Pages

Ads 468x60px

Friday 21 July 2017

ಸೊಳೆ ಮೇಲಾರ






                




ಭೋಜನಕೂಟದ ಕೊನೆಯ ವ್ಯಂಜನವಾದ ಮಜ್ಜಿಗೆಹುಳಿ ಬಂದಿತು.   ಮಜ್ಜಿಗೆಹುಳಿಗೆ ತರಕಾರಿಯಾಗಿ ಸುವರ್ಣಗೆಡ್ಡೆ ಯಾ ಮುಂಡಿಗೆಡ್ಡೆಯನ್ನು ಬಳಸುವ ವಾಡಿಕೆ,   ಯಾವುದೋ ಗೆಡ್ಡೆ ತರಕಾರಿಯಿರಬೇಕು ಅಂದ್ಕೊಂಡು ಬಾಯಿಗಿಟ್ಟಾಗ ಬಟಾಟೆಯೇನೋ ಅನ್ನಿಸಿತು.   " ಇದೇನು ಬಟಾಟೆ ಮೇಲಾರವೇ? "

" ಅಲ್ಲ,  ಸೊಳೇದು... "

 ಹಲಸಿನಸೊಳೆಯಿಂದ ಮಜ್ಜಿಗೆಹುಳಿಯ ಕಲ್ಪನೆ ಕೂಡಾ ಮಾಡಿರಲಿಲ್ಲ ಕಣ್ರೀ...   ಇದೂ ಒಂದು ಹೊಸರುಚಿಯೇ ಸರಿ,   ಹಲಸುಪ್ರಿಯರಿಗೆ ಇಷ್ಟವಾಗುವಂತಾದ್ದು.


ಹಲಸು ಪಲ್ಯ,  ಹಲಸಿನಹಣ್ಣಿನ ಪಾಯಸಗಳು ಭೋಜನಕೂಟಗಳಲ್ಲಿ ವಾಡಿಕೆಯ ಸವಿರುಚಿಗಳು.   ಮಜ್ಜಿಗೆಹುಳಿಯನ್ನೂ ಮಾಡಿ ಬಡಿಸಿದವರನ್ನು ನಾನು ಕಂಡಿದ್ದಿಲ್ಲ.   ತೋಟದಲ್ಲಿ ಕೇಳುವವರಿಲ್ಲದೆ ವ್ಯರ್ಥವಾಗಿ ಬಿದ್ದು ಹೋಗಬೇಕಾಗಿದ್ದ ಹಲಸನ್ನು ಸದುಪಯೋಗ ಪಡಿಸಿದ್ದನ್ನು ಮೆಚ್ಚಲೇಬೇಕು.


ಮನೆಗೆ ಹಿಂದುರಿಗಿದ ನಂತರ ನಾನೂ ಸೊಳೆ ಮೇಲಾರ ಮಾಡುವ ನಿರ್ಧಾರ ಮಾಡಿ ಆಯ್ತು.   ಆದರೆ ನಮ್ಮ ತೋಟದ ಹಲಸಿನಕಾಯಿಗಳು ಧಾರಾಕಾರ ವರ್ಷಧಾರೆಗೆ ಬಿದ್ದು ಕೊಳೆತು ಮುಗಿದಿವೆ,  ಹಿಂದಿನ ವರ್ಷದ ಉಪ್ಪುಸೊಳೆಯೇ ಇರುವಾಗ ಚಿಂತೆ ಯಾಕಾದರೂ ಮಾಡಬೇಕು ಅಲ್ಲವೇ?   ಉಪ್ಪುಸೊಳೆಯಿಂದಲೇ ಮಜ್ಜಿಗೆಹುಳಿ ಮಾಡೋಣ.


ಹೇಗೆ?

2 ಹಿಡಿ ಹಲಸಿನ ಸೊಳೆಗಳು.   ಉಪ್ಪು ಬಿಡಿಸಲು ನೀರಿನಲ್ಲಿ ಹಾಕಿಡುವುದು.

ನಂತರ ಸಮಗಾತ್ರದ ಹೋಳು ಮಾಡಿ ಇಡುವುದು.

ಅರ್ಧ ಕಡಿ ತೆಂಗಿನತುರಿಯನ್ನು ಒಂದು ಲೋಟ ಸಿಹಿ ಮಜ್ಜಿಗೆ ಎರೆದು ಸಾಧ್ಯವಾದಷ್ಟು ನುಣ್ಣಗೆ ಅರೆಯುವುದು.

ಬೇಕಿದ್ದರೆ ಒಂದು ಹಸಿಮೆಣಸು ಅರೆಯುವಾಗ ಹಾಕಬಹುದು.


ಕುಕ್ಕರಿನಲ್ಲಿ ಸೊಳೆಗಳನ್ನು ಬೇಯಿಸಿ,  ತೆಂಗಿನಕಾಯಿ ಅರಪ್ಪು ಕೂಡಿಸಿ,  ಬೇಕಿದ್ದರೆ ಚಿಕ್ಕ ತುಂಡು ಬೆಲ್ಲ ಕೂಡಿಸಿ ಕುದಿಸುವುದು.   ತೆಂಗಿನಕಾಯಿ ಹಾಗೂ ಮಜ್ಜಿಗೆಯ ಈ ಪದಾರ್ಥ ಕುದಿಯುವಾಗ ಹಾಲು ಉಕ್ಕಿ ಬಂದಂತೆ ಮೇಲೆದ್ದು ಬಂದರೆ ಮಜ್ಜಿಗೆಹುಳಿ ಸರಿಯಾಗಿದೆ ಎಂದು ತಿಳಿಯಿರಿ.   ಕರಿಬೇವಿನ ಒಗ್ಗರಣೆ ಕಡ್ಡಾಯ,   ರುಚಿಗೆ ಉಪ್ಪು ಹಾಕುವ ಅಗತ್ಯ ಇಲ್ಲ.   



0 comments:

Post a Comment