Pages

Ads 468x60px

Monday 4 December 2017

ಬಸಳೆಯ ಪಲ್ಯ




ಈ ಬಾರಿ ಗಿರೀಶ್ ಮನೆಗೆ ಬಂದಾಗ, " ಮನೆಯಲ್ಲೇ ಆಗಿದ್ದು. " ಎಂದು ಕೆಂಪು ದಂಟಿನ ಬಸಳೆ ತಂದು ಕೊಟ್ಟ. ಕೆಂಪು ಬಣ್ದ ದಪ್ಪ ದಪ್ಪ ದಂಟಿನ ತಾಜಾ ಹಸಿರು ಎಲೆಗಳ ಈ ಬಸಳೆ ನನ್ನ ಹಿತ್ತಲಲ್ಲಿ ಈ ಮೊದಲೊಮ್ಮೆ ಇತ್ತು. ಪ್ರತಿ ವರ್ಷವೂ ನಿರ್ವಹಣೆ ಚೆನ್ನಾಗಿದ್ದಲ್ಲಿ ಮಾತ್ರ ಬಸಳೆಯಂತಹ ಸೊಪ್ಪು ತರಕಾರಿಗಳನ್ನು ಉಳಿಸಿಕೊಳ್ಳಬಹುದು. ಹೇಗೆ?

ವರ್ಷಕ್ಕೊಮ್ಮೆ ಬುಡ ಬದಲಾಯಿಸುತ್ತಿರಬೇಕು, ಹೊಸ ಜಾಗದಲ್ಲಿ ನೆಟ್ಟರೆ ಉತ್ತಮ. ಜಾಗ ಇಲ್ವೇ, ಅದೇ ಜಾಗದಲ್ಲಿ ಹೊಸ ಮಣ್ಣು ತುಂಬಿಸಿ, ಬಸಳೆಯ ಬಳ್ಳಿಗಳನ್ನು ನೆಟ್ಟು, ಸೊಪ್ಪು, ಗೊಬ್ಬರ, ಬೂದಿ, ನೀರು ಹಾಗೂ ಹಬ್ಬಿ ಹರಡಲು ಸೂಕ್ತವಾದ ಚಪ್ಪರದ ಹೊದಿಕೆಯನ್ನೂ ಹೊಂದಿಸಿ ಬಿಟ್ಟಲ್ಲಿ ಬಸಳೆ, ಬಲು ಸೊಗಸಾದ ಮನೆ ಹಿತ್ತಲ ಬೆಳೆ.

 ಕಡುಬೇಸಿಗೆಯಲ್ಲಿ ಸಿಕ್ಕಿದ ಈ ಕೆಂಪು ಬಸಳೆಯನ್ನು ಬಿಡಬಾರದು, ನೆರಳಿನಾಸರೆಯಲ್ಲಿ ಪ್ರತ್ಯೇಕವಾಗಿ ಒಂದು ಬಕೆಟ್ ತುಂಬ ಮಣ್ಣು ತುಂಬಿ ಎರಡು ಕುಡಿಗಳನ್ನು ಊರಿದ್ದೂ ಆಯಿತು.

  ಒಂದು ವಾರ ಬಿಟ್ಟು ಚೆನ್ನಪ್ಪ ಬಂದ, " ಇದೆಲ್ಲಿಂದ ಕೆಂಪು ಬಸಳೆ? "
" ಇದು ಜೀವ ಕೂಡೀತೋ ಹೇಗೆ? "
" ಓಹೋ.. ಕೂಡೀತು. ಈಗ ಇಲ್ಲೇ ಇರಲಿ, ನಂತರ ಚಪ್ಪರದಲ್ಲಿ ನೆಟ್ಟು ಬಿಡುವ... " ಎಂದ ಚೆನ್ನಪ್ಪ.
" ಈಗ ಚಪ್ಪರದಲ್ಲಿರುವ ಬಸಳೆಯೂ ಹಳತಾಯ್ತು, ಕೆಂಪು, ಹಸಿರು ಅಂತ ಎರಡೂ ಬಣ್ಣದ್ದು ಒಂದೇ ಚಪ್ಪರದಲ್ಲಿ ಆದೀತಲ್ಲ. "
" ಆದೀತು, ಅದೇನೂ ತೊಂದರೆಯಿಲ್ಲ. "

ಮುಂದಿನ ಹತ್ತಾರು ದಿನಗಳಲ್ಲಿ ನನ್ನ ಹಳೆಯ ಬಸಳೆ ಚಪ್ಪರ ನಿರ್ನಾಮವಾಗಿ ಆ ಸ್ಥಾನದಲ್ಲಿ ಹೊಸ ಕೆಂಪು ಮಣ್ಣು ಬಿದ್ದು, ಎರಡು ಗೂಟ ಊರಿ ಹೊಸದಾದ ಬಸಳೆ ಕುಡಿಗಳನ್ನು ನೆಟ್ಟಿದ್ದಾಯ್ತು. ದಿನವೂ ಧಾರಾಳ ನೀರು ಬೀಳುತ್ತಿದ್ದಂತೆ ಬಸಳೆ ಮೇಲೇರಿತು.

------------- ------------------ ------------------


" ಅಮ್ಮ, ನಾವು ಮುಂದಿನ ವಾರ ಊರಿಗೆ ಬರುವವರಿದ್ದೇವೆ... " ಮಗನ ಕರೆ ಬಂದಿತು.
" ಆಯ್ತೂ, ಗೇರುಹಣ್ಣು, ಹಲಸಿನಹಣ್ಣು, ಮಾವಿನಹಣ್ಣು, ಚಿಕ್ಕೂ, ಪೇರಳೆ, ಬಪ್ಪಂಗಾಯಿ... "
" ಪೈನಾಪಲ್ ಇಲ್ವಾ? "
" ಕೊಯ್ದು ಇಟ್ಟಿದ್ದು ಹಣ್ಣಾಗಿದೆಯಲ್ಲ, ನೀನು ಬರುವ ತನಕ ಉಳಿಯುತ್ತೋ ಇಲ್ವೋ... "
" ಅದೆಲ್ಲ ನಂಗೊತ್ತಿಲ್ಲ, ತಿನ್ನಲಿಕ್ಕೆ ಬೇಕಲ್ಲ. "
" ಆಯ್ತಪ್ಪಾ ಆಯ್ತು, ಅದನ್ನು ಹಾಗೇ ಜಾಗ್ರತೆಯಲ್ಲಿ ಇಡೋಣ... "

ಮಗ ಸೊಸೆ ಬಂದಿದ್ದಾಯ್ತು. ಪಟ್ಟಣದ ಸೊಸೆ ಬರ್ತಾಳೇಂತ ಪೇಟೆಯಿಂದ ತರಕಾರಿ ಸಂತೆಯೇ ಮನೆಗೆ ಬಂದಿತ್ತು. ಎಲ್ಲ ಮಾಮೂಲಿನ ತರಕಾರಿಗಳು. ಟೊಮೆಟೋ, ಕೊತ್ತಂಬರಿಸೊಪ್ಪು, ಕ್ಯಾರೆಟ್ಟು, ಬೀನ್ಸು..... ಇವೆಲ್ಲ ನಗರವಾಸಿಗಳು ದಿನವೂ ತಿನ್ನುವ ತರಕಾರಿಗಳು. ಊಟದಲ್ಲಿ ನಮ್ಮ ಊರಿನ ರುಚಿ ಬರಬೇಡವೇ, ಹಾಗಾಗಿ ಒಂದು ದಿನ ಬಸಳೇ ಸೊಪ್ಪಿನ ಪಲ್ಯ ಹಾಗೂ ಮಾವಿನಹಣ್ಣಿನ ಸಾರು ಸಿದ್ಧವಾಯಿತು.

ಬಸಳೆ ಪಲ್ಯ ತಿನ್ನುತ್ತ ಮಾಡುವ ವಿಧಾನವನ್ನೂ ಕಲಿತಳು ಮೈತ್ರಿ. ಬಸಳೆ ಪಲ್ಯ ಮಾಡಿದ್ದು ಹೇಗೆಂದು ನೋಡೋಣ.

25 ರಿಂದ 30 ಬಸಳೆ ಎಲೆಗಳು,
3 - 4 ನೀರುಳ್ಳಿ
2 ಎಸಳು ಬೆಳ್ಳುಳ್ಳಿ
ಎಲ್ಲವನ್ವೂ ಚಿಕ್ಕದಾಗಿ ಹಚ್ಚಿಟ್ಟುಕೊಳ್ಳಿ.

ಬಾಣಲೆಗೆ 2 ಚಮಚ ತುಪ್ಪ ಯಾ ಅಡುಗೆಯ ಎಣ್ಣೆ ಎರೆದು ಸಾಸಿವೆ, ಉದ್ದಿನಬೇಳೆ, ಒಣಮೆಣಸುಗಳ ಒಗ್ಗರಣೆ ಸಿಡಿಯುತ್ತಿದ್ದಾಗ ಪಕ್ಕದಲ್ಲೇ ಒಂದು ಪೊಟ್ಟಣ ಕಂಡಿತು, ಇದೇನಿದೆಂದು ಬಿಡಿಸಿದಾಗ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಎಂದು ತಿಳಿಯಿತು. ಮೈತ್ರಿ ನಿನ್ನೆ ಪುಲಾವ್ ಎಂಬ ಸವಿರುಚಿಯನ್ನು ನಮಗೆ ಉಣಬಡಿಸಿದ್ದಳು. " ಹೌದಲ್ಲ, ಈ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಎಲ್ಲಿಂದ ತಂದಿದ್ದೂ... "

" ಅದೂ ಇಲ್ಲೇ ಪಕ್ಕದ ಅಂಗಡೀದು. " ಅಂದಳು ಮೈತ್ರಿ.

ನಾನು ಎಂತಹ ಹಳ್ಳೀಮುಕ್ಕಿ ಎಂದು ಈಗ ತಿಳಿಯಿತು. ಸುಮ್ನೇ ಬೆಳ್ಳುಳ್ಳಿ ಕಟ್ ಮಾಡಿಟ್ಕೊಂಡಿದ್ದು...
ಇರಲಿ, ಪ್ಯಾಕೆಟ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಕೂಡಾ ನಮ್ಮ ಪಲ್ಯಕ್ಕೆ ಬಿದ್ದಿತು.
ನಂತರ ಕತ್ತರಿಸಿದ ನೀರುಳ್ಳಿ ಹಾಕಿ ಬಾಡಿಸಿ.
ರುಚಿಗೆ ಉಪ್ಪು, ಚಿಟಿಕೆ ಅರಸಿಣ ಕೂಡಿಸಿ ಬಸಳೆ ಸೊಪ್ಪನ್ನೂ ಹಾಕಿ ಮುಚ್ಚಿ ಬೇಯಿಸಿ, ನೀರು ಕೂಡಿಸದಿರಿ.
ಒಂದೆರಡು ನಿಮಿಷಗಳ ನಂತರ ಸೌಟಾಡಿಸಿ, ಕಾಯಿತುರಿ ಉದುರಿಸಿ ಮುಚ್ಚಿ ಬೇಯಿಸಿ. ಚಿಕ್ಕ ಉರಿಯಲ್ಲಿರಲಿ. ಸೊಪ್ಪು ಬೆಂದಿದೆಯೋ ಎಂದು ನೋಡಿ ಸ್ಟವ್ ಆರಿಸಿ. ಬಹು ಬೇಗನೆ ಮಾಡಬಹುದಾದ ಬಸಳೆಯ ಪಲ್ಯ ಆರೋಗ್ಯಕ್ಕೂ ಉತ್ತಮ.

ಸಾಮಾನ್ಯವಾಗಿ ಬಸಳೆಯಂತಹ ಸೊಪ್ಪುತರಕಾರಿಗಳು ಆ್ಯಂಟಿ ಓಕ್ಸಿಡೆಂಟ್ ಗುಣಧರ್ಮವನ್ನು ಹೊಂದಿರುತ್ತವೆ.
ತಲೆನೋವು, ಜ್ವರ, ಅತಿಸಾರ, ರಕ್ತಹೀನತೆ, ಅಧಿಕ ರಕ್ತದೊತ್ತಡ ಇವೇ ಮೊದಲಾದ ಶಾರೀರಕ ತೊಂದರೆಗಳನ್ನು ತಡೆಗಟ್ಟುವಲ್ಲಿ ನಾವು ಸೇವಿಸುವ ಸೊಪ್ಪುಗಳ ಪಾತ್ರ ಮುಖ್ಯವಾಗಿದೆ.
ಮನೆ ಹಿತ್ತಲ ಬೆಳೆಯಾದ ಬಸಳೆಗೆ ಕೀಟನಾಶಕ ಯಾ ರಸಗೊಬ್ಬರಗಳ ಹಂಗು ಇಲ್ಲ.
ಆಗ ತಾನೇ ಕೊಯ್ದ ಸೊಪ್ಪಿನಲ್ಲಿ ಜೀವಸತ್ವಗಳು ಅಧಿಕವಾಗಿರುತ್ತವೆ.
ರುಚಿಕರವಾದ ಕೆಂಪು ಬಸಳೆ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಸ್ತ್ರೀ ಬಂಜೆತನ ನಿವಾರಕ.
ಖನಿಜಾಂಶಗಳಿಂದ ಕೂಡಿದ ಬಸಳೆ ದೈಹಿಕ ದುರ್ಬಲತೆಯನ್ನೂ ಹೋಗಲಾಡಿಸುವುದು.
Basella rubra ಎಂಬ ಸಸ್ಯಶಾಸ್ತ್ರೀಯ ಹೆಸರನ್ನು ಹೊಂದಿರುವ ಕೆಂಪು ಬಸಳೆಯನ್ನು ಮೂತ್ರನಾಳದ ಸೋಂಕು ರೋಗ, ಅದರಲ್ಲೂ ಲೈಂಗಿಕ ರೋಗಗಳಿಗೆ ಪಾರಂಪರಿಕ ಔಷಧಿಯಾಗಿ ಬಾಂಗ್ಲಾದೇಶೀಯರು ಬಳಸುತ್ತಾರಂತೆ.
ಆಧುನಿಕ ವೈದ್ಯಕೀಯ ವಿಜ್ಞಾನವೂ ಬಸಳೆಯಲ್ಲಿ ಹುಣ್ಣು ಪ್ರತಿಬಂಧಕ ಶಕ್ತಿ ಇರುವುದನ್ನು ಕಂಡು ಹಿಡಿದಿದೆ.
ಬಸಳೆಯ ಸೇವನೆ, ಆರೋಗ್ಯಕರ ಜೀವನ ನಮ್ಮದಾಗಲಿ.



ಟಿಪ್ಪಣಿ: ಉತ್ಥಾನ ಮಾಸಪತ್ರಿಕೆಯಲ್ಲಿ ಪ್ರಕಟವಾಗಿರುವ ಬರಹ, ಅಕ್ಟೋಬರ್, 2017.


0 comments:

Post a Comment