ್ಪು ನಮ್ಮ ಅಡುಗೆಮನೆಯಲ್ಲಿ ಆಧುನಿಕತೆಯ ಸ್ಪರ್ಶವನ್ನೂ ಪಡೆದಿದೆ.

ಮಳೆ ಆರಂಭವಾದ ನಂತರದ ದಿನಗಳಲ್ಲಿ ಎಲ್ಲಿಗೇ ಹೊರ ಹೊರಟರೂ ನನ್ನ ದೃಷ್ಟಿ ತಗತೆಯ ಕಡೆಗೆ. ಹಳ್ಳಿಯ ರಸ್ತೆಯಲ್ಲವೇ, ಎಲ್ಲ ಕಡೆಯೂ ಮುದ್ದೆಮುದ್ದೆಯಾಗಿ ಬೆಳೆದಿರುತ್ತದೆ. ಮನೆಯ ಕಡೆ ಹಿಂತಿರುಗಿ ಬರುವಾಗ ನಮ್ಮ ವಾಹನವನ್ನು ನಿಲ್ಲಿಸಿ ಸಾಕಷ್ಟು ಚಿಗುರೆಲೆಗಳನ್ನು ಕೊಯ್ದು ತರುವುದೊಂದು ರೂಢಿಯಾಗಿ ಬಿಟ್ಟಿದೆ. ಪಲ್ಯ, ಪತ್ರೊಡೆ, ಗಸಿ... ಏನು ಬೇಕೋ ಅದನ್ನು ಮಾಡಿಕೊಳ್ಳಲಡ್ಡಿಯಿಲ್ಲ. ಆಷಾಢ ಮಾಸ ಬಂದಾಗ ಇದನ್ನು ಅಡುಗೆ ಮಾಡಿ ಉಣ್ಣುವುದರಿಂದ ಮಳೆಗಾಲದ ರೋಗರುಜಿನಗಳಿಂದ ಮುಕ್ತರಾಗಬಹುದೆಂಬ ನಂಬಿಕೆಯೂ ಇಲ್ಲಿದೆ. ಬಹುಶಃ ಶರೀರದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಎಂಬ ಸತ್ಯವನ್ನು ಶಾಲಾಕಾಲೇಜುಗಳನ್ನು ಕಂಡಿರದಿದ್ದ ನಮ್ಮ ಪೂರ್ವಿಕರು ಜೀವನಾನುಭವದಿಂದಲೇ ತಿಳಿದಿದ್ದರು.

ಇದರ ವಿಶೇಷತೆಗಳೇನು?

ಎಲೆಗಳು ಉತ್ತಮ ಪ್ರೊಟೀನ್ ಯುಕ್ತ ಸೊಪ್ಪು ತರಕಾರಿ, ಹೂವುಗಳನ್ನೂ ಅಡುಗೆಯಲ್ಲಿ ಬಳಸಬಹುದಾಗಿದೆ. ಬೇರು, ಕಾಂಡ ಇತ್ಯಾದಿಯಾಗಿ ಎಲ್ಲವನ್ನೂ ಆಯುರ್ವೇದವು ಔಷಧಿಯಾಗಿ ಪರಿಗಣಿಸಿದೆ. ಬೇರು ರಕ್ತಶುದ್ಧಿಕಾರಕ, ಕಾಂಡವೂ ಸುಗಂಧಭರಿತವಾಗಿದ್ದು ನೀರಿನಲ್ಲಿ ಕುದಿಸಿ ಕುಡಿಯಬಹುದಾಗಿದೆ. ಬೀಜಗಳನ್ನು ಒಣಗಿಸಿ ಹುರಿದು ಪುಡಿ ಮಾಡಿ ಕಾಫಿಯಂತೆ ಸೇವಿಸಬಹುದು. ತಗತೆಯು ಆಯುರ್ವೇದದಲ್ಲಿ ಚಕ್ರಮರ್ದ ಎಂದು ಖ್ಯಾತವಾಗಿದ್ದು ಚರ್ಮರೋಗದ ಔಷಧಿಯೆಂದು ಪರಿಗಣಿಸಲ್ಪಟ್ಟಿದೆ. ಒಳ್ಳೆಯದೆಂದು ಅತಿಸೇವನೆ ಒಳ್ಳೆಯದಲ್ಲ!




ಟಿಪ್ಪಣಿ: ಉತ್ಥಾನ ಮಾಸಪತ್ರಿಕೆಯಲ್ಲಿ ಪ್ರಕಟಿತವಾಗಿರುವ ಬರಹ, ನವಂಬರ್, 2017.