Pages

Ads 468x60px

Saturday 17 December 2016

ಹಿತ್ತಲ ತರಕಾರಿ







ಬದನೆಕಾಯಿ ತಿಂದೂ ತಿಂದೂ ಸಾಕಾಗಿತ್ತು.   ಮನೆಯಲ್ಲೇ ತರಕಾರಿ ಬೆಳೆ ಇದ್ರೆ ಹೀಗೇನೇ,   ಬಸಳೆ ಚಪ್ಪರ ಇದೆಯಾ,  ಅದನ್ನೇ ಕೊಯ್ಯಿರಿ,  ಇನ್ನು ತೊಂಡೆಯಂತೂ ಕೇಳೋರಿಲ್ಲ ಅನ್ನೋ ಹಾಗಾಗುತ್ತೆ.

ಬದನೆ ಗಿಡಗಳ ಸಾಲಿನ ಪಕ್ಕದಲ್ಲೇ ಅಲಸಂಡೆ ಬೀಜಗಳನ್ನು ಬಿತ್ತಿದ ಚೆನ್ನಪ್ಪ.   ಬೀಜ ಬಿತ್ತಿದ ಎರಡೇ ದಿನದಲ್ಲಿ ಮೊಳಕೆಯೊಡೆದು ಹೊರ ಬಂದ ಸಸಿಗಳು.

" ಅಕ್ಕ,  ಈ ಅಲಸಂಡೆಯಾದ್ರೆ ಇನ್ನು ಇಪ್ಪತೈದು ದಿನದಲ್ಲಿ ಕೊಯ್ಯಬಹುದು...  ದಿನಾ ನೀರು ಹಾಕ್ತಾ ಇರಿ,  ಎರಡು ಸರ್ತಿ ನೀರು ಹಾಕಿದ್ರೆ ಇನ್ನೂ ಒಳ್ಳೆಯದು. "  ಅಂದ ಚೆನ್ನಪ್ಪ.

ಸಂಜೆಯ ಚಹಾ ಕುಡಿದ ನಂತರ ಗಿಡಗಳಿಗೆ ನೀರೆರೆಯುವ ಹವ್ಯಾಸ ನನ್ನದು.  ಬದನೆಯೊಂದಿಗೆ ಇದೊಂದು ಹೆಚ್ಚುವರಿ ಸೇರ್ಪಡೆ.

ಬಳ್ಳಿಗಳು  ಮೇಲೇರುತ್ತಿದ್ದ  ಹಾಗೆ ಆಧಾರಕ್ಕಾಗಿ ಮರದ ಅಡರುಗಳನ್ನು ನೀಡಿ,  ಅಡಿಕೆ ಮರದ ಸಲಕೆಯ ಸಂಪುಟವನ್ನು ಕಟ್ಟಿಯೂ ಆಯ್ತು.    ಬುಡಕ್ಕೆ ಹಸಿರೆಲೆ ಗೊಬ್ಬರವೂ ಬಿದ್ದಿತು.   

" ಸ್ವಲ್ಪ ಗವರ್ಮೆಂಟ್ ಈಟು ( ರಸಗೊಬ್ಬರ )  ತಂದರಾಗುತ್ತಿತ್ತು. "  ಚೆನ್ನಪ್ಪನ ಗೊಣಗಾಟವನ್ನು ಕೇಳುವವರಿಲ್ಲ.
 " ಅಡಿಕೆ ಮರದ ಬುಡಕ್ಕೇ ಇಲ್ಲ,  ಈ ನೆಟ್ಟಿಕಾಯಿಗೆ ಯಾಕೆ? "  ಇದು ನಮ್ಮೆಜಮಾನ್ರ ಕಟ್ಟುನಿಟ್ಟು.

ಏನೇ ಆಗಲಿ,  ಅಲಸಂಡೆ ಕೊಯ್ಯುವ ಕಾಲ ಬಂದಿತು.   ಮೊದಲ ಫಸಲು ಮುಂದಿನ ಬೆಳೆಯ ಬೀಜಗಳಿಗೆ ಮೀಸಲು,  ನಂತರ ಬಿಡುವಿಲ್ಲದ ಹಾಗೆ ಎರಡು ದಿನಗಳ ಅಂತರದಲ್ಲಿ ಕೊಯ್ಯುವ ಕಾಯಕ.   ಸಂಜೆ ನೀರು ಹನಿಸುತ್ತಾ ಕೊಯ್ದು ಇಡುವುದು,   " ನಾಳೆಯ ಅಡುಗೆಗೇನು ಎಂಬ ಚಿಂತೆಯಿಲ್ಲ.  ಅಲಸಂಡೆ ಪಲ್ಯ ಊಟದ ಸೊಗಸು.


                     



ಆಯ್ತು,  ಒಂದೆರಡು ದಿನ ಪಲ್ಯ ಮಾಡಬಹುದು,   " ದಿನಾ ಒಂದೇ ತೆರನಾದ ಪಲ್ಯವೇ... " ಗೊಣಗಾಟ ಕೇಳಬೇಕಾದೀತು,   ಹೇಗೂ ಕುಂಬ್ಳೆಯಲ್ಲಿರುವ ತಂಗಿಗೆ ಆಗಾಗ ಫೋನ್ ಮಾಡುವುದಿದೆ.   ಅವಳೂ  " ಮಜ್ಜಿಗೆಹುಳಿ,  ಜೀರಿಗೆ ಕೂಟು,  ಅವಿಲ್ ಇತ್ಯಾದಿಗಳನ್ನು ಜ್ಞಾಪಕ ಮಾಡಿಕೊಟ್ಟಳು.   ಇವೆಲ್ಲ ಸಾಂಪ್ರದಾಯಿಕ ಖಾದ್ಯಗಳು,  ನಮ್ಮದು ಹೊಸರುಚಿ ಆಗಬೇಡ್ವೇ...

ಬದನೆಯ ಗಿಡಗಳ ಸಾಲಿನಲ್ಲಿ ಹೇರಳವಾಗಿ ಬೆಳೆದು ಇದ್ದಬದ್ದ ಜಾಗವನ್ನೆಲ್ಲ ಆಕ್ರಮಿಸಿ ನಿಂತಿದೆ ಪೊನ್ನಂಗಣೆ ಸೊಪ್ಪು.   ' ಪೊನ್ನಂಗನ್ನಿ ಕೀರೈ ' ಎಂದು ಮಲಯಾಳ ಹಾಗೂ ತಮಿಳಿನಲ್ಲಿ ಹೆಸರಾಗಿರುವ ಈ ಸೊಪ್ಪನ್ನು ನಮ್ಮ ಕನ್ನಡಿಗರು  ' ಹೊನಗನೆ ಸೊಪ್ಪು ಅನ್ನುತ್ತಾರಾದರೆ,  ಇಂಗ್ಲೀಷ್ ನಲ್ಲಿ wild spinach ಎಂದೂ,  ಸಸ್ಯಶಾಸ್ತ್ರಜ್ಞರ ಪ್ರಕಾರ alternanthera sessilis ಎಂದಾಗಿರುತ್ತದೆ.   ವಿಟಮಿನ್ ಗಳ ಗಣಿಯಾಗಿರುವುದಾದರೂ ಪೊನ್ನಂಗಣೆಯು ಸಸ್ಯ ಪ್ರವರ್ಗದಲ್ಲಿ ಒಂದು ಕಳೆಸಸ್ಯವೆಂದು ಪರಿಗಣಿಸಲ್ಪಟ್ಟಿದೆ,  ನಮ್ಮ ಊರಿನಲ್ಲಿ ಇದನ್ನು ಆಹಾರ ಪದಾರ್ಥವೆಂದು ಪರಿಗಣಿಸಿದವರಿಲ್ಲ.   " ಏನೋ ಎಣ್ಣೆ ಮಾಡ್ತಾರೆಂದು ಕೇಳಿ ಗೊತ್ತು.. " ಅಂದಿದ್ದರು ಗೌರತ್ತೆ.

ಪೊನ್ನಂಗಣೆಯ ಹಸಿರು ಎಲೆಗಳೂ,  ಕುಡಿಗಳೂ,  ಅಲಸಂಡೆಯೂ ಸೇರಿದ ಖಾದ್ಯ ಮಾಡೋಣ.

ಒಂದು ಹಿಡಿ ಹಸಿರು ಎಲೆಗಳು ಹಾಗೂ ಕುಡಿಗಳು.  ಎಳೆಯ ದಂಟುಗಳನ್ನೂ ಬಳಸಬಹುದು.   
ಅಲಸಂಡೆಯನ್ನೂ ಕತ್ತರಿಸಿಕೊಳ್ಳಿ.
ಉಪ್ಪು ಹಾಕಿ ಒಟ್ಟಿಗೆ ಬೇಯಿಸಿ.
ತೆಂಗಿನತುರಿ,  ಗಾಂಧಾರಿ ಮೆಣಸು ಕೂಡಿ ಅರೆಯಿರಿ.
ತೆಂಗಿನ ಅರಪ್ಪನ್ನು ಬೆಂದ ತರಕಾರಿಗೆ ಕೂಡಿಸಿ.
ಸಿಹಿಗೆ ಬೆಲ್ಲ,  ಹುಳಿಗೆ ಮಜ್ಜಿಗೆ.   ನಿಮ್ಮ ಆಯ್ಕೆಗನುಸಾರ ಹಾಕಿರಿ.
ಸಾಸಿವೆ,  ಒಣಮೆಣಸಿನಕಾಯಿ ಒಗ್ಗರಣೆ ಇರಲಿ.   " ಸೊಪ್ಪು ತರಕಾರಿಗಳ ಅಡುಗೆಯ ಒಗ್ಗರಣೆಗೆ ಕರಿಬೇವು ಹಾಕೂದೇನೂ ಬೇಡ. "  ಇದು ಗೌರತ್ತೆಯ ಹಿತವಚನ.
ಕುದಿಸಬೇಕೆಂದೇನೂ ಇಲ್ಲ.
ಒಂದು ನಳಪಾಕ ಸಿದ್ಧವಾಯಿತು.
ತಂಪುತಂಪಾದ ಈ ಸವಿರುಚಿಯಂತೂ ರಣಬೇಸಿಗೆಯ ಊಟಕ್ಕೆ ನಮ್ಮಿಬ್ಬರಿಗೂ ಹಿತವಾಯಿತು. 





" ಅದ್ಯಾವುದೂ ಪೊನ್ನಂಗಣೇ...." ರಾಗ ಎಳೆದಳು ಗಾಯತ್ರಿ.   ಅವಳ ಸಮಾಧಾನಕ್ಕಾಗಿ ವಾಟ್ಸಪ್ಪಿನಲ್ಲಿ ಪೊನ್ನಂಗಣೆಯ ಫೊಟೋ ಕಳುಹಿಸಬೇಕಾಯ್ತು.    " ಓ,  ಇದಾ... ಗಂಟು ಗಂಟಿನಲ್ಲಿ ಬಿಳಿ ಬಿಳಿ ಹೂ ... ಗೊತ್ತಾಯ್ತು ಬಿಡು. " ಅಂದಳು.  "ಆದ್ರೂ ಸೊಪ್ಪು ಸಂಗ್ರಹ ಆಗ್ಬೇಕೂ..."
" ಹ್ಞು ಮತ್ತೆ,  ನನ್ನ ಸೊಪ್ಪು,  ಬದನೆ ಹಾಗೂ ಬಸಳೆ ಬುಡದಲ್ಲಿ ವಿಪರೀತ ಸೊಕ್ಕಿವೆ,  ಸ್ವಲ್ಪ ಕುಯಿದ್ರೂ ಸಾಕಾಗುತ್ತೆ " 


ಮಾರನೇ ದಿನ ತೆಂಗಿನತುರಿಯೊಂದಿಗೆ ಈರುಳ್ಳಿ,  ಬೆಳ್ಳುಳ್ಳಿ,  ಕೊತ್ತಂಬ್ರಿ, ಜೀರಿಗೆ,  ಗಾಂಧಾರಿ ಮೆಣಸು,  ಕಾಳುಮೆಣಸು ಕೂಡಿ ಅರೆದಿಟ್ಟು,
ಬಾಣಲೆಯಲ್ಲಿ ಒಗ್ಗರಣೆಗಿಟ್ಟು,
ಅರೆದಿಟ್ಟ ತೆಂಗಿನಕಾಯಿ ಅರಪ್ಪನ್ನು ಒಗ್ಗರಣೆ ಸಿಡಿದಾಗ ಹಾಕಿ, 
ಮಸಾಲೆಯ ಹಸಿವಾಸನೆ ಹೋಗುವ ತನಕ ಹುರಿಯಿರಿ.
ನಂತರ ಬೇಯಿಸಿಟ್ಟ ತರಕಾರಿ ಹಾಗೂ ಸೊಪ್ಪು ಹಾಕಿ ಕುದಿಸಿ.
ನೀರು ಸಾಲದಿದ್ದರೆ ಎರೆಯಿರಿ.
ರುಚಿಗೆ ಬೇಕಿದ್ದಂತೆ ಉಪ್ಪು,  ಬೆಲ್ಲ ಹಾಕುವುದು.
ಈ ನಳಪಾಕವಂತೂ ಅನ್ನ ಹಾಗೂ ಚಪಾತಿಗಳಿಗೆ ಹೇಳಿ ಮಾಡಿಸಿದ ಹಾಗಾಯ್ತು.

ಇಂದಿನ ಅಡುಗೆಯ ರಿಪೋರ್ಟು ಎಂದಿನಂತೆ ತಂಗಿಗೆ ತಲುಪಿತು.
" ಹೌದೂ... ಇದಕ್ಕೇನು ಹೆಸರು ಇಡೋಣಾಂತೀಯ ? "  ನನ್ನ ಪೆದ್ದು ಪ್ರಶ್ನೆ.
" ನೀರುಳ್ಳಿ,  ಬೆಳ್ಳುಳ್ಳಿ ಹುರಿದ ಮಸಾಲೆ...  ಅದೇ ಕೂರ್ಮಾ ಅಂತಾರಲ್ಲ,  ಹಾಗೇ ಅಲಸಂಡೆ ಕೂರ್ಮಾ...  ಅಂದ್ಬಿಡು "  ಅಂದಳು ಗಾಯತ್ರಿ.

ಹೊಸರುಚಿಗಳನ್ನು ಸವಿದಾಯಿತು,   ಈಗ ನಮ್ಮ ಸಾಂಪ್ರದಾಯಿಕ ಶೈಲಿಯ ಅಡುಗೆಯತ್ತ ಕಣ್ಣು ಹಾಯಿಸೋಣ.   ಅಲಸಂಡೆಯನ್ನು ಖಾರದ ಅಡುಗೆಯಲ್ಲಿ ಬಳಸುವುದು ಕಡಿಮೆಯೇ,  ಏನಿದ್ದರೂ ಮಜ್ಜಿಗೆಹುಳಿ,  ಜೀರಿಗೆ ಬೆಂದಿ, ಅವಿಲ್,  ಪಲ್ಯ...ಇತ್ಯಾದಿ ಊಟದೊಂದಿಗೆ ಸವಿಯುವ ರೂಢಿ.

ಹೌದಲ್ಲ,  ಮಜ್ಜಿಗೆಹುಳಿಯಲ್ಲಿ ಮಜ್ಜಿಗೆ ಹಾಗೂ ಹಸಿ ತೆಂಗಿನಕಾಯಿ ಅರಪ್ಪು ಪ್ರಾಮುಖ್ಯತೆ ಪಡೆದಿದ್ದರೆ ಅವಿಲು ಮಜ್ಜಿಗೆಯನ್ನು ಬಯಸದು,  ಜೀರಿಗೆ ಬೆಂದಿಗೂ ಮಜ್ಜಿಗೆ ಬೇಡ.

ಅವಿಲು ಹತ್ತು ಹಲವಾರು ತರಕಾರಿಗಳ ಮಿಶ್ರಣದ ಖಾದ್ಯ.   ವಿದೇಶೀ ತರಕಾರಿಗಳನ್ನು ಉಪಯೋಗಿಸುವಂತಿಲ್ಲ.    ನಮ್ಮ ಮಣ್ಣಿನ ನೆಲದಲ್ಲಿ ಬೆಳೆದಂತಹ ತರಕಾರಿಗಳು,  ಹುಳಿ, ಸಿಹಿ, ಒಗರು, ಕಹಿ ಎಲ್ಲವೂ ಇರುವಂತಹ ತರಕಾರಿಗಳನ್ನು ಆಯ್ದು,  ಬೇಯಿಸಿ.  ಧಾರಾಳವಾಗಿ ತೆಂಗಿನತುರಿ ಬಳಸಿ ಅರೆಯಿರಿ.   ಚಿಟಿಕೆ ಅರಸಿಣ,  ಪುಟ್ಟ ಚಮಚದಲ್ಲಿ ಜೀರಿಗೆ ಅರೆಯುವಾಗ ಹಾಕಿಕೊಳ್ಳಿ.  ಬೇಯಿಸಿಟ್ಟ ತರಕಾರಿಗಳಿಗೆ ಕೂಡಿ ಕುದಿಸಿ,  ಒಗ್ಗರಣೆಗೆ ಕರಿಬೇವು ಮರೆಯದಿರಿ.

 ಜೀರಿಗೆ ಬೆಂದಿ ಹಾಗೂ ಅವಿಲು,  ಏನು ವ್ಯತ್ಯಾಸ?

ಅವಿಲು ಮಾಡೋ ವಿಧಾನ ತಿಳಿದಾಯ್ತು.   ಜೀರಿಗೆ ಬೆಂದಿ ಒಂದೇ ತರಕಾರಿ ಬಳಸಿ ಮಾಡುವಂತಹದು,  ಅದೂ ಎಳೆಯ ತರಕಾರಿಯಾಗಿರಬೇಕು.   ಅಲಸಂಡೆ ಅಂಗಳದಲ್ಲಿ ಇರುವಾಗ ನನ್ನದೂ ಒಂದು ಜೀರಿಗೆಬೆಂದಿ ಆಯಿತು.   ವಿಧಾನ ಎಲ್ಲವೂ ಅವಿಲು ಮಾಡಿದ ಹಾಗೇನೇ ಮತ್ತೇನಿಲ್ಲ.


 
                          


  
    ಟಿಪ್ಪಣಿ:  ಸದಭಿರುಚಿಯ ಮಾಸಪತ್ರಿಕೆ  ' ಉತ್ಥಾನ ' ದಲ್ಲಿ ಪ್ರಕಟಿತ ಬರಹ.   ಒಕ್ಟೋಬರ್, 2016.

0 comments:

Post a Comment