Pages

Ads 468x60px

Tuesday 25 December 2018

ಶ್ಯಾವಿಗೆ ಪೊಂಗಲ್




ನಾಗಬನದ ಪರಿಸರದಲ್ಲಿ ಅಷ್ಟಮಂಗಲ ಸ್ವರ್ಣಪ್ರಶ್ನೆಯ ವೇಳೆ ದೈವಸಾನ್ನಿಧ್ಯದ ಕುರುಹುಗಳ ಕುರಿತು ತಿಳಿದಾಗಿನಿಂದ ಧಾರ್ಮಿಕ ವಿಧಿವಿಧಾನಗಳೂ, ಹೋಮಹವನಗಳೂ, ಭಕ್ತಾದಿಗಳ ಜನಜಾತ್ರೆಯೂ ಸೇರಿ ಆಗ್ಗಿಂದಾಗ್ಗೆ ಅನ್ನಸಂತರ್ಪಣೆಯ ಸಂಭ್ರಮಕಾಲ. ಆದಷ್ಟು ಬೇಗ ದೇವಾಲಯ ನಿರ್ಮಾಣದ ಸಂಕಲ್ಪದೊಂದಿಗೆ ದುರ್ಗಾಮಾತೆಗೆ ತಾತ್ಕಾಲಿಕ ನೆಲೆ ಒದಗಿಸಿ ಕೊಟ್ಟು ಬಾಲಾಲಯ ಪ್ರತಿಷ್ಠೆಯೂ ನಡೆಯಿತು. ವ್ಯವಸ್ಥಿತವಾಗಿ ಕಾರ್ಯಕ್ರಮಗಳು ನಡೆದ ನಂತರ ದೇವಿಯ ಆಲಯ ನಿರ್ಮಾಣ ಆಗುವ ತನಕ ಪ್ರತಿ ತಿಂಗಳೂ ಸಂಕ್ರಾಂತಿಯ ದಿವಸ, ಸಂಧ್ಯಾಕಾಲದಲ್ಲಿ ದುರ್ಗಾಪೂಜೆ, ಹೂವಿನಪೂಜೆ, ಕುಂಕುಮಾರ್ಚನೆ, ಭಜನೆಗಳನ್ನು ಭಕ್ತ ಸಮುದಾಯ ಹಮ್ಮಿಕೊಂಡಿದೆ.

ಊಟೋಪಚಾರದ ವ್ಯವಸ್ಥೆಗಾಗಿ ತಂದಿದ್ದ ಅಡುಗೆ ಸಾಮಗ್ರಿಗಳೂ, ತರಕಾರಿಗಳೂ, ಮಜ್ಜಿಗೆ, ಹಾಲು ಇತ್ಯಾದಿ ಉಳಿದಿವೆ. ಉಳಿಕೆಯಾಗಿದ್ದನ್ನು ಪುನಃ ಜಗ್ಗಣ್ಣನ ಅಂಗಡಿಗೆ ವಾಪಸ್ ಮಾಡುವ ವ್ಯವಸ್ಥೆ, ಬಾಲಕೃಷ್ಣ ಶೆಟ್ಟಿಯ ನೇತೃತ್ವದಲ್ಲಿ ನಡೆಯುತ್ತ ಇದ್ದಾಗ, ಅಡುಗೆ ಮನೆಯೊಳಗೆ ಇದ್ದಂತಹ ಪ್ಯಾಕೇಟುಗಳು, ಎಣ್ಣೆ, ಮೆಣಸಿನ ಹುಡಿ, ಅವಲಕ್ಕಿ, ಸಕ್ಕರೆ ಇತ್ಯಾದಿಗಳು ಹೊರ ನಡೆದುವು. ತರಕಾರಿ, ಮಜ್ಜಿಗೆ ವಗೈರೆ ಹಂಚಿಕೊಂಡಿದ್ದಾಯ್ತು, ನನಗೂ ಒಂದು ಕುಂಬಳಕಾಯಿ ದೊರೆಯಿತು.

“ ದಾಸಪ್ಪ, ಈ ಬಕೇಟ್ ಒಳಗೆ ನಾಲ್ಕು ಶಾವಿಗೆ ಪ್ಯಾಕೇಟು ಉಂಟಲ್ಲ… “
“ ಇದನ್ನು ಪಾಯಸ ಮಾಡದೇ ಇಟ್ಟಿದ್ದು ಯಾಕೆ? “
“ ಈ ಅಡುಗೆಯವರಿಗೆ ಶಾವಿಗೆ ಪ್ಯಾಕಟ್ಟು ಕೊಟ್ರೆ ಏನೋ ಮಾಡಿ ಹಾಕ್ತಾರೆ.. ಬಂದವರಿಗೆ ಪಾಯಸ ಸುರಿದು ಉಂಡ ಹಾಗೆ ಆಗಬೇಕಲ್ಲ. ಶಾವಿಗೆ ಪಾಯಸಕ್ಕೆ ಸಕ್ಕರೆ ಹಾಕ್ಬೇಕು. ಪಾಯಸದ ಖುಷಿ ಸಿಗಬೇಕಾದ್ರೆ ಕಡ್ಲೆಬೇಳೆಯದ್ದೇ ಆಗ್ಬೇಕು, ಅದೂ ದಪ್ಪ ದಪ್ಪ ಇರಬೇಕು, ಹೆಸ್ರುಬೇಳೆ ಆಗ್ತದೆ, ಅದನ್ನು ಹುರಿಯಬೇಕು, ಹುರಿದದ್ದು ಹೆಚ್ಚುಕಮ್ಮಿ ಆದ್ರೂ ಮೋಸವೇ... “ ಬಾಲಕೃಷ್ಣನ ವಾಗ್ಝರಿ ಮುಂದುವರಿಯುತ್ತಿದ್ದ ಹಾಗೆ, “ ಹ್ಞಾ, ಸರಿ ಸರಿ.. “ ಎಂದು ಒಪ್ಪಲೇ ಬೇಕು.

ಅಂತೂ ನಾಲ್ಕೂ ಶ್ಯಾವಿಗೆ ಪ್ಯಾಕೇಟುಗಳನ್ನು ನನ್ನ ಅಡುಗೆ ಪ್ರಯೋಗಶಾಲೆಗೆ ಒಪ್ಪಿಸಲಾಯಿತು.
“ ಏನ್ಮಾಡ್ಲೀ… “
ಏನೋ ಒಂದು ಹೊಸ ರುಚಿ ಮಾಡೋಣ.

ಶ್ಯಾವಿಗೆಯನ್ನು ಹುರಿಯಬೇಕಿಲ್ಲವೆಂಬ ಸೂಚನೆ ಪ್ಯಾಕೇಟಿನಲ್ಲಿ ಇದ್ದಿತು.
ಒಂದು ಲೋಟ ತುಂಬ ಶ್ಯಾವಿಗೆ,
ಎರಡು ಲೋಟ ನೀರು ತುಂಬಿ,
ಚಿಟಿಕೆ ಉಪ್ಪು ಹಾಕಿ ಕುಕ್ಕರಿನಲ್ಲಿ ಒಂದು ಸೀಟಿ ಕೂಗಿಸಿ,
ಕೆಳಗಿಳಿಸಿ,
ಒತ್ತಡ ಇಳಿದ ನಂತರ ಮುಚ್ಚಳ ತೆರೆದು,
ಬೆಂದಿದೆ,
ಧೊಡ್ಡ ಅಚ್ಚು ಬೆಲ್ಲ ಹಾಕಿರಿಸುವುದು, ಕರಗುತ್ತಿರಲಿ. ಬೆಲ್ಲವನ್ನು ನೀರಿನಲ್ಲಿ ಕರಗಿಸಿ ಎರೆದಿರಾದರೆ, ನೀರನ್ನು ಇಂಗಿಸಲು ವೃಥಾ ಶ್ರಮ ಪಡಬೇಕಾದೀತು. ಸಮಯವೂ ಹಾಳು.
2 ಚಮಚ ತುಪ್ಪ ಎರೆಯಿರಿ.
ಒಂದು ಹಿಡಿ ತೆಂಗಿನತುರಿ ಹಾಕುವುದು.
ಪುನಃ ಕುಕರ್ ಒಲೆಗೇರಲಿ, ಸಟ್ಟುಗದಲ್ಲಿ ಆಡಿಸುತ್ತ ಇದ್ದ ಹಾಗೆ ಬೆಲ್ಲ ಕರಗಿ ಶ್ಯಾವಿಗೆಯೊಂದಿಗೆ ಬೆರೆತು ಬಂದಾಗ ಹುಡಿ ಮಾಡಿದ ಏಲಕ್ಕಿ, ತುಪ್ಪದಲ್ಲಿ ಹುರಿದ ಗೇರುಬೀಜ, ದ್ರಾಕ್ಷಿ ಹಾಕುವುದು.

ಬಹಳ ಬೇಗನೇ ಆಗುವ ಈ ಸಿಹಿ ತಿನಿಸನ್ನು ನಮ್ಮ ಮನೆಯವರು ಇಷ್ಟಪಟ್ಟು ತಿಂದರು.
ಸಂಜೆವೇಳೆ ಬಾಲಕೃಷ್ಣ ಬಂದ, ಖುಷಿಖುಷಿಯಾಗಿ ತಿಂದ್ಬಿಟ್ಟು, “ ಹೌದೂ, ಇದೇನು ಹಲ್ವದ ಹಂಗಾಯ್ತಲ್ಲ… “ ಅಂದ.
“ ಧನುರ್ಮಾಸ ಬಂತಲ್ಲ, ಇದೂ ಶ್ಯಾವಿಗೆ ಪೊಂಗಲ್… “

               




Saturday 15 December 2018

ನೂಕಡ್ಡೆ ರಸಾಯಣ






             

ಮುಂಜಾನೆಯ ತಿಂಡಿ ತಟ್ಟೆಯನ್ನು ಈ ದಿನ ಒತ್ತುಶಾವಿಗೆಯಿಂದ ಅಲಂಕರಿಸಲಾಯಿತು.
“ಏನೂ, ನೆಂಟರು ಇದ್ರಾ? “
“ ಹಾಗೇನೂ ಇಲ್ಲ, ನಾವೇ ಇದ್ದಿದ್ದು, ತಿನ್ನಬೇಕು ಅನ್ನಿಸಿದಾಗ ಮಾಡಿಕೊಂಡು ತಿಂದೆವು…. ಮತ್ತೊಂದು ವಿಷಯ ಗೊತ್ತಾ, ನೆಂಟರು ಬಂದಾಗ ಒತ್ತುಶಾವಿಗೆ ತಂದು ಎದುರಿಗಿಟ್ರೆ ‘ ಗಂಟುಮೂಟೆ ಕಟ್ಟಿ ಹೊರಡು ‘ ಎಂಬ ಸಾಂಕೇತಿಕ ಅರ್ಥವೂ ಇದೆ. “
“ ಹೌದಾ, ಶಾವಿಗೆ ಪ್ಯಾಕೇಟು ಸಿಗುತ್ತೇ, ತಂದು ಒಗ್ಗರಣೆ ಮಸಾಲೆ ಹಾಕಿ ತಿನ್ನಲು ನಮಗೆ ಗೊತ್ತುಂಟು. “

ನಮ್ಮ ಮಕ್ಕಳು ಚಿಕ್ಕವರಿರಬೇಕಾದ್ರೆ ಒತ್ತುಶಾವಿಗೆ ಅಂದ್ರೆ ಪಂಚಪ್ರಾಣ. ನನ್ನ ಶಾವಿಗೆ ಒರಳು ಕೆಟ್ಹೋಗಿತ್ತು, ಮೇಲಕ್ಕೂ ಕೆಳಕ್ಕೂ ಹೋಗ್ತಾ ಇರಲಿಲ್ಲ. ತುಂಬ ಹಳೆಯದಾದ ಅಂದ್ರೆ ಓಬೀರಾಯನ ಕಾಲದ ಶಾವಿಗೆ ಒರಳು ನಿರುಪಯುಕ್ತ ವಸ್ತುಗಳೊಂದಿಗೆ ಅಟ್ಟ ಸೇರಿತ್ತು.

ಹೀಗಿರಬೇಕಾದ್ರೆ ಒಂದು ದಿನ ಬ್ಯಾಂಕ್ ವ್ಯವಹಾರಕ್ಕೆಂದು ಉಪ್ಪಳ ಪೇಟೆಗೆ ಹೋದ ಗೌರತ್ತೆ ಹೊಸ ಶಾವಿಗೆ ಒರಳು ಖರೀದಿಸಿ ತಂದರು. “ ಮಕ್ಕಳು ಆಸೆ ಪಡ್ತಾವೆ, ಮಾಡಿಕೊಡು ತಿನ್ನಲಿಕ್ಕೆ… “ ಅವರಿಗೂ ತಿನ್ನಬೇಕಾಗಿತ್ತು ಅನ್ನಿ.

ಮೊದಲೆಲ್ಲ ಮನೆಗೆ ಬರುತ್ತಿದ್ದ ನೆಂಟರು ತಿಂಗಳಾನುಗಟ್ಟಲೆ ಝಂಡಾ ಊರುತ್ತಿದ್ದರು, ಆ ಕಾಲವೇ ಹಾಗಿತ್ತು, ಒಂದೂರಿಂದ ಮತ್ತೊಂದೂರಿಗೆ ನಡೆದೇ ಪ್ರಯಾಣ, ರಸ್ತೆ ಸಾರಿಗೆ ವ್ಯವಸ್ಥೆಯಿಲ್ಲ, ಇದ್ದರೂ ಕೈಯಲ್ಲಿ ದುಗ್ಗಾಣಿಯಿಲ್ಲ. ಮಕ್ಕಳುಮರಿ ಸಮೇತ ಬಂದ ನೆಂಟರು ಮಳೆಗಾಲ ಮುಗಿಯದೆ ಹೊರಡಲಿಕ್ಕಿಲ್ಲ. ಬಂದವರು ಅದೆಷ್ಟೇ ಆತ್ಮೀಯ ಬಳಗವಾಗಿದ್ದರೂ ಊಟೋಪಚಾರ, ಅತಿಥಿಸತ್ಕಾರ ಎಲ್ಲವೂ ನಾಲ್ಕಾರು ದಿನಕ್ಕೆ ಸೀಮಿತ. ‘ ಬಂದವರು ಹೋಗಲಿ ‘ ಎಂಬ ಸೂಚನೆಯನ್ನು ಸೇಮಿಗೆ ರಸಾಯನ ಮಾಡಿ ಸತ್ಕರಿಸುವುದರ ಮೂಲಕ ತಿಳಿಯಪಡಿಸುವ ರೂಢಿ ಇದ್ದಿತು. ಒತ್ತಾಯದಿಂದ ಬಂದ ಅತಿಥಿಗಳನ್ನು ಬಲವಂತವಾಗಿಯಾದರೂ ಹೊರ ತಳ್ಳುವಂತೆ ಒತ್ತುಶಾವಿಗೆಯು ಒಂದು ವಿಶೇಷವಾದ ತಿನಿಸೂ ಹೌದು. ತಯಾರಿಸಲು ಶ್ರಮವೂ ಅನಿವಾರ್ಯ ಆಗಿದ್ದ ಕಾಲ ಅದಾಗಿತ್ತು. ಸೇರಕ್ಕಿ ಅರೆದು, ಕಾಯಿಸಿ, ಹಬೆಯಲ್ಲಿ ಬೇಯಿಸಿ, ನೂಲಿನೆಳೆಯಂತೆ ಒತ್ತಿ ಹೊರ ಬಂದ ಸೇಮಿಗೆಯು ನೂಕಡ್ಡೆ ಎಂದೂ ಹೆಸರು ಪಡೆದಿದೆ.  

ನಾನೂ ಶಾವಿಗೆ ಮಾಡದೆ ತುಂಬ ಸಮಯವಾಗಿತ್ತು, ಮೊದಲು ಶಾವಿಗೆ ಒತ್ತು ಯಂತ್ರ ಎಲ್ಲಿದೆಯೆಂದು ಹುಡುಕಿ, ಹೊರತಂದು ಶುಚಿಗೊಳಿಸಿ, ಯಂತ್ರದ ನಟ್ಟು ಬೋಲ್ಟುಗಳೆಲ್ಲ ಸಮರ್ಪಕ ಸ್ಥಿತಿಯಲ್ಲಿವೆ ಎಂಬ ತೀರ್ಮಾನಕ್ಕೆ ಬಂದು…

ಗದ್ದೆ ಬೇಸಾಯ ಇದ್ದ ಕಾಲದಲ್ಲಿ ಕುಚ್ಚುಲಕ್ಕಿಯಿಂದಲೇ ಶಾವಿಗೆ ಮಾಡುವ ರೂಢಿ ಇಟ್ಕೊಂಡಿದ್ದೆವು. ಅದನ್ನು ಬೇಯಿಸಲು ಜಾಸ್ತಿ ಸಮಯ ಬೇಕು, ಕಟ್ಟಿಗೆಯ ಒಲೆಯೂ ಇದ್ದ ಕಾಲ ಅದು, ಅರೆಯಲಿಕ್ಕೂ ಗ್ರೈಂಡಿಗ್ ಮೆಶೀನ್ ಅನಿವಾರ್ಯ. ಕುಚ್ಚುಲಕ್ಕಿ ಹಾಗೂ ಬೆಳ್ತಿಗೆ ಅಕ್ಕಿ ಸಮಪ್ರಮಾಣದಲ್ಲಿ ಹಾಕಿ ಶಾವಿಗೆಮಾಡುವುದೂ ಇದೆ. ಏನೇ ಆದರೂ ಈಗಿನ ವೇಗದ ಜೀವನಶೈಲಿಯಿಂದಾಗಿ ಹಳೆಯ ಪದ್ಧತಿಗಳು ಮೂಲೆಗುಂಪಾಗಿವೆ.

               

ಇದೆಲ್ಲ ಬೇಡ, ಬೇಗನೆ ಆಗುವಂತಹ ಬೆಳ್ತಿಗೆ ಅಕ್ಕಿಯೇ ಹಿತ, ಮಲ್ಲಿಗೆಯಂತಹ ಒತ್ತುಶಾವಿಗೆ ತಿನ್ನೋಣ.  
2 ಲೋಟ ಬೆಳ್ತಿಗೆ ಅಕ್ಕಿ ನೀರಿನಲ್ಲಿ ತೊಳೆದು ನೆನೆಯಲು ಇರಿಸುವುದು. ಅಕ್ಕಿಯ ಗುಣಮಟ್ಟ ಚೆನ್ನಾಗಿದ್ದಷ್ಟೂ ಶಾವಿಗೆ ರುಚಿಕರವಾಗಿರುತ್ತದೆ.

ನಾಲ್ಕಾರು ಗಂಟೆ ನೆನೆದ ಅಕ್ಕಿಯ ನೀರು ಬಸಿದು ಮಿಕ್ಸಿ ಯಂತ್ರದಲ್ಲಿ ಅರೆಯಿರಿ.
2 ಲೋಟ ಅಕ್ಕಿ ಅಳೆದಿದ್ದೇವೆ, ಮೂರು ಲೋಟ ನೀರು ಅರೆಯಲಿಕ್ಕೆಂದು ಅಳೆದು ಇರಿಸಿಕೊಳ್ಳಿ.
ಮಿಕ್ಸಿಯ ಜಾರ್ ಒಳಗೆ ಅದರ ಸಾಮರ್ಥ್ಯ ಇರುವಷ್ಟೇ ಅಕ್ಕಿ ಹಾಕಿ, ಸುಸೂತ್ರವಾಗಿ ತಿರುಗಲು ಬೇಕಾದಷ್ಟೇ ನೀರು ಹಾಕಿ ಅರೆಯಿರಿ. ಎಲ್ಲ ಅಕ್ಕಿಯೂ ಅರೆಯಲ್ಪಟ್ಟಿತು, ರುಚಿಗೆ ತಕ್ಕಷ್ಟು ಉಪ್ವು ಬೀಳಲಿ. ಅಳೆದು ಇಟ್ಕೊಂಡ ಮೂರು ಲೋಟ ನೀರು ಮುಗಿದಿಲ್ಲ ಅಲ್ಲವೇ,

ದಪ್ಪ ತಳದ ಬಾಣಲೆಗೆ ಈ ಹಿಟ್ಟನ್ನು ಸುರಿದು, ಉಳಿಕೆಯಾಗಿರುವ ನೀರನ್ನು ಎರೆಯಿರಿ. ಇದೀಗ ನೀರು ದೋಸೆಯ ಹಿಟ್ಟಿನಂತಾಗಿದೆ. ಶಾವಿಗೆ ನೂಲೆಳೆಯಂತೆ ಬರಬೇಕಾದರೆ ನಾವು ಎರೆಯುವ ನೀರಿನ ಅಂದಾಜು ಸರಿಯಾಗಿರಬೇಕು. ನೀರು ಕಡಿಮೆಯಾದರೆ ಹಿಟ್ಟು ಸರಿಯಾಗಿ ಬೇಯದೇ ಹೋದೀತು, ಬೆಂದರೂ ಶಾವಿಗೆ ಯಂತ್ರದಿಂದ ಕೆಳಗಿಳಿಸಲು ಹರಸಾಹಸ ಪಡಬೇಕಾದೀತು. ನೀರಿನ ಅಳತೆ ಜಾಸ್ತಿ ಆದ್ರೂನೂ ಒತ್ತಿದ ಶಾವಿಗೆ ಪಿಚಿ ಪಿಚಿಯಾಗಿ ಮುದ್ದೆಯಾದೀತು. ಇವಿಷ್ಟು ಮುಂಜಾಗ್ರತೆಯ ಸಲಹೆಗಳನ್ನು ಶಾವಿಗೆ ಒತ್ತುಮಣೆಯನ್ನು ತಂದ ಗೌರತ್ತೆ ಹೇಳಿದ್ದು.

ಒಂದೇ ಹದನಾದ ಉರಿಯಲ್ಲಿ ಮರದ ಸಟ್ಟುಗದಲ್ಲಿ ತಳ ಹಿಡಿಯದಂತೆ ಕೈಯಾಡಿಸುತ್ತ ಇದ್ದ ಹಾಗೆ ನೀರಿನಂತಿದ್ದ ಹಿಟ್ಟು ಘನ ರೂಪಕ್ಕೆ ಬಂದಿದೆ, ಕೈಗಳಿಗೆ ಹಸಿ ಹಿಟ್ಟಿನಂತೆ ಅಂಟಿಕೊಳ್ಳಬಾರದು. ಪರೀಕ್ಷಿಸಿ ಸರಿಯಾದ ಹೊತ್ತಿಗೆ ಸ್ಟವ್ ಆರಿಸಿ, ಬಾಣಲೆ ಕೆಳಗಿಳಿಸಿ. ಅಕ್ಕಿ ಹಿಟ್ಟಿನ ಮುದ್ದೆಯನ್ನು ಇನ್ನೊಂದು ತಪಲೆಗೆ ಆ ಕೂಡಲೇ ವರ್ಗಾಯಿಸಿ.

ತುಸು ಆರಿದ ನಂತರ, ಶಾವಿಗೆ ಒರಳೊಳಗೆ ಹಿಡಿಸುವಂತಹ ಉಂಡೆ ಮಾಡಿಟ್ಟು, ಅಟ್ಟಿನಳಗೆ ಯಾ ಇಡ್ಲಿಪಾತ್ರೆಯೊಳಗೆ ಜೋಡಿಸಿ ಇಡುವುದು.

ಮುಂಜಾನೆ ಎದ್ದೊಡನೆ ಅಟ್ಟಿನಳಗೆಯನ್ನು ಒಲೆಗೇರಿಸಿ, ನೀರು ಕುದಿದು, ಹದಿನೈದು ನಿಮಿಷಗಳಲ್ಲಿ ಉಂಡೆಗಳು ಬೆಂದಿರುತ್ತವೆ. ಭಾನವಾರದ ರಜಾ ದಿನ ಒತ್ತುಶಾವಿಗೆಯ ಆಟಕ್ಕೆ ಸೂಕ್ತವಾಗಿದೆ. ಮನೆಯ ಸದಸ್ಯರ ಸಹಾಯವನ್ನು ಪಡೆದುಕೊಳ್ಳಿ. ಒಂದೊಂದೇ ಉಂಡೆಯನ್ನು ಶಾವಿಗೆ ಒರಳೊಳಗೆ ತುಂಬಿಸಿ ಒತ್ತುವುದು, ನೂಕಡ್ಡೆ ಸಿದ್ಧ.

ಹಿಂದೆ ಕೂಡು ಕುಟುಂಬಗಳಿದ್ದ ಕಾಲದಲ್ಲಿ ಮನೆಯ ಸ್ಥಿತಿವಂತಿಕೆಯನ್ನೂ ಶಾವಿಗೆ ಯಂತ್ರದಿಂದಲೇ ಅಳೆಯಬಹುದಾಗಿತ್ತು. ಶಾವಿಗೆ ಒರಳನ್ನು ವೈವಿಧ್ಯಮಯ ವಿನ್ಯಾಸಗಳಲ್ಲಿ ಕಾಣಬಹುದಾಗಿತ್ತು. ಮರದ ಕುಸುರಿ ಕಲೆಗಳಿಂದ, ಕಣ್ಸೆಳೆಯುವ ವಿನ್ಯಾಸಗಳಿಂದಲೂ ಕೂಡಿದ ಪುರಾತನ ಶಾವಿಗೆ ಒತ್ತುಮಣೆಗಳು ನಮ್ಮ ಆಧುನೀಕರಣಗೊಂಡ ಜೀವನಶೈಲಿಯಿಂದಾಗಿ ಅಟ್ಟ ಸೇರಿ ಮೂಲೆಗುಂಪಾಗಿರುವ ಸಾಧ್ಯತೆ ಅಧಿಕ.

                    

      
ಸಿದ್ಧವಾದ ಒತ್ತು ಶಾವಿಗೆಯನ್ನು ತಿನ್ನುವ ಬಗೆ ಹೇಗೆ?

ಇದನ್ನು ಬರೆಯುವಾಗ ಸಹಜವಾಗಿ ನನ್ನ ಮಾವನವರ ನೆನಪಾಗದೆ ಇದ್ದೀತೆ, ವೃದ್ಧರಾಗಿದ್ದ ನನ್ನ ಮಾವ ಡಯಾಬಿಟೀಸ್ ಕಾಯಿಲೆಯನ್ನೂ ಅಂಟಿಸಿಕೊಂಡಿದ್ದರು, ಸಾಲದಿದ್ದಕ್ಕೆ ಅದೇನೋ ಕೊಲೆಸ್ಟರಾಲ್ ಭೀತಿಯೂ ಅವರದಾಗಿತ್ತು. “ ನೋಡು, ನಿನ್ನ ರಸಾಯನ, ಒಗ್ಗರಣೆ ಯಾವುದೂ ಬೇಡ, ನನಗೆ ಶಾವಿಗೆ ಇರುವ ಹಾಗೆ ತಿನ್ನಲಿಕ್ಕೆ ಇಟ್ಟಿರು… “

ಬಾಳೆಹಣ್ಣು ರಸಾಯನ ಇದಕ್ಕೆ ಸೊಗಸಾಗಿ ಹೊಂದಿಕೆಯಾಗುವಂತಹುದಾಗಿದೆ, ನನ್ನ ಬಳಿ ಇವತ್ತು ಬಾಳೆಹಣ್ಣು ಇಲ್ಲ, ಅಂಗಡಿಯಿಂದ ತಂದ ಖರ್ಜೂರದ ಪ್ಯಾಕೆಟ್ ಇದೆ, ಖರ್ಜೂರದಿಂದ ರಸಾಯನ ಮಾಡೋಣ.

ಖರ್ಜೂರ ಹತ್ತೂ ಹದಿನೈದು ಇರಲಿ.
ಬಿಡಿಸಿ ಬೀಜ ತೆಗೆದು ಕುದಿಯುವ ನೀರು ಎರೆದು ಮುಚ್ಚಿ ಇರಿಸಿ.
ಒಂದು ಕಡಿ ತೆಂಗಿನಕಾಯಿ ತುರಿದು, ಅರೆದು ಕಾಯಿಹಾಲು ಮಾಡಿರಿಸಿ, ದಪ್ಪ ಹಾಲು ಮಾತ್ರ ಸಾಕು.
ಮೆತ್ತಗಾಗಿರುವ ಖರ್ಜೂರವನ್ನು ಕೈಯಲ್ಲಿ ತುಸು ಹಿಸುಕಿ ಇಟ್ಟು,
ಒಂದು ಅಚ್ಚು ಬೆಲ್ಲ ಪುಡಿ ಮಾಡಿ ಸೇರಿಸಿ,
ಅರ್ಧ ಚಮಚ ಎಳ್ಳು ಹುರಿದು ಗುದ್ದಿ,
ದಪ್ಪ ಕಾಯಿಹಾಲು ಎರೆಯುವಲ್ಲಿಗೆ
ರಸಾಯನ ಆಯ್ತು ಅನ್ನಿ.
ದ್ರಾಕ್ಷಿ ಗೋಡಂಬಿಗಳನ್ನು ತುಪ್ಪದಲ್ಲಿ ಹುರಿದು ಹಾಕಿದಾಗ ಇನ್ನೂ ಸ್ವಾದಿಷ್ಟ ರಸಾಯನ ನಮ್ಮದಾಯಿತು.

ಕೇವಲ ಬೆಲ್ಲ ಹಾಗೂ ತೆಂಗಿನಕಾಯಿಹಾಲುಗಳ ಮಿಶ್ರಣವೂ ಶಾವಿಗೆಯ ರಸದೂಟಕ್ಕೆ ಸಾಕಾಗುತ್ತದೆ, ಇದನ್ನು ನಮ್ಮ ಕಡೆ ಬೆಲ್ಲಕಾಯಿಹಾಲು ಅನ್ನುವ ರೂಢಿ.

ಒತ್ತು ಶಾವಿಗೆ ಇದ್ದರೆ ಸಾಕು, ಶಾವಿಗೆ ಉಪ್ಕರಿ, ಶಾವಿಗೆ ಪುಳಿಯೋಗರೆ, ಶಾವಿಗೆ ಚಿತ್ರಾನ್ನ, ಶಾವಿಗೆ ಪುಲಾವ್, ಶಾವಿಗೆ ವೆಜಿಟೆಬಲ್ ಬಾತ್…. ಹೀಗೆ ಅಡುಗೆಯ ರಸರುಚಿಗಳನ್ನು ಜೋಡಿಸುತ್ತ ಹೋಗಬಹುದು.

               





                 

Friday 7 December 2018

ಚಟ್ಟಂಬಡೆಯ ಚಹಾಕೂಟ





“ ನಾಳೆ ಸಂಜೆ ಒಂದೈವತ್ತು ಜನ ಬಂದು ಸೇರುವುದಿದೆ... “
“ ಆಯ್ತು, ಬಂದೋರಿಗೆ ತಿಂಡಿತೀರ್ಥ ಆಗೋದು ಬೇಡವೇ.. “
“ ನೀನು ತಲೆ ಕೆಡಿಸ್ಕೋ ಬೇಡ, ಅಡುಗೆ ಗಣಪಣ್ಣನ ಕೈಲಿ ಹೇಳಿದ್ದಾಗಿದೆ, ಅವನೇ ಮಾಡಿ ತರ್ತಾನೆ… “
“ ಸರಿ ಹಾಗಿದ್ರೆ… “ ನನಗೂ ಬಿಡುವು.

ಹಿರಣ್ಯದ ಆವರಣದೊಳಗೆ ಅವಗಣಿತವಾಗಿದ್ದ ನಾಗಬನವನ್ನು ಪುನರ್ನಿಮಾಣ ಮಾಡಬೇಕಾದರೆ ಅಷ್ಟಮಂಗಲಪ್ರಶ್ನೆಯಲ್ಲಿ ದೇವೀ ಸಾನ್ನಿಧ್ಯವೂ ಆಸುಪಾಸಿನಲ್ಲಿ ಇದೆಯೆಂದು ದೈವಜ್ಞರ ಮುಖೇನ ತಿಳಿದು ಬಂದಿತ್ತು. ಆ ಪ್ರಕಾರವಾಗಿ ಕೊಲ್ಲೂರಿಗೂ ಹೋಗಿ ದೇವಿಯ ದರ್ಶನ ಮಾಡಿಕೊಂಡು ಬಂದಿದ್ದೆವು. ಈಗ ಮುಂದಿನ ಹೆಜ್ಜೆಯಾಗಿ ದೇವಿಗೊಂದು ಆಲಯ ಆಗಬೇಕಾಗಿದೆ. ಆ ಪೂರ್ವಿಭಾವಿ ಸಿದ್ಧತೆಗಳಿಗಾಗಿ ಊರಿನ ಹತ್ತೂ ಸಮಸ್ತರು ಸೇರಲಿರುವ ಸಭಾ ಕಾರ್ಯಕ್ರಮಕ್ಕೆ ಒಂದು ಚಹಾಕೂಟ.

ಐವತ್ತು ಜನ ಬಂದಿರ್ತಾರೆ ಅಂದಿದ್ರೂ ಗಣಪಣ್ಣನ ಚಟ್ಟಂಬಡೆಗಳು ಚಹಾಪಾನದೊಂದಿಗೆ ಮುಗಿಯುವುದೆಂತು, ಚಹಾ ಕೂಡಾ ಉಳಿಯಿತು. 15 - 20 ಚಟ್ಟಂಬಡೆಗಳು ಬಿಕರಿಯಾಗದೆ ಉಳಿದುವು.

“ ಈ ಚಹಾ ಫ್ರಿಜ್ ಒಳಗಿಟ್ಟರೆ ನಾಳೆಗೂ ಆದೀತು… “ ಸೇರಿದ್ದ ಮಹಿಳೆಯರಲ್ಲಿ ಅಕ್ಕಪಕ್ಕದವರು ಕೂಡಿ ಚಹಾ ಹಂಚಿಕೊಂಡಿದ್ದಾಯ್ತು.

ಚಟ್ಟಂಬಡೆಗಳನ್ನು ಪೊಟ್ಟಣಗಳಲ್ಲಿ ತುಂಬಿ ಆತ್ಮೀಯ ಸ್ನೇಹಿತರಿಗೆ ಕೊಟ್ಟಿದ್ದೂ ಆಯ್ತು.

“ ಹೌದಾ… ನಾವೂ ಬರುತ್ತಿದ್ದೆವಲ್ಲ! “

ಈಗ ಚಟ್ಟಂಬಡೆ ಮಾಡುವ ವಿಧಾನ ಬರೆಯೋಣ, ಕೇವಲ ತಿನ್ನುವ ಅತ್ಯಾಸಕ್ತಿ ಇದ್ದರೆ ಸಾಲದು, ಮಾಡಲೂ ತಿಳಿದಿರಬೇಕು. ಹೋಟಲ್ ಗೆ ಹೋಗಿ ಕೇವಲ ಚಹಾ ಕುಡಿಯಬೇಕಿದ್ರೂ ರೂಪಾಯಿ ಮೂವತ್ತು ಕೈಯಲ್ಲಿ ಇರಬೇಕು.

ಒಂದು ಲೋಟ ಕಡ್ಲೆ ಬೇಳೆ, ನೀರಿನಲ್ಲಿ ನೆನೆಸಿ ಇಡಬೇಕು.
ಎರಡು ಚಮಚ ಅಕ್ಕಿ ಹಿಟ್ಟು.
ರುಚಿಗೆ ಉಪ್ಪು.
ಕರಿಯಲು ಅರ್ಧ ಲೀಟರ್ ಅಡುಗೆಯ ಎಣ್ಣೆ.
ಉಳಿದಂತೆ ಮಸಾಲಾ ಸಾಮಗ್ರಿಗಳು ಏನೇನು?
ಕರಿಬೇವು, ಹಸಿಮೆಣಸು, ಶುಂಠಿ, ನೀರುಳ್ಳಿ, ಕೊತ್ತಂಬರಿ ಸೊಪ್ಪು. ಅಗತ್ಯಕ್ಕೆ ತಕ್ಕಂತೆ ಆಯ್ದು ಹೆಚ್ಚಿಟ್ಟು ಕೊಳ್ಳುವುದು.
ಒಂದು ಚಮಚ ಮೆಣಸಿನ ಹುಡಿ.

ತರಿತರಿಯಾಗಿ ಕಡ್ಲೆಬೇಳೆಯನ್ನು ನೀರು ತಾಕಿಸದೆ ರುಬ್ಬುವುದು, ನುಣ್ಣಗಾಗಲೂ ಬಾರದು, ಕೆಲವಾರು ಕಡ್ಲೆಕಾಳುಗಳು ಹುಡಿಯಾಗದಿದ್ರೂ ಆದೀತು.
ಒಂದು ತಪಲೆಗೆ ಎಲ್ಲ ಸಾಮಗ್ರಿಗಳನ್ನು ಹಾಕಿ ಕಲಸುವುದು.
ಸ್ವಲ್ಪ ಹೊತ್ತು ಬಿಟ್ಟು, ದೊಡ್ಡ ಲಿಂಬೆ ಗಾತ್ರದ ಉಂಡೆ ಮಾಡಿ, ಅಂಗೈಯಲ್ಲಿ ತಟ್ಟಿ ಚಟ್ಟೆ ಮಾಡಿಕೊಂಡು, ಕಾದ ಎಣ್ಣೆಗೆ ಹಾಕಿ, ಹೊಂಬಣ್ಣ ಬರುವಾಗ ತೆಗೆಯುವುದು. ಎಣ್ಣೆಯಲ್ಲಿ ಹಿಡಿಸುವಷ್ಟು ಒಂದೇ ಬಾರಿ ಹಾಕಿ ಕರಿಯುವುದು ಜಾಣತನ.

ಅಕ್ಕಿ ಹುಡಿ ಹಾಕುವುದರಿಂದ ಚಟ್ಟಂಬಡೆ ಗರಿಗರಿಯಾಗಿರುತ್ತದೆ.
ಶುಭ ಸಮಾರಂಭಗಳು, ಧಾರ್ಮಿಕ ಸಮಾವೇಶಗಳಲ್ಲಿ ಚಟ್ಟಂಬಡೆ ಮಾಡುವುದಿದ್ದರೆ ನೀರುಳ್ಳಿ ಹಾಕುವಂತಿಲ್ಲ.
ಕಡ್ಲೆಬೇಳೆಯೊಂದಿಗೆ ಉದ್ದಿನಬೇಳೆ, ತೊಗರಿಬೇಳೆ ಸಮಾನವಾಗಿ ಹಾಕಿ ಚಟ್ಟಂಬಡೆ ಮಾಡುವುದು ಸಾಂಪ್ರದಾಯಿಕ ವಿಧಾನ. ಒಂದು ಲೋಟ ಅಳತೆಯಲ್ಲಿ ಮೂರೂ ಬಗೆಯ ಬೇಳೆಗಳನ್ನು ಹೊಂದಿಸಿ ಮಾಡಿಕೊಳ್ಳಬಹುದು. ಮಕ್ಕಳಿಗೆ ಪುಷ್ಟಿದಾಯಕ ತಿಂಡಿಯೂ ಆಯ್ತು.
ಮಸಾಲಾ ಸಾಮಗ್ರಿಗಳ ಜೊತೆಗೆ ಇಂಗು ಕೂಡಾ ಹಾಕಿದ್ರೆ ಇನ್ನೂ ಪರಿಮಳ ಹಾಗೂ ರುಚಿಯೆಂದು ಗೌರತ್ತೆಯ ಒಕ್ಕಣೆಯೊಂದಿಗೆ ಚಟ್ಟಂಬಡೆ ಮಾಡುವ ವಿಧಿವಿಧಾನಗಳನ್ನು ತಿಳಿದಾಯ್ತು.

               





Friday 23 November 2018

ಹರಿವೆ ಸೊಪ್ಪಿನ ರೊಟ್ಟಿ

             


                            


ಮುಂಜಾನೆ ತಿಂಡಿ ತಿಂದಾಯ್ತು, ಚಪಾತಿ ತಿಂದೆವು. ಅದೂ ನಮ್ಮೂರಿನ ರೇಶನ್ ಶಾಪಿನಲ್ಲಿ ಖರೀದಿಸಿದ ಗೋಧಿ ಹುಡಿಯಿಂದ ಮಾಡಿದ್ದು.

“ ಹೌದ, ರೇಶನ್ ಗೋಧಿ ಚೆನ್ನಾಗಿತ್ತ? “
“ ಸ್ವಲ್ಪ ಒರಟು ಹುಡಿ, ಆದ್ರೂ ಜಾಲರಿ ತಟ್ಟೆಯಲ್ಲಿ ತರಿ ತರಿಯೇನೂ ಉಳಿಯಲಿಲ್ಲ, ಚೆನ್ನಾಗಿಯೇ ಇತ್ತು… “

ವರ್ಷಗಳ ಹಿಂದೆ ರೇಶನ್ ದಾರರಿಗೆ ತಾಜಾ ಗೋಧಿ ಸಿಗುತ್ತಾ ಇತ್ತು, ನಾನೂ ಮಕ್ಕಳಿಗೆ ಗೋಧಿ ದೋಸೆ ಇಷ್ಟವೆಂದು ತರಿಸುವುದೂ ಇತ್ತು. ನನ್ನ ಕೆಲಸಗಿತ್ತಿಯರು ಕೋಳಿಗಳಿಗೆ ಉತ್ತಮ ಆಹಾರವೆಂದು ಒಯ್ಯುತ್ತಿದ್ದರಲ್ಲದೆ ಗೋಧಿಯನ್ನು ಅರೆದು, ದೋಸೆ ತಿಂದವರಲ್ಲ, ಅಥವಾ ಅಷ್ಟು ವ್ಯವಧಾನ ಇದ್ದವರು ಅವರಲ್ಲ.

 ಗೋಧಿಯನ್ನು ಯಾರೂ ಕೊಂಡೊಯ್ಯುವವರಿಲ್ಲವೆಂದು ಸರ್ಕಾರ ಗೋಧಿ ಹುಡಿ ವಿತರಣೆ ಪ್ರಾರಂಭಿಸಿದ್ದೂ ಆಗಿದೆ. ಗೋಧಿ ಹುಡಿಯಿಂದ ಚಪಾತಿ ಲಟ್ಟಿಸಿ ತಿನ್ನಲು ನಮ್ಮ ಕೂಲಿ ಕಾರ್ಮಿಕರಿಗೆಲ್ಲಿಂದ ತಿಳಿದಿರುತ್ತದೆ? ರೇಶನ್ ಶಾಪಿನಲ್ಲಿ ಹುಡಿಯೂ ಮುಗಿಯುವುದಿಲ್ಲವೆಂದು ಒಯ್ಯುವವರಿಗೆ ಕೇಳಿದಷ್ಟು ಸಿಗುತ್ತಿದೆ. ನನಗೂ ಒಂದು ದಿನ ನಾಲ್ಕಾರು ಪ್ಯಾಕೇಟು ಗೋಧಿ ಹುಡಿ ಬಂದಿತು.

ನನ್ನಮ್ಮ ಹೇಳಿಕೊಟ್ಟಂತಹ ಬುದ್ಧಿವಂತಿಕೆ ಉಪಯೋಗಿಸಿ ಚಪಾತಿ ಹಿಟ್ಟು ಕಲಸಿ, ಲಟ್ಟಿಸಿ, ಬೇಯಿಸಿ ತಿಂದೂ ಆಯ್ತು.

“ ಹೇಗೆ ಮಾಡಿದ್ರೀ? “

ಮೊದಲು ನಮ್ಮ ಅಗತ್ಯಕ್ಕೆ ಬೇಕಾದ ಹುಡಿಯನ್ನು ಜರಡಿಯಾಡಿಸಿ,
ಎರಡು ಲೋಟ ಗೋಧಿ ಹುಡಿ,
ರುಚಿಗೆ ಉಪ್ಪು ಹಾಕಿದಂತಹ ಒಂದು ಲೋಟ ಕುದಿಯುವ ನೀರು,

ಕುದಿಯುವ ನೀರನ್ನು ಗೋಧಿ ಹುಡಿಗೆ ಎರೆದು,
ಮರದ ಸಟ್ಟುಗದಲ್ಲಿ ಅತ್ತ ಇತ್ತ ಆಡಿಸಿ,
ಒಂದೇ ಸಮ ಮಾಡಿ,
ತುಸು ಹೊತ್ತು ಕಳೆದ ನಂತರ,
ಬಿಸಿ ಆರಿದಾಗ,
ಕೈಯಲ್ಲಿ ಹಿಟ್ಟನ್ನು ಕಲಸಿ ನಾದೀ ನಾದಿ ಮುಚ್ಚಿ ಇಡುವುದು.

ಮಾರನೇ ದಿನ ಬೆಳಗ್ಗೆ ಪುನಃ ಇನ್ನೊಮ್ಮೆ ನಾದಿಟ್ಟು,
ಲಿಂಬೇ ಗಾತ್ರದ ಉಂಡೆಗಳನ್ನು ಮಾಡಿಟ್ಟು,
ಗೋಧಿ ಹುಡಿಯಲ್ಲಿ ಹೊರಳಿಸಿ,
ಲಟ್ಟಣಿಗೆಯಲ್ಲಿ ಲಟ್ಟಿಸಿ,
ತವಾ ಬಿಸಿಯೇರಿತೇ,
ಒಂದು ಚಮಚಾ ತುಪ್ಪ ಎರೆದು,
ಲಟ್ಟಿಸಿದ ಹಿಟ್ಟನ್ನು ಹಾಕಿ,

ಹಿಟ್ಟಿನ ಒಂದು ಬದಿ ಬೆಂದಿದೆ,
ಕವುಚಿ ಹಾಕಿ,
ಮೆಲ್ಲಗೆ ಸಟ್ಟುಗದಲ್ಲಿ ಒತ್ತಿ,
ಒತ್ತಿದಾಗ ಹಗುರಾಗಿ ಉಬ್ಬಿ ಉಬ್ಬಿ ಬಂದಿದೆ,
ಚಪಾತಿ ಬೆಂದಿದೆ.
ತೆಗೆದು ಪುನಃ ಕಾವಲಿಗೆ ತುಪ್ಪ ಸವರಿ ಪುನರಾವರ್ತಿಸುವುದು.

ತಿಂಡಿ ತಿನ್ನುವ ಕಾರ್ಯಕ್ರಮ ಮುಗಿಯಿತು. ಈಗ ಹಿತ್ತಲ ಗಿಡಗಳಿಗೆ ನೀರುಣಿಸುವ ಸರದಿ. ನೀರು ಹಾಯಿಸುತ್ತಿದ್ದ ಹಾಗೆ, ಅಲಸಂಡೆ ಸಾಲಿನಲ್ಲಿ ಬೆಳೆದು ನಿಂತಿದ್ದ ಹರಿವೆ ಗಿಡ ಕತ್ತರಿಸಲ್ಪಟ್ಟು ಮನೆಯೊಳಗೆ ಬಂತು. ಅಂದಾಜು ನಾಲ್ಕು ಅಡಿ ಉದ್ದ ಬೆಳೆದಿದೆ. ಇನ್ನೂ ಬೆಳೆಯಲು ಬಿಟ್ಟಿದ್ದರೆ ಏಳು ಅಡಿ ಬೆಳೆದು ಗಿನ್ನೆಸ್ ದಾಖಲೆಗೆ ಸೇರಿಸಬಹುದಾಗಿತ್ತು. ಹರಿವೆ ಗಿಡ ಎಳೆಯದಿರುವಾಗಲೇ, ದಂಟು ಕೂಡಾ ತಿನ್ನುವಂತಿರುವಾಗಲೇ ಕತ್ತರಿಸಿ ಅಡುಗೆಗೆ ಉಪಯೋಗಿಸುವುದು ಉತ್ತಮ. ಈಗ ಸೊಪ್ಪು ಕೂಡಾ ಚೆನ್ನಾಗಿದೆ. ಸೊಪ್ಪಿನ ಪಲ್ಯ ಹಾಗೂ ದಂಟಿನ ಸಾಂಬಾರು ಮಾಡೋಣ.

ಪಲ್ಯ ಮಾಡಿದ ವಿಧಾನದಲ್ಲಿ ಹೊಸತೇನೂ ಇಲ್ಲ, ಬಸಳೆಯ ಪಲ್ಯ ಮಾಡಿದ ಹಾಗೇನೇ ಇದನ್ನು ಪಲ್ಯ ಮಾಡಿದ್ದಾಯ್ತು, ಊಟದ ವೇಳೆಗೆ ನಾವಿಬ್ಬರೇ ಇದ್ದುದರಿಂದ ಸೊಪ್ಪಿನ ಪಲ್ಯ ಮುಗಿಯಲಿಲ್ಲ, ರಾತ್ರಿಯೂಟಕ್ಕೂ ಮುಗಿಯದೇ ಹೋದರೆ… ಚಿಂತೆ ಕಾಡಿತು.

ಒಳ್ಳೆಯ ಹರಿವೆ ಸೊಪ್ಪು, ಅದೂ ಅಲ್ಲದೆ ನಮ್ಮ ಹಿತ್ತಲ ತಾಜಾ ಬೆಳೆ, ತಿನ್ನದೆ ಬಿಡುವಂತಿಲ್ಲ.
ಸಂಜೆ ಪುನಃ ಚಪಾತಿ ಲಟ್ಟಿಸುವುದಿದೆ. ಅಂದಾಜು ಮೂರು ಚಪಾತಿಗಳಾದೀತು, ಐಡಿಯಾ ಹೊಳೆಯಿತು, ಸೊಪ್ಪಿನ ರೋಟಿ ಯಾ ಪರಾಠಾ!

 ಉಂಡೆ ಮಾಡಿ,
ವರ್ತುಲಾಕಾರಕ್ಕೆ ಲಟ್ಟಿಸಿ,
ಒಳಗೆ ಪಲ್ಯ ಇಟ್ಟು,
ಸುತ್ತಲೂ ಮಡಚಿಟ್ಟು,
ಇನ್ನೊಂದಾವರ್ತಿ ಗೋಧಿ ಹುಡಿ ಸವರಿ,
ಲಟ್ಟಿಸಿ ಇಟ್ಟಾಯ್ತು.

ತವಾ ಬಿಸಿಯೇರಿತು,
ದೊಡ್ಡ ನೆಲ್ಲಿ ಗಾತ್ರದ ಬೆಣ್ಣೆ ತವಾ ಮೇಲೆ ಬಿತ್ತು,
ಬೆಣ್ಣೆಯ ಕರಗುವಿಕೆಯೊಂದಿಗೆ,
ಪಲ್ಯ ತುಂಬಿದ ರೋಟಿ ಹಿಟ್ಟು ಬಿತ್ತು.

ರೋಟಿಯ ಒಂದು ಬದಿ ಬೆಂದಿದೆ,
 ಒಂದು ಚಮಚಾ ತುಪ್ಪ ಸವರಿ,
ಕವುಚಿ ಹಾಕುವುದು
ಇದೀಗ ಎರಡೂ ಬದಿ ಬೇಯಿಸಿದ್ದಾಯ್ತು,
ಸೊಪ್ಪಿನ ಪರಾಠಾ ಸಿದ್ಧಗೊಂಡಿದೆ.

ಸಂಜೆಯ ಚಹಾ ಸೇವನೆಯೊಂದಿಗೆ, “ ತಿಂಡಿ ಹೇಗಿದೆ? “ ಎಂದು ನಾನು ಕೇಳಲೇ ಇಲ್ಲ, ತಟ್ಟೆ ಖಾಲಿಯಾಗಿತ್ತು!

ನಮ್ಮ ಊರ ಪರಿಸರದಲ್ಲಿ ಬೆಳೆಯುವಂತಹ ತಾಜಾ ಸೊಪ್ಪುಗಳು ಆರೋಗ್ಯಕ್ಕೂ ಹಿತ ಹಾಗೂ ಮಿತವ್ಯಯವೂ ಹೌದು.
ವಿಟಮಿನ್ ಎ ಅನ್ನಾಂಗದಿಂದ ಕೂಡಿರುವ ಹರಿವೆಯ ಸೊಪ್ಪು ಕಣ್ಣುಗಳ ಆರೋಗ್ಯ ರಕ್ಷಕ, ಸೊಪ್ಪುಗಳು ನಾರುಯುಕ್ತವಾಗಿರುವುದರಿಂದ ಜೀರ್ಣಾಂಗಗಳ ಕಾರ್ಯಕ್ಷಮತೆ ವೃದ್ಧಿಸುವುದಲ್ಲದೆ ಮಲಬದ್ಧತೆಯನ್ನೂ ದೂರ ತಳ್ಳುವ ಸಾಮರ್ಥ್ಯ ಇದರದ್ದು. ಖನಿಜಾಂಶ ಸಮೃದ್ಧಿಯಿಂದ ರಕ್ತಹೀನತೆಯ ಬಳಲಿಕೆ ಬಾರದು.

            


Saturday 10 November 2018

ಡಿಂಗ್ ಡಾಂಗ್ ಪುಡ್ಡಿಂಗ್







             


ಸಂಜೆಗೊಂದು ತಿನಿಸು ತಯಾರಾಯ್ತು. ಟೇಬಲ್ ಮೇಲೆ ಇರಿಸುತ್ತಿದ್ದಂತೆ ಸಿನೆಮಾ ನೋಡಲು ಮಂಗಳೂರಿಗೆ ಹೋಗಿದ್ದ ಮಗಳ ಆಗಮನವಾಯ್ತು.
 “ ಹೇಗಿತ್ತು ಸಿನೆಮಾ? “
“ ಬರೇ ಡಬ್ಬಾ ಸಿನೆಮಾ ಅದು.. “
“ ಅಷ್ಟೇನಾ, ಕೈಕಾಲು ತೊಳ್ಕೊಂಡು ಬಾ, ತಿಂಡಿ ತಿನ್ನುವಿಯಂತೆ.. “
“ ಏನಿದೂ, ಹೊಸರುಚಿಯ ಹಾಗಿದೇ.. “
“ ತಿಂದ್ಬಿಟ್ಟು ಹೇಳು.. “
ಚಹಾ, ಬಟ್ಟಲು, ಚಮಚಾಗಳ ಜೊತೆ ಆಟವಾಡುತ್ತ ಮಗಳು ತಿಂಡಿಯನ್ನೇನೋ ಸವಿದಳು. “ ಚೆನ್ನಾಗಿದೆ, ಈ ಕಲರ್ ಹೇಗೆ ಬಂತೂ? “ ಅನಾನಸ್ ಈಗ ಇಲ್ವಲ್ಲ? “
“ ಅದೂ ಬಪ್ಪಂಗಾಯೀದು ಬಣ್ಣ.. “
“ ಓ, ಹಾಗೇ... ಬಪ್ಪಂಗಾಯಿ ಅಂತ ತಿಳಿಯೂದೇ ಇಲ್ಲ. “
“ ಏಲಕ್ಕಿ, ತುಪ್ಪ ದ್ರಾಕ್ಷಿ ಗೇರುಬೀಜ ಹಾಕಿದ್ದೀನಲ್ಲ.. “
ಇನ್ನೊಂದು ಸೌಟು ಹಾಕಿಸ್ಕೊಂಡ ಮಗಳು ಶಿಫಾರಸ್ ಕೊಟ್ಟಾಯ್ತು.  

ಈಗ ಕೇಳಿರಲ್ಲ,
ತಿಂಡಿ ಮಾಡಿದ್ದು ಹೇಗೆ?  
ಅಷ್ಟಕ್ಕೂ ಬಪ್ಪಂಗಾಯಿ ಅಂದ್ರೇನು?

ಪಲ್ಯಕ್ಕೆಂದು ಪಪ್ಪಾಯಿಯನ್ನು ಹೋಳು ಮಾಡಿದಾಗ ಅರೆ ಹಣ್ಣು! ಪಲ್ಯ ಮಾಡುವಂತಿಲ್ಲ, ಸಂಜೆಯ ತಿಂಡಿಗಾಗಿ ಸಿಪ್ಪೆ ತೆಗೆದು, ತುರಿದು ಇಟ್ಟಾಯಿತು.
ಎರಡು ಲೋಟ ತುಂಬ ಪಪ್ಪಾಯಿ ತುರಿಯನ್ನು ಕುಕ್ಕರಿನಲ್ಲಿ ತುಂಬಿ, ದೊಡ್ಡದೊಂದು ಚಮಚದಲ್ಲಿ ತುಪ್ಪ ಎರೆದು, ಒಂದು ಸೀಟಿ ಕೂಗಿಸಿ,
ಕೂಡಲೇ ಸ್ಟವ್ ಆರಿಸಿ,
ಕುಕ್ಕರಿನ ಒತ್ತಡವನ್ನು ನಿಧಾನವಾಗಿ ತೆಗೆಯಿರಿ, ಬೆಂದಿರುತ್ತದೆ. ಬೇಯಿಸಲು ಹಾಲೂ ಹಾಕಿಲ್ಲ, ನೀರೂ ಎರೆದಿಲ್ಲ.

ನಾನ್ ಸ್ಟಿಕ್ ಬಾಣಲೆಯಲ್ಲಿ ಅಂದಾಜು ಮುಕ್ಕಾಲು ಲೋಟ ಚಿರೋಟಿ ರವೆ ಹುರಿಯಿರಿ. ಒಂದು ದೊಡ್ಡ ಚಮಚ ತುಪ್ಪ ಹಾಕುವುದು.

ಕುಕ್ಕರಿನ ಮುಚ್ಚಳ ತೆರೆದ ಕೂಡಲೇ ಹುರಿದ ರವೆ ಸುರಿದು, ಸೌಟಾಡಿಸಿ, ಪುನಃ ಒಲೆಯ ಮೇಲಿಟ್ಟು ಇನ್ನೊಂದು ಸೀಟಿ ಕೂಗಿಸಿ, ಸ್ಟವ್ ಆರಿಸಿ, ಒತ್ತಡ ಇಳಿದ ನಂತರವೇ ಕುಕ್ಕರ್ ತೆರೆಯಿರಿ.

ಒಂದು ಲೋಟ ಸಕ್ಕರೆ ಸುರುವಿ, ಇನ್ನೂ ಒಂದು ಚಮಚ ತುಪ್ಪ ಎರೆದು ಕಾಯಿಸಿ.
ಸಕ್ಕರೆ ಕರಗಿ, ತುಪ್ಪ ತಳ ಬಿಟ್ಟು ಬರುವ ಹೊತ್ತು, ದ್ರಾಕ್ಷಿ, ಗೋಡಂಬಿ ತುಪ್ಪದಲ್ಲಿ ಹುರಿದು, ಏಲಕ್ಕಿ ಪುಡಿ ಹಾಕುವುದು.

ಇನ್ನೊಂದು ತಟ್ಟೆಗೆ ವರ್ಗಾಯಿಸಿ ಇಡುವುದು, ಏನೂ ಶ್ರಮವಿಲ್ಲದೆ, ಅಲ್ಪಸಮಯದಲ್ಲಿ ಮಾಡಿದಂತಹ ಈ ತಿಂಡಿಗೊಂದು ಹೆಸರು ಇಡದಿದ್ದರೆ ಹೇಗೆ,
 ಡಿಂಗ್ ಡಾಂಗ್ ಪಪ್ಪಾಯ ಪುಡ್ಡಿಂಗ್,
ಅನ್ನೋಣ ಹೀಗೆ.



Friday 26 October 2018

ಮಾದಲ ಹಣ್ಣು

             


                

ಲಿಂಬೆ ಜಾತಿಗೆ ಸೇರಿದ ಹಣ್ಣುಗಳಲ್ಲಿ ಬೃಹತ್ ಗಾತ್ರದ ಮಾದಲ ಹುಳಿ, ಸಂಸ್ಕೃತದಲ್ಲಿ ಮಹಾಫಲವೆನಿಸಿದೆ, ನಮ್ಮ ಆಡುನುಡಿಯಲ್ಲಿ ಮಾಪಲ, ಮಾಬಲ, ಮಾದಲ ಹಣ್ಣು. ಆಯುರ್ವೇದವು ಔಷಧೀಯ ಸಸ್ಯವೆಂದಿದೆ, ಹಾಗಾಗಿ ಇದು ವೈಜ್ಞಾನಿಕ ಪರಿಭಾಷೆಯಲ್ಲಿ citrus medica ಎಂದೆನಿಸಿದೆ. ಆಂಗ್ಲ ಭಾಷೆಯಲ್ಲಿ citron ಎನ್ನಲಾಗುವ ಈ ಹಣ್ಣಿನ ಮೂಲ ನಮ್ಮ ಭರತ ಖಂಡ. ಲಿಂಬೆ ಪ್ರಬೇಧಕ್ಕೆ ಸೇರಿದ ಬಹುತೇಕ ಎಲ್ಲ ಸಸ್ಯಗಳ ತವರು ಭಾರತವೇ ಆಗಿದೆ.

ಮುಸುಂಬಿ ಕಿತ್ತಳೆಗಳ ಸಿಪ್ಪೆ ಸುಲಿದು ರಸಭರಿತ ಹಣ್ಣನ್ನು ತಿನ್ನಲಾಗುವಂತೆ ಇದನ್ನು ತಿನ್ನಲಾಗದು. ಅಂತಹ ರಸಸಾರವು ಇದರಲ್ಲಿ ಇಲ್ಲ. ಸಿಪ್ಪೆಗೆ ಅಂಟಿಕೊಂಡಂತಿರುವ ಬಿಳಿ ಬಣ್ಣದ ತಿರುಳು ಮಾತ್ರ ತಿನ್ನಲು ಯೋಗ್ಯ. ಅದೂ ಸೌತೆಕಾಯಿಯ ಹೋಳು ಮಾಡುವಂತೆ, ಸಿಪ್ಪೆಯನ್ನು ತೆಳ್ಳಗೆ ಹೆರೆದು ತೆಗೆದು, ಒಂದೇ ಗಾತ್ರದ ತುಂಡು ಮಾಡಿಟ್ಟು ತಿನ್ನಬಹುದು, ಸಕ್ಕರೆ ಬೆರೆಸಿ ತಿನ್ನಲು ಇನ್ನೂ ರುಚಿಕರ.

ಸತ್ಯನಾರಾಯಣ ಪೂಜಾ ವಿಧಿಯಲ್ಲಿ ಈ ಹಣ್ಣಿಗೆ ಬಲು ಬೇಡಿಕೆ. ಬೃಹತ್ ಗಾತ್ರದ ಒಂದು ಹಣ್ಣು ಇದ್ದರೆ ಸಾಕು, ಪ್ರಸಾದ ರೂಪದಲ್ಲಿ ವಿನಿಯೋಗಿಸಲು ಅನುಕೂಲ. ಪ್ರಕೃತಿಯ ಶುದ್ಧ ವಾತಾವರಣದಲ್ಲಿ ಸಿಗುವ ಏಕೈಕ ಫಲ ಇದೊಂದೇ ಆಗಿದೆ.

ಮಾದಲ ಹಣ್ಣಿನಲ್ಲಿ ಬೀಜಗಳು ಇರುವುದಾದರೂ ಪುನರುತ್ಪಾದನೆ ಬೇರಿನಿಂದಲೇ ಆಗುವಂತಹುದು, ಸಸ್ಯ ಬೆಳೆದಂತೆ ಬೇರು ನೆಲದಾಳದಿಂದಲೇ ಹೊಸ ಸಸ್ಯವನ್ನು ಧರೆಗೆ ತರುತ್ತದೆ. ತಂಪು ವಾತಾವರಣ, ನೀರಿನ ಆಸರೆ, ವಿಶಾಲವಾಗಿ ಹಬ್ಬಿ ಹರಡಲು ಸಾಕಷ್ಟು ಜಾಗವೂ ಈ ಸಸ್ಯಕ್ಕೆ ಅತೀ ಅಗತ್ಯ. ಮಾದಲ ಗಿಡದ ಸುತ್ತಮುತ್ತ ತಿರುಗಾಡಲೂ ಖುಷಿ, ಎಲೆಗಳ ಕಂಪಿನ ಪರಿಮಳವೂ ಉಲ್ಲಾಸದಾಯಕ. ಸದಾಕಾಲವೂ ಹಚ್ಚಹಸಿರಾದ ಎಲೆಗಳಿಂದ ತುಂಬಿರುವ ಮಾದಲದ ಪೊದರುಗಳೆಂಡೆಯಿಂದ ತೂರಿ ಬರುವ ಗಾಳಿಯೂ ಆರೋಗ್ಯವರ್ಧಕ.

ಸುವಾಸನೆಯ ಎಲೆಗಳನ್ನು ಕುದಿಸಿ ಹರ್ಬಲ್ ಟೀ ಕುಡಿಯಿರಿ, ಗಂಟಲ ಕಿರಿಕಿರಿ ಹಾಗೂ ಚಳಿಗಾಲದ ಶೀತಹವೆಯನ್ನು ಎದುರಿಸಲು ಸಜ್ಜಾಗಿರಿ.
ವಿಟಮಿನ್ ಸಿ ಹೊಂದಿರುವ ಹಣ್ಣು ಮಾದಲ, ಪಿತ್ತಶಾಮಕ, ಬಾಯಿರುಚಿ ಹೆಚ್ಚಿಸುವಂತಾದ್ದೂ ಆಗಿರುತ್ತದೆ.

ಊಟವಾದ ನಂತರ ಮಜ್ಜಿಗೆ ನೀರು ಕುಡಿಯುತ್ತೀರಾ, ಮಾದಲದ ಎಲೆಯೊಂದನ್ನು ಗಿವುಚಿ ಹಾಕಿಕೊಳ್ಳಿ, ಮಜ್ಜಿಗೆ ಕುಡಿಯುವ ಸುಖ ತಿಳಿಯಿರಿ, ಭೂರಿಭೋಜನ ಉಂಡ ನಂತರ ಜೀರ್ಣಕ್ಕೂ ಈ ಮಜ್ಜಿಗೆ ಉತ್ತಮ.
ಕೆಮ್ಮು, ಸಂಧಿವಾತ, ಮೂಲವ್ಯಾಧಿ, ಚರ್ಮರೋಗಗಳು ಹಾಗೂ ದೃಷ್ಟಿಮಾಂದ್ಯತೆಯಂತಹ ಶರೀರವ್ಯಾಧಿಗಳಿಗೆ ಆಯುರ್ವೇದವು ಮಾದಲವನ್ನು ಔಷಧಿಯಾಗಿಸಿದೆ.


               




Friday 19 October 2018

ಹುರಿಗಡಲೆ ಲಡ್ಡು




2 ಲೋಟ ನುಣ್ಣಗೆ ಪುಡಿ ಮಾಡಿದ ಹುರಿಗಡಲೆ.
ಒಂದು ಲೋಟ ಪುಡಿ ಮಾಡಿದ ಸಕ್ಕರೆ.
ಒಂದು ಲೋಟ ಹುರಿದು ಹುಡಿ ಮಾಡಿದಂತಹ ತೆಂಗಿನಕಾಯಿ ತುರಿ.
ಈ ಮೂರು ಪ್ರತಿಗಳನ್ನು ಬೆರೆಸಿಕೊಳ್ಳಿ.
ಮುಕ್ಕಾಲು ಲೋಟ ಸುವಾಸನೆಯ ತುಪ್ಪ.
ಏಲಕ್ಕಿ, ದ್ರಾಕ್ಷಿ, ಗೇರುಬೀಜ, ಅವಶ್ಯಕತೆಗೆ ತಕ್ಕಷ್ಟು.
ಏಲಕ್ಕಿ ಗುದ್ದಿ ಇಟ್ಟಿರಿ.
ದ್ರಾಕ್ಷಿ ಗೇರುಬೀಜಗಳನ್ನು ತುಪ್ಪದಲ್ಲಿ ಹುರಿದು ತೆಗೆದಿರಿಸಿ, ಗೇರುಬೀಜಗಳನ್ನು ಮುರಿದು ಇಟ್ಟರೆ ಉತ್ತಮ.

ಇಲ್ಲಿ ನಾನ್ ಸ್ಟಿಕ್ ತಪಲೆಯ ಬಳಕೆ ಉತ್ತಮ, ತಳ ಹಿಡಿಯುವುದಿಲ್ಲ ಹಾಗೂ ತೊಳೆದಿರಿಸಲೂ ಚೆನ್ನಾಗಿರುತ್ತದೆ.

ತುಪ್ಪ ಬಿಸಿಯಾಗಲಿ,
ಬೆರೆಸಿಟ್ಟ ಹುಡಿಗಳನ್ನು ಹಾಕಿ ಕಲಸಿ,
ಏಲಕ್ಕಿಹುಡಿ ಇತ್ಯಾದಿಗಳನ್ನು ಸೇರಿಸಿ,
ತುಸು ಬಿಸಿ ಆರಿದ ನಂತರ ಉಂಡೆ ಕಟ್ಟಿ ಇಡಬೇಕು.
ಆರಿದ ನಂತರವೇ ತಿನ್ನಲು ರುಚಿ.

ಉಂಡೆ ಕಟ್ಟಲು ಕಷ್ಟ ಅನ್ನಿಸುವುದಾದರೆ ಇನ್ನೂ ಅರ್ಧ ಲೋಟ ಹುರಿಗಡಲೆ ಪುಡಿ ತಟ್ಟೆಯಲ್ಲಿ ಇರಿಸಿಕೊಳ್ಳಿ. ಚಪಾತಿ ಉಂಡೆಯನ್ನು ಗೋಧಿ ಹುಡಿಯಲ್ಲಿ ಹೊರಳಾಡಿಸುವ ಹಾಗೆ ಹುರಿಗಡಲೆ ಉಂಡೆಯನ್ನು ಹುರಿಗಡಲೆ ಹಿಟ್ಟಿನಲ್ಲಿ ಹೊರಳಾಡಿಸಿ ಉಂಡೆ ಕಟ್ಟಿ, ರಗಳೆಯಿಲ್ಲದೆ ಲಡ್ಡು ಆಗಿ ಬಿಡುತ್ತದೆ, ಅಲಂಕರಣಕ್ಕಾಗಿ ದ್ರಾಕ್ಷಿ ಯಾ ಗೋಢಂಬಿಯನ್ನು ಅಂಟಿಸಲೂ ಬರುತ್ತದೆ, ಇದೆಲ್ಲವೂ ಬಿಸಿ ಇರುವಾಗಲೇ ಆಗಬೇಕು.

ಮೊದಲ ಬಾರಿ ಲಡ್ಡು ಮಾಡಲು ಪ್ರಯತ್ನಿಸುವವರಿಗೆ ಇದು ಉತ್ತಮ ಮಾರ್ಗದರ್ಶಿ, ತುಸು ಹೆಚ್ಚು ಕಮ್ಮಿಯಾದರೂ ಹಾಳಾಯ್ತು ಎಂಬ ಗೋಳು ಇಲ್ಲಿ ಬಾರದು.

               



Saturday 6 October 2018

ಅನಾನಸ್ ಹಣ್ಣುತುಪ್ಪ




ಹಣ್ಣುತುಪ್ಪ ಅಂದ್ರೇನಪಾ ಅಂತ ತಲೆ ಕೆಡಿಸ್ಕೋಬೇಡಿ, ನಾನು ಮಾಡಿದಂತಹ ಪೈನಾಪಲ್ ಸ್ಕ್ವಾಶ್ ಗೆ ಸೂಕ್ತ ಕನ್ನಡ ಪದಕ್ಕಾಗಿ ನಿಘಂಟುಗಳನ್ನು ಜಾಲಾಡಿದಾಗ ಒಂದು ಆನ್ ಲೈನ್ ಡಿಕ್ಷನರಿ ಹಣ್ಣುತುಪ್ಪವನ್ನು ಕೊಟ್ಟಿತು.

ಸಾಮಾನ್ಯವಾಗಿ ಹಲಸಿನ ಹಣ್ಣಿನಿಂದ ತಯಾರಿಸುವ ಜೇನಿನಂತಹ ರಸವನ್ನು ಹಣ್ಣುತುಪ್ಪ ಎಂದೆನ್ನುವ ವಾಡಿಕೆ ನಮ್ಮದು. ಹಲಸಿನಹಣ್ಣು ಸ್ವಾಭಾವಿಕವಾಗಿ ಸಿಹಿ ರುಚಿಯನ್ನೇ ಹೊಂದಿರುವುದರಿಂದ ಅದಕ್ಕೆ ಸಕ್ಕರೆ ಯಾ ಬೆಲ್ಲ ಹಾಕಬೇಕಾಗಿಯೇ ಇಲ್ಲ.

ಅನಾನಸ್ ಸಿಹಿ ಇರುವುದಾದರೂ ಕುದಿಸಿ ಯಾ ಬೇಯಿಸಿದಾಗ ಹುಳಿ ಹುಳಿ, ಸಕ್ಕರೆ ಅನಿವಾರ್ಯ.
ನಮ್ಮ ಹಿತ್ತಲ ಬೆಳೆಯಾದ ಅನಾನಸ್ ಹಣ್ಣು ಬೇಸಿಗೆಯಲ್ಲಿ ಹಾಗೇನೇ ತಿನ್ನಲು ರುಚಿಕರ, ಎರಡು ಹೋಳು ತಿಂದರೂ ಸಾಕು, ಶರೀರವೇ ಉಲ್ಲಸಿತವಾದಂತೆ ಹಿತಾನುಭವ.

ಇದೀಗ ಮಳೆಗಾಲ ಬಂದಿದೆ, ಮಳೆ ಏಆರಂಭವಾದ ನಂತರ ಅಂಗಳಕ್ಕೆ ಇಳಿಯುವಂತಿಲ್ಲ. ಬೆಳೆದ ಹಣ್ಣುಗಳನ್ನು ಮಕ್ಕಳು ಬೆಂಗಳೂರಿನಿಂದ ಬಂದಾಗ ತಿನ್ನುವುದಕ್ಕಿರಲಿ ಎಂದು ಕೊಯ್ದು ಇಟ್ಟಿದ್ದೆ. ಮಕ್ಕಳು ಬಂದಾಗ ಕತ್ತರಿಸಿ ಕೊಟ್ಟಿದ್ದನ್ನು ತಿಂದು ಹೋದರಲ್ಲದೆ ಕೊಂಡು ಹೋಗಲಿಲ್ಲ, “ ಇದನ್ನು ಒಯ್ಯುವುದು ಹೇಗೆ? ಚೀಲ ಭಾರ... “

ಅಂತೂ ಅನಾನಸ್ ಮಳೆಗಾಲದಲ್ಲೂ ಉಳಿಯಿತು, ಅನಾನಸ್ ಸಾಮ್ರಾಜ್ಯವನ್ನು ಒಂದು ದಿನ ತಪಾಸಣೆ ಮಾಡಿದಾಗ, ಒಂದು ಹಣ್ಣು ಅತಿಯಾಗಿ ಹಣ್ಣಾಗ್ಬಿಟ್ಟಿದೆ! ನಿನ್ನೆ ಚೆನ್ನಾಗಿತ್ತು, ಈ ಥರ ಹಣ್ಣಾದ್ರೆ ಕತ್ತರಿಸಲಿಕ್ಕೂ ಕಷ್ಟವೇ, ಆಕರ್ಷಕವಾಗಿ ಕತ್ತರಿಸಿಟ್ಟರೆ, ಟೇಬಲ್ ಮೇಲೆ ಇಟ್ಟಿದ್ದರೆ ಮಾತ್ರ ತಿನ್ನುವ ಜನ ನಾವಲ್ಲವೇ…

ಅತೀ ಹಣ್ಣಾದ ಅನಾನಸ್ ಅಡುಗೆಮನೆಗೆ ಬಂದಿತು. ಕೊಳೆತಿಲ್ಲ, ಕೆಟ್ಟವಾಸನೆ ಬರುತ್ತಿಲ್ಲ ಎಂದು ದೃಢ ಪಡಿಸಿತೊಂಡು ಒಂದು ತಪಲೆಯ ಒಳಗಿಟ್ಟು ಚೂರಿಯಿಂದ ಗೀರಿದಾಗ, ಝಲ್ ಝಲ್ ಎಂದು ರಸ ಒಸರಿತು. ಹಣ್ಣನ್ನು ಇದ್ದ ಹಾಗೇನೇ ಒದ್ದೆ ಬಟ್ಟೆ ಹಿಂಡಿದಂತೆ, ಹಿಂಡಿದಾಗ ತಪಲೆಯಲ್ಲಿ ರಸ ಶೇಖರವಾಯಿತು.

ನನ್ನ ಪರಾಕ್ರಮವನ್ನು ಗಮನಿಸುತ್ತ ಇದ್ದ ಗೌರತ್ತೆ, “ ಬೇಸಿಗೆ ಆಗಿದ್ದರೆ ಅನಾನಸು ಶರಬತ್ತು ಅಂತ ಕುಡಿಯಬಹುದಾಗಿತ್ತು, ಈಗ ಕೆಮ್ಮು ದಮ್ಮು ಶುರುವಾದೀತು… ನಂಗೆ ಬೇಡ. “
“ ಸಕ್ಕರೆ ಹಾಕಿ ಕುದಿಸಿ.. “
“ ಬೆಲ್ಲವೂ ಆದೀತು ನೋಡು, ಸಕ್ರೆ ಒಳ್ಳೇದಲ್ಲ ಅಂತಾರಲ್ಲ... “

ಅಂದಾಜು ಎರಡು ಲೋಟ ಅನಾನಸ್ ರಸ ಇದ್ದಿತು, ಮೊದಲು ಜಾಲರಿ ತಟ್ಟೆಯಲ್ಲಿ ಶೋಧಿಸಿ, ಒಂದು ಲೋಟ ಸಕ್ಕರೆಯೊಂದಿಗೆ ಕುದಿಸಲು ಇಟ್ಟಾಯಿತು. ನಾನ್ ಸ್ಟಿಕ್ ತಪಲೆ ಉತ್ತಮ, ಇಂಡಕ್ಷನ್ ಒಲೆಯಾದರೆ ಇನ್ನೂ ಚೆನ್ನ, ಬೇಗನೆ ಗಳಗಳ ಕುದಿದು ನಮ್ಮ ಕೆಲಸ ಹಗೂರ ಮಾಡಿ ಕೊಡುತ್ತೆ, ಅತ್ತ ಇತ್ತ ಹೋಗುವಂತಿಲ್ಲ. ಸೌಟಾಡಿಸುತ್ತ ನೂಲಿನಂತ ಪಾಕ ಬಂದಾಗ ಕೆಳಗಿಳಿಸುವುದು, ಆರಿದಾಗ ಜೇನಿನ ಪಾಕ ಬರುತ್ತೆ.

  “ ಅನಾನಸ್ ಜೇನು ಅನ್ನಬಹುದು, ಜ್ಯೂಸ್ ಮಾಡಿ ಕೊಡು “ ನಮ್ಮವರ ಹೊಗಳಿಕೆಯೂ ಸಿಕ್ಕಿತು.

ದೋಸೆ, ಚಪಾತಿ, ಸಾದಾ ಬ್ರೆಡ್ಡು ಇತ್ಯಾದಿಗಳೊಂದಿಗೆ ತಿನ್ನಲು ಚೆನ್ನಾಗಿರುತ್ತದೆ ಅಂದ್ಬಿಟ್ಟು ಜಾಡಿಯಲ್ಲಿ ತುಂಬಿಸಿ ಒಂದು ಫೋಟೋ ಹೊಡೆದೂ ಆಯ್ತು, ಬಿಡುವಾದಾಗ ಬರೆದು ಬ್ಲಾಗ್ ಗೆ ಏರಿಸಬಹುದಲ್ಲ ಎಂಬ ದೂರಾಲೋಚನೆಯೂ ಕೂಡಿ, ಇದೀಗ ವರ್ಷವೆರಡು ಕಳೆದಾಗ ಹಣ್ಣುತುಪ್ಪ ಬಂತಪ್ಪ.

          



Friday 28 September 2018

ನೆಲ್ಲಿಕಾಯಿ ತಂಬುಳಿ





“ ನೆಲ್ಲಿಕಾಯಿ ಈಗಲೇ ಸಿಗಲಿಕ್ಕೆ ಶುರುವಾಯ್ತು… “ ನೆಲ್ಲಿಕಾಯಿಗಳು ಟೇಬಲ್ ಮೇಲೆ ಬಂದಿಳಿದುವು.
“ ಇದನ್ನು ಏನು ಮಾಡೂದು ಅಂತೀರಾ… “
“ ನೀನು ಏನೂ ಮಾಡುವುದು ಬ್ಯಾಡ, ಹಾಗೇ ತಿನ್ನುವುದು… “
“ ಅಷ್ಟೇನಾ, ಸರಿ… “

“ ನನಗೊಂದು ನಾಲಕ್ಕು ನೆಲ್ಲಿಕಾಯಿ ಬೇಯಿಸಿ ಕೊಡು. “ ಎಂದರು ಗೌರತ್ತೆ, ಅವರಿಗೂ ಹಲ್ಲು ಹೇಳಿದಂತೆ ಕೇಳುವದಿಲ್ಲ. “ ದಿನಕ್ಕೊಂದು ನೆಲ್ಲಿಕಾಯಿ ತಿನ್ನುತ್ತ ಇದ್ದರೆ ಆಯುಸ್ಸುವೃದ್ಧಿ ಆಗುತ್ತಂತೆ, ವಾತ ಕಫ ಪಿತ್ತ ಎಲ್ಲವೂ ಬ್ಯಾಲೆನ್್ಸ ಆಗಿ… “ ಗೌರತ್ತೆ ಹೇಳುತ್ತ ಹೋದಂತೆ ನೆಲ್ಲಿಕಾಯಿ ಬೆಂದಿತು.

“ ನೆಲ್ಲಿಕಾಯಿ ಬೇಯಿಸಿದ ನೀರು ಚೆಲ್ಲಬೇಡ, ಚಿಟಿಕೆ ಉಪ್ಪು ಹಾಕಿ ನೀನೇ ಕುಡಿ… “ ನನಗೂ ನೆಲ್ಲಿಕಾಯಿ ಶರಬತ್ತು ಕುಡಿಯುವ ಯೋಗ.

ನೆಲ್ಲಿಕಾಯಿ, ಟೊಮ್ಯಾಟೋ ಥರ ನಾಲ್ಕು ದಿನದಲ್ಲಿ ಕೊಳೆತು ಹೋಗುವ ಮಾಲಲ್ಲ. ದಿನ ಹದಿನೈದು ಕಳೆದರೂ ತಾಜಾ ಆಗಿ ಇರುತ್ತವೆ. ಅಂತಾದ್ರಲ್ಲಿ ನಮ್ಮ ನೆಲ್ಲಿಕಾಯಿಗಳೂ...

ಯಾಕೋ ಒಮ್ಮೆ ನಮ್ಮವರು ಮುಚ್ಚಿಟ್ಟಿದ್ದ ನೆಲ್ಲಿಕಾಯಿ ಜಾಡಿಯನ್ನು ತೆರೆದು ನೋಡಿದಾಗ, ಅರೆ! ನೆಲ್ಲಿಕಾಯಿಗಳು ತಣ್ಣಗೆ ಕುಳಿತಿವೆ. “ ಏನೂ ನಿಮ್ಮ ನೆಲ್ಲಿಕಾಯಿ ಮುಗಿದಿಲ್ಲ? “
“ನಂಗೆ ತಿನ್ನಲಿಕ್ಕೆ ನೆನಪೇ ಆಗೂದಿಲ್ಲ, ಏನಾದರೂ ಒಂದು ಅಡುಗೆ ಮಾಡಿ ಮುಗಿಸು… “
“ ಸರಿ ಹೋಯ್ತು, ಎಂತದ್ದು ಮಾಡುವುದು? “
ನನ್ನ ಚಿಂತೆಗೆ ಗೌರತ್ತೆ ತಂಬುಳಿ ಮಾಡುವ ಸುಲಭೋಪಾಯ ಸೂಚಿಸಿದರು.

ನೆಲ್ಲಿಕಾಯಿಗಳನ್ನು ಪುನಃ ಚೆನ್ನಾಗಿ ತೊಳೆದು, ಕುದಿಸಿ, ಬೇಯಿಸಿ, ರುಚಿಗೆ ಉಪ್ಪೂ…
ಮೂರು ಬೇಯಿಸಿದ ನೆಲ್ಲಿಕಾಯಿಗಳು, ಬೀಜ ತೆಗೆಯಿರಿ.
ಒಂದು ಹಿಡಿ ತೆಂಗಿನ ತುರಿ.
ನಾಲ್ಕಾರು ಕಾಳುಮೆಣಸು, ಹುರಿಯಿರಿ.
ಒಂದು ಹಸಿಮೆಣಸು.
ಒಂದು ಲೋಟ ಸಿಹಿ ಮಜ್ಜಿಗೆ.
ಎಲ್ಲವನ್ನೂ ಸಿಹಿ ಮಜ್ಜಿಗೆ ಎರೆದು ಅರೆಯಿರಿ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ತುಪ್ಪ ಸಹಿತ ಒಗ್ಗರಣೆ ಕೊಡುವಲ್ಲಿಗೆ ನೆಲ್ಲಿಕಾಯಿಯ ತಂಬುಳಿ ಆಯಿತು. ದಪ್ಪ ಚಟ್ಣಿಯಂತಾಗಬಾರದು, ಸಾರಿನಂತೆ ತೆಳ್ಳಗೆ ಇರಬೇಕು.

ಜ್ವರ ಬಂದು ಬಾಯಿರುಚಿ ಕೆಟ್ಟಿರುವಾಗ, ಜೀರ್ಣಕ್ರಿಯೆ ಸರಿಯಿಲ್ಲದಿರುವಾಗ ಈ ತಂಬುಳಿ ಸೂಕ್ತ ಮನೆಮದ್ದು.

ಆಯುರ್ವೇದ ಗ್ರಂಥಗಳಲ್ಲಿ ದಿವ್ಯ ಔಷಧಿಯೆಂದು ಉಲ್ಲೇಖಿತವಾಗಿರುವ ನೆಲ್ಲಿಕಾಯಿ, ಮರದ ಎಲೆ, ಹೂ, ತೊಗಟೆ, ಬೇರು ಎಂಬಿತ್ಯಾದಿ ಸರ್ವಾಂಗಗಳೂ ಒಂದಲ್ಲ ಒಂದು ವಿಧವಾಗಿ ರೋಗ ಪರಿಹಾರಕ. ಕ್ಷೀರಸಾಗರ ಮಥನದ ಸಮಯದಲ್ಲಿ ಭೂಮಿಗೆ ಬಿದ್ದಂತಹ ಅಮೃತದ ಬಿಂದುವಿನಿಂದ ನೆಲ್ಲಿಯ ಉದ್ಭವ ಅಯಿತೆಂದು ಪುರಾಣವು ಹೇಳುತ್ತದೆ. ದೀರ್ಘಾಯುಸ್ಸನ್ನೂ, ತೇಜಸ್ಸನ್ನೂ ನೀಡುವುದೆಂಬ ಅರಿವು ನಮ್ಮ ಪ್ರಾಚೀನರಿಗೆ ಇತ್ತು.

ಸಸ್ಯಶಾಸ್ತ್ರವು Phyllanthus emblica ಹೆಸರಿನಿಂದ ಈ ಸಸ್ಯವನ್ನು ಗುರುತಿಸಿದೆ. ಆಂಗ್ಲ ಭಾಷಾ ಪ್ರಯೋಗದಲ್ಲಿ Indian gooseberry ಎಂದೆನ್ನಬೇಕಾಗಿದೆ.


        



Sunday 23 September 2018

ಮಳೆಗಾಲದ ಪತ್ರೊಡೆ




        

“ ಅಕ್ಕ, ಸೊಪ್ಪು ತುಂಬ ಉಂಟು… “ ಚೆನ್ನಪ್ಪ ಅಂದಿದ್ದು ಕೆಸುವಿನ ಸೊಪ್ಪನ್ನು, ಒಂದು ಪತ್ರೊಡೆ ಮಾಡಿ ತಿನ್ನುವುದಕ್ಕಿಲ್ಲವೇ ಎಂಬುದು ಅವನ ಉದ್ಗಾರದ ಆಂತರ್ಯ.

“ ಮಾಡೋಣ.. ನಾಳೆ. “
“ ನಾಳೆ ನಾನು ಬೇರೆ ಹೋಗೂದಿದೆ.. “
“ ಹಾಗಿದ್ದರೆ ಸೊಪ್ಪು ಕಿತ್ತು ತರಬೇಡ, ನಾಳೆ ಏನೋ ಒಂದು ಉಪ್ಪಿಟ್ಟು ಮಾಡಿದರಾಯ್ತು ಬಿಡು. “

ಮಾರನೇ ದಿನ ಸಂಜೆ ಹಿತ್ತಲಲ್ಲಿ ತಿರುಗಾಡುತ್ತಿರಬೇಕಾದರೆ ಕೆಸುವಿನ ಸೊಪ್ಪು ಕೈ ಬೀಸಿ ಕರೆಯಿತು. ಸೊಂಪಾಗಿ ಬೆಳೆದಿದ್ದ ಕಾಟ್ ಕೆಸು ತಾನೇ ತಾನಾಗಿ ಮೆರೆಯುತ್ತಿತ್ತು. ಮಳೆಗಾಲದಲ್ಲಿ ಮಾತ್ರ ಸಿಗುವ ಕಾಡು ಕೆಸುವಿನ ಅಡುಗೆ ಮಾಡದಿದ್ದರೆ ಹೇಗೆ? ಕೆಸುವಿನ ಸೊಪ್ಪಿನ ಆರೋಗ್ಯಲಾಭ ದಕ್ಕಿಸಿಕೊಳ್ಳಬೇಕಿದ್ದರೆ ಪತ್ರೊಡೆ ಮಾಡಿ ತಿನ್ನಲೇ ಬೇಕು.

ಅಂದಾಜು ಇಪ್ಪತ್ತು ಎಲೆಗಳನ್ನು ಚಿವುಟಿ ತಂದೆ.
ಆಗಲೇ 2 ಲೋಟ ನುಚ್ಚಕ್ಕಿಯೂ ನೀರಿಗೆ ಬಿತ್ತು.
ಒಂದು ಹಿಡಿ ಕುಚ್ಚುಲಕ್ಕಿಯನ್ನೂ ಪ್ರತ್ಯೇಕವಾಗಿ ನೆನೆಸಲಾಯಿತು.
ಬಾಳೆ ಎಲೆ ಆಗಬೇಕು, ಪುಟ್ಟದೊಂದು ಕತ್ತಿ ಹಿಡಿದು ತೋಟದಿಂದ ಏಳೆಂಟು ಕುಡಿ ಬಾಳೆಲೆಗಳನ್ನು ತಂದೂ ಆಯ್ತು.
ಚಿಕ್ಕದೊಂದು ತೆಂಗಿನಕಾಯಿ ಸುಲಿದು, ಒಡೆದು, ಅರ್ಧ ಕಡಿ ಕಾಯಿ ತುರಿಯಲಾಯಿತು.
ನಾಲ್ಕು ಒಣಮೆಣಸು,
ಪುಟ್ಟ ಚಮಚ ಅರಸಿಣ,
ಲಿಂಬೆ ಗಾತ್ರದ ಹುಣಸೆಹಣ್ಣು,
ರುಚಿಗೆ ಉಪ್ಪು ಹಾಗೂ ಬೆಲ್ಲ ಇದ್ದರಾಯಿತು,
 ಡಬ್ಬಿಯಲ್ಲಿ ಗರಂ ಮಸಾಲೆ ಹುಡಿ ಇದ್ದಿತು, ಎರಡು ಚಮಚ ಇರಲಿ, ಕೊತ್ತಂಬ್ರಿ ಜೀರಿಗೆ ಎಂದು ಒದ್ದಾಡುವುದು ಬೇಡ.
ಕಾಳುಮೆಣಸು ಪುಡಿ ಮಾಡಿಟ್ಟಿದ್ದೂ ಇತ್ತು, ಒಂದು ಚಮಚ ಇರಲಿ.

ಮೊದಲು ಕುಚ್ಚುಲಕ್ಕಿ ತೊಳೆದು ಮಿಕ್ಸಿಗೆ ಹಾಕಿ ತಿರುಗಿಸಿ, ಅರ್ಧಂಬರ್ಧ ಹುಡಿ ಆದಾಗ, ತೆಂಗಿನತುರಿ ಇತ್ಯಾದಿ ಮಸಾಲೆ ಸಾಮಗ್ರಿಗಳನ್ನು ಹಾಕಿ,
ದಪ್ಪ ಸಿಹಿ ಮಜ್ಜಿಗೆ ಎರೆದು ಅರೆಯಿರಿ.
ಇದೀಗ ನುಚ್ಚಕ್ಕಿಯ ಸರದಿ, ತೊಳೆದು ಅರೆಯುವುದು, ನುಚ್ಚಕ್ಕಿಯ ವಿಶೇಷ ಏನಪ್ಪಾ ಅಂದ್ರೆ ಎಷ್ಟೇ ಅರೆದರೂ ತರಿತರಿಯಾಗಿಯೇ ಇರುವ ಗುಣ. ಇಡ್ಲಿ ಮಾಡಲೂ ನುಚ್ಚಕ್ಕಿಯೇ ಹಿತ.
ಅರೆದ ಹಿಟ್ಟನ್ನು ಅಗಲವಾದ ತಪಲೆಗೆ ಹಾಕಿ ಇಡಬೇಕು.

ಕೆಸುವಿನೆಲೆಗಳನ್ನು ಶುಭ್ರವಾದ ಬಟ್ಟೆಯಲ್ಲಿ ಒರೆಸಿ, ತೊಟ್ಟಿನ ಭಾಗವನ್ನು ಕತ್ತರಿಸಿ ತೆಗೆದು, ಕೆಸುವಿನಲೆಗಳನ್ನು ಒಟ್ಟಿಗೆ ಚಿಕ್ಕದಾಗಿ ಚೂರಿಯಲ್ಲಿ ಚಕಚಕನೆ ಕತ್ತರಿಸಿ ಇಡಬೇಕು.

ಬಾಳೆ ಎಲೆಗಳನ್ನೂ ಒದ್ದೆ ಬಟ್ಟೆಯಲ್ಲಿ ಒರೆಸಿ, ಗ್ಯಾಸ್ ಜ್ವಾಲೆಗೆ ಹಿಡಿದು ಬಾಡಿಸಬೇಕು.
ಅಟ್ಟಿನಳಗೆ ಯಾ ಇಡ್ಲಿ ಪಾತ್ರೆ ಒಲೆಗೇರಲಿ,
ನೀರು ಕುದಿಯಲಿ,
ಹಿಟ್ಟು, ಮಸಾಲೆ ಹಾಗೂ ಕೆಸುವಿನ ಸೊಪ್ಪನ್ನು ಜೊತೆಗೂಡಿಸಿ, ಕೈಯಲ್ಲಿ ಬೆರೆಸಿ, ಹಿಟ್ಟು ಈಗ ಮುದ್ದೆಯಾಗಿ ಅಂಗೈಯಲ್ಲಿ ಹಿಡಿಯಲು ಬರುವಂತಿರಬೇಕು.


         


ನನ್ನ ಬರವಣಿಗೆ ಮುಂದುವರಿಯುತ್ತಿದ್ದಂತೆ ಗೌರತ್ತೆ, “ಈಗ ಯಾವ ಅಡಿಗೆ ಬರೆಯುತ್ತ ಇದ್ದೀ... “ ಎನ್ನುತ್ತ ಬಂದರು.

“ ಏನಿಲ್ಲ ಬಿಡಿ, ಅದೇ ನಿನ್ನೆ ಮಾಡಿದ ಪತ್ರೊಡೆ... “

“ ಅಚ್ಚುಕಟ್ಟಾಗಿ ಬಾಡಿಸಿದ ಬಾಳೆ ಎಲೆಯಲ್ಲಿ ಹಿಟ್ಟು ತುಂಬಿಸಿ... ಅಂತ ಬರೆದ್ರೆ ಮುಗೀತು, ಪೇಟೆಯಲ್ಲಿರುವವರಿಗೆ ಬಾಳೆ ಎಲೆ ಎಲ್ಲಿಂದ ಬರಬೇಕು? “

“ ತರ್ತಾರೆ ಬಿಡಿ, ಸೂಪರ್ ಮಾರ್ಕೆಟ್ಟೂ ಉಂಟಲ್ಲ.. “ ನನ್ನ ಸಮಜಾಯಿಷಿಗೆ ಗೌರತ್ತೆ ಬಗ್ಗಲಿಲ್ಲ, ಹಂಗೇನೆ ಅವರಿಂದ ಉದ್ಗರಿಸಲ್ಪಟ್ಟ ಸುಲಭೋಪಾಯಗಳು ಇಲ್ಲಿವೆ.

 ಬಾಳೆ ಎಲೆ ಇಲ್ಲದಿದ್ದರೆ ಹಿಟ್ಟಿನ ಮುದ್ದೆಯನ್ನು ಅಗಲವಾದ ತಟ್ಟೆಯಲ್ಲಿ ತುಂಬಿಸಿ ಅಟ್ಟಿನಳಗೆಯೊಳಗಿಟ್ಟು ಬೇಯಿಸಬಹುದಾಗಿದೆ.

ಇಡ್ಲಿ ಬೇಯಿಸುವ ಪುಟ್ಟ ಪುಟ್ಟ ತಟ್ಟೆಗಳಲ್ಲಿ ತುಂಬಿಸಿ ಬೇಯಿಸಿದರೆ ಸಮಯವೂ ಕಡಿಮೆ ಸಾಕು, ಮಾಮೂಲಿಯಾಗಿ ಇಡ್ಲಿ ಬೇಯಿಸುವ ಸಮಯವೇ ಸಾಕು, ಅರ್ಧ ಗಂಟೆ, ಮುಕ್ಕಾಲು ಗಂಟೆ ಅಂತ ಒದ್ದಾಡಬೇಕಿಲ್ಲ.

ಬಾಳೆ ಎಲೆಯ ಬದಲು ಉಪ್ಪಳಿಕನ ಎಲೆ, ಸಾಗುವಾನಿ ಎಲೆ, ಮುತ್ತುಗದ ಎಲೆ ಕೂಡಾ ಬಳಸಬಹುದು.

ಬಾಡಿಸಿದ ಬಾಳೆ ಎಲೆಯ ಯೋಗ್ಯತೆ ಇನ್ಯಾವುದೇ ಎಲೆಗೆ ಇಲ್ಲ, ಬಾಳೆ ಎಲೆಯೊಳಗೆ ಹಿಟ್ಟು ಇಟ್ಟು, ಅಚ್ಚುಕಟ್ಟಾಗಿ ಮಡಚಿ, ನೀರು ಕುದಿಯುತ್ತಿರುವ ಅಟ್ಟಿನಳಗೆಯೊಳಗಿಟ್ಟು, ಭದ್ರವಾಗಿ ಮುಚ್ಚಿ, ಅರ್ಧ ಗಂಟೆ ಬೇಯಿಸಿ.

ಬೆಂದಿದೆ ಎಂದು ತಿಳಿಯುವುದು ಹೇಗೆ?
ಒಂದು ಚಮಚವನ್ನು ಆಳವಾಗಿ ಚುಚ್ಚಿ ತೆಗೆದಾಗ ಚಮಚದಲ್ಲಿ ಹಿಟ್ಟು ಅಂಟಿಕೊಂಡಿರಬಾರದು, ಬೆಂದಿದೆ ಎಂದೇ ತಿಳಿಯಿರಿ.
ತೆಂಗಿನತುರಿ ಹಾಗೂ ದಪ್ಪ ಮಜ್ಜಿಗೆಯ ಬಳಕೆಯಿಂದ ಪತ್ರೊಡೆ ಮೃದುವಾಗಿ ಇಡ್ಲಿಯಂತೆ ಬರುವುದು.
ಕೆಸುವಿನ ಸೊಪ್ಪು ಜಾಸ್ತಿ ಇದ್ದಷ್ಟೂ ಪತ್ರೊಡೆ ಮೃದುವಾಗಿ ಬರುತ್ತದೆ. ಚಿಕ್ಕದಾಗಿ ಕತ್ತರಿಸಿದಷ್ಟೂ ಚೆನ್ನ.
ಬಾಳೆ ಎಲೆ ಯಾ ಇನ್ಯಾವುದೇ ಎಲೆ ಲಭ್ಯವಿಲ್ಲವೆಂದು ಚಿಂತಿಸದಿರಿ, ತಟ್ಟೆಯಲ್ಲಿ ತುಂಬಿಸಿ ಗುಜರಾತಿ ಧೋಕ್ಲಾ ಮಾದರಿಯಲ್ಲಿ ಬೇಯಿಸಿ. ಬೇಯಲು ನೀರು ಕುದಿದ ನಂತರ ಅಂದಾಜು ಅರ್ಧ ಗಂಟೆ ಬೇಕು.
ಮಳೆಗಾಲದ ಕಾಡು ಕೆಸುವಿನ ಎಲೆಗಳು ಇಪ್ಪತ್ತು - ಇಪ್ಪತೈದು ಬೇಕಾದೀತು, ಎಲೆಗಳ ಗಾತ್ರದ ಮೇಲೆ ಸಂಖ್ಯೆ ಅವಲಂಬಿಸಿದೆ.
ಕರಿ ಕೆಸುವಿನ ಎಲೆಗಳು ಗಾತ್ರದಲ್ಲಿ ದೊಡ್ಡದಾಗಿರುತ್ತವೆ, ಇಂತಹ ಎಲೆಗಳು ಮೂರು ಯಾ ನಾಲ್ಕು ಸಿಕ್ಕಿದರೂ ಸಾಕು, ಪತ್ರೊಡೆ ಮಾಡಬಹುದು.
ಕರಿಕೆಸು ಎಲೆಗಳನ್ನು ಕತ್ತರಿಸುವಾಗ ದಂಟುಗಳನ್ನು ತೆಗೆದು ಇಟ್ಟುಕೊಳ್ಳಿ, ಎರಡು ದಿನ ಬಿಟ್ಟು ಬೋಳು ಹುಳಿ ಮಾಡಬಹುದು.
ಕೆಸುವಿನೆಲೆ ಜಾಸ್ತಿ ಆಯ್ತೇನೋ ಎಂದು ಚಿಂತಿಸಬೇಕಿಲ್ಲ, ಮಿಕ್ಸಿಯಲ್ಲಿ ಚಿಕ್ಕದಾಗಿ ಪುಡಿ ಮಾಡ್ಬಿಟ್ಟು ಹಿಟ್ಟಿಗೆ ಸೇರಿಸಿ. ಹುಣಸೆಯ ಹುಳಿ ಹಾಗೂ ಮಜ್ಜಿಗೆ ಇರುವುದರಿಂದ ತುರಿಸುವ ಭಯವಿಲ್ಲ. ಗೌರತ್ತೆಯ ಸಲಹೆಯಂತೆ ನನ್ನ ಕೆಸುವಿನ ಸೊಪ್ಪು ಮಿಕ್ಸಿಯಲ್ಲಿ ಪುಡಿ ಪುಡಿ ಆಗ್ಬಿಟ್ಟು ಹಿಟ್ಟಿನೊಂದಿಗೆ ಸೇರಿದೆ. ಅರ್ಧಾಂಶ ಸೊಪ್ಪನ್ನು ಮಿಕ್ಸಿಗೆ ಹಾಕಿ, ಉಳಿದರ್ಧ ಚೂರಿಯಲ್ಲಿ ಕೊಚ್ಚಿಕೊಂಡು ಕೂಡಾ ಹಾಕಿದರೂ ಆದೀತು.

ಬೆಂದಿದೆ, ರಾತ್ರಿಯೂಟದ ಸಮಯ, ಒಂದೇ ಗಾತ್ರದಲ್ಲಿ ಕತ್ತರಿಸಿ, ಊಟದೊಂದಿಗೆ ಸವಿಯಿರಿ.
“ ರುಚಿಯಾಗಿದೆ… “ ಶಿಫಾರಸ್ ಸಿಕ್ಕಿತು.


        


ಮುಂಜಾನೆಯ ತಿಂಡಿಗಾಗಿ ನಮ್ಮ ಪತ್ರೊಡೆ ಹುಡಿ ಹುಡಿ ಆಯ್ತು, ಬಾಣಲೆಗೆ ನಾಲ್ಕು ಚಮಚ ಎಣ್ಣೆ ಎರೆದು, ಒಗ್ಗರಣೆ ಸಾಹಿತ್ಯಗಳನ್ನು ಉದುರಿಸಿ, ಬೆಲ್ಲದ ಹುಡಿ, ತುಸು ಉಪ್ಪು ನೀರಿನಲ್ಲಿ ಕರಗಿಸಿ ಎರೆದು, ಪತ್ರೊಡೆ ಹುಡಿಯನ್ನು ಹಾಕಿ, ಮೇಲಿಂದ ಕಾಯಿತುರಿ ಹಾಕಿ, ಸೌಟಾಡಿಸಿ ಸ್ವಲ್ಪ ಹೊತ್ತು ಮುಚ್ಚಿಟ್ಟು ಸ್ಟವ್ ಆರಿಸಿ, ಪತ್ರೊಡೆಯ ಸಿಹಿ ಉಪ್ಕರಿ ಸಿದ್ಧವಾಗಿದೆ.

ಪತ್ರೊಡೆ ಧೋಕ್ಲಾ

ಇದು ಸಂಜೆಯ ಚಹಾಕೂಟಕ್ಕಾಗಿ,
ಪತ್ರೊಡೆಯನ್ನು ಒಂದೇ ಗಾತ್ರದಲ್ಲಿ ಚೂರಿಯ ಸಹಾಯದಿಂದ ಕತ್ತರಿಸುವುದು.
ಬಾಣಲೆ ಬಿಸಿಗಿಟ್ಟು ಎಣ್ಣೆ ಯಾ ತುಪ್ಪ ಎರೆದು ಸಾಸಿವೆ ಸಿಡಿಸಿ ಪತ್ರೊಡೆ ಹೋಳುಗಳನ್ನು ಹಾಕಿ, ಒಂದೆರಡು ಚಮಚ ಸಕ್ಕರೆ ಉದುರಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಬಿಸಿ ಬಿಸಿಯಾಗಿ ತಿನ್ನಿರಿ. ಪತ್ರೊಡೆ ಧೋಕ್ಲಾ ಅನ್ನಿ.

         
ಪತ್ರೊಡೆಯ ತಿನಿಸನ್ನು ಚಹಾ ಜೊತೆ ಮೆಲ್ಲುತ್ತ “ ಹೌದೂ, ಇನ್ನೂ ಉಂಟಲ್ಲ ಪತ್ರೊಡೆ ಅಟ್ಟಿನಳಗೆಯಲ್ಲಿ? “ ಎಂದು ವಿಚಾರಿಸಿದ ಗೌರತ್ತೆ, “ ನಾಳೆ ಹೀಗೆ ಕಟ್ ಕಟ್ ಮಾಡಿ ಪತ್ರೊಡೆ ಸಾಂಬಾರ್ ಮಾಡಬಹುದಲ್ಲ… “

“ ಅದನ್ನೂ ಮಾಡುವ, ಮೇಲಾರ, ಜೀರಿಗೆ ಬೆಂದಿಯೂ ಆದೀತಲ್ಲ.. “

“ ಅದೆಲ್ಲ ಬೇಡ, ಸಾಂಬಾರ್ ಮಾಡು.. ತೊಗರಿಬೇಳೆ ಹಾಕಿ, ಸಾಂಬಾರ್ ಹುಡಿ ಉಂಟಲ್ಲ... ಬೆಳ್ಳುಳ್ಳಿ ಒಗ್ಗರಣೆ ಇರಲಿ. “

ಪತ್ರೊಡೆಯ ಪುಳಿ ಕೊಳಂಬು

ಮಾಡಿದ್ದು ಹೇಗೆ?
ಚೌಕಾಕೃತಿಯಲ್ಲಿ ಕತ್ತರಿಸಿದ ಪತ್ರೊಡೆ ತುಂಡುಗಳು, ಹತ್ತು - ಹನ್ನೆರಡು ಸಾಕು.
ಒಂದು ಹಿಡಿ ಬಟಾಣಿಕಾಳು ನೆನೆಸಿ, ತೊಗರಿಬೇಳೆಯೊಂದಿಗೆ ಬೇಯಿಸಿಕೊಳ್ಳುವುದು.
ಬೆಂದ ಬೇಳೆಗೆ ಹಿತವಾಗುವಷ್ಟು ಹುಣಸೆ ರಸ ಹಾಗೂ ಉಪ್ಪು ಮತ್ತು ಬೆಲ್ಲ ಹಾಕುವುದು.
ಒಂದು ಚಮಚ ಸಾಂಬಾರಿನ ಹುಡಿ ಹಾಕುವುದು.
ಅಗತ್ಯವಿದ್ದ ಹಾಗೆ ನೀರು ಎರೆದು ಕುದಿಯಲು ಇಡುವುದು.
ಕುದಿಯುತ್ತಿದ್ದ ಹಾಗೆ ಪತ್ರೊಡೆ ತುಂಡುಗಳನ್ನು ಹಾಕುವುದು.
ಜಜ್ಜಿದ ಬೆಳ್ಳುಳ್ಳಿಯ ಒಗ್ಗರಣೆ ತುಪ್ಪದಲ್ಲಿ ಕೊಡುವುದು.
ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸುವುದು.



ಪತ್ರೊಡೆಯ ಪೋಡಿ

ಕಡ್ಲೆ ಹಿಟ್ಟು ಹಾಗೂ ಅಕ್ಕಿಹಿಟ್ಟು ಬೆರೆಸಿ ನೀರೆರೆದು ಇಡ್ಲಿ ಹಿಟ್ಟಿನ ಸಾಂದ್ರತೆಗೆ ತಂದು, ರುಚಿಗೆ ಉಪ್ಪು, ಬೇಕಿದ್ದರೆ ಖಾರದ ಪುಡಿ ಯಾ ಗರಂ ಮಸಾಲೆ ಹಾಕಿ ಪರಿಮಳಯುಕ್ತವಾಗಿಸಿ, ಪತ್ರೊಡೆ ಹೋಳುಗಳನ್ನು ಈ ಹಿಟ್ಟಿನಲ್ಲಿ ಮುಳುಗಿಸಿ ಎಣ್ಣೆಯಲ್ಲಿ ಕರಿದರೆ ಪತ್ರೊಡೆ ಪೋಡಿ ಯಾ ಪಕೋಡ ಸಿದ್ಧ.

ವಿಟಮಿನ್ ಗಳ ಆಗರ, ಎ ಹಾಗೂ ಸಿ ವಿಟಮಿನ್ ಅಲ್ಲದೆ ಬಿ ಕಾಂಪ್ಲೆಕ್ಸ್ ಅಧಿಕವಾಗಿ ಹೊಂದಿರುವ ಎಲೆಗಳು.
ಮ್ಯಾಂಗನೀಸ್, ಕಾಪರ್, ಪೊಟಾಶಿಯಂ, ಕಬ್ಬಿಣದ ಧಾತುಗಳಿಂದ ಕೂಡಿವೆ ಕೆಸುವಿನ ಎಲೆ, ಕ್ಯಾಲ್ಸಿಯಂ ಕೂಡಾ ಪಡೆಯುವಿರಿ.
ಅತ್ಯಲ್ಪ ಪ್ರಮಾಣದಲ್ಲಿ ಕೊಬ್ಬು ಇರುವ ಈ ಎಲೆಗಳ ಸೇವನೆ ದೇಹತೂಕ ನಿವಾರಕವೂ ಹೌದು.
ವಿಟಮಿನ್ ಕೊರತೆ ಇಲ್ಲಿ ಇಲ್ಲ,
ರಕ್ತಹೀನತೆಯ ಬಳಲಿಕೆ ಬಾಧಿಸದು,
ಬೊಜ್ಜು ತುಂಬಿ, ಮೈಭಾರ ಇಳಿಸುವ ಸಾಹಸಕ್ಕೆ ಕೆಸುವಿನೆಲೆ ನಿಮಗೆ ನೆರವಾಗಲಿದೆ.
ನಾರುಯುಕ್ತ ಎಲೆಗಳು, ಮಲಬದ್ಧತೆಯ ಸಮಸ್ಯೆಗೆ ಪರಿಹಾರ.

ಸೊಪ್ಪನ್ನು ಹಸಿಹಸಿಯಾಗಿ ತಿನ್ನಲು ಬಾರದು, ಬೇಯಿಸಿದರೂ ಕೆಲವೊಂದು ಜಾತಿಯ ಎಲೆಗಳು ನಾಲಿಗೆ ತುರಿಕೆಯುಂಟು ಮಾಡುವಂತಹವು. ತುರಿಕೆ ಯಾ ನವೆ ಹೋಗಲಾಡಿಸಲು ನಾವು ಹುಣಸೆಹುಳಿ, ಮಜ್ಜಿಗೆ, ಬೀಂಬುಳಿ ಹಣ್ಣು ಇತ್ಯಾದಿ ಹುಳಿಯುಕ್ತ ಪದಾರ್ಥಗಳಿಂದಲೇ ಇದರ ಅಡುಗೆ ಮಾಡಬೇಕಾಗುತ್ತದೆ.

Colocasia escalenta ಹೆಸರಿನಿಂದ ಶೋಭಿಸುವ ಕೆಸು, ನೂರಾರು ಜಾತಿಗಳನ್ನೂ ಹೊಂದಿದೆ. ಗೆಡ್ಡೆಯೂ ಆಹಾರವಸ್ತು. ಕೈದೋಟದಲ್ಲಿ ಬೆಳೆಸಬಹುದಾದ ಒಂದು ಅಲಂಕಾರಿಕ ಸಸ್ಯ.

         





       
         

Saturday 15 September 2018

ಹಬ್ಬದ ಪಂಚಕಜ್ಜಾಯ




          


ಅಮ್ಮ, ಮುಂದಿನವಾರ ಚೌತಿ ಬರ್ತಾ ಇದೆ, ಗೊತ್ತಲ್ಲ.. “
“ ಗೊತ್ತೂ.. “
“ ನಾವ್ಯಾರೂ ಮನೆಯಲ್ಲಿಲ್ಲ, ಅದೂ ಗೊತ್ತಲ್ಲ... ಮೊದಲಿನ ಹಾಗೆ ಹಬ್ಬದ ಅಡುಗೆ ಮಾಡಿ ಒದ್ದಾಡಬೇಡ. “
“ ಏನೂ ಮಾಡದಿದ್ರೆ ಹೇಗೆ, ಒಂದ್ ಪಾಯಸ ಮಾಡಿ... “
“ ಹ್ಞಾ, ಸರಿ... ನನ್ನ ಮೆಟ್ರೋ ಸ್ಟೇಶನ್ ಬಂತು, ಸಂಜೆ ಮಾತಾಡೋಣ. “ ಎನ್ನುವಲ್ಲಿಗೆ ಮಧು ಹಾಗೂ ನನ್ನ ಮಾತುಕತೆಗೆ ಬ್ರೇಕ್ ಬಿತ್ತು.

ಸಂಜೆಯ ಚಹಾ ಆದ ನಂತರ ಹಾಲು ತರಲಿಕ್ಕೆ ಹೊರಟ ಮನೆ ಯಜಮಾನರ ಕೈಗೆ ನನ್ನ ಲಿಸ್ಟ್ ಬರೆದಿದ್ದನ್ನು ಕೊಟ್ಟೆ.
“ ಇದೇನು ದ್ರಾಕ್ಷಿ ಗೇರುಬೀಜ ಅಂತ ಬರೆದಿದ್ದೀಯಲ್ಲ... “
“ ಅದು ಚೌತಿಗೆ. “
“ ಹುರಿಗಡಲೆ ಬೇಡವೇ ? “
“ ಅದನ್ನೂ ತನ್ನೀ. “

ಮೊದಲಿನಿಂದಲೂ ನಮ್ಮ ಮನೆಯ ಚೌತಿಗೆ ಹುರಿಗಡಲೆಯ ಪಂಚಕಜ್ಜಾಯ ಆಗಲೇಬೇಕು. ಮಾವನವರು ಇದ್ದಾಗ ಕಿಲೋ ಲೆಕ್ಕದಲ್ಲಿ ಹುರಿಗಡಲೆ ಬರುತ್ತಿತ್ತು. ಪಂಚಕಜ್ಜಾಯವು ಮನೆಮಂದಿಗೆ ಮಾತ್ರವಲ್ಲದೆ ಆಳುಕಾಳುಗಳಿಗೂ, ಸಂಜೆಯ ಚಹಾಕೂಟಕ್ಕೆ ಬರುವ ಖಾಯಂ ಅತಿಥಿಗಳಿಗೂ ಹಂಚಲು ವಿನಿಯೋಗವಾಗುತ್ತಿತ್ತು.

ಈಗ ನಾವು ಒಂದು ಲೋಟ ಯಾ ಕುಡ್ತೆ ಅಳತೆಯಲ್ಲಿ ಹುರಿಗಡಲೆಯ ಪಂಚಕಜ್ಜಾಯ ಮಾಡುವವರಿದ್ದೇವೆ.
ಹೇಗೂ ಇದು ಹುರಿಗಡಲೆಯಾಗಿರುವುದರಿಂದ ಪುನಃ ಹುರಿಯಬೇಕಾಗಿಲ್ಲ. ಮಿಕ್ಸಿಯಲ್ಲಿ ತರಿತರಿಯಾಗಿ ಹುಡಿ ಮಾಡಿಕೊಳ್ಳುವುದು ಹಾಗೂ ಶುಭ್ರವಾದ ನೀರ ಹನಿಯೇನೂ ಇಲ್ಲದ ತಪಲೆಗೆ ಹಾಕಿಡುವುದು.
ಅಷ್ಟೇ ಪ್ರಮಾಣದ ಸಕ್ಕರೆ ಅಳೆದು ಹುಡಿ ಮಾಡುವುದು, ಅದೇ ತಪಲೆಗೆ ಹಾಕುವುದು.
ನಾನ್ ಸ್ಟಿಕ್ ಬಾಣಲೆಯಲ್ಲಿ ಒಂದು ಚಮಚ ಎಳ್ಳು ಹುರಿದು, ಗುಂಡುಕಲ್ಲಿನಲ್ಲಿ ಜಜ್ಜಿ ಹಾಕುವುದು.
ಒಂದು ಲೋಟ ತಾಜಾ ಅಂದರೆ ಆಗತಾನೇ ಒಡೆದ ಹಸಿ ತೆಂಗಿನಕಾಯಿಯ ತುರಿ, ಇದನ್ನು ಪರಿಮಳ ಬರುವಂತೆ ಬಾಣಲೆಯಲ್ಲಿ ಹುರಿಯಿರಿ, ತೆಂಗಿನತುರಿಯ ನೀರಿನಂಶವೆಲ್ಲ ಹೋಗಬೇಕು, ಹುರಿಯಲು ಎಣ್ಣೆ ಯಾ ತುಪ್ಪದ ಬಳಕೆ ಇಲ್ಲಿ ಇಲ್ಲ, ತೆಂಗಿನಕಾಯಿಯಲ್ಲಿ ಸ್ವಾಭಾವಿಕವಾಗಿ ಇರುವ ಜಿಡ್ಡು ಸಾಕಾಗುತ್ತದೆ. ಹುರಿದ ತೆಂಗಿನತುರಿಯನ್ನು ತಪಲೆಗೆ ಹಾಕಿಕೊಳ್ಳುವುದು.
ಅದೇ ಬಾಣಲೆಗೆ ಒಂದೆರಡು ಚಮಚ ತುಪ್ಪ ಎರೆದು, ಗೇರುಬೀಜವನ್ನು ಹುರಿದು, ಒಣದ್ರಾಕ್ಷಿ ಗೇರುಬೀಜಗಳಿಗೆ ಇಷ್ಟೇ ಹಾಕಬೇಕೆಂಬ ಲೆಕ್ಕಾಚಾರ ಇಲ್ಲಿಲ್ಲ, ಕೈಯಲ್ಲಿ ಬಂದಷ್ಟು ಹಾಕುವುದು.

ಈಗ ನಮ್ಮ ಪಂಚಕಜ್ಜಾಯದಲ್ಲಿ ಹುರಿಗಡಲೆ, ಸಕ್ಕರೆ, ಎಳ್ಳು, ತೆಂಗಿನತುರಿ ಹಾಗೂ ತುಪ್ಪ ಸೇರಿದಾಗ ಐದು ವಿಧ ವಸ್ತುಗಳು ಕೂಡಿವೆ.  
ಇದ್ದರೆ ಜೇನು ಒಂದೆರಡು ಚಮಚ ಎರೆಯಿರಿ.
 ಏಲಕ್ಕಿಯನ್ನೂ ಗುದ್ದಿ ಹಾಕಲಡ್ಡಿಯಿಲ್ಲ.
ಎಲ್ಲವನ್ನೂ ಮಿಶ್ರಗೊಳಿಸುವಲ್ಲಿಗೆ,
ದೇವರ ಮುಂದೆ ದೀಪ ಹಚ್ಚಿಟ್ಟು,
ನಮಸ್ಕರಿಸಿ,
ಪಂಚಕಜ್ಜಾಯ ತಿನ್ನಿರಿ.

        

ಅಡುಗೆಮನೆಯಲ್ಲಿ ಹುರಿಗಡಲೆ ಯಾವಾಗಲೂ ಇರಬೇಕು. ತೆಂಗಿನತುರಿಯೊಂದಿಗೆ ಹುರಿಗಡಲೆಯನ್ನೂ ಹಾಕಿಕೊಂಡು ಸಾರು, ರಸಂ, ಚಟ್ಣಿ. ಇತ್ಯಾದಿ ಅಡುಗೆಗೆ ಯೋಗ್ಯ ಸಿದ್ಧವಸ್ತು.
ನಿಧಾನಗತಿಯಲ್ಲಿ ಜೀರ್ಣವಾಗುವ ಹುರಿಗಡಲೆ ಡಯಾಬಿಟೀಸ್ ರೋಗಿಗಳಿಗೆ ಆದರ್ಶಪ್ರಾಯವಾದದ್ದು. ಡಯಟಿಂಗ್ ಮಾಡಿ ತೂಕ ಇಳಿಸುವ ಸಾಹಸಿಗಳಿಗೂ ಉತ್ತಮ.
ಕೊಬ್ಬುರಹಿತವಾದ ಹುರಿಗಡಲೆ, ಹೃದಯವ್ಯಾಧಿಯನ್ನೂ ದೂರ ತಳ್ಳುವುದು.
ಹುರಿಗಡಲೆ ತಿನ್ನುವುದರಿಂದ ಕ್ಯಾಲ್ಸಿಯಂ, ಪೊಟಾಶಿಯಂ, ಮ್ಯಾಗ್ನೇಶಿಯಂ ಎಂಬಂತಹ ಖನಿಜಗಳು ಉಚಿತವಾಗಿ ಲಭ್ಯ.
ಪ್ರೊಟೀನ್, ಫೈಬರ್ ಸಮೃಧ್ಧಿಯಿಂದ ದೇಹದ ಶಕ್ತಿವರ್ಧಕ ನಮ್ಮ ಹುರಿಗಡಲೆ.

“ ಅಮ್ಮ, ತಂದಿರೋದನ್ನೆಲ್ಲ ಪಂಚಕಜ್ಜಾಯ ಮಾಡಿ ಇಡಬೇಡ, ನಮಗೆ ಹಾಗೇ ತಿನ್ನಲಿಕ್ಕೂ ಸ್ವಲ್ಪ ಇಟ್ಟಿರು… “ ಮಧು ಚಿಕ್ಕವನಿದ್ದಾಗ ಹೇಳುತ್ತಿದ್ದ ಡಯಲಾಗ್ ಈಗ ನೆನಪಾಯ್ತು.




Saturday 8 September 2018

ಬೀಟ್ರೂಟು ಪಚ್ಚಡಿ




        



ಬೀಟ್ರೂಟ್ ಎಂಬ ಕೆಂಬಣ್ಣದ ಗೆಡ್ಡೆ ತರಕಾರಿ ತಂದಿದೆ, ಕಳೆದ ವಾರ ತರಕಾರಿ ತಂದಾಗಲೂ ಬಂದಿತ್ತು, ಅದನ್ನೇ ಅಡುಗೆ ಮಾಡಿ ಆಗಿಲ್ಲ, ತಂದಿದ್ದು ಹೆಚ್ಚಾಯ್ತು ಅನ್ನೋ ಹಾಗಿಲ್ಲ, ಬೀಟ್ರೂಟು ಅಷ್ಟು ಬೇಗನೆ ಕೆಡುವ ತರಕಾರಿಯೂ ಅಲ್ಲ, ಇರುತ್ತದೆ ಬಿಡಿ.

ದೋಸೆ ಇಡ್ಲಿ ಹಿಟ್ಟುಗಳಿಗೆ ಒಂದೆರಡು ಚಮಚ ಹಿಟ್ಟು ಮಾಡಿ ಹಾಕಿದ್ರೂನೂ ಬಣ್ಣದ ತಿಂಡಿ ಅಂತ ತಿನ್ನಬಹುದು. ಬಣ್ಣದ ರೊಟ್ಟಿ ಮಾಡುವ ವಿಧಾನವನ್ನು ಈ ಮೊದಲೇ ಬರೆದಿದ್ದೇನೆ, ಆಸಕ್ತರು ಹುಡುಕಿ ಓದಿರಿ.

ಈಗ ನಾವು ಬೀಟ್ರೂಟು ಪಚ್ಚಡಿ ಮಾಡೋಣ.
ಅರ್ಧ ಕಡಿ ತೆಂಗಿನತುರಿ,
ಎರಡು ಹಸಿಮೆಣಸು, ಗಾಂಧಾರಿ ಮೆಣಸು ಇದ್ದರೆ ಅದೂ ಆದೀತು.
ಒಂದು ತುಂಡು ಸಿಪ್ಪೆ ಹೆರೆದ ಶುಂಠಿ,
ನಾಲ್ಕಾರು ಕಾಳುಮೆಣಸು,
ಅರ್ಧ ಲೋಟ ಬೀಟ್ರೂಟು ಹೋಳುಗಳು, ಚಿಕ್ಕದಾಗಿ ಹೆಚ್ಚಿದರೆ ಉತ್ತಮ.
ರುಚಿಗೆ ಉಪ್ಪು,
 ರುಚಿಗೆ ತಕ್ಕಷ್ಟು ಹುಣಸೆಯ ಹಣ್ಣು, ನನ್ನ ಬಳಿ ಹಿತ್ತಲ ಬೆಳೆಯಾದ ಕರಂಡೆ ಹಣ್ಣು ( ಕವಳೇ ಹಣ್ಣು ) ಇದ್ದಿತು, ಎರಡು ಹಣ್ಣು ಸಾಕಾಯ್ತು. ಈಗ ಅಂಬಟೆಯ ಕಾಲ ಅಲ್ವೇ, ಇದ್ದರೆ ಅದನ್ನೇ ಹಾಕಬಹುದು.
ಎಲ್ಲವನ್ನೂ ಅಗತ್ಯಕ್ಕೆ ತಕ್ಕಂತೆ ನೀರು ಎರೆದು ಅರೆಯಿರಿ, ಕರಿಬೇವಿನ ಒಗ್ಗರಣೆ ಕೊಡುವಲ್ಲಿಗೆ ಬೀಟ್ರೂಟು ಪಚ್ಚಡಿ ಬಂದಿತು. ದೋಸೆ ಇಡ್ಲಿ ಚಪಾತಿಗಳಿಗೆ ಹೊಂದಿಸಿ ತಿನ್ನಬಹುದಾಗಿದೆ.

ಹುಳಿ ಹಾಕಲಿಲ್ಲವೇ, ಒಂದು ಲೋಟ ಸಿಹಿ ಮೊಸರು ಎರೆಯಿರಿ, ಬೀಟ್ರೂಟು ಗೊಜ್ಜು ಬಂದಿತು. ಅನ್ನದೊಂದಿಗೆ ಕಲಸಿ ತಿನ್ನಲು ಯೋಗ್ಯವಾದ ಈ ವ್ಯಂಜನ ಒಲೆಯನ್ನು ಬಯಸದ ಅಡುಗೆಯಾಗಿದೆ.

 88 ಶೇಕಡಾ ನೀರು ಹೊಂದಿರುವ ಈ ಗೆಡ್ಡೆ ತರಕಾರಿಯಲ್ಲಿ ಕೊಬ್ಬಿನಂಶ ಏನೇನೂ ಇಲ್ಲ. ಅಲ್ಪ ಪ್ರಮಾಣದಲ್ಲಿ ವಿಟಮಿನ್ B9, ಸೋಡಿಯಂ, ಮ್ಯಾಂಗನೀಸ್, ಕಾರ್ಬೋಹೈಡ್ರೇಟ್ ಹಾಗೂ ಇನ್ನಿತರ ಖನಿಜಾಂಶಗಳಿಂದ ಕೂಡಿದ ಬೀಟ್ರೂಟು ಎಂಬ Beta vulgaris ಸಸ್ಯಸಂಕುಲವು ಹರಿವೆಯ Amaranthaceae ಕುಟುಂಬವಾಸಿ. ಬೀಟ್ರೂಟು ಎಲೆಗಳನ್ನು ಪಾಲಕ್ ಸೊಪ್ಪಿನಂತೆ ಅಡುಗೆಗೆ ಬಳಸಬಹುದಾಗಿದೆ.



Friday 31 August 2018

ಹಾಲಿನ ಬರ್ಫಿ





  ಪುರೋಹಿತರ ಮಂತ್ರೋಚ್ಛಾರಣೆಯೂ, ಶಂಖಜಾಗಟೆಗಳ ನಿನಾದವೂ, ಊದುಬತ್ತಿ ಕರ್ಪೂರಗಳ ಸುಗಂಧವೂ, ಮಲ್ಲಿಗೆ ಸೇವಂತಿಗೆ ಹಾರಗಳ ಅಲಂಕರಣವೂ ಸೇರಿ ನಾಗರಪಂಚಮಿಯಂದು ಹಿರಣ್ಯದ ನಾಗಬನದಲ್ಲಿ ಹಾಲಿನ ಅಭಿಷೇಕ ನಡೆದಿತ್ತು. ಪೂಜಾದಿಗಳ ತರುವಾಯ ಉಳಿಕೆಯಾದ ಹಾಲು ಮನೆಗೆ ಬಂದಿತು, ಅದೂ ನಂದಿನಿ ಪ್ಯಾಕೆಟ್ ಹಾಲು. ನಾಳೆಯ ಕಾಫಿಗಾದೀತು ಎಂದು ಫ್ರಿಜ್ ಒಳಗ್ಹೋಯಿತು.

ಮೂರನೇ ದಿನ ಪ್ಯಾಕೆಟ್ ತೂತು ಮಾಡಿ ಹಾಲು ಬಗ್ಗಿಸಿ ಕಾಯಿಸಲಿಟ್ಟಾಗ ಹಾಲೇನೋ ಕುದಿಯಿತು, ಆದರೆ ಒಡೆದಿದೆ. ಇರಲಿ ಎಂದು ತೆಗೆದಿರಿಸಿದ್ದ ಊರಿನ ಡೈರಿ ಹಾಲಿನಿಂದ ಕಾಫಿ ಮಾಡಿಟ್ಟು, ಮುಳ್ಳುಸೌತೆಯ ಕೊಟ್ಟಿಗೆ ತಿಂದ್ಬಿಟ್ಟು ನಾವು ಹೊರಟೆವು.

“ ಹೌದ, ದೂರಪ್ರಯಾಣವೇ… “
“ ಇಲ್ಲೇ ಹತ್ತಿರ, ಪೊಸಡಿಗುಂಪೆ ಹತ್ತಿ ಇಳಿದರಾಯಿತು… “ ಭೋಜನಕೂಟ ಮುಗಿಸಿ, ಸ್ನೇಹಿತರ ಮನೆಗೆ ಭೇಟಿ ಕೊಟ್ಟು ಮನೆ ತಲಪುವಾಗ ರಾತ್ರಿಯಾಗಿತ್ತು. ಗ್ಯಾಸ್ ಪಕ್ಕ ಮುಚ್ಚಿಟ್ಟಿದ್ದ ಒಡೆದ ಹಾಲು ಹಾಗೇನೇ ತಣ್ಣಗೆ ಕೊರೆಯುತ್ತಿತ್ತು. ಕೆಟ್ಟ ವಾಸನೆಯೂ ಇಲ್ಲ, ಹುಳಿಯೂ ಆಗಿಲ್ಲ. ಇದಕ್ಕೊಂದು ಗತಿಗಾಣಿಸಿ ಮಲಗುವುದು.

ದಪ್ಪಗಟ್ಟಿದ ಹಾಲಿನ ನೀರಿನಂಶವನ್ನು ಬಸಿಯುವುದು, ಒಂದು ದೊಡ್ಡ ಲೋಟ ಹಾಲಿನ ನೀರು (whey water) ಸಿಕ್ಕಿತು. ಹಾಲನ್ನು ಜೀರ್ಣಸಲು ಕಷ್ಟವಾದಾಗ ಬಿಸಿ ಹಾಲಿಗೆ ಲಿಂಬೆ ರಸ ಹಿಂಡಿ ದಿಢೀರೆಂದು ಈ ಥರ ವ್ಹೇ ವಾಟರ್ ಮಾಡುವುದಿದೆ, ಕಲ್ಲುಸಕ್ಕರೆ ಬೆರೆಸಿ ಕುಡಿಯುವುದಿದೆ. ನಾವೂ ಕುಡಿಯೋಣ, ಇರಲಿ. ನಮ್ಮ ಅಚ್ಚಕನ್ನಡದಲ್ಲಿ ಮೊಸರಿನ ರಸ ಅನ್ನಬಹುದಾಗಿದೆ, ಎಲ್ಲರೂ ಕುಡಿಯಬಹುದಾದ ಈ ರಸವನ್ನು ಚೆಲ್ಲದಿರಿ. ಹಾಲಿನ ಉತ್ಪನ್ನವಾದ ಈ ರಸವನ್ನು ತಂಪುಪೆಟ್ಟಿಗೆಯಲ್ಲಿ ಇರಿಸಿ ನಾಲ್ಕಾರು ದಿನ ಬಳಸಬಹುದು. ಕುಡಿಯಲು ಇಷ್ಟವಾಗದಿದ್ದರೆ ಚಪಾತಿ ಹಿಟ್ಟು ಕಲಸಿಕೊಳ್ಳಿ, ಮೃದುವಾದ ಚಪಾತಿಗಳನ್ನು ಪಡೆಯಿರಿ.

ಹಾಲಿನ ಘನವನ್ನು ಒಂದು ನಾನ್ ಸ್ಟಿಕ್ ತಪಲೆಗೆ ಸುರುವಿ, ಅಷ್ಟೇ ಅಳತೆಯ ಸಕ್ಕರೆ ಬೆರೆಸಿ ಇಂಡಕ್ಷನ್ ಸ್ಟವ್ ಮೇಲೆ ಇಟ್ಟು ಕುದಿಸುವುದು.
ಮರದ ಸಟ್ಟುಗದಲ್ಲಿ ತಿರುವುತ್ತಾ ಇದ್ದಂತೆ,
ಸಕ್ಕರೆ ಕರಕರಗಿ ನೀರಾಗಿ,
ಕುದಿಕುದಿದು ಸಾಂದ್ರವಾಗಿ,
ಹೆಚ್ಚೆಂದರೆ ಹತ್ತು ನಿಮಿಷದಲ್ಲಿ,
ಗಟ್ಟಿ ಕಲ್ಲಿನಂತಾಗುವ ಮೊದಲೇ ಕೆಳಗಿಳಿಸಿ,
ಇನ್ನೊಂದು ತಟ್ಟೆಗೆ ವರ್ಗಾಯಿಸಿ ಆರಲು ಬಿಡುವುದು.
ಚೂರಿಯಲ್ಲಿ ಗೆರೆ ಎಳೆದು ಕತ್ತರಿಸಿ ತಿನ್ನುವುದು.
ಎರಡು ದಿನ ಸಂಜೆಯ ಚಹಾ ಪಾನಕ್ಕೆ ದೊರೆಯಿತು ರಸಗಟ್ಟಿ!


          

Sunday 26 August 2018

ಜೀಗುಜ್ಜೆಯ ಸಿಹಿ





“ ಇದು ಬೆಳೆದಿದ್ದು ಅತಿಯಾಯ್ತು, ಹಣ್ಣಾಗಿದೆ, ಸಾಂಬಾರ್ ಮಾಡಲಿಕ್ಕೆ ನಾಲಾಯಕ್… “ ಎಂದರು ಗೌರತ್ತೆ, ಅಡುಗೆಮನೆಯಲ್ಲಿದ್ದ ಏಕಮಾತ್ರ ಜೀಗುಜ್ಜೆ ಅವರ ಮಾತಿನ ಧಾಳಿಗೆ ಇನ್ನೂ ಮೆತ್ತಗಾಯಿತು.

“ ಹೋಗಲಿ, ಬಿಸಾಡಿದ್ರಾಯ್ತು, ಕೊದಿಲ್, ಮೇಲಾರ, ಪಲ್ಯ, ಪೋಡಿ ಎಲ್ಲ ಮಾಡಿ ತಿಂದಾಯ್ತಲ್ಲ. “
“ ಹಲ್ವ ಮಾಡು, ಸಂಜೆಯ ತಿಂಡಿಗಾದೀತು… “
“ ಜೀಗುಜ್ಜೆಯ ಹಲ್ವವೇ, ನಂಗೊತ್ತಿಲ್ಲಪ್ಪ… “
“ ಬಾಳೆಹಣ್ಣು, ಹಲಸಿನಹಣ್ಣು ಹಲ್ವ ಮಾಡುವ ಕ್ರಮದಲ್ಲೇ ಇದನ್ನೂ ಮಾಡುವುದು. “
“ ಮೊದಲೇ ಹೇಳಬಾರದಿತ್ತೇ! ಜೀಗುಜ್ಜೆಯ ಸಿಹಿತಿಂಡಿ ಮಾಡಲಿಕ್ಕಾಗುವುದಿಲ್ಲ ಅಂತ ಬ್ಲಾಗಿನಲ್ಲಿ ಬರೆದಾಗಿದೆಯಲ್ಲ... “
“ ಅದಕ್ಕೇನಂತೆ, ಈವಾಗ ಗೊತ್ತಾಯ್ತು ಅಂತ ಬರೆದ್ಬಿಡು… “ ಗೌರತ್ತೆಯ ಉಪಸಂಹಾರದೊಂದಿಗೆ ನಾವು ಈಗ ಜೀಗುಜ್ಜೆಯ ಹಲ್ವ ತಿನ್ನುವವರಿದ್ದೇವೆ.

ಈಗಾಗಲೇ ಮೇಲೆ ವರ್ಣಿಸಿದಂತಹ ಜೀಗುಜ್ಜೆಯ ಸಿಪ್ಪೆ ಹಾಗೂ ಒಳಗಿನ ನಿರುಪಯುಕ್ತ ತೊಟ್ಟಿನ ಭಾಗವನ್ನು ಬೇರ್ಪಡಿಸಿ, ಮೃದುವಾದ ತಿರುಳನ್ನು ಸಂಗ್ರಹಿಸಿ.

ಒಂದು ಲೋಟ ಜೀಗುಜ್ಜೆಯ ತಿರುಳು ದೊರೆಯಿತು.
ದಪ್ಪ ತಳದ ಬಾಣಲೆ ಒಲೆಗೇರಿಸಿ.
ನಾಲ್ಕು ಚಮಚ ತುಪ್ಪ ಎರೆದು ಜೀಗುಜ್ಜೆಯನ್ನು ಬೇಯಿಸಿ, ನೀರು ಹಾಕಲೇಬಾರದು, ತುಪ್ಪದ ಶಾಖದಲ್ಲಿ ಹಣ್ಣಾದ ಜೀಗುಜ್ಜೆ ಬೇಯಲಿ. ಬಹು ಬೇಗನೇ ಬೇಯುವಂತಹುದು, ಅತ್ತ ಇತ್ತ ಹೋಗದಿರಿ.
ಸೌಟಾಡಿಸುತ್ತ ಇದ್ದ ಹಾಗೆ ತುಪ್ಪವನ್ನೂ ತುಸು ತುಸುವೇ ಎರೆಯಿರಿ, ಹಲ್ವಕ್ಕೆ ತುಪ್ಪ ಕಡಿಮೆಯಾಗಬಾರದು.
ಜೀಗುಜ್ಜೆ ಬೆಂದಿದೆ,
ಒಂದು ಲೋಟ ಸಕ್ಕರೆ ಹಾಕುವುದು,
ಸಕ್ಕರೆ ಕರಗಲಿ,
ಏಲಕ್ಕಿ ಗುದ್ದಿ ಇಟ್ಟು,
ದ್ರಾಕ್ಷಿ ಗೋಡಂಬಿ ತುಪ್ಪದಲ್ಲಿ ಹುರಿದು, ಹಲ್ವ ತಳ ಬಿಟ್ಟು ಬರುವಾಗ ಹಾಕುವುದು.
ಸೌಟಿನಲ್ಲಿ ಚೆನ್ನಾಗಿ ತಿರುವಿ ತುಪ್ಪ ಸವರಿದ ತಟ್ಟೆಗೆ ವರ್ಗಾಯಿಸಿ.
ಆರಿದ ನಂತರ ತುಂಡು ಮಾಡಲು ಬರುವಂತಿದ್ದರೆ ಕತ್ತರಿಸಿ, ಇಲ್ಲವೇ, ಹಾಗೇನೇ ಚಮಚದಲ್ಲಿ ತೆಗೆದು ತಿನ್ನಿ.
ಹಬ್ಬಕ್ಕೊಂದು ಸಿಹಿ ಆಯ್ತು ಅನ್ನಿ.


        



Saturday 18 August 2018

ಸುರುಳೆ ದೋಸೆ




ಮಧ್ಯಾಹ್ನದ ರಸದೂಟಕ್ಕಾಗಿ ಅಡುಗೆಯ ಸಿದ್ಧತೆ ನಡೆದಿದೆ, ಅನ್ನ ಮಾಡಿಟ್ಟು ಆಯ್ತು. ತೆಂಗಿನಕಾಯಿ ತುರಿದಿದ್ದೂ ಆಯ್ತು, ಹಲಸಿನ ಹಪ್ಪಳ ಇರುವಾಗ ಟೊಮ್ಯಾಟೋ ಸಾರು ಒಂದಿದ್ದರೆ ಸಾಕು, ಪಪ್ಪಾಯಿ ಹಣ್ಣಾಗಿ ಕುಳಿತಿದೆ, ರಸಾಯನ ಮಾಡಿದ್ರೆ ಹೇಗೆ? ತಿಂದ ಅನ್ನವೂ ಸಲೀಸಾಗಿ ಒಳಗ್ಹೋದೀತು, ಹಾಗೇನೇ ತಿನ್ನಲೊಪ್ಪದವರಿಗೆ ಇದುವೇ ಸುಲಭದ ಉಪಾಯ. ತೆಂಗಿನಕಾಯಿ ಎಲ್ಲವೂ ತುರಿಯಲ್ಪಟ್ಟಿತು, ಕಾಯಿಹಾಲು ಆಗಬೇಡವೇ…

ಅದೇ ಹೊತ್ತಿಗೆ ಪಕ್ಕದ ಮನೆಯಿಂದ ನಮ್ಮಕ್ಕ ಕೂಗಿ ಕರೆದಳು, “ ಅಡುಗೆ ಆಯ್ತಾ ನಿಂದು? “
“ ಇನ್ನೂ ಇಲ್ಲ… “
“ ಈಗ ಬಂದೆ.. “ ಬರುವಾಗ ತಟ್ಟೆ ತುಂಬ ಜೀಗುಜ್ಜೆ ಪಲ್ಯ, ಬಟ್ಟಲು ತುಂಬ ಪಾಯಸ, ಅದೂ ಬೆರಟಿ ಪಾಯಸ ಬಂದಿತು. ಅವಳಿಗೂ ಮನೆ ಮಕ್ಕಳು ಬೆಂಗಳೂರಿನಿಂದ ಬಂದಿದ್ದಾರೆ, ಸಂಭ್ರಮದ ವಾತಾವರಣವನ್ನು ಹೀಗೆ ಹಂಚಿಕೊಳ್ಳುವಂತಾಯಿತು.

ಈವಾಗ ನನ್ನ ಪಪ್ಪಾಯ ರಸಾಯನ ಮೂಲೆಗೆ ಒತ್ತರಿಸಲ್ಪಟ್ಟಿತು. ಟೊಮ್ಯಾಟೋ ಸಾರು ಮಾಡಿ ಇಡುವಲ್ಲಿಗೆ ನನ್ನ ಅಡುಗೆ ಮುಗಿಯಿತು.

ಊಟವೂ ಆಯ್ತು ಅನ್ನಿ, ಆದ್ರೆ ತೆಂಗಿನಕಾಯಿ ತುರಿದಿಟ್ಟಿದ್ದೇನೆ, ಅದಕ್ಕೇನು ಗತಿಗಾಣಿಸಲಿ ಎಂದು ಚಿಂತೆ ಕಾಡಲಾರಂಭವಾಯಿತು. ಇರಲಿ ಎಂದು ಎರಡು ದೊಡ್ಡ ಚಮಚ ಮೆಂತೆ ನೀರಿನಲ್ಲಿ ಹಾಕಿಟ್ಟೆ. ಎರಡು ಲೋಟ ದೋಸೆ ಅಕ್ಕಿಯೂ ( ಬೆಳ್ತಿಗೆ ಅಕ್ಕಿ ) ನೀರು ತುಂಬಿಕೊಂಡಿತು.

ಯಾವ ಮಾದರಿಯ ದೋಸೆಯನ್ನು ನನ್ನ ಅಳತೆ ಸಾಮಗ್ರಿಯಿಂದ ಮಾಡಬಹುದೆಂಬ ಘನಚಿಂತನೆಯೊಂದಿಗೆ ಕಡಂಬಿಲ ಸರಸ್ವತಿಯವರ ಪಾಕಪುಸ್ತಕದ ಪುಟಗಳನ್ನು ತಿರುವಿ ಹಾಕಿದಾಗ, ‘ ಸುರುಳೆ ದೋಸೆ ‘ ಎಂಬ ಹೆಸರು ಹೊತ್ತ ದೋಸೆ ದೊರೆಯಿತು. ಇದಕ್ಕೆ ಒಂದು ಪಾವು ಅವಲಕ್ಕಿಯೂ ಬೇಕಾಗಿದೆ.

ಅವಲಕ್ಕಿಯೇನೋ ಇದೆ, ಸಂಜೆಯ ಚಹಾದೊಂದಿಗೆ ಮೆಲ್ಲಲು ಬೇರೇನೂ ದಿಢೀರ್ ತಿನಿಸು ಸಿಗದಿದ್ದರೆ ಅವಲಕ್ಕಿ ತಿನಿಸು ಬೇಗನೆ ಆಗುವಂತಹುದು. ಇಂತಹ ಆಪತ್ಬಾಂಧವ ಅವಲಕ್ಕಿಯನ್ನು ದೋಸೆ ಇಡ್ಲಿ ಹಿಟ್ಟುಗಳಿಗೆ ಹಾಕಿ ವ್ಯರ್ಥ ಮಾಡಲೇಕೆ ಎಂಬ ಸಿದ್ಧಾಂತ ನನ್ನದು.

ಅವಲಕ್ಕಿಯ ಬದಲು ಹೊದಳು ( ಅರಳು ) ಹಾಕೋಣ. ಮೊನ್ನೆ ತಾನೇ ನಾಗರಪಂಚಮಿಯ ಬಾಬ್ತು ನಾಗಬನದಲ್ಲಿ ತಂಬಿಲ ಸೇವೆ ನಡೆದಿತ್ತಾಗಿ, ಉಳಿಕೆಯಾದ ಹೊದಳು ಒಂದು ಸೇರು ಆಗುವಷ್ಟು ಇದೆ. ಅಕ್ಕಿಯ ಅಳತೆಯಷ್ಟೇ ಹೊದಳು ತೆಗೆದಿರಿಸಿದ್ದಾಯಿತು.

ಸಂಜೆಯಾಗುತ್ತಲೂ ದೋಸೆಗಾಗಿ ಹಿಟ್ಟು ಸಿದ್ಧ ಪಡಿಸುವ ವೇಳೆ,  

ನೆನೆದ ಮೆಂತೆ ಹಾಗೂ ತುರಿದಿಟ್ಟ ತೆಂಗಿನ ತುರಿ ( ಒಂದು ಲೋಟ ತುರಿ ಇರಬೇಕು ) ಅರೆಯಿರಿ. ನುಣ್ಣಗಾದಾಗ ತೆಗೆಯಿರಿ.
ಅಕ್ಕಿಯನ್ನು ತೊಳೆದು ಅರೆಯಿರಿ, ನುಣ್ಣಗಾದಾಗ, ಹೊದಳನ್ನು ತುಸು ನೀರಿನಲ್ಲಿ ನೆನೆಸಿ ಅಕ್ಕಿ ಹಿಟ್ಟಿಗೆ ಬೆರೆಸಿ ಇನ್ನೊಮ್ಮೆ ಮಿಕ್ಸಿ ಯಂತ್ರವನ್ನು ತಿರುಗಿಸಿ ಅರೆದು ತೆಗೆಯಿರಿ.
ಎರಡೂ ಹಿಟ್ಟುಗಳನ್ನು ಕೂಡಿಸಿ, ರುಚಿಗೆ ಉಪ್ಪು ಹಾಗೂ ಲಿಂಬೆ ಗಾತ್ರದ ಬೆಲ್ಲ ಬೆರೆಸಿ ಮುಚ್ಚಿ ಇಡುವುದು.
ಮಾರನೇ ದಿನ ಹಿಟ್ಟು ಹುದುಗು ಬಂದಿರುತ್ತದೆ.
ಹಿಟ್ಟು ಹುಳಿ ಬಂದ ಪ್ರಮಾಣವನ್ನು ನೋಡಿಕೊಂಡು ಒಂದು ಸೌಟು ಹಾಲು ಯಾ ಒಂದು ಸೌಟು ಮೊಸರು ಎರೆಯಬೇಕು, ಯೀಸ್ಟ್ ಯಾ ಸೋಡಾ ಹುಡಿ ಹಾಕುವ ರಗಳೆ ನಮಗೆ ಬೇಡ. ನನ್ನ ಅಡುಗೆಮನೆಯಲ್ಲಿ ಅದಕ್ಕೆ ಜಾಗ ಇಲ್ಲ.
ತವಾ ಬಿಸಿಯೇರಿದಾಗ,
ದೋಸೆ ಹಿಟ್ಟನ್ನು ವೃತ್ತಾಕಾರದಲ್ಲಿ ಎರೆದು,
ತೆಳ್ಳಗೆ ಹರಡಲಿಕ್ಕಿಲ್ಲ,  
ಒಂದು ಬದಿ ಬೆಂದ ನಂತರ,
ಮೇಲಿನಿಂದ ತುಪ್ಪ ಎರೆದು,
ಕವುಚಿ ಹಾಕಿ,
ಹೊಂಬಣ್ಣ ಬಂದಾಗ ತೆಗೆದು,
ಒಂದರ ಮೇಲೊಂದರಂತೆ,
ಮೂರು ನಾಲ್ಕು ದೋಸೆ ಪೇರಿಸಿಟ್ಟಲ್ಲಿ
ಸುರುಳೆ ದೋಸೆಯೆಂಬ ಸೆಟ್ ದೋಸೆ ಬಂದಿತಲ್ಲ!

ಚಟ್ಣಿ ಹಾಗೂ ಜೇನುಬೆಲ್ಲ
ಮೊಸರು ಇದ್ದರಂತೂ
ಸೊಗದ ಸವಿ...

“ ಅಹಹ! ಬಿಸಿ ಫಿಲ್ಟರ್ ಕಾಫಿ ಪಕ್ಕದಲ್ಲಿರತಕ್ಕದ್ದು… “ ಗೌರತ್ತೆಯ ಚೆನ್ನುಡಿ ಬಂದಿತು.


         



Saturday 11 August 2018

ಪೆಲತ್ತರಿಯ ಪುಲಾವ್





ಹಲಸಿನ ಸೊಳೆಗಳನ್ನು ಆಯ್ದು ಇಡುವಾಗ ಬೇಳೆಗಳನ್ನು ಬಿಸಾಡುವುದಕ್ಕಿಲ್ಲ, ತೆಗೆದಿರಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ನನ್ನ ಉಪಯೋಗಕ್ಕೆ ಬಾರದಿದ್ದರೂ ಕಲ್ಯಾಣಿ ಇದನ್ನು ಒಯ್ಯುವಾಕೆ, ಬೇಳೆಗಳನ್ನು ಭದ್ರವಾಗಿ ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟೂ ಕಾಪಾಡಿಕೊಳ್ಳಬಹುದು ಎಂಬ ಗುಟ್ಟನ್ನು ಅವಳು ಪ್ಲಾಸ್ಟಿಕ್ ಚೀಲಗಳ ಆಗಮನದೊಂದಿಗೇ ಕಂಡುಕೊಂಡಿದ್ದಳು. ಮಳೆಗಾಲದ ಆಟಿ ತಿಂಗಳಲ್ಲಿ ಹಲಸಿನಬೇಳೆಯ ತಿನಿಸುಗಳನ್ನು ಮಾಡಿ ತಿನ್ನಬೇಕು ಎಂದು ರೂಢಿಯೂ ಇದೆ. ಇದಕ್ಕೆ ಕಾರಣವಿಲ್ಲದಿಲ್ಲ. ಬಿರುಸಾಗಿ ಮಳೆ ಹುಯ್ಯುತ್ತಿರುವಾಗ, ಕೂಲಿಕಾರ್ಮಿಕರಿಗೆ ಕೆಲಸವಿಲ್ಲ, ದುಡ್ಡುಕಾಸು ಕೈಯಲ್ಲಿ ಇಲ್ಲ. ಒಂದು ಹೊತ್ತಿನ ಊಟ ಮಾಡಬೇಕಾದರೆ ಗದ್ದೆಯ ಕೊಯಿಲು ಮುಗಿದು ಭತ್ತ ಅಕ್ಕಿಯಾಗಿ ಸಿಗುವ ತನಕ ಉಪವಾಸವೇ ಗತಿ. ಅಂತಹ ಸಂದರ್ಭದಲ್ಲಿ ಜೋಪಾನವಾಗಿ ಇಟ್ಟಂತಹ ಹಲಸಿನಬೇಳೆ, ನಮ್ಮ ಆಡುಮಾತು ತುಳುವಿನಲ್ಲಿ ‘ ಪೆಲತ್ತರಿ ‘ ಆಹಾರವಸ್ತು. ಈ ಪೆಲತ್ತರಿಯಿಂದ ಬಗೆಬಗೆಯ ಖಾದ್ಯಗಳನ್ನು ಮಾಡಬಲ್ಲವರು ನಾವು. ಪಲ್ಯ, ಗಸಿ, ಕೂಟು, ರೊಟ್ಟಿ, ವಡೆ ಸಾಲದುದಕ್ಕೆ ಹೋಳಿಗೆಯ ಹೂರಣವನ್ನೂ ಹಲಸಿನಬೇಳೆಯಿಂದಲೇ ಮಾಡುವ ಪಾಕತಜ್ಞರು ನಮ್ಮಲ್ಲಿದ್ದಾರೆ.

“ ಹೋಳಿಗೆ ಆಗುತ್ತದಾದರೆ ಪರೋಟಾ ಕೂಡಾ ಮಾಡಬಹುದಲ್ಲ... “
“ ಆಗದೇನು, ಪರೋಟವೂ ಮಾಡಿಕೋ… ಆದ್ರೆ ಜಾಸ್ತಿ ತಿನ್ಬೇಡ. “ ಎಚ್ಚರಿಸುವ ಸರದಿ ಗೌರತ್ತೆಯದು.
“ ಏನೇ ತಿಂಡಿ ತಿನಿಸು ಮಾಡಿದ್ರೂನೂ ಹಿತಮಿತವಾಗಿ ತಿನ್ನಲೂ ತಿಳಿದಿರಬೇಕು. “
“ ಹಂಗಂತೀರಾ, ಆದ್ರೆ ಹಿಂದಿನಕಾಲದಲ್ಲಿ ಹಲಸಿನಬೇಳೆ ತಿಂದೇ ಜೀವನ… ಅಂತ ಕತೇನೂ ಚೆನ್ನಾಗಿ ಹೇಳ್ತೀರಲ್ಲ! “
“ ಅದನ್ನೆಲ್ಲ ವಿವರವಾಗಿ ತಿಳಿಯಬೇಕಿದ್ದರೆ ನಿನ್ನ ಚೆನ್ನಪ್ಪನನ್ನೇ ಕೇಳಿಕೋ… “ ಎಂದರು ಗೌರತ್ತೆ.

ಹತ್ತು ಗಂಟೆಯಾಯಿತೇ, ಚೆನ್ನಪ್ಪನ ಚಹಾ ವೇಳೆ. “ ಹೌದ ಚೆನ್ನಪ್ಪ, ನಿನ್ನೆ ಮಾಡಿದ ತಿಂಡಿ ಇತ್ತಲ್ಲ, ಅದೇ ಕಡಿಯಕ್ಕಿ ಉಪ್ಪಿಟ್ಟು, ಅದನ್ನು ಹಲಸಿನಬೇಳೆ ಹಾಕಿಯೂ ಮಾಡಬಹುದಲ್ಲವೇ? “ ನನ್ನ ಪ್ರಶ್ನೆಯ ಬಾಣ.
“ ಅಕ್ಕಿ ಯಾಕೆ, ಬರೇ ಪೆಲತ್ತರಿ ( ಹಲಸಿನಬೇಳೆ ) ಬೇಯಿಸೂದು, ಆ ಮೇಲೆ ಪುಡಿ ಪುಡಿ ಮಾಡೂದು, ಬೆಲ್ಲ ಕಾಯಿತುರಿ ಹಾಕಿ ತಿನ್ನೂದು ಅಷ್ಟೇಯ… “
“ ಹಾಗಾದ್ರೆ ಅಕ್ಕಿ ಇಲ್ಲದೇ ತಿಂಡಿ ಆಗುತ್ತೇ… “
“ ನಾನು ಚಿಕ್ಕೋನಿದ್ದಾಗ ಅಕ್ಕಿ ಎಲ್ಲಿಂದ ಬರಬೇಕು, ಹೀಗೇ ಪೆಲತ್ತರಿಯೇ ನಮ್ಮ ಹೊಟ್ಟೆಗೆ, ಅದೂ ಇಲ್ಲವಾದರೆ ಹಲಸಿನ ಹಣ್ಣನ್ನು ಇರುವಲ್ಲಿಂದ ಕೇಳಿ ತಂದು ಬೇಯಿಸಿ ತಿನ್ನುವುದು, ಅಕ್ಕಿಯೇ ಇಲ್ಲ ಆಗ… “
ಹಲಸಿನ ಬೇಳೆಯು ಪೆಲತ್ತರಿ ಹೇಗಾಯ್ತು ಎಂದು ಈಗ ಅರ್ಥವಾಯಿತು, ಪೆಲಕ್ಕಾಯಿತ ಅರಿ ಎಂದು ಬಿಡಿಸಿ ಓದಿದಾಗ ತುಳು ಭಾಷೆಯ ಈ ಶಬ್ದಾರ್ಥ ಹಲಸಿನಕಾಯಿಯ ಅಕ್ಕಿ ಎಂದಾಯಿತು. ಹಲಸಿನಕಾಯಿ ಒಳಗಿರುವ ಬೇಳೆಯನ್ನು ಅಕ್ಕಿಯಾಗಿ ಉಪಯೋಗಿಸುವ ಮರ್ಮ ಇಲ್ಲಿದೆ.

ಹೌದು, ಬೇಸಾಯದ ಗದ್ದೆ ಕಟಾವ್ ಆಗುವ ತನಕ, ಕೊಯ್ಲು ಕೆಲಸ ಆದ ನಂತರ ಗದ್ದೆಯ ಯಜಮಾನ ಕೂಲಿ ಮಜೂರಿ ಎಂದು ಭತ್ತ ಅಳೆದು ಕೊಡುವ ತನಕ, ಕೂಲಿ ಕೆಲಸ ಮಾಡಿ ಜೀವನ ಸಾಗಿಸುವ ಮಂದಿ ಅಕ್ಕಿಯನ್ನು ಕಾಣಲಿಕ್ಕಿಲ್ಲ ಎಂದು ನನ್ನ ಅಪ್ಪ ಎಂದೋ ಹೇಳಿದ್ದು ನೆನಪಾಯಿತು.

“ ಹೌದಂತೆ, ಕೊಯ್ಲು ಆದ ನಂತರ ಗದ್ದೆಯಲ್ಲಿ ಬಿದ್ದ ಭತ್ತವನ್ನೂ ಆಯ್ದು ಕೊಂಡೊಯ್ಯುತ್ತಿದ್ದರಂತೆ… “ ಅನ್ನುವಲ್ಲಿಗೆ ನಮ್ಮ ಮಾತುಕತೆ ಮುಗಿಯಿತು.

ಈಗ ಹೇಗೂ ಆಷಾಢಮಾಸ, ಹಲಸಿನಬೇಳೆಯನ್ನು ಹೇಗೋ ಒಂದು ವಿಧವಾಗಿ ತಿನ್ನೋಣವೆಂದು ಪುಲಾವ್ ಎಂಬ ಜನಪ್ರಿಯ ತಿಂಡಿಯನ್ನು ಆಯ್ಕೆ ಮಾಡಿದ್ದಾಯಿತು.

7 - 8 ಹಲಸಿನಬೇಳೆಗಳು. ಹೊರಸಿಪ್ಪೆಯನ್ನು ತೆಗೆದು, ಚೂರಿಯಲ್ಲಿ ಒಂದೇಗಾತ್ರದ ತುಂಡುಗಳನ್ನಾಗಿಸಿ, ಕುಕ್ಕರಿನಲ್ಲಿ ಬೇಯಿಸಿ ಇಡುವುದು.
ಒಂದು ಲೋಟ ಸೋನಾಮಸೂರಿ ಅಕ್ಕಿಯಿಂದ ಉದುರುದುರಾದ ಅನ್ನ ಮಾಡಿ ಇಡುವುದು.
ಅನ್ನ ಮಾಡುವಾಗಲೇ ಉಪ್ಪು ಹಾಕಿಕೊಳ್ಳಿ, ಅನ್ನ ಮುದ್ದೆಗಟ್ಟುವುದಿಲ್ಲ ಹಾಗೂ ಪುನಃ ಉಪ್ಪು ಹಾಕದಿದ್ದರಾಯಿತು.
ತರಕಾರಿಗಳ ಆಯ್ಕೆ ನಿಮ್ಮದು. ಬೇಗನೆ ಬೇಯುವಂತಹ ನೀರುಳ್ಳಿ, ಟೊಮ್ಯಾಟೋ, ಬೀನ್ಸ್, ಕ್ಯಾರೆಟ್ ಇತ್ಯಾದಿಗಳನ್ನು ಅಗತ್ಯವಿದ್ದ ಹಾಗೆ ಒಂದೇ ಗಾತ್ರದಲ್ಲಿ ಕತ್ತರಿಸಿ ಇಡುವುದು.
ಹಸಿರು ಬಟಾಣಿ ಯಾ ಇನ್ಯಾವುದೇ ಕಾಳು ಈ ದಿನ ಬೇಡ, ನಾವು ಹಲಸಿನಬೇಳೆ ಹಾಕುವವರಿದ್ದೇವೆ.

ಬಾಣಲೆಗೆ ಅಡುಗೆಯ ಎಣ್ಣೆ ಯಾ ತುಪ್ಪ ಎರೆದು,
ಲವಂಗ ಚಕ್ಕೆ ಚೂರುಗಳನ್ನು ಹಾಕಿ,
ಜೀರಿಗೆ, ಕಾಳುಮೆಣಸಿನ ಹುಡಿಯನ್ನೂ ಹಾಕಿ ಹುರಿಯಿರಿ.

ನೀರುಳ್ಳಿ, ಜಜ್ಜಿ ಇಟ್ಟ ಶುಂಠಿ ಬೆಳ್ಳುಳ್ಳಿ ಹಾಕಿ, ಹಸಿವಾಸನೆ ಹೋಗುವ ತನಕ ಬಾಡಿಸಿ.
ಟೊಮ್ಯಾಟೋ ಹಾಗೂ ಇತರ ತರಕಾರಿಗಳನ್ನು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಉದುರಿಸಿ, ಸೌಟಾಡಿಸಿ.
ಈ ಹಂತದಲ್ಲಿ ತುಪ್ಪ ಸಾಕಾಗದಿದ್ದರೆ ಇನ್ನಷ್ಟು ಎರೆಯಿರಿ.
ಬೇಯಿಸಿಟ್ಟ ಹಲಸಿನಬೇಳೆ ಹಾಕಿ,
ನಿಮ್ಮ ರುಚಿಗನುಸಾರ ಪುಲಾವ್ ಮಸಾಲೆ ಹುಡಿ ಉದುರಿಸಿ.
ಮಾಡಿಟ್ಟ ಅನ್ನ, ಒಂದು ಹಿಡಿ ಕಾಯಿತುರಿ ಬೆರೆಸಿ, ಕೊತ್ತಂಬರಿ ಸೊಪ್ಪಿನ ಅಲಂಕರಣ ಇರಲಿ.
ಬಿಸಿಬಿಸಿಯಾಗಿ ಬಡಿಸಿಕೊಂಡು ತಿನ್ನಿರಿ.
ಕೂಡಿಕೊಳ್ಳಲು ದಪ್ಪ ಮೊಸರು ಸಾಕು,
“ದಪ್ಪ ಮೊಸರಿಗೆ ಒಗ್ಗರಣೆ ಹಾಕಿ, ಸ್ವಲ್ಪ ಉಪ್ಪು… “ ಗೌರತ್ತೆಯ ವಗ್ಗರಣೆ ಬಂದಿತು.

         



Friday 3 August 2018

ಹಲಸು - ಹೊಸ ಫಲ



“ ಇದು ಆ ಮರದಲ್ಲಿ ಒಂದೇ ಆಗಿದ್ದು. “
“ ಹೊಸ ಫಲ ಬಂತು ನೋಡು… “ ನನಗೆ ಕರೆ.
“ ಹಣ್ಣು ಆದ ನಂತರವೇ ತುಳುವನೋ, ಬರಿಕ್ಕೆಯೋ ಎಂದು ತಿಳಿದೀತು. “
ಹಲಸಿನಕಾಯಿ ಹಣ್ಣಾಯಿತು.
ಯಥಾಪ್ರಕಾರ ಚೆನ್ನಪ್ಪನ ಸುಪರ್ದಿಯಲ್ಲಿ ಹಲಸು ಹೋಳಾಗಿ ಬಿಡಿಸಲ್ಪಟ್ಟಿತು.
“ ಇದು ಅರೆ ತುಳುವನಂತಿದೆ... “
“ ಅರೆ ಬರಿಕ್ಕೆ ಎಂದರೆ ಸರಿ… “
ಮಾವಿನಹಣ್ಣುಗಳಲ್ಲಿ ವೈವಿಧ್ಯತೆ ಇರುವಂತೆ ಹಲಸು ಕೂಡಾ ವೈವಿಧ್ಯತೆಯ ಆಕರ್ಷಣೆಯನ್ನು ಹೊಂದಿದೆ. ಬಣ್ಣದಲ್ಲಿ, ರುಚಿಯಲ್ಲಿ, ಆಕೃತಿಯಲ್ಲಿ, ಸುವಾಸನೆಯಲ್ಲಿ ಒಂದು ಹಲಸಿನಂತೆ ಇನ್ನೊಂದಿಲ್ಲ.
ಮಳೆಗಾಲ ಅಲ್ವೇ, ಯಾವುದೇ ಜಾತಿಯ ಹಲಸನ್ನೂ ಹಾಗೇನೇ ಗುಳುಂಕ್ ಎಂದು ತಿನ್ನಲು ಧೈರ್ಯ ಬಾರದು.
ಕಡ್ಲೇ ಹಿಟ್ಟು, ಅಕ್ಕಿಹಿಟ್ಟು ಕೂಡಿದ ಹಿಟ್ಟಿನಲ್ಲಿ ಮುಳುಗಿಸಿ ಪೋಡಿ ಕರಿದು ತಿಂದೆವು.

ಉಳಿದ ಹಣ್ಣಿನ ಗತಿಯೇನಾಯ್ತು?
ಅದನ್ನೂ ಕೊಟ್ಟಿಗೆ ಮಾಡಿ ಇಡೂದು, ಎರಡು ದಿನ ತಿನ್ನಲಿಕ್ಕೆ ಬೇಕಾದಷ್ಟಾಯಿತು ಅನ್ನಿ..

“ ಹೌದೂ, ಅರೆ ಬಕ್ಕೆ ಯಾ ಅರೆ ಬರಿಕ್ಕೆ ಎಂದರೇನು? “
ಅರೆ ಬಕ್ಕೆಯನ್ನು ತುಳುವ ಹಣ್ಣು ಅನ್ನುವಂತಿಲ್ಲ, ಬಕ್ಕೆ ಹಣ್ಣು ಕೂಡಾ ಇದಲ್ಲ, ಒಂದು ವಿಧವಾದ ಮಿಶ್ರ ತಳಿ ಅನ್ನಬೇಕಾಗುತ್ತದೆ. ನಾವೇನೂ ಕಸಿ ಕಟ್ಟಿ ಈ ಹಣ್ಣನ್ನು ಪಡೆದವರೂ ಅಲ್ಲ, ಇದು ನಿಸರ್ಗದ ವಿಸ್ಮಯ ಅಂದರೆ ಸರಿ ಹೋದೀತು.

ನಾರು ಪದಾರ್ಥದಿಂದ ಕೂಡಿ, ಪಿಚಿಪಿಚಿಯಾಗಿ, ಬೇಳೆ ಬಿಡಿಸಿ ತಿನ್ನಲು ಕಷ್ಟ ಅಂತಿರುವ ಸೊಳೆ ( ತೊಳೆ ) ಇರುವಂತಾದ್ದು ತುಳುವ ಹಲಸು. ಇದರ ಕೊಟ್ಟಿಗೆ, ಪಾಯಸ ಮಾಡಬೇಕಿದ್ದರೆ ನಾರು ತೆಗೆದು ರಸ ಸಂಗ್ರಹಿಸುವ ವಿಧಾನ ತಿಳಿದಿದ್ದರೆ ಮಾತ್ರ ತಿಂಡಿ ತಿನಿಸು ಮಾಡಿಕೊಳ್ಳಬಹುದು. ರಸ ಸಂಗ್ರಹಿಸುವ ಕ್ರಮವನ್ನು ಈ ಹಿಂದೆಯೇ ಬರೆದಿದ್ದೇನೆ. ಆಸಕ್ತರು ಹುಡುಕಿ ಓದಿರಿ.

ಬರಿಕ್ಕೆ ಯಾ ಬಕ್ಕೆ ಹಲಸಿನ ಸೊಳೆಗಳು ಕೋಮಲವಾಗಿದ್ದರೂ ಚಿಕ್ಕದಾಗಿ ಹೆಚ್ಚಿಕೊಳ್ಳುವ ಅನಿವಾರ್ಯತೆ ಇದೆ.

ಅರೆ ಬಕ್ಕೆ ಹಲಸಿನ ಸೊಳೆಗಳನ್ನು ಬಿಡಿಸಿಕೊಳ್ಳಲು ಏನೇ ತಕರಾರು ಇಲ್ಲ.
ತಿಂಡಿತಿನಿಸು ಮಾಡಿಕೊಳ್ಳಲು ಚಿಕ್ಕದಾಗಿ ಹೆಚ್ಚಿಕೊಳ್ಳಬೇಕಿಲ್ಲ.
ನಾರು ತೆಗೆಯಬೇಕಿಲ್ಲ, ರಸ ಸಂಗ್ರಹಣೆಯೂ ಬೇಡ.

ಈಗ ಅರೆ ಬಕ್ಕೆಯ ಕೊಟ್ಟಿಗೆ ಯಾ ಕಡುಬು ಯಾ ಇಡ್ಲಿ ಮಾಡಿದ್ದು ಹೇಗೆ?

2 ಲೋಟ ಕಡಿಯಕ್ಕಿ ( ನುಚ್ಚಕ್ಕಿ )
3 ಲೋಟ ಬೇಳೆ ಬಿಡಿಸಿದ ಹಲಸಿನ ಸೊಳೆಗಳು
ಅರ್ಧ ಕಡಿ ತೆಂಗಿನ ತುರಿ
2 ಅಚ್ಚು ಬೆಲ್ಲ
ರುಚಿಗೆ ಉಪ್ಪು

ಅರ್ಧ ಗಂಟೆ ನೆನೆಸಿದ ಕಡಿಯಕ್ಕಿಯನ್ನು ತೊಳೆದು ಮಿಕ್ಸಿ ಜಾರ್ ಒಳಗೆ ಅದರ ಸಾಮರ್ಥ್ಯಕ್ಕನುಸಾರ ತುಂಬಿಸಿ ಅರೆಯಿರಿ, ನೀರು ಹಾಕಲೇ ಬಾರದು, ಹಲಸಿನ ಸೊಳೆಗಳಲ್ಲಿರುವ ರಸವೇ ಸಾಕು. ಕಡಿಯಕ್ಕಿಯಾಗಿರುವುದರಿಂದ, ಮೃದುವಾದ ಸೊಳೆಗಳೂ ಇರುವುದರಿಂದ ಅರೆಯುವ ಕೆಲಸ ಕ್ಷಣ ಮಾತ್ರದಲ್ಲಿ ಮುಗಿಯಿತು, ಇಡ್ಲಿ ಹಿಟ್ಟಿನ ಸಾಂದ್ರತೆಯ ಹಿಟ್ಟು ನಮ್ಮದಾಯಿತು.  

ಅಟ್ಟಿನಳಗೆಯಲ್ಲಿ ( ಇಡ್ಲಿ ಪಾತ್ರೆ ) ನೀರು ಕುದಿಯುತ್ತಿರಲಿ.
ಬಾಡಿಸಿದ ಬಾಳೆ ಎಲೆಗಳನ್ನು ಒರೆಸಿ.
ಒಂದೇ ಅಳತೆಯಲ್ಲಿ ಹಿಟ್ಟು ತುಂಬಿಸಿ, ಕ್ರಮದಲ್ಲಿ ಬಾಳೆ ಎಲೆಗಳನ್ನು ಹಿಟ್ಟು ಹೊರ ಚೆಲ್ಲದಂತೆ ಮಡಚಿಟ್ಟು, ಅಟ್ಟಿನಳಗೆಯೊಳಗೆ ಸೂಕ್ತವಾಗಿ ಹೊಂದಿಸಿ ಇಡುವುದೂ ಒಂದು ಕಲೆ ಎಂದೇ ತಿಳಿಯಿರಿ.
ಹಬೆಯಲ್ಲಿ ಇಪ್ಪತ್ತರಿಂದ ಇಪ್ಪತೈದು ನಿಮಿಷ ಬೇಯಿಸುವಲ್ಲಿಗೆ ಅರೆ ಬಕ್ಕೆ ಹಲಸಿನ ಹಣ್ಣಿನ ಕಡುಬು, ಇಡ್ಲಿ, ಕೊಟ್ಟಿಗೆ ಸಿದ್ಧವಾಗಿದೆ.
ಬಿಸಿ ಇರುವಾಗಲೇ ತುಪ್ಪ ಸವರಿ ತಿನ್ನಿ.  
ರಾತ್ರಿಯೂಟಕ್ಕೂ ಸೊಗಸು, ಮುಂಜಾನೆ ತಿಂಡಿ ಬೇರೆ ಮಾಡಬೇಕಿಲ್ಲ.


            



Friday 27 July 2018

ಉಪ್ಪುಸೊಳೆಯ ದೋಸೆ




ದೋಸೆಗಾಗಿ ತೋಟದಿಂದ ತಂದ ಹಲಸಿನಕಾಯಿ ದೊಡ್ಡದಿತ್ತು. ಎಲ್ಲವನ್ನೂ ಆಯ್ದು ಇಟ್ಟಿದ್ದ ಚೆನ್ನಪ್ಪ. ಎರಡು ಪಾವು ಅಕ್ಕಿಗೆ ಅಗತ್ಯವಿರುವ ಸೊಳೆಗಳನ್ನು ತೆಗೆದಿರಿಸಿ, ಉಳಿದ ಸೊಳೆಗಳನ್ನು ದೊಡ್ಡದಾದ ಜಾಡಿಯಲ್ಲಿ ತುಂಬಿ ಉಪ್ಪು ಬೆರೆಸಿ ಇಟ್ಕೊಂಡಿದ್ದೆ. ನಾಲ್ಕಾರು ದಿನಗಳ ಅಡುಗೆಗೆ ಬೇಕಾದಷ್ಟಾಯಿತು. ಒಂದು ದಿನ ಪಲ್ಯ, ಮತ್ತೊಂದು ದಿನ ಸಾಂಬಾರು, ಬೋಳುಹುಳಿ ಎಂಬಿತ್ಯಾದಿ ಖಾದ್ಯಗಳನ್ನು ಮಾಡಿ ಮುಗಿಸುವುದು ನಮ್ಮ ಡ್ಯೂಟಿ. ಈ ದಿನ ದೋಸೆ ಮಾಡಿ ಈ ದಿಢೀರ್ ಉಪ್ಪುಸೊಳೆಯನ್ನು ಮುಗಿಸೋಣ. ನಾಳೆ ಇನ್ನೊಂದು ಹಲಸಿನಕಾಯಿಯನ್ನು ತೋಟದಿಂದ ತರಿಸೋಣ, ಹೇಗೆ ಐಡಿಯಾ?

ಜಾಡಿಯಲ್ಲಿ ಸಿಕ್ಕಿದ್ದು ನಾಲ್ಕು ಹಿಡಿಯಾಗುವಷ್ಟು ಸೊಳೆಗಳು, ಬೇಕಾದಷ್ಟಾಯ್ತು ಅನ್ನಿ.
ನೀರೆರೆದು ಇಡುವುದು, ಉಪ್ಪು ಬಿಟ್ಕೊಳ್ಳಲಿ.
ನೀರು ಬಸಿದು ಮಿಕ್ಸಿಯಲ್ಲಿ ತಿರುಗಿಸುವುದು, ನುಣ್ಣಗಾಗಲು ತುಸು ನೀರು ಎರೆಯುವುದು.

ಒಂದು ಹಿಡಿ ಕಾಯಿತುರಿ,
ಮುಷ್ಠಿ ತುಂಬ ಕರಿಬೇವು,
ತುಸು ಜೀರಿಗೆ,
ಚಿಟಿಕೆ ಕಾಳುಮೆಣಸಿನ ಹುಡಿ
ಒಂದೆರಡು ಹಸಿಮೆಣಸು, ಗಾಂಧಾರಿ ಮೆಣಸು ಕೂಡಾ ಆದೀತು.
ಮಿಕ್ಸಿಯ ಪುಟ್ಟ ಜಾರ್ ಒಳಗೆ ತುಂಬಿಸಿ ನೀರು ಹಾಕದೆ ಎರಡು ಸುತ್ತು ತಿರುಗಿಸಿ ಇಡುವುದು.

ಎರಡು ಲೋಟ ಅಕ್ಕಿ ಹುಡಿ ಅಳೆದು, ಮೇಲಿನ ಸಾಮಗ್ರಿಗಳನ್ನು ಬೆರೆಸಿ, ಅಗತ್ಯದ ನೀರು ಎರೆದು ದೋಸೆ ಹಿಟ್ಟಿನ ಸಾಂದ್ರತೆಗೆ ತಂದು, ಉಪ್ಪು ಹಾಕೋದೇ ಬೇಡ.
ತೆಳ್ಳಗಾಗಿ ದೋಸೆ ಎರೆದು, ಬೆಲ್ಲದ ಪುಡಿ ಕೂಡಿಕೊಂಡು ತಿನ್ನುವುದು.

“ರೊಟ್ಟಿ ಮಾಡುವುದಿದೆ, ಬಾಳೆ ಎಲೆ ಆಗಬೇಕಲ್ಲ. “
“ ರೊಟ್ಟಿ ತಟ್ಟುವ ಬದಲು ದೋಸೆ ಎರೆಯಬಹುದಲ್ಲ… “
ಹೀಗೆ ದೋಸೆ ಮಾಡಬಹುದೆಂಬ ಸೂಚನೆ ಕೊಟ್ಟಿದ್ದು ನಮ್ಮ ಚೆನ್ನಪ್ಪ.

               



Sunday 22 July 2018

ಬಣ್ಣದ ಸಾರು





ಮುಂಜಾನೆ ಎಂಟು ಗಂಟೆಗೆ ಮಾಯವಾದ ವಿದ್ಯುತ್ ಅಡುಗೆ ಶುರು ಮಾಡೋಣಾಂದ್ರೆ ಕಾಣಿಸ್ತಾ ಇಲ್ಲ. ತೆಂಗಿನಕಾಯಿ ತುರಿಯದೆ ಅಡುಗೆ ಆಗಬೇಕಾಗಿದೆ.

ನಿನ್ನೆ ನೆಂಟರು ಬಂದಿರಬೇಕಾದರೆ ಇರಲೀ ಎಂದು ಏಳೆಂಟು ಪುನರ್ಪುಳಿ ಓಡು ( ಹಣ್ಣಿನ ಒಣಸಿಪ್ಪೆ ) ನೀರಿನಲ್ಲಿ ಹಾಕಿರಿಸಿದ್ದು ಇದ್ದಿತು. ಮಳೆಗಾಲವಾದುದರಿಂದ ನಮ್ಮ ನೆಂಟರಿಗೆ ಶರಬತ್ತು ಬೇಕಾಗಲಿಲ್ಲ, ಬೆಚ್ಚಗೆ ಚಹಾ ಕುಡಿದ್ರೂ ಅನ್ನಿ.

ಪುನರ್ಪುಳಿ ಚೆನ್ನಾಗಿ ಬಣ್ಣ ಬಿಟ್ಟು ನೀರು ಕೆಂಪು ಕೆಂಪಾಗಿದ್ದಿತು. ಇದನ್ನು ಸಾರು ಮಾಡಿಕೊಳ್ಳೋಣ, ಆ ಹೊತ್ತಿಗೆ ಕರೆಂಟ್ ಬಂದರೂ ಬಂದೀತು. ಪುನರ್ಪುಳಿ ದ್ರಾವಣ ಅಗತ್ಯವಿದ್ದಷ್ಟು ನೀರು ಕೂಡಿಸಲ್ಪಟ್ಟು ಕುದಿಯತೊಡಗಿತು. ರುಚಿಗೆ ಉಪ್ಪು ಬಿದ್ದಿತು. ಹಿತವಾದ ರುಚಿಗಾಗಿ ಲಿಂಬೆ ಗಾತ್ರದ ಬೆಲ್ಲವೂ ಹುಡಿ ಮಾಡಲ್ಪಟ್ಟು ಸೇರಿಕೊಂಡಿತು.

ಒಗ್ಗರಣೆ ಸಟ್ಟುಗಕ್ಕೆ ಮೂರು ಚಮಚ ತುಪ್ಪ,
ಏಳೆಂಟು ಸಿಪ್ಪೆ ತೆಗೆದು ತುಂಡು ಮಾಡಲ್ಪಟ್ಟ ಬೆಳ್ಳುಳ್ಳಿ,
ಒಂದು ಚಮಚ ಸಾಸಿವೆ,
ನಾಲ್ಕಾರು ಒಣಮೆಣಸಿನ ಚೂರುಗಳು,
ಕರಿಬೇವು ಸೇರಿಕೊಂಡು ಘಮಘಮಿಸುವ ಒಗ್ಗರಣೆ ಕುದಿಯುತ್ತಿರುವ ಪುನರ್ಪುಳಿ ರಸಕ್ಕೆ ಬಿದ್ದಿತು.
ಸ್ಟವ್ ಆರಿಸಲಾಯಿತು,
ಸಾರು ಸಿದ್ಧವಾಯಿತು.

“ ಊಟ ಮಾಡೋಣ ಬನ್ನಿ, “ ಹಲಸಿನ ಹಪ್ಪಳ ಕರಿದಿಟ್ಟಿದ್ದು ಇದೆ, ಮಾವಿನ ಮಿಡಿ, ಬೇಕಿದ್ದರೆ ಲಿಂಬೆಹುಳಿ, ಸಾಲದಿದ್ದರೆ ಕರಂಡೆ ಉಪ್ಪಿನಕಾಯಿಗಳು ಟೇಬಲ್ ಮೇಲೆ ಇರಿಸಲ್ಪಟ್ಟುವು.

ದಪ್ಪ ಮೊಸರು ಇರುವಾಗ, ಈ ಕೆಂಪು ಬಣ್ಣದ ಸಾರು ಬಿಸಿ ಬಿಸಿ ಅನ್ನದ ಮೇಲೆ ಸುರಿದು, ಮೊಸರು ಬೆರೆಸಿ ತಿನ್ನುವಾಗಿನ ಸುಖ…
ಬಾಲ್ಯದ ನೆನಪನ್ನು ತಂದಿತು.

          


Saturday 14 July 2018

ಹಲಸಿನಹಣ್ಣಿನ ಅಪ್ಪಂ




ಮಳೆಗಾಲ ಬಂತಂದ್ರೆ ಹಲಸಿನಹಣ್ಣು ಹಸಿಯಾಗಿ ತಿನ್ನಲು ಹಿಡಿಸದು, ಏನಿದ್ದರೂ ಕೊಟ್ಟಿಗೆ, ಗೆಣಸಲೆ ಇತ್ಯಾದಿಗಳೊಂದಿಗೆ ಒದ್ದಾಟ. ಯಾವುದೂ ಬೇಡ ಅನ್ನಿಸಿದಾಗ ಮಿಕ್ಸಿಯಲ್ಲಿ ತಿರುಗಿಸಿ, ಬೆಲ್ಲ ಬೆರೆಸಿ, ಬಾಣಲೆಗೆ ಸುರಿದು ಕಾಯಿಸಿ ಯಾ ಬೇಯಿಸಿ ಇಟ್ಟು, ಒಂದೆರಡು ದಿನ ಕಳೆದು ಪುರುಸೂತ್ತು ಆದಾಗ, ಹಲಸಿನಹಣ್ಣು ತಿನ್ನಬೇಕು ಎಂಬ ಚಪಲ ಮೂಡಿದಾಗ, ಬೇಕೆನಿಸಿದ ತಿಂಡಿ, ಪಾಯಸ ಅಥವಾ ಹಾಗೇನೇ ಚಮಚದಲ್ಲಿ ತೆಗೆದು ತಿನ್ನಬಹುದು. ಈ ಥರ ಬೇಯಿಸಿಟ್ಟ ಹಲಸಿನಹಣ್ಣಿನ ಮುದ್ದೆಯನ್ನು ತಂಪು ಪೆಟ್ಟಿಗೆಯಲ್ಲಿಯೂ ಇಟ್ಟು ಉಪಯೋಗಿಸಬಹುದು.

ಹೀಗೆ ದಾಸ್ತಾನು ಇಟ್ಟ ಹಲಸಿನಹಣ್ಣಿನ ಮುದ್ದೆ ಒಂದು ಲೋಟ ಆಗುವಷ್ಟು ಉಳಿದಿದೆ, ಸಂಜೆಯ ಚಹಾಪಾನಕ್ಕೊಂದು ತಿಂಡಿ ಆಗಬೇಡವೇ, ಸುಟ್ಟವು ಯಾ ಮುಳ್ಕ ಮಾಡೋಣ. ತುಪ್ಪ ಧಾರಾಳ ಇದ್ದಿತು, “ ಗುಳಿಯಪ್ಪ ಆದೀತು. “ಎಂದರು ಗೌರತ್ತೆ. “ ಸುಟ್ಟವು ತುಂಬಾ ಎಣ್ಣೆ ಕುಡಿಯುತ್ತೆ, ಕೆಮ್ಮು ದಮ್ಮು ಶುರು ಆಗ್ಬಿಟ್ರೆ ಕಷ್ಟ.. “ ಎಂಬ ವಾದವೂ ಮುಂದೆ ಬಂದಿತು. “ ತುಪ್ಪ ಆರೋಗ್ಯಕ್ಕೆ ಒಳ್ಳೆಯದು. “

“ ಆಯ್ತೂ.. “ ದಿನವೂ ಅಡುಗೆಮನೆಯಲ್ಲಿ ಕೆಲಸವೇನೂ ಇಲ್ಲದ ಗುಳಿಯಪ್ಪದ ಕಾವಲಿ ಶುಭ್ರವಾಗಿ ಒಳಗೆ ಬಂದಿತು.

ಒಂದು ಲೋಟ ಅಕ್ಕಿ ಹಿಟ್ಟು,
ಒಂದು ಲೋಟ ಹಲಸಿನ ಹಣ್ಣಿನ ಮುದ್ದೆ,
ಚೆನ್ನಾಗಿ ಬೆರೆಸಿ, ಒಲೆಯ ಮೇಲಿಟ್ಟು ಸ್ವಲ್ಪ ಹೊತ್ತು ಕೈಯಾಡಿಸಿ,  
ಹಿಟ್ಟಿನ ಸಾಂದ್ರತೆ ಇಡ್ಲಿ ಹಿಟ್ಟಿನಂತೆ ಗುಳಿಗಳಿಗೆ ಎರೆಯುವಂತಿರಬೇಕು.
ಸ್ವಲ್ಪ ಹೊತ್ತು ಬಿಸಿಯೇರಿದ ಹಿಟ್ಟು ಅರೆ ಬೆಂದಂತಿರಬೇಕು.
 ಹಸಿಹಿಟ್ಟನ್ನು ಬಿಸಿ ಮಾಡುವ ಅವಶ್ಯಕತೆಯೇನಿದೆ?
ಅಪ್ದದ ಒಳಪದರವೂ ಸುಖವಾಗಿ ಬೇಯಬೇಕಲ್ಲವೇ, ಅದಕ್ಕಾಗಿ ಈ ಉಪಾಯ ನಮ್ಮದು.
ಹಲಸಿನ ಹಣ್ಣು ಹೇಗೂ ಮೊದಲೇ ಬೇಯಿಸಲ್ಪಟ್ಟಿದೆ, ಬೆಲ್ಲವನ್ನೂ ಹಾಕಲಾಗಿದೆ,
ಬೇಕಿದ್ದರೆ ಏಲಕ್ಕಿ ಗುದ್ದಿ ಹಾಕಿಕೊಳ್ಳಬಹುದು.
ಸುವಾಸನೆಗಾಗಿ ಎಳ್ಳು, ಅರ್ಧ ಚಮಚ ಇರಲಿ.
ರುಚಿಗೆ ತಕ್ಕಷ್ಟು ಉಪ್ಪು ಇರಬೇಕು.

ಅಪ್ಪದ ಗುಳಿಗಳಿಗೆ ತುಪ್ಪ ಎರೆದು ಬಿಸಿಯೇರಲು ಗ್ಯಾಸ್ ಉರಿಯ ಮೇಲೆ ಇರಿಸುವುದು.
ಬಿಸಿಯಾದ ನಂತರವೇ ಗುಳಿಗಳಿಗೆ ಹಿಟ್ಟು ತುಂಬಿ, ಮುಚ್ಚಿ ಬೇಯಿಸಿ.
ನಿಧಾನ ಗತಿಯಲ್ಲಿ ಬೇಯಲು ಉರಿ ಚಿಕ್ಕದಾಗಿಸಿ, ಕರಟಿದಂತಾಗಬಾರದು.
ಮಗುಚಿ ಹಾಕಿ, ಪುನಃ ತುಪ್ಪ ಎರೆಯಬೇಕು.
 ಎರಡೂ ಬದಿ ಬೆಂದಾಗ ತೆಗೆಯಿರಿ.
ಬಿಸಿ ಬಿಸಿ ನಾಲಿಗೆ ಸುಟ್ಟೀತು, ಆರಿದ ನಂತರ ತಿನ್ನಿ. ಚಹಾ ಇರಲಿ.
ಇದೀಗ ಹಲಸಿನ ಹಣ್ಣಿನ ಅಪ್ಪ ಮಾಡಿದ್ದಾಯಿತು.

ನಮ್ಮ ಓದುಗರಿಗಾಗಿ ಮುಳ್ಕ ಯಾ ಸುಟ್ಟವು ಮಾಡುವ ವಿಧಾನವನ್ನೂ ಬರೆಯೋಣ.
ಅಪ್ಪ ಮಾಡಲು ಹಿಟ್ಟು ಹೇಗೆ ಮಾಡಿರುತ್ತೇವೆಯೊ ಅದೇ ಹಿಟ್ಟು ಸಾಕು.
ಬಾಣಲೆಯಲ್ಲಿ ಅಡುಗೆಯ ಎಣ್ಣೆ ಯಾ ತೆಂಗಿನೆಣ್ಣೆ ಎರೆದು,
ಎಣ್ಣೆ ಬಿಸಿಯೇರಿದಾಗ ಕೈಯಲ್ಲಿ ಲಿಂಬೆ ಗಾತ್ರದ ಹಿಟ್ಟು ತೆಗೆದುಕೊಂಡು ಎಣ್ಣೆಗೆ ಇಳಿಸುತ್ತಾ ಬನ್ನಿ, ಒಂದೇ ಬಾರಿ ಎಣ್ಣೆಯಲ್ಲಿ ಹಿಡಿಸುವಷ್ಟು ಹಾಕಿ.
ಒಂದು ಬದಿ ಬೆಂದಾಗ ಕಣ್ಣುಸಟ್ಟುಗದಲ್ಲಿ ಕವುಚಿ ಹಾಕಿ.
ನಂತರ ತೆಗೆದು ಜಾಲರಿ ತಟ್ಟೆಗೆ ಹಾಕಿರಿಸಿ, ಆರಿದ ನಂತರ ತಿನ್ನಿ.
ಈ ಎರಡೂ ಮಾದರಿಯ ಸಿಹಿ ತಿನಿಸುಗಳನ್ನು ಒಂದೆರಡು ದಿನ ಇಟ್ಟುಕೊಳ್ಳಬಹುದು.


        






Thursday 5 July 2018

ಬಾಳೆಕುಂಡಿಗೆ ಪಲ್ಯ




      

ಎರಡು ಘನಗಾತ್ರದ ಬಾಳೆಕುಂಡಿಗೆಗಳು ಬಾಳೆಗೊನೆಯಲ್ಲಿ ತೊನೆದಾಡುತ್ತ ಇದ್ದಂತೆ ಹರಿತವಾದ ಕತ್ತಿಯಲ್ಲಿ ತುಂಡರಿಸಲ್ಪಟ್ಟು ಅಡುಗೆಮನೆಗೆ ಬಂದುವು.

“ ಬಾಳೆಕುಂಡಿಗೆ ಅಂದ್ರೇನೂ? “ ಕೇಳಿಯೇ ಕೇಳ್ತೀರಾ,
ಬಾಳೆಗೊನೆ ಹಾಕಿದೆ ಅಂದಾಗ ಮೊದಲಾಗಿ ಹೂವಿನ ಅವತರಣ, ಗೊನೆ ಬೆಳೆದಂತೆಲ್ಲ ಬಾಳೆ ಹೂ ತನ್ನ ಪಕಳೆಗಳನ್ನು ಉದುರಿಸುತ್ತ ಗೊನೆಯ ತುದಿಯಲ್ಲಿ ತೂಗಾಡುತ್ತ ಇರುವ ಹಂತದಲ್ಲಿ, ಬಾಳೆಕಾಯಿ ಪೂರ್ಣಪ್ರಮಾಣದ ಬೆಳವಣಿಗೆ ಹೊಂದುವ ಮೊದಲೇ ಕತ್ತರಿಸುವ ವಾಡಿಕೆ. ಹೂವನ್ನು ತೆಗೆದ ನಂತರ ಕಾಯಿಗಳು ದೊಡ್ಡ ಗಾತ್ರದಲ್ಲಿ ಬರುತ್ತವೆ ಎಂದು ನಮ್ಮ ಚೆನ್ನಪ್ಪನ ಲೆಕ್ಕಾಚಾರ. ಇರಲಿ, ಬಾಳೆಹೂ ಯಾ ಬಾಳೆಕುಂಡಿಗೆ ಬಂದಿದೆ ಅಡುಗೆ ಮಾಡಲಿಕ್ಕೆ. ನಮ್ಮ ಊರ ಆಡುಮಾತು ತುಳುವಿನಲ್ಲಿ ಕುಂಡಿಗೆ ಅನ್ನುವುದಕ್ಕಿಲ್ಲ, ಈ ಹೂವನ್ನು ಪೂಂಬೆ ಎಂದೆನ್ನಬೇಕಾಗಿದೆ.

“ ಬಾಳೆಕುಂಡಿಗೆಯಿಂದ ಏನೇನು ಅಡುಗೆ ಮಾಡಬಹುದು? “

ಪತ್ರೊಡೆ ಮಾಡೋಣಾ ಎಂದು ಹಾಗೇನೇ ಇಟ್ಕೊಂಡಿದ್ದೆ, ದಿನವೂ ಹಲಸಿನ ಖಾದ್ಯಗಳನ್ನೇ ತಿನ್ನುತ್ತಿರುವಾಗ ಈ ಹೂವು ಮೂಲೆಯಲ್ಲಿದ್ದಿತು, ಪತ್ರೊಡೆ ಹೋಗಲಿ, ಮಾಡುವ ಮನಸ್ಸಿದ್ದರೆ ದೋಸೆ, ರೊಟ್ಟಿ, ಬಜ್ಜಿ, ಪೋಡಿ, ಬೋಂಡಾ, ಪರಾಠಾ ಇನ್ನೂ ಏನೇನೋ ಮಾಡಬಹುದು…. ಈ ದಿನ ಪಲ್ಯ ಮಾಡೋಣ.

ಹೂವಿನ ಬೆಳೆದ ಎಸಳುಗಳನ್ನು ಕಿತ್ತು, ಒಳತಿರುಳಿನ ಭಾಗ ಮೃದುವಾಗಿರುತ್ತದೆ.
ಬೆಳ್ಳಗಿನ ಕೋಮಲ ಹೂವನ್ನು ಚಿಕ್ದದಾಗಿ ಹೆಚ್ಚಿಟ್ಟು, ನೀರಿನಲ್ಲಿ ಹಾಕಿರಿಸುವುದು.  
ಬಾಳೆಯ ಒಗರು ತುಸುವಾದರೂ ನೀರಿನಲ್ಲಿ ಬಿಟ್ಕೊಳ್ಳಲಿ.
ನೀರಿನಲ್ಲಿ ಹಾಕಿರಿಸದಿದ್ದರೆ, ಕಪ್ಪು ಕಪ್ಪಾದ ಒಗರೊಗರಾದ ಪಲ್ಯ ನಿಮ್ಮದು.
ಮೊದಲಾಗಿ ನೀರು ಬಸಿದು ಅರ್ಧ ಲೋಟ ಸಿಹಿ ಮಜ್ಜಿಗೆ ಬೆರೆಸಿ ಇಡುವುದು.
ಮಜ್ಜಿಗೆಯಿಂದಾಗಿ ಪಲ್ಯದ ಬಣ್ಣ ಆಕರ್ಷಕವಾಗಿರುತ್ತದೆ.
ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಬೇಯಿಸುವುದು.  
ಹೂವಲ್ಲವೇ, ಬೇಗನೆ ಬೇಯುವ ವಸ್ತು.

ಈಗ ಮಸಾಲೆ ಸಿದ್ಧಪಡಿಸೋಣ.
ಒಂದು ಹಿಡಿ ಹಸಿ ತೆಂಗಿನತುರಿ,
ಒಂದು ಚಮಚ ಜೀರಿಗೆ,
ಬೇಕಿದ್ದರೆ ಮಾತ್ರ ಒಂದೆರಡು ಹಸಿಮೆಣಸು, ಈ ಪಲ್ಯಕ್ಕೆ ಖಾರ ಅತಿಯಾಗಬಾರದು.
ನೀರು ಹಾಕದೆ ಅರೆಯುವುದು.
ಮಜ್ಜಿಗೆ ಇಲ್ಲದವರು ಮಸಾಲೆಗೆ ನೆಲ್ಲಿಕಾಯಿ ಗಾತ್ರದ ಹುಣಸೆಹುಳಿ ಹಾಕಬೇಕು, ಲಿಂಬೆ ರಸವೂ ಆದೀತು.

ಬಾಣಲೆಯಲ್ಲಿ ಒಗ್ಗರಣೆಗಿಟ್ಟು,
ಸಾಸಿವೆ ಸಿಡಿದಾಗ,
ಕರಿಬೇವು ಬೀಳಿಸಿ,
ಚಿಟಿಕೆ ಅರಸಿಣ,
ಚಿಟಿಕೆ ಗರಂ ಮಸಾಲಾ ಪುಡಿ ಹಾಕುವುದು.
ಬೇಯಿಸಿಟ್ಟ ಬಾಳೆಕುಂಡಿಗೆಯನ್ನು ಬಾಣಲೆಗೆ ಸುರುವಿ,
ರುಚಿಕರವಾಗಲು ಉಪ್ಪು ಹಾಗೂ ಬೆಲ್ಲ ಹಾಕುವುದು. ಸಿಹಿ ತುಸು ಜಾಸ್ತಿ ಆದರೆ ಉತ್ತಮ. ಒಂದು ಅಚ್ಚು ಬೆಲ್ಲ ಹಾಕಬಹುದಾಗಿದೆ.
ಅರೆದಿಟ್ಟ ತೆಂಗಿನ ಅರಪ್ಪನ್ನು ಕೂಡಿಸಿ, ಚೆನ್ನಾಗಿ ಬೆರೆಸಿ, ಪಲ್ಯದ ನೀರಿನಂಶ ಆರುವ ತನಕ ಒಲೆಯಲ್ಲಿಡುವುದು.
ಅನ್ನ, ಚಪಾತಿಯೊಂದಿಗೆ ಸವಿಯಿರಿ.

ತರಕಾರಿ ಮಾರುಕಟ್ಟೆಯಲ್ಲಿ ಬಾಳೆಕುಂಡಿಗೆಯೂ ಸಿಗುತ್ತದೆ, ನಾರುಯುಕ್ತವಾಗಿರುವ ಬಾಳೆಹೂವು ಜೀರ್ಣಾಂಗಗಳ ಕಾರ್ಯಕ್ಷಮತೆಯನ್ನು ವೃದ್ಧಿಸಿ, ಜಠರಾಂಗದ ಶುದ್ಧೀಕರಣ ಕ್ರಿಯೆಯನ್ನು ಸಮರ್ಪಕವಾಗಿಸುತ್ತದೆ ಎಂಬುದು ನಮ್ಮ ಹಿರಿಯರ ನಂಬಿಕೆಯಾಗಿದೆ. ಹಾಗೇನೇ ಅತಿಯಾಗಿ ಬೊಜ್ಜು ಬೆಳೆಸಿಕೊಂಡಿರುವ ಮಂದಿಗೂ ಇದು ಉತ್ತಮ ಆಹಾರ, ತೂಕ ನಿಯಂತ್ರಣಕ್ಕೂ ಸಹಕಾರಿ ಎಂದು ತಿಳಿದಿರಲಿ. ಉಳಿದಂತೆ ಬಾಳೆಹಣ್ಣಿನ ಜೀವಪೋಷಕ ಸತ್ವಗಳೂ ಬಾಳೆಕುಂಡಿಗೆಯಲ್ಲಿ ಅಡಕವಾಗಿವೆ. ಇದರಲ್ಲಿ ಕೊಬ್ಬಿನಂಶ ಅತಿ ಕನಿಷ್ಠವಾಗಿದ್ದು, ಕ್ಯಾಲ್ಸಿಯಂ, ಖನಿಜಾಂಶಗಳನ್ನು ಹೊಂದಿರುವ ನಾರುಪದಾರ್ಥ ಇದಾಗಿದೆ. ಎಲ್ಲ ವಯೋಮಾನದವರಿಗೂ ಆಹಾರವಾಗಿ ಸೇವಿಸಲು ಯೋಗ್ಯ.

“ ಎಲ್ಲ ನಮೂನೆಯ ಬಾಳೆಕಾಯಿ ಹೂವು ಅಡುಗೆಗೆ ಆಗುವುದಿಲ್ಲಾ… “ ಎಂದು ರಾಗ ಎಳೆದರು ಗೌರತ್ತೆ, “ ನೇಂದ್ರ ಬಾಳೆಯ ಹೂವು ಫಸ್ಟ್ ಕ್ಲಾಸು, ಹಾಗೇ ಆ ಪಚ್ಚಬಾಳೆ ಮಾಡಿ ಬಿಟ್ಟೀಯ, ಕಹೀ ಅಂದ್ರೆ ಕಹಿ… ನಿನ್ನ ಪಲ್ಯ ತಿಪ್ಪೆರಾಶಿಗೆ ಎಸೆಯಬೇಕಾದೀತು. “
“ ಹ್ಞ, ಹೌದ! ಗೂತ್ತಾಯಿತು ಬಿಡಿ… “


        





Thursday 21 June 2018

ತುಳುವ ಹಣ್ಣಿನ ಹಲ್ವ

   


      


ಈ ಬಾರಿ ತುಳುವ ಹಲಸಿನ ಹಣ್ಣನ್ನು ತೋಟದಿಂದ ತಂದಿದ್ದೇ ಇಲ್ಲ. ಇತ್ತೂ, ಮರದಲ್ಲಿ ಅಡಿಯಿಂದ ಮುಡಿತನಕ. ಬಕ್ಕೆ ಹಲಸು ಇರುವಾಗ ಈ ಪಿಚಿಪಿಚಿ ಹಣ್ಣನ್ನು ಕೇಳೋರಿಲ್ಲ. ಆದರೂ ತೋಟದಲ್ಲಿರುವ ಫಲವಸ್ತುವನ್ನು ವರ್ಷಕ್ಕೊಮ್ಮೆಯಾದರೂ ತಿನ್ನಬೇಡವೇ, ಚೆನ್ನಪ್ಪನ ಮೂಲಕ ಒಂದು ತುಳುವನ ಹಣ್ಣನ್ನು ತರಿಸಿದ್ದೂ ಆಯ್ತು, ಇಡ್ಲಿ ಮಾಡಿ ತಿಂದೂ ಆಯ್ತು.

“ ಇಡ್ಲಿಯನ್ನು ಹೇಗೆ ಮಾಡಿದ್ದೂ? “ ಹುಬ್ಬೇರಿಸದಿರಿ. ವರ್ಷಗಳ ಹಿಂದೆಯೇ ಚಿತ್ರ ಸಹಿತ ವಿವರಣೆಯೊಂದಿಗೆ ಬರೆದಿರಿಸಿದ್ದೇನೆ. ಆಸಕ್ತರು ಹುಡುಕಿ ಓದಿರಿ.

ಈಗ ನಾವು ತುಳುವ ಹಲಸಿನ ಹಣ್ಣಿನಿಂದ ಹಲ್ವ ಮಾಡುವವರಿದ್ದೇವೆ.

ನಾರು ಅಧಿಕವಾಗಿರುವ ತುಳುವ ಹಲಸಿನ ಹಣ್ಣಿನ ರಸ ಮಾತ್ರ ಸಂಗ್ರಹಿಸಬೇಕಾಗಿದೆ. ಜಾಲರಿ ತಟ್ಟೆಯಲ್ಲಿ ಬೀಜಸಹಿತವಾಗಿ ಹಣ್ಣನ್ನು ಉಜ್ಜಿ ಉಜ್ಜಿ ರಸ ಸಂಗ್ರಹ ಆಯಿತು. ಅಂದಾಜು ಒಂದು ಲೀಟರ್ ರಸ ಸಿಕ್ಕಿತೂ ಅನ್ನಿ.

ಬಾಣಲೆಗೆ ಎರೆದು ಕುದಿಸುತ್ತಾ ಇರಬೇಕು, ಆಗಾಗ ಸೌಟು ಆಡುತ್ತಲಿರಬೇಕು.
ಸಾಕಷ್ಟು ಆರಿದೆ, ಹಲಸಿನ ರಸ ಹಿಟ್ಟಿನಂತಾಗಿದೆ, ಹಿಟ್ಟಿನ ಗಾತ್ರದಷ್ಟೇ ಬೆಲ್ಲ ಯಾ ಸಕ್ಕರೆ ಹಾಕಬೇಕು, ಬೆಲ್ಲ ಉತ್ತಮ.
ಬೆಲ್ಲವೂ ಕರಕರಗಿ, ಪಾಕದೊಂದಿಗೆ ಬೆರೆತಾಗ, ಒಂದು ಸೌಟು ತುಪ್ಪ ಎರೆಯಿರಿ, ಹಲ್ವ ಎಂಬ ಹೆಸರು ಕೊಡಬೇಡವೇ…
ಈ ಹಂತದಲ್ಲಿ ದ್ರಾಕ್ಷಿ, ಗೇರುಬೀಜ, ಯಾಲಕ್ಕಿ ಪುಡಿಗಳನ್ನು ಹಾಕಬೇಕು, ಇಲ್ಲದಿದ್ದರೂ ಬಾಧಕವಿಲ್ಲ.
ತುಪ್ಪವೂ ಈ ಘನಪಾಕದೊಂದಿಗೆ ಮಿಶ್ರಿತವಾಗಿ, ತಳ ಬಿಟ್ಟು ಬಂದಾಗ ಉರಿ ಆರಿಸಿ.
ಸಾಕಷ್ಟು ತಣಿದ ನಂತರ ತುಪ್ಪ ಸವರಿದ ತಟ್ಟೆಗೆ ವರ್ಗಾಯಿಸಿ.
ಚೆನ್ನಾಗಿ ಆರಿದ ಮೇಲೆ ಬೇಕಾದ ಆಕೃತಿಯಲ್ಲಿ ತುಂಡು ಮಾಡಿ ಡಬ್ಬದಲ್ಲಿ ತುಂಬಿಸಿ ಇಟ್ಕೊಳ್ಳಿ.
ಬಾಯಿಚಪಲವಾದಾಗ ತಿನ್ನಿ.
ಇದೇನೂ ಬೇಗ ಹಾಳಾಗುವಂತಾದ್ದಲ್ಲ.



        



Saturday 16 June 2018

ಹಲಸಿನ ಹಣ್ಣಿನ ಪೊಂಗಲ್




ವಿದ್ಯುತ್ ಸಂಪರ್ಕ ಇರಲಿಲ್ಲ, ಧಾರಾಕಾರ ಮಳೆ ಬೇರೆ. ಕತ್ತಲು ಕಳೆದು ಬೆಳಗಾಯ್ತು, ತಿಂಡಿ ಏನ್ಮಾಡ್ಲೀ… ಉಪ್ಪಿಟ್ಟೇ ಗತಿ, ತಪ್ಪಿದ್ರೆ ಅವಲಕ್ಕಿ ತಿನ್ನಬೇಕಷ್ಟೆ.  

ಕಡಿಯಕ್ಕಿ (ನುಚ್ಚಕ್ಕಿ ) ಇದೆ,  
ಒಂದು ಲೋಟ ನುಚ್ಚಕ್ಕಿ ತೊಳೆದು ಕುಕ್ಕರಿಗೆ ಹಾಕಿ,
 ಮೂರು ಲೋಟ ನೀರು ಎರೆದು,
 ರುಚಿಗೆ ತಕ್ಕಷ್ಟು ಉಪ್ಪು ಹಾಕಿ,
 ಒಂದು ಸೀಟಿ ಕೂಗಿಸಿ, ಕೆಳಗಿಳಿಸಿದ್ದೂ ಆಯ್ತು.

ಇನ್ನೀಗ ನೀರುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಕಾಯಿತುರಿ ಎಂದು ತಡಕಾಡಬೇಕಿದೆ,
ಥಟ್ ಎಂದು ನೆನಪಾಯಿತು,
ಹಲಸಿನಹಣ್ಣಿನ ಮುದ್ದೆ ಮಾಡಿಟ್ಟಿದ್ದೀನಲ್ಲ,
ಹೊಸರುಚಿಯ ಪ್ರಯೋಗ ಮಾಡಿಯೇ ಬಿಡೋಣ.

ಬಾಣಲೆಗೆ ಮೂರು ಚಮಚ ತುಪ್ಪ ಎರೆದಾಗ,
ಒಂದು ಚಮಚ ಜೀರಿಗೆ,
ಒಂದು ಚಮಚ ಕಾಳುಮೆಣಸು ಗುದ್ದಿ ಹಾಕಿದಾಗ,
ಬಿಸಿಯೇರಿ ಪರಿಮಳ ಬೀರಿದಾಗ,
ಒಂದು ಹಿಡಿ ತೆಂಗಿನತುರಿ ಬಿದ್ದಿತಾಗ,
ಸೌಟಾಡಿಸುತ್ತ ಇದ್ದಾಗ,
ಅರ್ಧ ಲೋಟ ಹಣ್ಣಿನ ಮುದ್ದೆ ಬಿದ್ದಿರಲು,
ಬೇಕಿದ್ದಷ್ಟು ನುಚ್ಚನ್ನ ಕೂಡಿರಲು
ಎದ್ದು ಬಂದಿತಲ್ಲ
ಹಲಸಿನ ಹಣ್ಣಿನ ಪೊಂಗಲ್!

ಮುಂಜಾನೆಯ ತಿಂಡಿ ಭಲೇ ಭರ್ಜರಿ ಆಗೇ ಹೋಯ್ತು.
ರಸಭರಿತ ಹೊಸರುಚಿಯನ್ನು ತಿನ್ನುತ್ತ, “ ಹಲಸಿನ ಹಣ್ಣಿನ ಕೊಟ್ಟಿಗೆ ಮಾಡಲು ತಿಳಿಯದವರಿಗೆ ಈ ತಿಂಡಿ ಇಷ್ಟವಾದೀತು. “ ಎಂದರು ಗೌರತ್ತೆ .

ನನ್ನ ಹಲಸಿನ ಹಣ್ಣಿನ ಮುದ್ದೆಯಲ್ಲಿ ಬೆಲ್ಲವೂ ಇದ್ದಿತು. ಸಿಹಿ ಬೇಕಿಲ್ಲದಿದ್ದರೆ ಬೆಲ್ಲ ಹಾಕದಿದ್ದರಾಯಿತು.
“ಮುದ್ದೆ ಅಂತ ಬರೆದದ್ದು ಎಲ್ಲರಿಗೂ ಅರ್ಥವಾಗಲಿಕ್ಕಿಲ್ಲ… “
“ ಅದಕ್ಕೇನ್ಮಾಡ್ಲೀ? “
“ ಹಲಸಿನಹಣ್ಣಿನ ಜಾಮ್ ಅಂದ್ರೆ ಸರಿ ಹೋದೀತು. “ ಗೌರತ್ತೆ ತಿದ್ದುಪಡಿಯನ್ನೂ ಸೂಚಿಸಿ ಕೊಟ್ಟರು.

          




         



Friday 8 June 2018

ಹಲಸಿನ ಹಣ್ಣು ಗೆಣಸಲೆ





“ ಹಲಸಿನ ಹಣ್ಣಿನದ್ದು ಕೊಟ್ಟಿಗೆ ಮಾಡಿದ್ದಾಯ್ತಲ್ಲ, ಇನ್ನೊಂದ್ಸಾರಿ ಗೆಣಸಲೆ ಮಾಡು ತಿಳೀತಾ… “. ಗೌರತ್ತೆಯ ಬಾಯಿಪಟಾಕಿ ಸಿಡಿಯಿತು.
“ ಗೆಣಸಲೆಗೆ ಕೆಲ್ಸ ಜಾಸ್ತಿ ಅಲ್ವ? “
“ ಹಾಗೇನೂ ಇಲ್ಲ, ಹೇಗೂ ಕೊಟ್ಟಿಗೆಗೆ ಬೆಲ್ಲ, ತೆಂಗು ಹಾಕಿಯೇ ಮಾಡ್ತೀಯ, ಗೆಣಸಲೆಗೆ ಒಳಗೆ ತುಂಬಿಸೂದು ಅಷ್ಟೇ. “
 ಹೌದಲ್ವೇ, ಪುರುಸೊತ್ತು ಸಿಕ್ಕಾಗ ಮಾಡಿಯೇ ಬರೆಯೋಣ.

ನಿನ್ನೆ ತಾನೇ ಹಲಸಿನಕಾಯಿ ಕೊಯ್ದು ತಂದಿಟ್ಟಿದ್ದಾನೆ ಚೆನ್ನಪ್ಪ, ಹಣ್ಣಾಗಲಿಕ್ಕೆ ಎರಡು ದಿನವಾದರೂ ಬೇಕು.

ಚೆನ್ನಾಗಿ ಹಣ್ಣಾದಾಗ ಚೆನ್ನಪ್ಪನೂ ಬಂದ, “ ಹಲಸಿನ ಹಣ್ಣು ತುಂಡು ಮಾಡಿ ಆಯ್ದು ಇಡು, ಹಾಗೇ ಅರ್ಧ ಹಣ್ಣು ನೀನೇ ತೆಗೆದುಕೋ…, ಮನೆಯಲ್ಲಿ ಮೊಮ್ಮಕ್ಕಳಿಗೆ ತಿನ್ನಲಿಕ್ಕಾಯ್ತು. “ ಎಲ್ಲವನ್ನೂ ನಾನೇ ಇಟ್ಕೊಂಡು ಏನ್ಮಾಡ್ಲಿ? ಹಲಸಿನ ಹಣ್ಣಿನ ವಿಲೇವಾರಿ ಆಯ್ತು.

“ ನಾಳೆ ಬೆಳ್ತಂಗಡಿಗೆ ಹೋಗುವುದಿದೆ, ಮದುವೆಯ ಊಟ… ಬೇಗ ಹೊರಡು, ಪಟ್ಟೆಸೀರೆ ಇವತ್ತೇ ಇಸ್ತ್ರಿ ಹಾಕಿ ಇಟ್ಟುಕೋ… ಎಲ್ಲವನ್ನೂ ನಾನೇ ಹೇಳಬೇಕಾ? “
“ ಹಾಗಿದ್ರೆ ಈ ಹಲಸಿನ ಹಣ್ಣಿನ ಕೊಟ್ಟಿಗೆ ಮಾಡೂದು ಬೇಡವೇ? “
“ ಏನು ಬೇಕಾದ್ರೂ ಮಾಡಿಕೋ, ನಾಳೆ ಬೇಗ ಹೊರಡು ಅಷ್ಟೇ… “

ಬಾಳೆ ಎಲೆ ಕೊಯ್ದು ಇಟ್ಟಿಲ್ಲ, ಮರೆಗುಳಿ ಚೆನ್ನಪ್ಪ. ಬಾಳೆಲೆ ಇದ್ದಿದ್ರೆ ಕೊಟ್ಟಿಗೆ ಮಾಡಿಟ್ಟು, ಮುಂಜಾನೆಯ ಟಿಫಿನ್ ಮುಗಿಸಿ ಹೊರಡೋದು ಸುಲಭ ಆಗ್ತಿತ್ತು. ಈಗ ಕತ್ತಲು ಆಗುತ್ತ ಬಂದಿದೆ, ಬಾಳೆಲೆಗಾಗಿ ತೋಟಕ್ಕೆ ಹೋಗಲು ಸೊಳ್ಳೆಕಾಟ ಹಾಗೂ ಹಂದಿಗಳ ಭಯ ಬೇರೆ.

ಹಲಸಿನ ಹಣ್ಣು ತಿಂದು ಮುಗಿಯದು,
ಮಿಕ್ಸಿಯಲ್ಲಿ ನೀರು ಹಾಕದೆ ರುಬ್ಬಿಟ್ಟು,
ಬಾಣಲೆಯಲ್ಲಿ ತುಂಬಿ ಒಲೆ ಮೇಲಿಟ್ಟು,
ರಪರಪನೆ ಸೌಟಾಡಿಸಿ,
ಓ, ಇದೀಗ ಬೆಂದ ಪರಿಮಳ ಬಂತಲ್ಲ,
ಹಲಸಿನ ಹಣ್ಣಿನ ಮುದ್ದೆ ಆಯ್ತು...
ಫೋಟೋ ತೆಗೆದಿರಿಸಲು ಮರೆತೇ ಹೋಯ್ತು.

ಮಾರನೇ ದಿನ ಉಪ್ಪಿಟ್ಟು ಹಾಗೂ ಹಲಸಿನ ಹಣ್ಣಿನ ಮುದ್ದೆಯ ಸಾಂಗತ್ಯದೊಂದಿಗೆ ಬ್ರೇಕ್ ಫಾಸ್ಟ್ ಗೆದ್ದಿತು.
“ ಬಾಳೆ ಎಲೆ ತಂದಿಡುತ್ತಿದ್ದರೆ ಕೊಟ್ಟಿಗೆ ತಿನ್ನಬಹುದಾಗಿತ್ತು, ಈಗ ಈ ಮುದ್ದೆಯ ರುಚಿ ನೋಡು. “ ಚೆನ್ನಪ್ಪನಿಗೂ ಮುದ್ದೆಯ ತಿನಿಸು ದೊರೆಯಿತು.
“ ಎಲೆಯಾ, ನೀವು ಹೇಳಲಿಲ್ಲ, ನಾನು ತರಲಿಲ್ಲ… “
“ ಚಿಂತೆಯಿಲ್ಲ, ಹೀಗೂ ತಿನ್ನಬಹುದು ಅಂತ ಗೊತ್ತಾಯ್ತಲ್ಲ. “

ಮಗನೊಂದಿಗೆ ಫೋನ್ ಸಂಭಾಷಣೆಯಲ್ಲಿ ತೊಡಗಿದ್ದ ನಮ್ಮವರು, “ ನಾಳೆ ಮಧು ಬರ್ತಿದಾನೆ. “ ಅನ್ನೋದೇ!
ಸರಿ ಹೋಯ್ತು, ಈಗ ಹಣ್ಣಿನ ಮುದ್ದೆಗೆ ಗೆಣಸಲೆಯ ರೂಪ ಕೊಡೋದೇ ಸೈ!

ಸಂಜೆಯಾಗುವ ಮೊದಲೇ ತೋಟದಿಂದ ಬಾಳೆ ಎಲೆಗಳನ್ನು ನಾನೇ ಕೊಯ್ದು ತಂದಿಟ್ಟೆ.
ಒಂದೇ ಗಾತ್ರದಲ್ಲಿ ಕತ್ತರಿಸಿ,
ಗ್ಯಾಸ್ ಜ್ವಾಲೆಯಲ್ಲಿ ಬಾಡಿಸಿ,
ಒಣ ಬಟ್ಟೆಯಲ್ಲಿ ಒರೆಸಿ ಬಾಳೆಲೆಗಳನ್ನು ಹೊಂದಿಸಿ ಇಟ್ಕಕೊಂಡಿದ್ದಾಯ್ತು.

ಎರಡು ಲೋಟ ಆಗುವಷ್ಟು ಹಲಸಿನ ಹಣ್ಣಿನ ಮುದ್ದೆ ಇದೆ.
ಎರಡು ಲೋಟ ಬೆಳ್ತಿಗೆ ಅಕ್ಕಿಯನ್ನು ಅಳೆದು, ನೀರಿನಲ್ಲಿ ನೆನೆಸಿ, ತೊಳೆದೂ ಆಯಿತು.
ಅರ್ಧ ಹೋಳು ತೆಂಗಿನ ತುರಿ ಸಿದ್ಧವಾಯಿತು.
ಒಂದು ಅಚ್ಚು ಬೆಲ್ಲ ( ಕಿತ್ತಳೆ ಹಣ್ಣಿನ ಗಾತ್ರದ್ದು ) ಪುಡಿಗೈಯಲ್ಪಟ್ಟಿತು.
ಬೆಲ್ಲವೂ ತೆಂಗಿನತುರಿಯೂ ಒಲೆಯ ಮೇಲೇರಿ ಬೆರೆಸಲ್ಪಟ್ಟು ಪಾಕವಾದೆನೆಂದಿತು.
ಅಕ್ಕಿಯು ಯಂತ್ರದ ಸ್ಪರ್ಶದಿಂದ ಹಿಟ್ಟಾದೆನೆಂದಿತು. ನುಣ್ಣಗಾದಷ್ಟೂ ಉತ್ತಮ.
ಅಕ್ಕಿ ಹಿಟ್ಟಿನ ದ್ರಾವಣ, ಹಲಸಿನ ಹಣ್ಣಿನ ಮುದ್ದೆಯೊಂದಿಗೆ ಬೆರೆಯಿತು, ಕೈಯಲ್ಲೇ ಬೆರೆಸುವುದು ಉತ್ತಮ, ರುಚಿಗೆ ಉಪ್ಪು ಮರೆಯಬಾರದು.
ಒಲೆಯ ಮೇಲೆ ಅಟ್ಟಿನಳಗೆ ( ಇಡ್ಲಿ ಪಾತ್ರೆ ) ಇರಿಸಿ ನೀರು ಕುದಿಯಲಾರಂಭವಾಗುವ ಮೊದಲೇ…
ಬಾಳೆ ಎಲೆಯ ಮೇಲೆ ಒಂದು ಸೌಟು ಹಿಟ್ಟು ಹರಡಿ,
ಒಂದು ಚಮಚ ತೆಂಗುಬೆಲ್ಲದ ಪಾಕವನ್ನು ಹಿಟ್ಟಿನ ಮೇಲೆ ಉದ್ದವಾಗಿ ಇರಿಸಿ,
ಬಾಳೆಯನ್ನು ಹಿಟ್ಟು ಹೊರ ಚೆಲ್ಲದಂತೆ ನಾಜೂಕಾಗಿ ಮಡಚಿ ಉಗಿಯಲ್ಲಿರಿಸಿ,
ಬಾಳೆ ಎಲೆ ಹಾಗೂ ಹಿಟ್ಟು ಮತ್ತು ತೆಂಗುಬೆಲ್ಲದ ಹೂರಣ ಅಚ್ಚುಕಟ್ಟಾಗಿ ಅಟ್ಟಿನಳಗೆಯೊಳಗೆ ಕುಳಿತ ನಂತರ ಬಿಗಿಯಾಗಿ ಮುಚ್ಚಿ, 15 ರಿಂದ 20 ನಿಮಿಷ ಬೇಯಿಸುವಲ್ಲಿಗೆ ಗೆಣಸಲೆಗಳು ಸಿದ್ಧವಾಗಿವೆ.
ತುಪ್ಪದೊಂದಿಗೆ ಬಿಸಿ ಇರುವಾಗಲೂ ತಿನ್ನಿ, ಆರಿದ ನಂತರವೂ ತಿನ್ನಿ. ಹಸಿವೆ ಎಂದರೇನು ಎಂಬುದನ್ನು ಮರೆಸುವ ಶಕ್ತಿ ಈ ಗೆಣಸಲೆಗೆ ಇದೆ.


          



Friday 1 June 2018

ಜೀಗುಜ್ಜೆ ದೋಸೆ




ಬಾಯಾರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪತ್ತನಾಜೆಯ ಸಮಾರಾಧನೆ ಅಡುಗೆಗಾಗಿ ಜೀನಸು ವಗೈರೆ, ತರಕಾರಿಗಳ ಲಿಸ್ಟ್ ಬರೆದು ಇಡುತ್ತಿದ್ದಂತೆ ಅಂಗಳದ ಮರದಲ್ಲಿ ಜೀಗುಜ್ಜೆ ಇದೆಯೆಂದು ನೆನಪಾಗಿ, ಹಿತ್ತಲಲ್ಲಿ ಏನೋ ಕುಟುಕುಟು ಮಾಡುತ್ತಿದ್ದ ಚೆನ್ನಪ್ಪನನ್ನು ಕರೆದು, ಮರವನ್ನು ತಪಾಸಿಸಲಾಗಿ ಸಾಕಷ್ಟು ಬೆಳೆದ ಜೀಗುಜ್ಜೆಗಳಿವೆಯೆಂದು ತಿಳಿಯಿತು. ಊಟದ ಬಾಬ್ತು ಜೀಗುಜ್ಚೆ ಕೊದ್ದೆಲ್ ಸಿಕ್ಕಿತೂ ಅನ್ನಿ.

ದೇಗುಲದ ಸಮಾರಾಧನೆ ಖರ್ಚಿಗಾಗಿ ಏಳೆಂಟು ಘನ ಜೀಗುಜ್ಜೆಗಳನ್ನು ಕಟ್ಟಿ ಇಟ್ಟು ಆಯಿತು.ಸಮಾರಾಧನೆ ಊಟ ಮುಗಿಸಿ ಬರುವಾಗ ನಮ್ಮ ರಾತ್ರಿಯೂಟದ ಅಗತ್ಯಕ್ಕೆ ತಕ್ಕಷ್ಟು ಸಾಂಬಾರು ಅಲ್ಲಿಂದಲೇ ತಂದಿದ್ದೆ.

ಮಾರನೇ ದಿನ ಪುನಃ ಜೀಗುಜ್ಚೆಯ ಸ್ವಾಗತ, ಚೆನ್ನಪ್ಪ ಕೊಯ್ದು ಇಟ್ಟಿದ್ದ. ನಿನ್ನೆ ಜೀಗುಜ್ಚೆ ಸಾಂಬಾರು ತಿಂದಾಗಿದೆ, ಇವತ್ತೂ ಅದನ್ನೇ ತಿನ್ನಲು ಬೇಜಾರು ಕಣ್ರೀ, ತೋಟದಿಂದ ನೆಲಬಸಳೆ ತಂದು ಸರಳವಾಗಿ ಒಂದು ಸಾರು ಮಾಡಿಟ್ಟೆ.

ಸಂಜೆಯಾಗುತ್ತಿದ್ದ ಹಾಗೆ, “ ನಾಳೆಯ ತಿಂಡಿ ಏನು? “ ಗೌರತ್ತೆಯ ಪ್ರಶ್ನೆ.
“ ಏನಾದೀತು? “ ನನ್ನ ಮರು ಪ್ರಶ್ನೆ.
“ ಜೀಗುಜ್ಚೆ ಹಾಳು ಮಾಡ್ಬೇಡ, ದೋಸೆ ಮಾಡಿ ತಿನ್ನಬಹುದಲ್ಲ… “
“ ದೋಸೆ ಆಗುತ್ತ? ಮೊದಲೇ ಹೇಳಬಾರದಿತ್ತೇ… “
“ ಹೇಳೂದೆಂತದು, ಹಲಸಿನಕಾಯಿ ದೋಸೆ ಥರಾನೇ ಮಾಡೂದು. ಮೊದಲೆಲ್ಲ ಮಾಡ್ತಿದ್ರು, ಈಗ ಜೀಗುಜ್ಚೆ ಅಂದ್ರೆ ಎಂತದು? ಅಂತ ಕೇಳೋರೇ ಆಯ್ತು. “ ಭಾಷಣ ಬಿಗಿದರು ಗೌರತ್ತೆ.

ಸರಿ, ಚೆನ್ನಾಗಿ ಬೆಳೆದ ಈ ಜೀಗುಜ್ಚೆ ಈಗಲೇ ಮೆತ್ತಗಾಗಲು ಶುರು ಆಗ್ಬಿಟ್ಟಿದೆ, ನಾಳೆ ಸಾಂಬಾರು ಮಾಡೋ ಹಾಗಿಲ್ಲ, ಬಿಸಾಡಬೇಕಾದೀತು. ಹೀಗೆಲ್ಲ ಚಿಂತನ ಮಂಥನಗಳು ನಡೆದು ಎರಡು ಪಾವು ಅಕ್ಕಿ ನೀರಿಗೆ ಬಿದ್ದಿತು.

ಜೀಗುಜ್ಚೆಯ ನಿರುಪಯುಕ್ತ ಭಾಗಗಳನ್ನು ತೆಗೆದು ಹೋಳು ಮಾಡಿ, ಚಿಕ್ಕದಾಗಿ ಹೆಚ್ಚಿಟ್ಟು, ಮಿಕ್ಸಿಯಲ್ಲಿ ತಿರುಗಿಸಿದಾಗ ಜೀಗುಜ್ಚೆಯ ಹಿಟ್ಟು, ಅಂದಾಜು ಎರಡು ಲೋಟ ಆಗುವಷ್ಟು ದೊರೆಯಿತು.

ಅಕ್ಕಿಯನ್ನು ಚೆನ್ನಾಗಿ ತೊಳೆದು ಅರೆಯಿರಿ.
ನುಣ್ಣಗಾದ ಅಕ್ಕಿ ಹಿಟ್ಟಿಗೆ ಜೀಗುಜ್ಚೆಯ ಹಿಟ್ಟು ಬೆರಸಿ,
ರುಚಿಗೆ ಉಪ್ಪು ಕೂಡಿಸಿ,
ಇಡ್ಲಿ ಹಿಟ್ಟಿನ ಸಾಂದ್ರತೆ ಇರಲಿ.
ದೋಸೆ ಎರೆಯಿರಿ.
ಹಲಸಿನಕಾಯಿ ದೋಸೆ ತರಹವೇ ಇದು ಕೂಡಾ ಹುಳಿ ಬರಬಾರದು, ದಿಢೀರ್ ದೋಸೆ ಅನ್ನಿ.
ದೋಸೆ ಎರೆಯುವಾಗಲೂ ಕಾವಲಿ ಎಣ್ಣೆಣ್ಣೆ ಆಗಿರಕೂಡದು. ಎಣ್ಣೆಪಸೆಯನ್ನು ಒರೆಸಿ ತೆಗೆಯಿರಿ. ಕಾವಲಿ ಬಿಸಿಯೇರಿದ ನಂತರ ದೋಸೆ ಹಚ್ಚಿರಿ, ತೆಳ್ಳಗಾದಷ್ಟೂ ಚೆನ್ನ.

ಬೆಲ್ಲದ ಜೇನುಪಾಕ, ತೆಂಗಿನಕಾಯಿ ಚಟ್ಣಿ ಹಾಗೂ ಗಟ್ಟಿಮೊಸರು ಕೂಡಿ ಸವಿಯಿರಿ.


                



Friday 18 May 2018

ಹಪ್ಪಳದ ಸಂಪುಟ

   


 

ಒಂದೆರಡು ಮಳೆ ಬಂದ ನಂತರ ತೋಟದೊಳಗೆ ಕೆಲಸ ಕಡಿಮೆ, ಚೆನ್ನಪ್ಪ ಕಳೆದ ನಾಲ್ಕಾರು ದಿನಗಳಿಂದ ನಾಪತ್ತೆಯಾಗಿದ್ದವನು ಇಂದು ಹತ್ತು ಗಂಟೆಗೆ ಬಂದ. ಎಲ್ಲೋ ತಿರುಗಾಟಕ್ಕೆ ಹೋಗಿದ್ದಾಂತ ಕಾಣುತ್ತೆ, ಬೆಳ್ಳಗಿನ ಪೋಷಾಕು ಧರಿಸಿದ್ದ.

“ ಕೆಲ್ಸಕ್ಕೆ ಬಂದಿದ್ದೋ, ಹೀಗೇ ಸುಮ್ಮನೆ ಬಂದಿದ್ದೋ? “ ನನ್ನ ಪ್ರಶ್ನೆ.
“ ಯಾನ್ ಇಂಚನೇ ಬತ್ತುನೆ… “ (ಸುಮ್ಮನೆ ಬಂದದ್ದು ) ಅಂದವನು ತೋಟದಲ್ಲಿ ತೆಂಗಿನಕಾಯಿ ಬಿದ್ದಿರುವುದನ್ನು ತರಲು ಹೊರಟ.
“ ಒಂದು ಚಾ ಕುಡಿದು ಹೋಗು, ಹಲಸಿನ ಹಣ್ಣಿನ ಕೊಟ್ಟಿಗೆ ಇದೆ… “
“ ಹ್ಞೂ… “ ಅನ್ನುತ್ತ ಅವನೂ ಚಹಾ ಸೇವನೆಗೆ ಸಿದ್ಧನಾದ.
“ ಹಲಸಿನಕಾಯಿ ಬೆಳೆದದ್ದು ಇದ್ದರೆ ತಾ. “
ಬರುವಾಗ ಮೂರು ಫನ ಗಾತ್ರದ ಹಲಸಿನ ಕಾಯಿಗಳು ಬಂದವು.
“ ಇದನ್ನು ಏನು ಮಾಡೋದು ಅಂತೀಯ? “
“ ಒಂದು ಹಣ್ಣಿಗಿರಲಿ, ಬೇಕಿದ್ರೆ ಹಪ್ಪಳ ಮಾಡುವ… “
“ ಈಗ ಊಟಕ್ಕಾಯ್ತು, ಹಪ್ಪಳದ ಸಂಗತಿ ನಾಳೆಗಾಯ್ತು... “
“ ಹಪ್ಪಳದ ಸಾಹಿತ್ಯ ಹುಡುಕಿ ಆಗಬೇಕಷ್ಟೆ, ಕಡೆಯುವ ಕಲ್ಲು ತೊಳೆದು ಕ್ಲೀನು ಆಗಬೇಕು, ಗುದ್ದಲಿಕ್ಕೆ ಒನಕೆ ಎಲ್ಲಿದೇಂತ ನೋಡಬೇಕು, ಹಲಸಿನಕಾಯಿ ಬೇಯಿಸುವ ವ್ಯವಸ್ಥೆ ಎಲ್ಲಿ? ಗ್ಯಾಸ್ ಒಲೆ, ಕುಕರ್ ಆಗಲಿಕ್ಕಿಲ್ಲ, ಆ ಪೇರಳೆ ಮರದ ಬುಡದಲ್ಲಿ ಒಂದು ಕಲ್ಲಿನ ಒಲೆ ತಯಾರು ಮಾಡಬೇಕು, ಸೌದೆ ಆಗಬೇಕು, ಹಿತ್ತಾಳೆಯ ದೊಡ್ಡ ಅಟ್ಟಿನಳಗೆ ಉಪ್ಪರಿಗೆಯಿಂದ ತಂದು ತೊಳೆದು ಇಡಬೇಕು… “

“ ನಾಳೆ ಬೆಳಗ್ಗೆ ಬೇಗ ಬರುತ್ತೇನೆ. “

          


ಮುಂಜಾನೆ ಎಂಟೂವರೆಗೆ ಹಲಸಿನ ಸೊಳೆ ಬಿಡಿಸಲು ಮೆಟ್ಟುಗತ್ತಿಯೊಂದಿಗೆ ಗುದ್ದಾಡುತ್ತ ಆರಂಭ. ಚೆನ್ನಪ್ಪ 'ಹಲಸಿನಕಾಯಿ ಕಾಳಗದಲ್ಲಿ ಮಗ್ನನಾಗಿದ್ದಂತೆ ಉಪ್ಪರಿಗೆಯ ಮೂಲೆಯಲ್ಲಿದ್ದಂತಹ ದೊಡ್ಡ ಹಿತ್ತಾಳೆಯ ಅಟ್ಟಿನಳಗೆಯನ್ನು { ಉಗಿಪಾತ್ರೆ ಯಾ steam cooker ) ಹಾಗೂ ಒನಕೆಯನ್ನು ನಾನು ಕೆಳಗಿಳಿಸಿದೆ. ಹಪ್ಪಳ ಒತ್ತುಮಣೆ ( ರೊಟ್ಟಿಮಣೆ ), ಆಗಾಗ್ಗೆ ಬಳಸುತ್ತಿರುವುದರಿಂದ ಅಡುಗೆಮನೆಯಲ್ಲಿ ಇದ್ದಿತು, ಅದನ್ನೂ ಚೆನ್ನಪ್ಪನ ಉಪಯೋಗಕ್ಕಾಗಿ ಹೊರಗಿಡಲಾಯಿತು.

“ ಹಲಸಿನಕಾಯಿ ಸೊಳೆ ಬಿಡಿಸಿ ಆಯ್ತು. “
“ ಈ ಅಟ್ಟಿನಳಗೆಯನ್ನು ತೊಳೆದು ಒಲೆಯ ಮೇಲೆ ಇಡು. “
ಪೇರಳೆಯ ಮರದ ಬುಡದಲ್ಲಿ ತಾತ್ಕಾಲಿಕ ನಿರ್ಮಾಣದ ಒಲೆಯ ಮೇಲೇರಿದ ಅಟ್ಟಿನಳಗೆ, ಹಲಸಿನ ಸೊಳೆಗಳನ್ನು ತುಂಬಿ ಬೇಯಲು ಇಟ್ಟಾಯ್ತು.
ಹಳ್ಳಿ ಮನೆಯ ಆವರಣದಲ್ಲಿ ಕಟ್ಟಿಗೆಗೆ ಕೊರತೆಯಿಲ್ಲ.
ಅರೆಯುವ ಕಲ್ಲು ತೊಳೆಯಲ್ಪಟ್ಟಿತು. ಮೂಲೆ ಸೇರಿರುವ ಅರೆಯುವ ಕಲ್ಲು ಇಂತಹ ವಿಶೇಷ ಸಂದರ್ಭದಲ್ಲಿ “ನಾನಿಲ್ಲದೆ ಹಪ್ಪಳವಾಗದು” ಅಂದಿತು.
“ ಅಕ್ಕ, ಹಪ್ಪಳಕ್ಕೆ ಉಪ್ಪು ಖಾರ ಎಲ್ಲುಂಟು? “.
“ ಉಪ್ಪು, ಮೆಣಸಿನಹುಡಿ, ಎಳ್ಳು... ಸಾಕು. “ ಬೇಕಿದ್ದಷ್ಟು ತಟ್ಟೆಯಲ್ಲಿ ಜೋಡಿಸಿ ಕೊಟ್ಟಾಯ್ತು.
“ ಹಲಸಿನಕಾಯಿ ಚೆನ್ನಾಗಿ ಬೇಯಬೇಕು, ಇಲ್ಲಾಂದ್ರೆ ಹಪ್ಪಳಕ್ಕೆ ರುಚಿಯಿಲ್ಲ, ಒನಕೆಯಲ್ಲಿ ಗುದ್ದುವಾಗಲೂ ಅಷ್ಟೇ, ಬರೇ ನಾಲ್ಕು ಪೆಟ್ಟು ಹಾಕಿ ತೆಗಿಯೂದಲ್ಲ, ಮೆತ್ತಗೆ ಆಗಬೇಕು… “ ನನ್ನ ರನ್ನಿಂಗ್ ಕಮೆಂಟರಿ.

ಅಡಿಕೆಹಾಳೆಯಲ್ಲಿ ತುಂಬಿ, ಉಪ್ಪುಖಾರ ಕೂಡಿದ ಹಲಸಿನಸೊಳೆ ಮುದ್ದೆಯಂತಾಗಿ ನನ್ನೆದುರು ಬಂದಿತು.
ಪುಟ್ಟ ಬಟ್ಟಲಲ್ಲಿ ತೆಂಗಿನೆಣ್ಣೆ ಇಟ್ಟು,
ಅಂಗೈಗಳಿಗೆ ಎಣ್ಣೆ ಸವರಿ,
ಲಿಂಬೆಗಾತ್ರದ ಉಂಡೆ ಮಾಡಿಟ್ಟು,
ಪುನಃ ಚೆನ್ನಪ್ಪನೆಡೆಗೆ ಪಯಣ.

ಹಪ್ಪಳದ ಮಣೆಗೆ ಎರಡು ಪ್ಲಾಸ್ಟಿಕ್ ಶೀಟುಗಳನ್ನು ಸಿದ್ಧಪಡಿಸಿ,
ಅದಕ್ಕೂ ಎಣ್ಣೆ ಸವರಿ,
ಒಂದೊಂದೇ ಉಂಡೆಯನ್ನು ಒತ್ತಿದಾಗ ಮಟ ಮಟ ಮಧ್ಯಾಹ್ನ.
ಒಣಗಿಸುವುದು.
ಎರಡು ದಿನ ಒಣಗಲು ಬೇಕು.

ನಂತರ ಹತ್ತು ಹಪ್ಪಳಗಳನ್ನು ಜೋಡಿಸಿ ಕಟ್ಟಿ ಇಡುವುದು.
ಕಟ್ಟಿ ಇಟ್ಟಂತಹ ಹಪ್ಪಳಗಳನ್ನು ಪುನಃ ಬಿಸಿಲಿಗಿರಿಸುವುದು.
ಏಳು ಯಾ ಎಂಟು ಬಿಸಿಲು ಸಿಕ್ಕರೆ ಸಾಕು.
 ಹಪ್ಪಳದ ಕಟ್ಟು ದಾಸ್ತಾನು ಡಬ್ಬಿಯಲ್ಲಿ ತುಂಬಿಸಿ ಇಡುವುದು.
ದಿನವೂ ಸಂಜೆ ಮರೆಯದೆ ಹಪ್ಪಳ ಕರಿದು ತಿನ್ನುವುದು.
ಬೆಲ್ಲವೂ ಜೊತೆಗಿದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ ಕೇಳಾ,
ಸ್ನೇಹಿತರು ಬಂದಾಗ ಚಹಾಪಾನವೂ, ಹಪ್ಪಳದ ಸತ್ಕಾರ,
ನೆಂಟರಿಷ್ಟರು ಬಂದಾಗ ಮರೆಯದೇ ಅವರ ಕೈಗೆ ಹಪ್ಪಳದ ಪೊಟ್ಟಣ,
ಇರಿಸುವುದು ನಮ್ಮ ಆದ್ಯ ಕರ್ತವ್ಯ…. ಭೂಪತಿ ಕೇಳೆಂದ.


          









Saturday 12 May 2018

ಪೇರಳೆಯ ಪಾನಕ

 


                                                 



ತೋಟದಿಂದ ಮಾವಿನಹಣ್ಣುಗಳು ಬಂದುವು, ಚೀಲದಿಂದ ಗೋಣಿತಾಟಿಗೆ ಸುರುವಿದಾಗ ಎರಡು ಪೇರಳೆ ಹಣ್ಣುಗಳೂ…. ಅದೂ ಕೆಂಪು ತಿರುಳಿನ ಪೇರಳೆ, ಇದರಲ್ಲಿ ಬೀಜ ಜಾಸ್ತಿ. ಹೇಳಿಕೊಳ್ಳುವಂತಹ ರುಚಿಯೂ ಇಲ್ಲ.  

ಮಕ್ಕಳು ಚಿಕ್ಕವರಿದ್ದಾಗ ತೋಟಕ್ಕೆ ಹೋಗಿ, ಮರ ಹತ್ತಿ, ಕೊಕ್ಕೆಯಲ್ಲಿ ಆಡಿಸಿ ಕೊಯ್ದು ತಿಂದೇ ಬರುತ್ತಿದ್ದರು. ಹಾಗಂತ ಪೇರಳೆ ಕೊಯ್ಯಲಿಕ್ಕೆ ಹಾಗೂ ತಿನ್ನಲಿಕ್ಕೆ ತೋಟಕ್ಕೆ ಹೋಗಿಯೇ ಆಗಬೇಕೆಂದೇನೂ ಇಲ್ಲ, ಮನೆ ಹಿತ್ತಲಲ್ಲೇ ಒಂದು ಮರ ಇದೆ, ಕಸಿ ಪೇರಳೆ, ಬಿಳಿ ತಿರುಳಿನ ಇದು ರುಚಿಯಾದ ಹಣ್ಣು. ಬೀಜಗಳೂ ತುಸು ಕಡಿಮೆ ಎಂದೇ ಹೇಳಬೇಕು.

ಪೇರಳೆಯೊಳಗಿನ ಬೀಜಗಳ ಹಾವಳಿಯಿಂದಾಗಿ ಹಲ್ಲು ಸರಿಯಿಲ್ಲದವರು ಅಥವಾ ಹಲ್ಲು ಗಟ್ಟಿ ಇಲ್ಲದವರು ಅದನ್ನು ತಿನ್ನುವ ಉಸಾಬರಿಗೇ ಬರಲಾರರು. “ ಪೇರಳೆಯಾ, ನಂಗೆ ಬೇಡ. “ ಇದು ನಮ್ಮೆಜಮಾನ್ರ ಮಾಮೂಲಿ ಉತ್ತರ. ಈಗ ನಮ್ಮವರೇ ಹೆಕ್ಕಿ ತಂದ ಪೇರಳೆ ಬಂದಿದೆ, “ ಏನೋ ಒಂದು ವಿಧವಾಗಿ ತಿನ್ನಲು ಕೊಡೋಣ. “ ಅಂತ ಅಂದ್ಕೊಂಡಾಗ ನೆನಪಾಗಿದ್ದು ಜ್ಯೂಸ್.

ಅಂಗಳದ ಕಸಿಪೇರಳೆ ಹಣ್ಣು ಕೂಡಾ ಬಿದ್ದು ಕೈಗೆ ಸಿಕ್ಕಿತು.  
ತಿರುಳು ಜಾಸ್ತಿ ಇರುವ ಕಸಿ ಪೇರಳೆಯೂ,
 ಕೆಂಪು ಬಣ್ಣದಿಂದ ಶೋಭಿಸುವ ಪೇರಳೆಯೂ,
ಎರಡನ್ನೂ ಆಯ್ದು,
 ಸಿಪ್ಪೆಯನ್ನು ತೆಳ್ಳಗೆ ಹೆರೆದು,
ಚಿಕ್ಕ ಚಿಕ್ಕ ಚೂರುಗಳನ್ನಾಗಿಸಿ,
ಮಿಕ್ಸಿಯ ಜಾರ್ ಒಳಗೆ ತುಂಬಿಸಿ,
ಒಂದು ಲೋಟ ನೀರೆರೆದು ಟೊರ್ ರ್… ಟೊರ್ ತಿರುಗಿಸಿ,
ಪೇರಳೆ ಹಣ್ಣಿನ ದಪ್ಪ ರಸ ಬಂದಿತು.
ಆದರೇನಂತೆ, ಬೀಜ ಸಹಿತವಾಗಿರುವ ಈ ರಸವನ್ನು ಕುಡಿಯಲಸಾಧ್ಯ, ಜಾಲರಿಯಲ್ಲಿ ಶೋಧಿಸಲಾಯಿತು.
ಸಿಹಿಗೆ ತಕ್ಕಷ್ಟು ಸಕ್ಕರೆ ಅಥವಾ ನಮ್ಮ ಬಾಯಿರುಚಿಗೆ ಬೇಕಾದ ಹಾಗೆ ಸಕ್ಕರೆ ಹಾಕುವುದು.
ರುಚಿಗೆ ತುಸು ಉಪ್ಪು ಇರಲಿ.
ದಪ್ಪವಾಗಿರುವ ಈ ರಸಕ್ಕೆ ಶರಬತ್ತು ಎಂಬ ಹೆಸರು ನೀಡಲು ಸಾಕಾಗುವಷ್ಟು ನೀರು ಎರೆದು,
ತಂಪು ಪೆಟ್ಟಿಗೆ ಯಾ ರೆಫ್ರಿಜರೇಟರ್ ಒಳಗೆ ಅರ್ಧ ಗಂಟೆ ಇಟ್ಟು,
ಸಂಜೆಯ ಹೊತ್ತು,
ಲೋಟಗಳಿಗೆ ಪೇರಳೆಯ ಪಾನಕ ತುಂಬಿಸಿ ಹಾಯಾಗಿ ಕುಡಿಯುವುದು.
ಇದಕ್ಕೆ ಹುಳಿ ರುಚಿ ಏನೇನೂ ಇಲ್ಲ, ಇದ್ದರೆ ಒಂದು ನಿಂಬೆಯ ರಸ ಹಾಕಬಹುದಿತ್ತು.
ಈ ಪಾನಕಕ್ಕೆ ನಾನು ಕೇವಲ ಎರಡು ಪೇರಳೆ ಹಾಕಿರೋದು, ಅದೂ ಹಣ್ಣಾಗಿರಬೇಕು, ಕತ್ತರಿಸಿದಾಗ ಹುಳ ಗಿಳ ಏನೂ ಇರಕೂಡದು, ತಿಳಿಯಿತಲ್ಲ.

ಪೇರಳೆಯ ಲಸ್ಸಿ

ಮೇಲೆ ಹೇಳಿದಂತೆ ಪೇರಳೆಯ ರಸ ಮಾಡಿಟ್ಟು,
ಒಂದು ಲೋಟ ಹಣ್ಣಿನ ರಸಕ್ಕೆ
ಒಂದು ಲೋಟ ಮಜ್ಜಿಗೆ ಯಾ ತಾಜಾ ಮೊಸರು
ಹಾಗೂ ಒಂದು ಲೋಟ ನೀರು
ರುಚಿಗೆ ಉಪ್ಪು, ಸಿಹಿಗೆ ಸಕ್ಕರೆ, ಖಾರಕ್ಕೆ ಹಸಿಮೆಣಸು
ಮಿಶ್ರಣ ಮಾಡುವಲ್ಲಿಗೆ ಲಸ್ಸಿ ಬಂದಿದೆ.
ಬಾಯಿರುಚಿಯಲ್ಲಿ ವೈವಿಧ್ಯತೆ ಬೇಕಾದಲ್ಲಿ ಇಷ್ಟವಾದ ಮಸಾಲೆ ಹುಡಿಗಳನ್ನು ಸೇರಿಸಿ ಕುಡಿಯಿರಿ.

ಪೇರಳೆಯ ಮಿಲ್ಕ್ ಶೇಕ್

ಒಂದು ಲೋಟ ಪೇರಳೆಯ ಸಕ್ಕರೆ ಮಿಶ್ರಿತ ರಸ
ಒಂದು ಲೋಟ ತಣ್ಣಗಿನ ಹಾಲು
ಮಿಶ್ರಗೊಳಿಸಿ ಸ್ವಲ್ಪ ಹೊತ್ತು ತಂಪು ಪೆಟ್ಟಿಗೆಯಲ್ಲಿರಿಸಿ ಕುಡಿದರೂ ಆರಾಮದಾಯಕ.

ರಾತ್ರಿ ಮಿತ ಆಹಾರವನ್ನು ಸೇವಿಸುವ ವಯಸ್ಸಾದವರಿಗೆ ಮಿಲ್ಕ್ ಶೇಕ್ ಯಾ ಲಸ್ಸಿಯನ್ನು ಸಂಜೆ ಹೊತ್ತು ಕುಡಿಯುವುದು ಉತ್ತಮ, ರಾತ್ರಿಯೂಟ ಬೇಕೆನಿಸದು ಹಾಗೂ ಮುಂಜಾನೆಯ ಮಲಬದ್ಧತೆ ಕಾಡದು. ಕರುಳಿನ ಚಲನಶಕ್ತಿಯನ್ನು ಚುರುಕಾಗಿಸುತ್ತದೆ ಪೇರಳೆ.
 ಮೆಟಾಬಾಲಿಸಂ, ಶರೀರದ ಜೀವರಾಸಾಯನಿಕ ಕ್ರಿಯೆಯ ಸಮರ್ಪಕ ನಿರ್ವಹಣೆಗಾಗಿ ಪೇರಳೆಯನ್ನು ತಿನ್ನಿರಿ.
ವಿಟಮಿನ್ ಸಿ ಹಾಗೂ ಕಬ್ಬಿಣಾಂಶ ಇರುವ ಈ ಹಣ್ಣು ಉಸಿರಾಟದ ಸಮಸ್ಯೆಗೂ ಪರಿಹಾರ ನೀಡುವುದು, ಶ್ವಾಸಕೋಶದ ಸೋಂಕು ನಿವಾರಕ.
ವಿಟಮಿನ್ ಎ, ಕಣ್ಣುಗಳ ಆರೋಗ್ಯ ರಕ್ಷಕ.
ಪೇರಳೆ ಹಾಗೂ ಬಾಳೆಹಣ್ಣುಗಳಲ್ಲಿ ಪೊಟಾಶಿಯಂ ಸಮಾನವಾಗಿರುವುದು.
ಅ್ಯಂಟಿ ಓಕ್ಸಿಡೆಂಟುಗಳ ಇರುವಿಕೆಯಿಂದಾಗಿ ಚರ್ಮದ ಕಾಂತಿ ರಕ್ಷಕ ಹಾಗೂ ಸುಕ್ಕುಗಟ್ಟುವಿಕೆಯನ್ನು ತಡೆಯುವುದು.
ಮೆಗ್ನೇಶಿಯಂ, ಮೂಳೆಗಳ ಬಲವರ್ಧನೆ. ಹಲ್ಲುನೋವು ನಿವಾರಕ.
ವಿಟಮಿನ್ ಸಿ, ಕಿತ್ತಳೆಗಿಂತಲೂ ಜಾಸ್ತಿ ಇದೆ.
ವಿಟಮಿನ್ ಬಿ, ಕೂದಲಿನ ಆರೈಕೆ ಹಾಗೂ ಬೆಳವಣಿಗೆ.
ಹೇರಳ ಖನಿಜಾಂಶಗಳ ಲಭ್ಯತೆಯಿಂದಾಗಿ ರಕ್ತದಲ್ಲಿ ಹಿಮೋಗ್ಲೊಬಿನ್ ವೃದ್ಧಿ.
ಪಿತ್ತಕೋಶದಲ್ಲಿ ಕಲ್ಲು! ಸಮಸ್ಯೆಯೇ ಅಲ್ಲ, ದಿನವೂ ಪೇರಳೆ ತಿನ್ನಿ, ಆರೋಗ್ಯವಂತರಾಗಿ.
ಪೇರಳೆಯ ಎಲೆಗಳೂ ಆರೋಗ್ಯದಾಯಕ, ದಿನವೂ ಒಂದೆರಡು ಎಲೆಗಳನ್ನು ಅಗಿದು ಉಗಿಯಿರಿ, ದಂತಾರೋಗ್ಯ ಉಳಿಸಿಕೊಳ್ಳಿ.
10 -15 ಪೇರಳೆಯ ಎಲೆಗಳನ್ನು ಒಂದು ಲೀಟರ್ ನೀರಿನಲ್ಲಿ ಕುದಿಸಿ, ಆರಿದ ನಂತರ ತಲೆಗೆ ಹಾಗೂ ಕೂದಲಿಗೆ ಹಚ್ಚಿಕೊಳ್ಳಿ. ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ. ಕಾಂತಿಯುತ ಕೂದಲು ನಿಮ್ಮದಾಗಿಸಿ, ಕೂದಲು ಉದುರುವ ಸಮಸ್ಯೆ ತೊಲಗಿಸಿ.


       








Saturday 5 May 2018

ಮ್ಯಾಂಗೋ ಲಸ್ಸಿ




ಬದನೆಕಾಯಿ ಸಾರು ಮಾಡಿದ್ದಾಯ್ತು. ಮಾವಿನಹಣ್ಣುಗಳೂ ಇರುವಾಗ, ಏಳೆಂಟು ಮಾವಿನಹಣ್ಣುಗಳನ್ನು ತೊಳೆದು, ತೊಟ್ಟು ತೆಗೆದು, ಸಿಪ್ಪೆ ಬಿಡಿಸಿ...

ಗಿವುಚಿ ರಸ ತೆಗೆದು,
ರುಚಿಗೆ ಉಪ್ಪು,
ಒಂದು ಸೌಟು ಬೆಲ್ಲದ ಪಾಕ ( ಮಾಡಿಟ್ಕೊಂಡಿದ್ದು ಇತ್ತು ),
ಒಂದು ಗಾಂಧಾರಿ ಮೆಣಸು ನುರಿದು,
ಉದ್ದಿನಬೇಳೆಯಷ್ಟು ಇಂಗು ಕದಡಿ ಇಡುವಲ್ಲಿಗೆ ಮಾವಿನಹಣ್ಣಿನ ಹಸಿಗೊಜ್ಜು ಪ್ರತ್ಯಕ್ಷವಾಯಿತು!

ಮೊಸರು ತುಂಬಿದ ತಪಲೆ, ಮಾವಿನಹಣ್ಣಿನ ಹಸಿಗೊಜ್ಜು ಊಟದ ಟೇಬಲ್ ಇರಿಸುತ್ತಿದ್ದಂತೆ, “ ಇನ್ನೊಂದು ಸವಿರುಚಿ ಮಾಡಬಹುದಲ್ಲ. “ ಅಂದರು ಗೌರತ್ತೆ. “ ಈ ಬೇಸಿಗೆಗೆ ತಂಪೂ... “

“ ಹೌದಲ್ಲವೇ, “ ಅನ್ನುತ್ತ, ಮೂರು ಸೌಟುಗೊಜ್ಜಿನ ರಸ, ಎರಡು ಸೌಟು ಸಿಹಿ ಮೊಸರು ಕೂಡಿಸಿ…
“ ಮಿಕ್ಸಿಯೇನೂ ಬೇಡ…. ಈ ಬಾಟಲ್ ಗೆ ತುಂಬಿಸಿ ಗಡಗಡ ಆಡಿಸಿ, ಆ ತಂಪು ಪೆಟ್ಟಿಗೆಯಲ್ಲಿಡು ತಿಳೀತಾ… ಸಂಜೆ ತೋಟ ಸುತ್ತಿ ಬಂದ ಮೇಲೆ ಕುಡಿಯೋಣ. “

ಮೊಸರು ಇಲ್ಲವಾದರೆ ಮಜ್ಜಿಗೆಯೂ ಆದೀತು.
ಲಸ್ಸಿ ವಿಪರೀತ ದಪ್ಪ ಆಗಿದ್ದರೆ ತುಸು ನೀರು ಎರೆಯಲಡ್ಡಿಯಿಲ್ಲ.
ಸಿಹಿಯಾಗಿ ಕುಡಿಯಬಯಸುವವರು ಸಕ್ಕರೆ ಹಾಕಿ.
ಗಾಂಧಾರಿ ಮೆಣಸು ಇಲ್ಲದಿದ್ದರೆ ಪುದಿನಾ ಸೊಪ್ಪು ಆದೀತು, ತೊಂದರೆಯಿಲ್ಲ.
ಹೇಗೆ ಬೇಕೋ ಹಾಗೆ, ಅಡುಗೆಮನೆಯೊಳಗೆ ಲಭ್ಯವಿರುವ ಮಸಾಲಾ ಸಾಮಗ್ರಿಗಳ ಹಿತಮಿತವಾದ ಬಳಕೆಯಿಂದ ಇಂತಹ ನೂರಾರು ಬಗೆಯ ಲಸ್ಸಿಯನ್ನು ಈ ಬೇಸಿಗೆಯಲ್ಲಿ ಸವಿಯಿರಿ. ಬಿಸಿಲ ತಾಪವನ್ನು ದೂರ ತಳ್ಳಿರಿ.





Friday 27 April 2018

ಮಾವಿನ ಹಣ್ಣು ಸಾಸಮೆ





“ ನಾಡಿದ್ದು ನಿಮ್ಮ ಅಕ್ಕನ ಮನೆಯಲ್ಲಿ ಪೂಜೆ ಇಟ್ಕೊಂಡಿದ್ದಾರೆ... ನೆನಪುಂಟಲ್ಲ? “
“ ಹೋದರಾಯ್ತಲ್ಲ. “
“ ಹೌದೂ, ಹೋಗುವಾಗ ಮಾವಿನ ಹಣ್ಣು ಉಂಟಲ್ಲ… “
“ ಅಲ್ಲಿ ಶರಬತ್ತು ಮಾಡಲಿಕ್ಕೋ… “
“ ಏನೋ ಒಂದು ಮಾಡ್ತಾರೆ ಬಿಡಿ… “
 ದಿನವೂ ಅಡಿಕೆ ಹೆಕ್ಕುವ ಡ್ಯೂಟಿ ತಪ್ಪಿಸದ ನಮ್ಮೆಜಮಾನ್ರು ಈಗ ಮಾವಿನಹಣ್ಣನ್ನೂ ಅಡಿಕೆಯೊಂದಿಗೆ ತರುತ್ತಾರೆ, ಮರದ ಬುಡದಲ್ಲಿ ಎಷ್ಟೇ ಹಣ್ಣುಗಳು ಬಿದ್ದಿರಲಿ, ಮನೆ ಉಪಯೋಗಕ್ಕೆ ಬೇಕಾದಷ್ಟೇ ಏಳೆಂಟು ಹಣ್ಣು ಬರುವುದು.

ಈ ದಿನ ಬುಟ್ಟಿ ತುಂಬ ಹಣ್ಣು ಬಂದಿತು, ಹುಳಿ ಸಿಹಿ ರುಚಿಯ ಹಣ್ಣುಗಳು.

ಮುಂಜಾನೆ ತಿಂಡಿತೀರ್ಥ, ಸ್ನಾನಪಾನ ಮುಗಿಸಿ, ಉಡುಪುತೊಡುಪುಗಳಿಂದ ಅಲಂಕೃತರಾಗಿ ಕಾರಿನಲ್ಲಿ ಹೊರಟೆವು. ದೂರವೇನಿಲ್ಲ, ನಮ್ಮವರ ಅಕ್ಕನ ಮನೆ ಒಂದು ಕಿ. ಮೀ. ದೂರ ಇದ್ದೀತು ಅಷ್ಟೇ.

ನಾವು ತಲೆಂಗಳ ಮನೆ ತಲುಪಿದಾಗ, ಲಿಂಬೆಹಣ್ಣಿನ ಶರಬತ್ತು ಎದುರುಗೊಂಡಿತು.
ಒಳಗೆ ಹೋಗಿ, “ ಮಾವಿನಹಣ್ಣು ತಂದಿದೆ. “ ಅಂದಾಗ, “ ಆಗ್ಲೇ ಅಡುಗೆ ಕೆಲಸ ಮುಗಿಸಿ ಆಯ್ತಲ್ಲ, ಅಡುಗೆಯವ್ರು ಹೋಗಿಯೂ ಆಯ್ತು... “ ಅಂದರು ಮನೆ ಯಜಮಾನಿತಿ.

“ ಚಿಂತೆಯಿಲ್ಲ, ಮಾವಿನಹಣ್ಣು ಸಾಸಮೆ ನಾವೇ ಮಾಡಿಟ್ಟು ಬಿಡೋಣ. “
“ ನೀನೇ ಮಾಡುವ ಹಂಗಿದ್ರೆ ಆಯ್ತು, ಮಾಡಿಕೋ... ಒಂದಿಪ್ಪತ್ತು ಹಣ್ಣಿಂದು ಸಾಕು. “
“ ಒಂದು ತೆಂಗಿನಕಾಯಿ ಕೊಡಿ, ಮೊದಲು ಕಾಯಿ ತುರಿಯೋಣ. “
ನಾನು ತೆಂಗಿನಕಾಯಿ ತುರಿಯಲು ಹೊರಡುವಷ್ಟರಲ್ಲಿ, ಒಳಕೋಣೆಯಲ್ಲಿ ಪಟ್ಟಾಂಗದಲ್ಲಿ ತೊಡಗಿದ್ದ ಹೆಂಗಳೆಯರು ನಾಮುಂದು ತಾಮುಂದು ಎಂದು ಸಾಸಮೆಯ ಸಿದ್ಧತೆಗೆ ಮುಂದಾದರು.

ತಂದಿದ್ದ ಮಾವಿನಹಣ್ಣುಗಳೆಲ್ಲ ಬಕೆಟ್ ನೀರಿನಲ್ಲಿ ಮಿಂದು ಶುಚಿಗೊಳಿಸಲ್ಪಟ್ಟುವು.
ಮಾವಿನ ಹಣ್ಣುಗಳ ತೊಟ್ಟು ತೆಗೆದು,
ಸಿಪ್ಪೆ ಬಿಡಿಸಿ,
ಸಿಪ್ಪೆಗಳಿಗೆ ನೀರೆರೆದು ಗಿವುಚಿ,
ಗಿವುಚಿ ರಸ ತೆಗೆದು,
ರಸ ತುಂಬಿದ ತಪಲೆ ತುಂಬ ಹಣ್ಣು ಕಂಡಾಗ,
“ ಇಷ್ಟು ಹಣ್ಣುಗಳ ಸಾಸಮೆಗೆ ಕೇವಲ ಒಂದು ತೆಂಗಿನಕಾಯಿ ಸಾಲದು, ಎರಡು ಕಾಯಿ ಇರಲಿ. “ ಅನ್ನುವಂತಾಯಿತು.
“ ಖಾರಕ್ಕೆ ಹಸಿಮೆಣಸು ಆದೀತೋ… “
“ ಸಾಸಮೆಗೆ ಒಣಮೆಣಸು ಲಾಯಕ್, ಹುರಿಯುವುದೇನೂ ಬೇಡ. “
“ ಮೆಣಸು ಎಷ್ಟು ಹಾಕೋದು? “
“ ಹತ್ತು - ಹನ್ನೆರಡು ಸಾಕು. “
“ 2 ಚಮಚ ಸಾಸಿವೆ. “
“ ಕಲ್ಲುಪ್ಪು ಈಗಲೇ ಹಾಕಿ, ಕರಗಬೇಕಲ್ಲ. “
“ ಎಷ್ಟು ಉಪ್ಪು? “
“ ಈ ಅಳತೆಗೆ ಒಂದು ಸೌಟು ಕಲ್ಲುಪ್ಪು ಬೇಕಾದೀತು… “
“ ಹೌದೂ, ಸಾಸಿವೆ ಒಣಮೆಣಸು ಅರೆಯುವಾಗ ಚಿಟಿಕೆ ಅರಸಿಣ ಹಾಕಿದರೆ ರುಚಿ ಜಾಸ್ತಿ… “ ಎಂದರು ಗೌರತ್ತೆ.
“ ಹೌದ! ಅದು ಗೊತ್ತಿರಲಿಲ್ಲ. “
“ ಹೂಂ ಮತ್ತೇ, ಅರಸಿಣ ಹುಡಿಯಲ್ವೇ, ಅರೆಯುವುದೇನೂ ಬೇಡ, ಹಾಗೇ ಹಾಕಿದ್ರಾಯ್ತು. “
ಬೆಲ್ಲ, 6 ಅಚ್ಚು ಅಂದ್ರೆ ಮುಸುಂಬಿ ಗಾತ್ರದ್ದು, ಪುಡಿಪುಡಿಯಾಗಿ ಮವಿನಹಣ್ಣಿನ ರಸಪಾಕದೊಂದಿಗೆ ಬೆರೆಯಿತು.
ಅಳೆದಿಟ್ಟ ಉಪ್ಪು ಬಿದ್ದಿತು. ಉಪ್ಪು ಸಾಕಾಗದಿದ್ದರೆ ಕೊನೆಗೆ ಪುಡಿಯುಪ್ಪು ಸೇರಿಸತಕ್ಕದ್ದು.

ತೆಂಗಿನತುರಿ ಮೆಣಸು ಸಾಸಿವೆಗಳು ಮಿಕ್ಸಿ ಯಂತ್ರದಲ್ಲಿ ಅರೆಯಲ್ಪಟ್ಟಿತು,  
“ ಅರೆಯುವಾಗ ನೀರು ಹಾಕತಕ್ಕದ್ದಲ್ಲ, ಮಾವಿನಹಣ್ಣಿನ ರಸದಲ್ಲೇ ಅರೆದರೆ ಉತ್ತಮ, ಸಾಸಮೆ ನೀರು ಬಿಟ್ಟಂತೆ ಆಗಬಾರದು. “
ತೆಂಗಿನ ಅರಪ್ಪು ಸಿದ್ಧವಾಯಿತು, ಮಾವಿನ ಹಣ್ಣಿನೊಂದಿಗೆ ಕೂಡಿಕೊಂಡಿತು.
ಇದಕ್ಕೆ ಒಗ್ಗರಣೆಯ ಅಲಂಕಾರವೇನೂ ಬೇಡ.
ಕುದಿಸುವುದಕ್ಕೂ ಇಲ್ಲ.

ಭೋಜನಕೂಟದ ಇನ್ನಿತರ ವ್ಯಂಜನಗಳೊಂದಿಗೆ ಎಲ್ಲರಿಗೂ ಒಂದೊಂದು, ಬೇಕೆಂದವರಿಗೆ ಎರಡೆರಡು ಮಾವಿನ ಗೊರಟು ಬಡಿಸುವಲ್ಲಿಗೆ ಔತಣವು ಸಂಪನ್ನಗೊಂಡಿತು!









Monday 16 April 2018

ರಾಗಿ ಪಪ್ಪಾಯ್ ಹಲ್ವ



ಪಪ್ಪಾಯಿ ಹಲ್ವ ಆಗುತ್ತೇಂತ ತಿಂದು ಉಳಿದ ಹೋಳುಗಳನ್ನು ಬೇಯಿಸಿ ಒಂದೇ ಮಾದರಿಯ ಹಲ್ವ ಮಾಡುತ್ತಿದ್ದರೆ ಅದಕ್ಕೂ ಗಿರಾಕಿ ಇರದು.

ಇದೀಗ ಸೆಕೆ.. ಸೆಕೆ..  ಎಂದು ಹಾಡುತ್ತ ಹಾರಾಡುವ ಸಮಯ,  ರಾಗಿ ತಂದಿಟ್ಕೊಂಡಿದ್ದೆ, ರಾಗಿ ಹುಡಿಯಲ್ಲ,  ಇಡಿ ರಾಗಿ.  ಅದಕ್ಕೂ ಒಂದು ಕಾರಣ ಇದೆ.   ಐದಾರು ವರ್ಷಗಳ ಹಿಂದೆ ನಮ್ಮಹಳ್ಳಿ ಪೇಟೆಯಲ್ಲಿ ರಾಗಿ ಸಿಗುತ್ತಿರಲಿಲ್ಲ. ರಾಗಿಹುಡಿಯ ಪ್ಯಾಕೆಟ್ ಮಾತ್ರ ಜಗ್ಗಣ್ಣನ ಜೀನಸಿನಂಗಡಿಯಲ್ಲಿ ಸಿಗುತ್ತಿದ್ದ ಮಾಲು.

ಈವಾಗ ಏನಾಯ್ತು ಅಂದರೆ, ಗೌರತ್ತೆ ಯಾವುದೂ ಹಳೆಯ ನ್ಯೂಸ್ ಪೇಪರ್ ಓದುತ್ತಿದ್ದವರು, " ನೋಡು, ಇದರಲ್ಲಿ ಏನು ಬರೆದಿದೇ ಅಂತ... "

" ಏನಂತೇ.. "

" ಪ್ಯಾಕೇಟುಗಳಲ್ಲಿ ಸಿಗುವ ಹುಡಿಗಳು ಶುದ್ಥವಾಗಿರುವುದಿಲ್ಲ, ಬಾದಾಮ್ ಹುಡಿ ಕೂಡಾ ಕಲಬೆರಕೆ... "

" ಇರಬಹುದು, ಮಾರ್ಕೆಟಿಂಗ್ ವ್ಯವಹಾರದಲ್ಲಿ ಹೇಗೆ ಬೇಕೋ ಹಾಗೆ ಮೋಸ ನಡೀತದೆ..."

ಹೀಗೆಲ್ಲ ಪಂಚಾಯಿತಿ ಆಗಿ ನಾನು ಪ್ಯಾಕೆಟ್ ಹುಡಿ ತರಿಸುವುದನ್ನು ಬಿಟ್ಟು ವರ್ಷಗಳೇ ಆಗಿವೆ. ಇದೀಗ ಶುದ್ಧವಾದ ರಾಗಿ ನಮ್ಮ ಊರ ಅಂಗಡಿಯಲ್ಲಿ ಸಿಗುತ್ತದೆ ಹಾಗೂ ಮನೆಗೂ ಬಂದಿದೆ.

ಸಾಸಿವೆ ಕಾಳಿನಂತಹ ರಾಗಿಯನ್ನು ಅರೆದು, ದೋಸೆ ಇಡ್ಲಿಗಳಿಗೆ ಸೇರಿಸುವುದು ತ್ರಾಸದ ಕೆಲಸವೆಂದು ಒಂದೇ ಪ್ರಯೋಗದಲ್ಸಿ ತಿಳಿದು ಬಂತು. ತಂದ ರಾಗಿ ಹಾಗೇ ಇದ್ದಿತು.



  ತಿನ್ನಲು ಕತ್ತರಿಸಿಟ್ಟ ಹಣ್ಣು ಅರ್ಧ ಬಟ್ಟಲು ಉಳಿದಿದೆ,

ಪಪ್ಪಾಯ ಹಲ್ವ ಮಾಡಲು ತಯಾರಿ ನಡೆದಿದೆ,

ನಾನ್ ಸ್ಟಿಕ್ ಬಾಂಡ್ಲಿಗೆ ಸುರುವಿ,

ಒಲೆಯ ಮೇಲಿಟ್ಟು,

2 ಚಮಚ ತುಪ್ಪ ಎರೆದು,

ಸೌಟಾಡಿಸುತ್ತ ಇದ್ದ ಹಾಗೇ ರಾಗಿಯ ನೆನಪಾಯ್ತು.

2 ದೊಡ್ಡ ಚಮಚ ರಾಗಿ ಹುರಿಯಲ್ಪಟ್ಟಿತು.

ಮಿಕ್ಸಿಯಲ್ಲಿ ಬೀಸಲಾಗಿ ನುಣುಪು ಹುಡಿ ದೊರೆಯಿತು.

ಪಪ್ಪಾಯಿ ರಸಭರಿತವಾಗಿ,

ಕುದಿಕುದಿಯುತ್ತಿರುವಾಗ,

ರಾಗಿ ಹುಡಿಯೂ ಬಿದ್ದಿತು.

2 ಅಚ್ಚು ಬೆಲ್ಲ ( ಲಿಂಬೆ ಗಾತ್ರದ್ದು ) ಹಾಕಿದ್ದಾಯ್ತು.

ಬೆಲ್ಲ ಕರಕರಗಿ,

ಪಾಕ ಮಿಶ್ರಣವಾಗಿ,

ರಾಗಿ ಪಪ್ಪಾಯ್ ಹಲ್ವ ಸಿದ್ಧವಾಯಿತು.

" ಚಿಟಿಕೆ ಉಪ್ಪು ಹಾಕಲು ಮರೆಯಬೇಡ.. " ಗೌರತ್ತೆಯ ಆರ್ಡರ್ ತೇಲಿ ಬಂತು.

ಹೌದೂ... ಉಪ್ಪು ಇಲ್ಲದೆ ರುಚಿಯಿಲ್ಲ..

ಏಲಕ್ಕಿ, ಗೋಡಂಬಿ ಹಾಕಬಹುದಿತ್ತು...

ಇದು ನಮ್ಮ ಈ ಸಂಜೆಯ ತಿನಿಸು.





Friday 6 April 2018

ಭಾಪ್ ರೇ... ಬಪ್ಪಂಗಾಯಿ!







ಒಂದೆರಡಲ್ಲ, ನಾಲ್ಕು ಬಪ್ಪಂಗಾಯಿ ಕೊಯ್ದು ಇಟ್ಟ ಚೆನ್ನಪ್ಪ. ಎಲ್ಲವೂ ಹಣ್ಣು. ಏನು ಮಾಡಲೀ...

ನಮ್ಮ ತೋಟದಲ್ಲಿ ನಾಗಬನ ಇದೆ.
ಬೆಳಗಾದರೆ ಶ್ರೀನಾಗದೇವರ ಸನ್ನಿಧಾನಕ್ಕೆ ಅನಿರೀಕ್ಷಿತ ಅತಿಥಿಗಳ ಆಗಮನ.  
 ದೊಡ್ಡ ಪರಿವಾರವೇ ಬಂದಿತ್ತು, ಪುಟ್ಟ ಮಕ್ಕಳೂ...

ಎಲ್ಲಿಂದ ಬಂದವರೋ, ಈ ರಣಬಿಸಿಲಿಗೆ ಬಾಯಾರಿಕೆ ಕೊಡದಿದ್ದರೆ ಹೇಗೆ?

ತಂಬಿಗೆ ತುಂಬ ನೀರು, ಬೆಲ್ಲದೊಂದಿಗೆ ಸತ್ಕಾರ.
ಥಟ್ ಎಂದು ಐಡಿಯಾ!
ಪಪ್ಪಾಯಿ ಚಕಚಕನೆ ಕತ್ತರಿಸಲ್ಪಟ್ಟಿತು.
.
.
ಹಣ್ಣು ಆನಂದ ಪಟ್ಟಿತು.



Friday 30 March 2018

ದಾಸವಾಳದ ಸಾರು






ಬೇಲಿಯುದ್ದಕ್ಕೂ ಅರಳಿ ನಿಂತ ದಾಸವಾಳದ ಹೂವುಗಳು, ಹೂವುಗಳನ್ನು ಕಿತ್ತು ಅಡುಗೆಮನೆಗೆ ತಂದಾಯ್ತು.
“ ಹೂವು ದೇವರ ಪೂಜೆಗಲ್ವೇ… ಅಡುಗೆ ಕೋಣೆಯಲ್ಲೇನು ಕೆಲ್ಸ ಹೂವಿನ ಜೊತೆ… “ ಕೇಳಿಯೇ ಕೇಳ್ತೀರಾ.

ಸ್ವಾರಸ್ಯ ಏನಪ್ಪಾ ಅಂದ್ರೆ ಹಿಂದೆ ಸಾರು ಮಾಡಲಿಕ್ಕೆಂದೇ ಒಂದು ಜಾತಿಯ ದಾಸವಾಳ ತೋಟ, ಗುಡ್ಡ ಬದಿಗಳಲ್ಲಿ ತಾನೇ ತಾನಾಗಿ ಸಿಗುತ್ತ ಇತ್ತು. ನಸು ಹಳದಿ ಬಣ್ಣದ ಹೂವು, ನಡುವೆ ಗಾಢವರ್ಣದ ಇದು ಕಾಣಲೂ ಬೆಂಡೆಕಾಯಿ ಹೂವಿನಂತೆ ಅತ್ಯಾಕರ್ಷಕ. ಗೂಗಲ್ ಹುಡುಕಾಟ ನಡೆಸಿದಾಗ ಬಾಲ್ಯದಲ್ಲಿ ಕಾಣ ಸಿಗುತ್ತಿದ್ದ ಹೂವು ಸಿಕ್ಕಿತು. ಸಹಜವಾದ ಹುಳಿ ರುಚಿಯನ್ನೂ ತನ್ನದೇ ಬಣ್ಣವನ್ನೂ ಹೊಂದಿರುವ ಇದರ ಸಾರು ನಮಗೆ ರಜಾ ದಿನಗಳಲ್ಲಿ ಊರಿನ ತೋಟದ ಮನೆಯಲ್ಲಿ ಲಭಿಸುತ್ತಿತ್ತು. ಮಾಮೂಲಿ ದಾಸವಾಳ ದಿನವೂ ಹೂ ಬಿಡುವಂತೆ, ಎಲ್ಲ ಕಾಲಗಳಲ್ಲಿ ಈ ಹೂವು ಲಭಿಸದು. ಕ್ರಿಸ್ಮಸ್ ರಜಾ ದಿನಗಳು ನಮ್ಮ ಹಳ್ಳಿ ವಾಸ್ತವ್ಯದ ಕಾಲ, ಆಗಲೇ ಈ ಸಾರಿನ ಹೂವು ಅರಳಿರುತ್ತಿತ್ತು, ಸಾರು ಮಾಡಲಿಕ್ಕೆ ನಾನೇ ಕಿತ್ತು ತಂದಿದ್ದೂ ಇದೆ. ಕೇವಲ ಸಾರು ಮಾತ್ರವಲ್ಲ, ಶರಬತ್ ಕೂಡಾ ರುಚಿಕರ. Wild Hibiscus, Hill Hemp Bendy, hibiscus hispidissimus ಇತ್ಯಾದಿ ನಾಮಗಳಿಂದ ಶೋಭಿತವಾಗಿರುವ ಈ ಹೂವನ್ನು ಇತ್ತೀಚಿನ ದಿನಗಳಲ್ಲಿ ನಾನು ಕಂಡಿದ್ದಿಲ್ಲ.

ಕನ್ನಡದಲ್ಲಿಯೂ ಹಲವಾರು ನಾಮಕರಣ… ಕೈರ್ಪುಳಿ, ಬೆಟ್ಟ ಬೆಂಡೆ… ಇನ್ನೇನೆಲ್ಲ ಇವೆಯೋ ತಿಳಿಯದು.
Hibiscus hispidissimus Griff, ಎಂಬ ಶಾಸ್ತ್ರಸಮ್ಮತ ಹೆಸರು ಸಸ್ಯವಿಜ್ಞಾನಿಗಳಿಂದ ನೀಡಲ್ಪಟ್ಟಿದೆ.

ಈ ದಿನ ಬೇಸಿಗೆಗೆ ಅಪ್ಯಾಯಮಾನವಾದ ಸಾರು ದಾಸವಾಳದ ಹೂವಿನಿಂದ ಮಾಡೋಣ.

“ ಈಗ ಕಾಣ ಸಿಗದ ಹೂವನ್ನು ಎಲ್ಲಿಂದ ತರೂದು? “
ಅದೇ ದಾಸವಾಳವನ್ನು ಹುಡುಕಲಿಕ್ಕೆ ಯಾವುದೋ ಬೆಟ್ಟ ಹತ್ತಿ ಸುತ್ತಾಡುವ ಶ್ರಮ ನಮಗೆ ಬೇಡ, ಸಾಧ್ಯವೂ ಇಲ್ಲ ಅನ್ನಿ. ಕಣ್ಣೆದುರು ಅರಳಿ ನಂತಿರುವ ದಾಸವಾಳ ನಮಗೆ ಸಾಕು. ಹುಳಿ ರುಚಿ ಸಿಗಲಿಕ್ಕೆ ಹುಣಸೆ ಹುಳಿ ಇದೆ. ಬೆಲ್ಲ, ಉಪ್ಪು, ನೀರು ಹಾಗೂ ಒಗ್ಗರಣೆ ಸಾಹಿತ್ಯಗಳು ಅಡುಗೆಮನೆಯಲ್ಲಿ ಇದ್ದೇ ಇದೆ.

ಐದು ಎಸಳಿನ ಕೆಂಪು ದಾಸವಾಳ ಯಾ ಬಿಳಿ ದಾಸವಾಳ ನಮ್ಮ ಆಯ್ಕೆ. ಬಿಳಿ ಅಂದ್ರೆ ಅಚ್ಚ ಬಿಳುಪಿನದ್ದು ಆಗದು, ನಸು ಹಳದಿ ಬಣ್ಣದ್ದಾಗಿರಬೇಕು. ಇವೆರಡು ಬಣ್ಣದ ದಾಸವಾಳಗಳು ಮೂಲ ಬಣ್ಣದ ಹೂಗಳು..
ಸಾರು ಮಾಡಲಿಕ್ಕೆ ಕೆಂಪು ಬಣ್ಣದ ಹೂವು ಚೆನ್ನ,  ಗಾಢ ವರ್ಣವನ್ನೂ ನೀಡುವ ಇದರ ಮುಂದೆ ಬಿಳಿ ಹೂವು ಮಾಸಲು ಬಣ್ಣ ಬಿಟ್ಟೀತು.

ಒಗ್ಗರಣೆ ಘಂ ಅನ್ನಬೇಕಿದ್ರೆ ಬೆಳ್ಳುಳ್ಳಿ ಜಜ್ಚಿ ಇಟ್ಕೊಳ್ಳಿ. ಕರಿಬೇವು ಇರಲಿ.

ಐದಾರು ದಾಸವಾಳ ಹೂ ಪಕಳೆಗಳು ಮಾತ್ರ ಸಾಕು, ಹಸಿರು ತೊಟ್ಟು, ಕುಸುಮ ಬೇಡ.

ದಾಸವಾಳದ ಹೂ ಎಸಳುಗಳನ್ನು ಬಿಡಿಸಿ, ನೆಲ್ಲಿ ಗಾತ್ರದ ಹುಣಸೆಹುಳಿ ಗಿವುಚಿ, ಒಂದು ಅಚ್ಚು ಬೆಲ್ಲ ಪುಡಿ ಮಾಡಿಟ್ಟು, ರುಚಿಗೆ ಬೇಕಾದ ಉಪ್ಪು ಎದುರಿಗಿಟ್ಟು, ಎರಡು ಲೋಟ ನೀರು ಪಕ್ಕದಲ್ಲಿಟ್ಟು,

ಸಾರು ಮಾಡಲೆಂದೇ ಇರುವ ನಾನ್ ಸ್ಟಿಕ್ ಪ್ಯಾನ್ ಒಲೆಗೇರಿಸಿ,
ಒಗ್ಗರಣೆ ಸಾಮಗ್ರಿಗಳು ಬಿಸಿಯೇರಿ,
ಸಾಸಿವೆ ಚಟಪಟ ಎಂದಾಗ,
ಬೆಳ್ಳುಳ್ಳಿ ಪರಿಮಳ ಬೀರಿದಾಗ,
ಕರಿಬೇವು ಬೀಳಿಸಿ,
ಚಿಟೆಕೆ ಅರಸಿಣ ಬಿದ್ದು,
ದಾಸವಾಳ, ಹುಳಿ, ಬೆಲ್ಲ, ಉಪ್ಪು, ಹಾಗೂ ನೀರು ಸೇರಿ,
ಕುದಿ ಕುದಿದಾಗ,
ಹೂವಿನ ಸಾರು ಸಿದ್ಧವಾಗದೇ…

ತಂಪು ಗುಣವುಳ್ಳ ದಾಸವಾಳದ ಸಾರು ಸವಿಯೋಣ,
 ನಮ್ಮ ಬೇಸಿಗೆಯ ಬೇಗೆಗೆ ನಿಸರ್ಗದ ಕೊಡುಗೆ ಅನ್ನೋಣ.


ದಾಸವಾಳದ ಪೇಯ 
ಸಾರು ಸವಿದಾಯ್ತು, ದಾಸವಾಳ, ಹುಳಿ, ಬೆಲ್ಲ, ಉಪ್ಪು, ಹಾಗೂ ಮೂರು ಲೋಟ ನೀರನ್ನು ಕುದಿಸಿ, ಕುದಿಯುತ್ತಿರುವಾಗ ಗರಂ ಮಸಾಲಾ ಪ್ಯಾಕೆಟ್ ಬಿಡಿಸಿ, ಲವಂಗ, ಚಕ್ಕೆ, ಏಲಕ್ಕಿ ಇತ್ಯಾದಿಗಳನ್ನು ಸುವಾಸನೆ ಹಾಗೂ ರುಚಿಗೆ ತಕ್ಕಷ್ಟು ಹಾಕಿ ಕುದಿಸಿ. ಮೂರು ಲೋಟ ನೀರು ಹಾಕಿದ್ದೇವೆ, ಕುದಿದು ಒಂದು ಲೋಟದಷ್ಟು ನೀರು ಆರಬೇಕು, ಮಸಾಲಾ ಸಾಮಗ್ರಿಗಳ ಸಾರ ನೀರಿಗೆ ಬಿಟ್ಟುಕೊಳ್ಳಬೇಕು. ಕೆಳಗಿಳಿಸಿ, ಜಾಲರಿಯಲ್ಲಿ ಶೋಧಿಸಿ, ಅರ್ಧ ಚಮಚ ತುಪ್ಪ ಎರೆಯುವಲ್ಲಿಗೆ ದಾಸವಾಳದ ಪೇಯ ಯಾ ಶರಬತ್ ಯಾ ಸೂಪ್ ಸಿದ್ಧವಾಗಿದೆ.  

ದಾಸವಾಳದ ಈ ಪಾನೀಯ ಚೆನ್ನಪ್ಪನಿಗೂ ದಕ್ಕಿತು. ಸಂಜೆ ಅವನು ಮನೆಗೆ ತೆರಳುವ ಮೊದಲು ನನ್ನ ಗೂಗಲ್ ಸಂಪಾದಿತ ಚಿತ್ರವನ್ನು ಅವನೆದುರು ಪ್ರದರ್ಶಿಸಲಾಯಿತು. “ ಕಂಡಿದ್ದೀಯಾ ಈ ಹೂವನ್ನು… ? “

“ ಇಲ್ಲಾ ಅಕ್ಕ, ನಾನೂ ಸುಮಾರು ಸಮಯದಿಂದ ಇದನ್ನು ಹುಡುಕುತ್ತ ಇದ್ದೇನೆ… “
 ಹೌದೂ, ನಾನು ಈ ಮನೆಗೆ ಮದುವೆಯಾಗಿ ಬಂದ ಹೊಸತರಲ್ಲಿ ತೋಟದ ತೋಡಿನ ಬದಿಗೆ ಈ ಹೂ ಕಂಡಿದ್ದೇನೆ, “ ಈ ಹೂವನ್ನು ಸಾರು ಮಾಡ್ತಾರಲ್ವ? “ ಅಂತ ನಾನು ಕೇಳಿದ್ದಕ್ಕೆ ಅಂದಿನ ಕೆಲಸಗಿತ್ತಿಯರು ಸರಿಯಾಗಿ ಸ್ಪಂದಿಸದೇ ಇದ್ದಿದ್ದನ್ನೂ ಅವನಿಗೆ ತಿಳಿಸಿ, “ ತೋಟದ ಆ ಜಾಗದಲ್ಲಿ ಈಗಲೂ ಆ ದಾಸವಾಳ ಇರುವ ಸಾಧ್ಯತೆ ಇದೆ. “ ಆ ಕೊಡಲೇ ಚೆನ್ನಪ್ಪ ಜಾಗೃತನಾದ.

ಅಂತೂ ನಮ್ಮ ತೋಟದೊಳಗೆ ಬೆಟ್ಟ ಬೆಂಡೆಯೆಂದು ಕರೆಯಲ್ಪಡುವ ಗುಡ್ಡೆ ದಾಸಾಳ ಇದೆ, “ ಈಗ ಹೂ ಇಲ್ಲ ಅಕ್ಕ. “ ಎಂದ ಚೆನ್ನಪ್ಪ.
“ ಹೂವು ಸಿಗಬೇಕಾದ್ರೆ ಮುಂದಿನ ನವಂಬರ್ - ಜನವರಿ ತನಕ ಕಾಯಬೇಕು. “ ಗೊತ್ತಾಯ್ತಲ್ಲ.
“ಅದು ಸರಿ. ಹೂವು ಚಟ್ಣಿ ಮಾಡಲಿಕ್ಕೂ ಆಗುತ್ತಂತೆ. “
“ ಓ, ಹೌದಾ… “
“ ಹೂವಿನಲ್ಲೇ ಹುಳಿ ಉಂಟಲ್ಲ. “



Friday 23 March 2018

ಮಾವಿನಕಾಯಿ ಗೊಜ್ಜು



ಮಾವಿನಕಾಯಿ ಕೊಯ್ದು ತಂದ ಚೆನ್ನಪ್ಪ, ವಿಶೇಷತೆಯೇನೂ ಇಲ್ಲ, ಉಪ್ಪಿನಕಾಯಿ ಹಾಕಬೇಕಾಗಿದೆ ಅಷ್ಟೇ.  

ಮೊದಲನೆಯದಾಗಿ ಮಾವಿನಕಾಯಿ ಹೇಗಿದೆಯೆಂದು ನೋಡುವುದು, ಕೇವಲ ಕಣ್ಣನೋಟ ಸಾಲದು, ಕತ್ತರಿಸಿ, ಉಪ್ಪು ಬೆರೆಸಿ, ಬೇಕಿದ್ದರೆ ಮೆಣಸನ್ನೂ ಹಾಕಿ ತಿನ್ನುವುದು. ಅದೂ ಆಯ್ತು.

ಎರಡನೆಯದಾಗಿ ಮಾವಿನಕಾಯಿ ಗೊಜ್ಜು ತಯಾರಿಸಿ ಅನ್ನದೊಂದಿಗೆ ಸವಿಯುವುದು.

ಹೇಗೆ?
ಎರಡು ಯಾ ಮೂರು ಮಾವಿನಕಾಯಿಗಳನ್ನು ಹೋಳು ಮಾಡಿ,
ಎರಡು ಹಸಿಮೆಣಸು ಸಿಗಿದು ಹಾಕಿ,
ಒಂದು ಲೋಟ ನೀರು ಎರೆದು,
ರುಚಿಗೆ ತಕ್ಕ ಉಪ್ಪು ಬಿದ್ದು,
ಮಾವಿನಕಾಯಿ ಬೇಯಲಿಟ್ಟು,
ಬೆಂದ ಮೇಲೆ ಆರಲು ಬಿಟ್ಟು,
ಮಿಕ್ಸಿ ಯಂತ್ರ ಬೇಡ,
ಕೈಯ ತಂತ್ರದಲ್ಲಿ ಗಿವುಚಿ,
ಗಿವುಚಿದಾಗ,
ಗೊಜ್ಜು ಬಂದೆನೆಂದಿತು,
ಒಗ್ಗರಣೆಯ ಮರೆಯದಿರಿ,
ಬೆಲ್ಲವನ್ನು ಬಿಡದಿರಿ,
" ಅಹಹ... ಸಿಹಿ
ಒಹೊಹೋ ಹುಳಿ "
ಸವಿಯುತ್ತ ಉಣ್ಣಿರಿ.

ಯುಗಾದಿಗೆ ಮಾವಿನಕಾಯಿ ಗೊಜ್ಜು ಮಾಡಿ ತಿಂದೆವು.
ಯುಗಾದಿ ಬರಬೇಕು, ಮಾವಿನಕಾಯಿ ಇರಬೇಕು. ಅಲ್ವೇ?