Pages

Ads 468x60px

Wednesday 1 November 2017

ಅಮೃತಫಲ

   
                 
                  

ಹಾಲು ತಂದಿದ್ದು ಅತಿಯಾಗಿ ಉಳಿದರೆ ಈ ಸ್ವೀಟು ಮಾಡುವ ಹವ್ಯಾಸ ನನ್ನದು. ಮನೆಗೆ ಬಂದ ಅತಿಥಿಗಳೇ ತಿಂದೂ, ಕೊಂಡೂ ಹೋದರು...

ಹಿರಣ್ಯದ ನಾಗಬನದಲ್ಲಿ ಧಾರ್ಮಿಕ ಚಿಂತನಾಸಭೆ ನಡೆಯುವುದಿತ್ತು. ಬರಲಿರುವ ಊರ ಪರವೂರ ಮಹನೀಯರಿಗೆ ಅತಿಥಿಸತ್ಕಾರದ ವ್ಯವಸ್ಥೆ ಆಗಬೇಕಾಗಿದೆ. ಕಾಫಿ ಚಹಾ ವಿತರಣೆಗಾಗಿ ದೊಡ್ಡ ಕ್ಯಾನ್ ತುಂಬ ಪಕ್ಕದ ಮಿಲ್ಮಾ ಡೈರಿಯಿಂದ ಹಾಲು ಬಂದಿತು.

ತಂದ ಹಾಲನ್ನು ಮುಗಿಸಲು ಕಾಫಿ ಚಹಾ ಪಾನೀಯಗಳಿಂದ ಸಾಧ್ಯವಾಗದೇ ಹೋಯಿತು, ಅಂದಾಜು ನಾಲ್ಕೂಐದೂ ಲೀಟರು ಹಾಲು ಉಳಿಯಿತು. ಕುದಿಸಿದ ಹಾಲಿನಲ್ಲಿ ಶೇಖರಿತವಾಗಿದ್ದ ಕೆನೆಯನ್ನು ನಾಳೆಯ ಬೆಣ್ಣೆಗಾಗಿ ತೆಗೆದಿರಿಸಿ, ನಾಳೆಯ ಖರ್ಚಿಗಾಗಿ ಉಳಿದ ಹಾಲನ್ನು ಕುದಿಸಿಟ್ಟುಕೊಂಡರೂ ಇದು ಮುಗಿಯದ ಹಾಲು. ಪಕ್ಕದ ಮನೆಯಲ್ಲೇ ಇರುವ ನಮ್ಮಕ್ಕನನ್ನೂ ಕೂಗಿ ಕರೆದು, “ ಈ ಹಾಲು ನಿನಗೂ ಇರಲಿ... “ ಅಂದ್ಬಿಟ್ಟು ಅವಳೂ ಹಾಲು ಕೊಂಡೊಯ್ದರೂ ಎರಡು ಲೋಟಾ ಹಾಲು ಮಿಕ್ಕಿತು!

ಇಲ್ಲ, ಹಾಗೇ ಸುಮ್ಮನೆ ಬಿಡುವಂತಿಲ್ಲ. ಮುಂಜಾನೆ ಚಟ್ಣಿಗಾಗಿ ಒಂದು ತೆಂಗಿನಕಾಯಿ ಒಡೆದಿದ್ರಲ್ಲಿ ಅರ್ಧ ದೊಡ್ಡ ಕಡಿ ಇದೆ. ಆ ಕಾಯಿಯನ್ನು ತುರಿದು, ಮಿಕ್ಸಿಯಲ್ಲಿ ತಿರುಗಿಸಿ ತೆಂಗಿನಕಾಯಿ ಹಾಲನ್ನು ತೆಗೆದು,
 ಎರಡು ಪ್ರತಿ ಹಾಲುಗಳನ್ನು ದಪ್ಪ ತಳದ ತಪಲೆಗೆ ಸುರಿದು,
ಎರಡು ಲೋಟ ಸಕ್ಕರೆಯನ್ನು ಅಳೆದು,
ಹಾಲೂ ಸಕ್ಕರೆ ಬೆರೆತು, ಕುದಿಕುದಿದು,
ಕೈ ಬಿಡದೆ ಮಗುಚುತ್ತಾ ಇರಲು,
ಕೊತಕೊತನೆ ಕುದಿಯುತ್ತ ಉಕ್ಕಿ ಉಕ್ಕಿ ಬರುತ್ತಿರಲು,
ಮರದ ಸಟ್ಟುಗ ತಿರುತಿರುಗುತ್ತಿರಲು,
ಎರಡು ಏಲಕ್ಕಿ ಗುದ್ದಿ,
ಒಂದು ತಟ್ಟೆಗೆ ತುಪ್ಪದ ಪಸೆಯುದ್ದಿ,
ಹಾಲು ಸಕ್ಕರೆಯ ಪಾಕ ಘನವಾಗುತ್ತ ಬಂದು,

ಈ ಸಿಹಿ ತಿಂಡಿಗೆ ತುಪ್ಪ ಹಾಕಬೇಕಾಗಿಲ್ಲ.
ಮೈದಾ, ಕಡಲೆ ಯಾ ಅಕ್ಕಿ ಹಿಟ್ಟು ಇದಕ್ಕೆ ಬೇಡ.
ಹಾಲಿನ ಖೋವಾ, ಘನೀಕೃತ ಹಾಲಿನ ಪುಡಿಯಂತಹ ಪ್ಯಾಕೇಟುಗಳ ಬಳಕೆಯನ್ನೂ ನಾನು ಮಾಡಿಲ್ಲ.

ಇನ್ನೇನು ಗಟ್ಟಿಯಾಗುತ್ತ ಬಂದಿದೆ... ಕೆಳಗಿಳಿಸಿ ತುಪ್ಪ ಸವರಿದ ತಟ್ಟೆಗೆ ವರ್ಗಾಯಿಸಿ ಆರಲು ಬಿಡಿ.
ಅರ್ಧ ಗಂಟೆ ಬಿಟ್ಟು ಚೂರಿಯಲ್ಲಿ ಗೆರೆ ಹಾಕಿ.

ಸಿಹಿತಿಂಡಿಗೆ ಸೊಗಸಿನ ನೋಟವೂ ಇರಬೇಕು, ಅದಕ್ಕಾಗಿ ಚಿತ್ರದಲ್ಲಿರುವಂತೆ ಕಾಣಲು ಅಂಗೈಯಲ್ಲಿ ತಟ್ಟಿ ಪೇಢಾದಂತೆ ಮಾಡಿಟ್ಟೆ, ಬಿಸಿಯಿರುವಾಗ ಸಾಧ್ಯವಾಗದು, ಬಿಸಿ ಆರಿದ ನಂತರ ಮಾಡಿದ್ದು ಕಣ್ರೀ...

ಹೊರಚಾವಡಿಯಲ್ಲಿ ಆ ದಿನದ ಸಭಾ ಕಾರ್ಯಕ್ರಮದ ಆಯವ್ಯಯದ ಲೆಕ್ಕಾಚಾರದಲ್ಲಿ ಮಗ್ನರಾಗಿದ್ದ ನಮ್ಮೆಜಮಾನ್ರು ಹಾಗೂ ಪಡಾರು ಬಾಲಕೃಷ್ಣ ಶೆಟ್ಟಿ ನನ್ನ ರಸರುಚೆಯ ಮೊದಲ ಗ್ರಾಹಕರು.
“ ದೂಧ್ ಪೇಢಾ ತಿಂದ ಹಾಗೆ ಆಯ್ತ.. ? “ ಪ್ರಶ್ನೆ ಹಾಕದಿದ್ದರೆ ಹೇಗೆ?
“ ಮಗಳಿಗೆ ತಿನ್ನಲಿಕ್ಕೆ ಕೊಂಡು ಹೋಗುತ್ತೇನೆ... “ ಎಂದ ಬಾಲಕೃಷ್ಣ. ಪ್ರೈಮರಿ ಸ್ಕೂಲ್ ಬಾಲೆಗಾಗಿ ನಾಲ್ಕು ಪೇಢಾಗಳನ್ನು ಕಟ್ಟಿ ಕೊಟ್ಟೆ.

ನಮ್ಮ ಊರಿನ ಸಾಂಪ್ರದಾಯಿಕ ಸಿಹಿಭಕ್ಷ್ಯವಾದ ಈ ತಿನಿಸು ಅಮೃತಘಲವೆಂದು ಕರೆಯಲ್ಪಟ್ಟಿದೆ. ತೆಂಗಿನಕಾಯಿ ಹಾಲು ಇದನ್ನು ಘನೀಕರಿಸುವ ಸಾಧನ. ಹಸುವಿನ ಹಾಲು ಹಾಗೂ ತೆಂಗಿನಕಾಯಿ ಹಾಲು, ಅಬಾಲವೃದ್ಧರಿಗೂ ಎಲ್ಲ ವಯೋಮಾನದವರಿಗೂ ಶರೀರಕ್ಕೆ ಪುಷ್ಟಿದಾಯಕ ಆಹಾರ. ಜೀರ್ಣಕ್ಕೇನೂ ಬಾಧಕವಿಲ್ಲ. ಕೃತಕ ಸುವಾಸನಾದ್ರವ್ಯಗಳನ್ನು, ಬಣ್ಣಗಳನ್ನು, ಬೆಳ್ಳಿಯ ರೇಕುಗಳನ್ನೂ ನಾವು ಮನೆಯಲ್ಲೇ ತಯಾರಿಸುವ ತಿನಿಸುಗಳಿಗೆ ಹಾಕಲೇ ಬಾರದು. ಅಂತಹುದೇನಿದ್ದರೂ ಬೇಕರಿ ತಿಂಡಿಗಳಿಗೆ ಬಿಟ್ಟು ಬಿಡೋಣ.



0 comments:

Post a Comment