Pages

Ads 468x60px

Saturday 21 October 2017

ಮನೆಯ ಬೆಳಕು



“ ಅಮ್ಮ, ದೀಪಾವಳಿಗೆ ನಾವೆಲ್ಲರೂ ಊರಿಗೆ… “ ಮಗನ ಮೆಸೇಜ್ ಬಂದಿತು.

“ ಅಮ್ಮ, ನಿನಗೇನು ತರಲೀ… “ ಮಗಳ ಪ್ರಶ್ನೆ.

“ ಏನೂ ಬೇಡ ಬಿಡು, ಎಲ್ಲರೂ ಬರುತ್ತೀರಲ್ಲ, ಅದೇ ಸಾಕು. “

“ ನಿನಗೇಂತ ಕೈಯಲ್ಲೇ ಹೊಲಿಯುವ ಮೆಶೀನ್ ಕೊಂಡುಕೊಡಿದ್ದೇನೆ. “ ಎಂದಳು ಶ್ರೀದೇವಿ.

“ ಹೌದ! ನಿನಗೆ ಮಾತ್ರ ನನ್ನ ಲೈಕುಗಳು ಅರ್ಥವಾಗೋದು… “

ದಿನ ನಿಗದಿಯಾಗಿದ್ದಂತೆ ಬೆಳ್ಳಂಬೆಳಗ್ಗೆ ಮನೆ ತಲುಪಿದ ಮಕ್ಕಳು, “ ಅತ್ತೇ, ಹೊಲಿಗೆ ಮೆಶೀನು ಬಂದಿದೆ. “ ಮೈತ್ರಿಯ ಕೈಯಲ್ಲಿ ಪುಟ್ಟ ಬಾಕ್ಸ್.

“ ಅಮ್ಮ, ಇದರಲ್ಲಿ ಹೊಲಿಗೆ ಹಾಕಲಿಕ್ಕೆ ಎರಡು ಬ್ಯಾಟರಿ ಹಾಕ್ಬೇಕು, ಅದು ನಮ್ಮೂರಲ್ಲೇ ಸಿಗುತ್ತೆ... “ ಎಂದ ಮಗಳು.

“ ಸರಿ ಬಿಡು, ಅದನ್ನೆಲ್ಲ ನಿಧಾನವಾಗಿ ನೋಡಿಕೊಳ್ಳೋಣ, ಈಗ ಎಲ್ಲರೂ ತಿಂಡಿ ತಿಂದು ಮಲಗಿಕೊಳ್ಳಿ. “

ಸಂಜೆ ಆಯ್ತು, ನನ್ನ ಮುಸ್ಸಂಜೆಯ ರೂಢಿಯಂತೆ ಪುಟ್ಟ ದೀಪ ಹೊತ್ತಿಸಿ ಇಟ್ಟೆ. ಮೈತ್ರಿ ದೇವರ ಕೋಣೆಯಿಂದ ಹೂಬತ್ತಿಗಳನ್ನು ತೆಗೆದುಕೊಂಡು ಹೊರ ಬಂದಳು. ಅವಳೇನು ಮಾಡ ಹೊರಟಿದ್ದಾಳೆ ಎಂದು ನೋಡುವ ವ್ಯವಧಾನ ಇಲ್ಲದ ನಾನು ರಾತ್ರಿಯ ಅಡುಗೆಯ ತಯಾರಿಗಾಗಿ ಒಳಗೆ ಹೋದೆ.

ಹೊರಗಿನಿಂದ ಗದ್ದಲ ಕೇಳಿಸುತ್ತ ಇದೆ, “ ಅಮ್ಮ, ಬಾ ಇಲ್ಲಿ... ಒಳಗೆ ಏನು ಮಾಡ್ತಾ ಇದ್ದೀಯಾ? “
ಹೊರ ಬಂದಾಗ,



“ ಅತ್ತೇ ಈ ಫೋಟೋ ನಿಮ್ಮ ಬ್ಲಾಗ್ ನಲ್ಲಿ ಹಾಕಿ...” ಎಂದಳು ಸೊಸೆ.

ಹೌದಲ್ಲವೇ, ಶ್ರೀದೇವಿ ಕ್ಲಿಕ್ಕಿಸಿದ ಐಫೋನ್7ಪ್ಲಸ್ ಕೆಮರಾದ ಕಾರ್ಯಕ್ಷಮತೆ ಯಾವುದೇ ವೃತ್ತಿಪರ ಛಾಯಾಗ್ರಹಣವನ್ನೂ ನಾಚಿಸುವಂತಿದೆ!


Thursday 19 October 2017

 ಚಿಲ್ಲರೆಯ ವಿಷಯ!



 ಉಪ್ಪಳ ಪೇಟೆವರೆಗೆ ಹೋಗಿ ಬರುತ್ತೇನೆ. " ಬೈಕ್ ಏರಿ ಹೋಗಿದ್ದ ನಮ್ಮೆಜಮಾನ್ರು ಸಂಜೆಯಾಗುತ್ತಲೂ ಮನೆ ತಲುಪಿ ಮೊದಲು ಹೇಳಿದ್ದು ಹೀಗೆ, " ನಿನ್ನ ಫೇಸ್ ಬುಕ್ ವ್ಯವಹಾರಕ್ಕೆ ಫೋಟೋ... "

" ಏನೂ... "
" ನಾನು ವೈದ್ಯರಲ್ಲಿಗೆ ಹೋಗಿದ್ದು... " ಉಪ್ಪಳದ ಆಯುರ್ವೇದ ಪಂಡಿತರೂ ನಮ್ಮವರೂ ಸ್ನೇಹಿತರು.
" ಹ್ಞಾ, ಅಂತಹ ವಿಶೇಷದ ಫೋಟೋ ತೆಗೆಯಲಿಕ್ಕೆ ಏನು ಇತ್ತು ಅಲ್ಲಿ? "
" ಎಷ್ಟೊಂದು ಹಳೇ ಕಾಯಿನ್ ಕಲೆಕ್ಷನ್ ಇದೆ ಅವರ ಹತ್ತಿರ... ಅಂತಾದ್ದು ನನ್ನ ಬಳಿ ಒಂದೂ ಇಲ್ವೇ..." ಮಮ್ಮಲ ಮರುಗಿದರು ನಮ್ಮವರು.

“ ನನ್ನ ಕುತ್ತಿಗೆಯ ಪವನಿನ ಸರ… “ ಸಮಾಧಾನಿಸುತ್ತ, " ಇದೆಯಲ್ಲ ಓಬೀರಾಯನ ಕಾಲದ ಬೆಳ್ಳಿ ನಾಣ್ಯಗಳು... " ಐಫೋನ್ ಕೈಗೆತ್ತಿಕೊಂಡು ನಮ್ಮವರು ಕ್ಲಿಕ್ಕಿಸಿದ ಚಿತ್ರಗಳನ್ನು ಗಮನಿಸುತ್ತ, " ಇಂತಹ ಚಿಲ್ಲರೆ ನಾಣ್ಯಗಳು ನಮ್ಮಲ್ಲೂ ಉಂಟಲ್ಲ! "
" ಹೌದ, ಎಲ್ಲಿದೇ? ನಿನ್ನ ಬಳಿ ಹೇಗೆ ಬಂತು? " ನಮ್ಮವರ ಅಡ್ಡಪ್ರಶ್ನೆ.

"ಅದೂ ಅಪ್ಪನ ಕಪಾಟು ಉಂಟಲ್ಲ... "
" ಅಪ್ಪನ ಪೈಸ ನೀನು ಯಾಕೆ ತೆಗೆದಿಟ್ಟಿದ್ದು? "
" ಛೆ.. ಹಾಗೇನೂ ಅಲ್ಲ. ಆ ಕಪಾಟಿನಲ್ಲಿ ಇದೆ. ಒಂದು ಹಿತ್ತಾಳೆ ಲೋಟದಲ್ಲಿ ಇಟ್ಟಿದ್ದೇನೆ. ಕಪಾಟು ಬಾಗಿಲು ತೆಗೆದಾಗ ಬಲ ಮೂಲೆಯ ಮೇಲಿನ ಶೆಲ್ಫ್... ಬೇಕಿದ್ರೆ ನೋಡ್ಕೊಳ್ಳಿ. "

ನನಗೂ ಚಿಂತೆಗಿಟ್ಟುಕೊಂಡಿತು. ಮಾವ ಇದ್ದಾಗ ಅವರ ಬೇಕುಬೇಡಗಳನ್ನು ನೋಡಿಕೊಳ್ಳುತ್ತಿದ್ದೆನಲ್ಲದೆ ಕಪಾಟಿನಲ್ಲಿ ಇದ್ದಿರಬಹುದಾದ ಹಳೆ ಚಿಲ್ಲರೆ ನಾಣ್ಯಗಳನ್ನು ಹುಡುಕಿ ತೆಗೆದಿರಿಸುವಷ್ಟು ವ್ಯವಧಾನ ಇದ್ದರಲ್ಲವೇ... ಮಾವನವರೂ ಇಂತಹ ಕಿಲುಬುಕಾಸೂ ಬೆಲೆಯಿಲ್ಲದ ನಾಣ್ಯಗಳನ್ನು ಇಟ್ಟುಕೊಂಡಂತಿಲ್ಲ. ಹಳೆಯ ಪುಸ್ತಕಗಳೂ, ಹಳೆಯ ಕಾಲದ ಪಾತ್ರೆಪರಡಿಗಳೂ, ಮಣ್ಣಿನ ಒಟ್ಟೆ ಕುಡಿಕೆಗಳೂ ಎಲ್ಲೆಂದರೆ ಅಲ್ಲಿ ಮನೆಯ ಉಪ್ಪರಿಗೆ ಅಟ್ಟದಲ್ಲಿ ಬಿದ್ದುಕೊಂಡಿದ್ದ ಕಾಲವೊಂದಿತ್ತು.

ವಿದ್ಯಾರ್ಥಿ ದಿನಗಳಲ್ಲಿ ಸ್ಟಾಂಪ್ ಸಂಗ್ರಹ, ನಾಣ್ಯ ಸಂಗ್ರಹ ನನ್ನ ಹವ್ಯಾಸಗಳಲ್ಲಿ ಸೇರಿದ್ದವು, ಹೀಗೇ ಮನೆಯ ಯಾವುದೋ ಮೂಲೆಯಲ್ಲಿ ಸಿಕ್ಕಿದಂತಹ ನಾಣ್ಯಗಳನ್ನು ನಾನೇ ಒಂದೆಡೆ ಇರಿಸಿರುವ ಸಾಧ್ಯತೆ ಇದೆ.

" ಈ ನಾಣ್ಯಗಳೆಲ್ಲ ಕಪ್ಪುಕಪ್ಪಾಗಿವೆ, ಇದನ್ನು ಮಡಿ ಮಾಡುವುದು ಹೇಗೆ? "
" ಬಿಡಿ, ಹುಳಿಮಜ್ಜಿಗೆ ಇದೆ. ಅದರಲ್ಲಿ ಅರ್ಧ ಗಂಟೆ ಮುಳುಗಿಸಿಟ್ಟರೆ ಫಳಫಳ ಆದೀತು... "
ಆ ನಾಣ್ಯಗಳನ್ನು ಚೆಲ್ಲಲು ಇಟ್ಟಿದ್ದ ಹುಳಿಮಜ್ಜಿಗೆಯಲ್ಲಿ ಹಾಕಿಟ್ಟು, ತೊಳೆದೂ ಕೊಟ್ಟೆ.

" ಇದು ಸಾಲದು, ಹುಣಸೇಹುಳಿ ಇಲ್ಲವೇ... ಕೊಡು, ನಾನೇ ತೊಳೆದು ತರುತ್ತೇನೆ. " ಅಂತೂ ಹುಣಸೇಹುಳಿಯಲ್ಲಿ ಮಿಂದ ನಾಣ್ಯಗಳು ಮಡಿಮಡಿಯಾಗಿ ಟೇಬಲ್ ಮೇಲೆ ಕುಳಿತವು.
ಈ ಒಟ್ಟೇಮುಕ್ಕಾಲು ಉಂಟಲ್ಲ, ಹಣೆಗೆ ಕುಂಕುಮ ಇಟ್ಟುಕೊಳ್ಳಲಿಕ್ಕೆ ನಮ್ಮ ಉಪಯೋಗ.. ಕುಂಕುಮ ಕರಡಿಗೆಯೊಟ್ಟಿಗೆ ಇಟ್ಟಿದ್ದ ಒಂದು ಒಟ್ಟೇಮುಕ್ಕಾಲು ಮನೆ ಕ್ಲೀನು ಮಾಡುವಾಗ ಬಿಸಾಡಿಯೇ ಹೋಯ್ತು... "

"ಅದಕ್ಕೆಲ್ಲ ಯಾಕೆ ತಲೆ ಕಡಿಸ್ಕೋತೀಯ, ಈಗ ಇರುವುದನ್ನು ನೋಡಿ ಆನಂದ ಪಡು. "



Saturday 14 October 2017

ಚಿತ್ರಲಹರಿ

                             


                                                           

                                                     

                                                      

 


                                                  

Sunday 8 October 2017

ನೀರುಳ್ಳಿ ಉಪ್ಪಿನಕಾಯಿ


                    


ಉದ್ಯೋಗ ನಿಮಿತ್ತ ನಗರದಲ್ಲಿ ವಾಸವಾಗಿರುವ ನನ್ನ ಮಗಳೂ, ಸೊಸೆಯಂತಹವರಿಗಾಗಿ ಈ ಉಪ್ಪಿನಕಾಯಿ ಬಂದಿದೆ.

ತಾಯಿಮನೆಯಿಂದ ಯಾ ಅತ್ತೆಯ ಕೈಯಿಂದ ಇಸ್ಕೊಂಡು ಮಾವಿನಮಿಡಿ ಉಪ್ಪಿನಕಾಯಿ ತಂದಿದ್ದೀರಿ, ಮಿಡಿ ತಿಂದು ಮುಗಿಯಿತು, ತಳದಲ್ಲಿ ಉಳಿದಿರುವ ಮಸಾಲೆಯನ್ನು ಹಾಗೇ ಬಿಸಾಡುವುದಕ್ಕುಂಟೇ…. ಅದೂ ಘಮಘಮಿಸುತ್ತಿರುವಾಗ, ಜಾಡಿಯಲ್ಲಿ ಉಳಿದಿರುವ ಉಪ್ಪಿನಕಾಯಿ ಹೊರಡಿಯನ್ನು ( ಮಸಾಲೆಯನ್ನು ) ಹೀಗೆ ಸದುಪಯೋಗ ಮಾಡಬಹುದು.

ಅಡುಗೆಗಾಗಿ ತರಕಾರಿ ಹೆಚ್ಚುತ್ತಿರುವಾಗ ಒಂದು ನೀರುಳ್ಲಿಯನ್ನೂ ಚಕಚಕನೆ ಕೊಚ್ಚಿ, ಒಂದೆರಡು ಚಮಚಾ ಉಪ್ಪಿನಕಾಯಿ ಮಸಾಲೆಯನ್ನು ಬೆರೆಸಿ, ತತ್ಷಣ ಸಿದ್ಧ ನೀರುಳ್ಳಿ ಉಪ್ಪಿನಕಾಯಿ.

ಈ ಐಡಿಯಾ ಹೇಳಿಕೊಟ್ಟಿದ್ದು ನನ್ನ ತಂಗಿ ಗಾಯತ್ರಿ. ಸಿವಿಲ್ ಇಂಜಿನಿಯರ್ ಆಗಿರುವ ಅವಳು ಕಟ್ಟಡ ನಿರ್ಮಾಣದ ಕೆಲಸಕಾರ್ಯಗಳಿಂದ ಕಣ್ಣೂರು, ಮಂಗಳೂರು ತನಕ ತಿರುಗಾಡುತ್ತಿರುತ್ತಾಳೆ. ಅಂತಹ ಒಂದು ಸಂದರ್ಭದಲ್ಲಿ , ಯಾವುದೋ ಒಂದು ಮನೆಯಲ್ಲಿ ಇಂತಹ ವಿಶಿಷ್ಟ ಉಪ್ಪಿನಕಾಯಿ ತಿನ್ನುವ ಯೋಗ ಸಿಕ್ಕಿದೆ ಅಷ್ಟೇ.

ಚೆನ್ನಾಗಿರುತ್ತೆ ಅಂದ್ಬಿಟ್ಟು ಅತಿಯಾಗಿ ಮಾಡಿಟ್ಟುಕೊಳ್ಳದಿರಿ. ಆಯಾ ದಿನದ ಅಗತ್ಯಕ್ಕೆ ತಕ್ಕಷ್ಟು ಮಾಡಿದರೆ ಸಾಕು, ನೀರುಳ್ಳಿಯೇನೂ ದೀರ್ಘಕಾಲ ಉಳಿಯುವಂತಹುದಲ್ಲ.