Pages

Ads 468x60px

Saturday 1 July 2017

ಉಪ್ಪುಸೊಳೆ ಪಲ್ಯ


                                      


ಈಗ ಹಲಸಿನಕಾಯಿಗಳ ಕಾಲ, ಮಳೆಗಾಲದ ಅಡುಗೆಗಾಗಿ ಉಪ್ಪಿನಲ್ಲಿ ಹಲಸಿನ ಸೊಳೆಗಳನ್ನು ಶೇಖರಿಸಿ ಇಡುವ ಸಮಯ, ಹೊಸ ಉಪ್ಪುಸೊಳೆ ಹಾಕಿಡುವ ಹೊತ್ತಿಗೆ ಹಳೆಯ ಸಂಗ್ರಹ ಮುಗಿದಿರಬೇಕಾಗಿತ್ತು, ದೊಡ್ಡ ಪ್ಲಾಸ್ಟಿಕ್ ಜಾಡಿಯಲ್ಲಿ ಇಟ್ಕೊಂಡಿದ್ದು ಹಾಗೇ ಇದೆ. ಜಾಡಿಯ ಮುಚ್ಚಳ ತೆರೆದು ನೋಡಿದಾಗ ಆಗ ತಾನೇ ಹಾಕಿದಂತಿದ್ದ ಹಲಸಿನ ಸೊಳೆಗಳು, ಜೊತೆಗಿರಲಿ ಅಂತಿದ್ದ ಅಂಬಟೆ ಮಿಡಿಗಳೂ...

" ನೋಡ್ರೀ, ಈ ಅಂಬಟೆ ಮಿಡಿ ಕೂಡಾ ಎಷ್ಟು ಚೆನ್ನಾಗಿದೆ! "

" ಹೌದಲ್ಲವೇ... " ಅನ್ನುತ್ತ ನಮ್ಮವರೂ ಒಂದು ಅಂಬಟೆ ಮಿಡಿಯನ್ನು ಚೂರಿಯಲ್ಲಿ ಕತ್ತರಿಸಿ ತಿಂದರು. " ಹ್ಞೂ, ಉಪ್ಪು ಅಂದ್ರೆ ಅಷ್ಟು ಪವರ್ ಫುಲ್, ನೆಲ್ಲಿಕಾಯಿಯನ್ನೂ ಹೀಗೆ ಉಪ್ಪಿನಲ್ಲಿ ಇಟ್ಟರೆ ಆದೀತೇನೋ... "

" ಆದೀತು... "

"ಒಂದು ವೇಳೆ ಉಪ್ಪು ಹಾಕಿದ್ದು ಜಾಸ್ತಿ ಆದ್ರೂ ನೀರಿನಲ್ಲಿ ತೊಳೆದರಾಯ್ತಲ್ಲ. "

ಇಷ್ಟು ಚೆನ್ನಾಗಿರುವುದನ್ನು ಬಿಸಾಡುವುದೇ, ದಿನಕ್ಕೊಂದು ಅಡುಗೆ ಮಾಡಿ ಮುಗಿಸೋಣ. ಉಪ್ಪುಸೊಳೆಯ ಪಲ್ಯ ಹಾಗೂ ಟೊಮ್ಯಾಟೋ ಸಾರು ಎಂದು ಮೆನು ಸಿದ್ಧವಾಯಿತು.

ಪಲ್ಯಕ್ಕೆ ಅಗತ್ಯವಿರುವ ಸೊಳೆಗಳು, ಮೂರು ಹಿಡಿ ಆಗುವಷ್ಟು ಸಾಕು. ನೀರಿನಲ್ಲಿ ತೊಳೆಯುವುದು ಹಾಗೂ ನೀರು ಹಾಕಿ ಇಟ್ಟಿರಾದರೆ ಅಧಿಕವಾದ ಉಪ್ಪು ಬಿಟ್ಟೀತು.

ಸೊಳೆಗಳನ್ನು ಒಂದೇ ಗಾತ್ರದಲ್ಲಿ ಸಿಗಿದು ಇಡುವುದು.

ದಪ್ಪ ದಪ್ಪ ಸೊಳೆಗಳನ್ನು ಬೇಯಿಸಲು ಕುಕರ್ ಸೂಕ್ತ. ಪ್ರೆಶರ್ ಪ್ಯಾನ್ ನಲ್ಲಿ ಒಗ್ಗರಣೆ ಸಾಹಿತ್ಯಗಳನ್ನು ತುಂಬಿಸಿ - ನಾಲ್ಕು ಚಮಚ ತೆಂಗಿನೆಣ್ಣೆ, ಸಾಸಿವೆ, ಜೀರಿಗೆ, ಉದ್ದಿನಬೇಳೆ, ಕಡ್ಲೆಬೇಳೆ, ಒಣಮೆಣಸು ಹಾಗೂ ಕರಿಬೇವು.

ಸಾಸಿವೆ ಸಿಡಿದಾಗ ಕರಿಬೇವು ಹಾಕುವುದು. ಚಿಟಿಕೆ ಅರಸಿಣ ಬೀಳಲಿ.

ನೀರಿನಿಂದ ಬಸಿದ ಸೊಳೆಗಳನ್ನು ಹಾಕಿ, ಬೇಯಲು ಅಗತ್ಯದ ಒಂದು ಲೋಟ ನೀರು ಎರೆಯಿರಿ. ರುಚಿಗೆ ಉಪ್ಪು ಹಾಕುವ ಅಗತ್ಯವೇ ಇಲ್ಲ. ಕುಕರ್ ಒಂದು ವಿಸಿಲ್ ಹಾಕಿದಾಗ ಆಯ್ತು ಅನ್ನಿರಿ.

ತೆಂಗಿನ ತುರಿಯಿಂದ ಅಲಂಕರಿಸುವುದು.

ತೆಂಗಿನ ತುರಿಯ ಮಸಾಲೆ ಅರೆದೂ ಹಾಕಬಹುದಾಗಿದೆ, ತೆಂಗಿನ ತುರಿ ಹಾಗೂ ತುಸು ಜೀರಿಗೆಯನ್ನು ನೀರು ಹಾಕದೆ ಅರೆದು ಬೆಂದ ಪಲ್ಯಕ್ಕೆ ಕೂಡಿದರಾಯಿತು. ಮಸಾಲೆಗಳನ್ನು ಹೊಂದಿಸಿ ರುಚಿಯಲ್ಲಿ ವೈವಿಧ್ಯತೆ ತರುವುದು ನಿಮ್ಮ ಆಯ್ಕೆ.

" ಹೇಗೇ? "

ಒಗ್ಗರಿಸುವಾಗ ಶುಂಠಿ ಬೆಳ್ಳುಳ್ಳಿಯ ಪೇಸ್ಟು ಹಾಗೂ ನೀರುಳ್ಳಿ, ಗರಂ ಮಸಾಲಾ ಹುಡಿ... ಹೀಗೆ ರುಚಿಯಲ್ಲಿ ಸಂದರ್ಭಾನುಸಾರ ಬದಲಾವಣೆ ತಂದರಾಯಿತು.

0 comments:

Post a Comment