Pages

Ads 468x60px

Saturday 28 March 2015

ಮುಡಿಯ ಮಲ್ಲಿಗೆ






ಟಿಪ್ಪಣಿ:  3/10/2016 ರಂದು ಮುಂದುವರಿದಿದೆ.

ಬೆಂಗಳೂರಿನಲ್ಲೊಂದು ಆರತಕ್ಷತೆ ಸಮಾರಂಭ,  ಹೋಗಿದ್ದೆವು.   ಆ ಸಂದರ್ಭದಲ್ಲಿ ನಮ್ಮೆಜಮಾನ್ರು ಕ್ಲಿಕ್ಕಿಸಿದ ನೂರಾರು ಚಿತ್ರಗಳನ್ನು ನೋಡುತ್ತ,  ನನ್ನ ಬರವಣಿಗೆಗೆ ಪೂರಕ ದೃಶ್ಯಚಿತ್ರಗಳೇನಾದರೂ ದೊರೆತೀತೇ ಎಂದು ಪರಿಶೀಲಿಸುತ್ತ ಇದ್ದಾಗ,  ಸಾಮಾನ್ಯವಾಗಿ ಚಿತ್ರಗಳಿಗೆ ಹೊಂದುವಂತಹ ಬರಹಗಳನ್ನೇ ಸೃಷ್ಟಿಸುವ ವಾಡಿಕೆ ನನ್ನದು...  ಈ ಮಲ್ಲಿಗೆಯ ಹೂಗಳು ಸಿಕ್ಕವು.


" ಅರೆ!  ಇದು ಈ ಹಿಂದೆ ಬರೆದ  ' ಮುಡಿಯ ಮಲ್ಲಿಗೆ '  ಕವನಕ್ಕೆ ಸರಿ ಹೊಂದುವಂತಿದೆಯಲ್ಲ.   ಸೊಗಸಾದ ಐಫೋನ್ 6  ಚಿತ್ರಗಳಿಗೆ ಒಂದು ಜಾಗವೂ ಆಯ್ತು,  ಏನಂತೀರ ?





 
                                
                         

Friday 20 March 2015

ಹಾಲಿಟ್ಟು ಪರಮಾನ್ನ







ಮಗ ಮನೆಗೆ ಬಂದಿದ್ದ. ಅವನಿಗೆ ಇಷ್ಟದ ತಿಂಡಿಗಳೇ ಮುಂಜಾನೆಯ ಆಯ್ಕೆ. ಮೊನ್ನೆ ಅಕ್ಕಿ ಉಂಡೆ, ನಿನ್ನೆ ಸಜ್ಜಿಗೆ-ಅವಲಕ್ಕಿ, ಇವತ್ತು ನೀರುದೋಸೆಯೆಂಬ ತೆಳ್ಳವು ಜೊತೆಗೆ ಬೆಲ್ಲಸುಳಿ. ಘಂಟೆ ಹತ್ತಾಗುತ್ಲೂ " ಅಮ್ಮ, ಕುಂಬ್ಳೆಯಿಂದ ಶ್ಯಾಮ ಬರ್ತಿದಾನಂತೇ " ಮಗ ಅಂದ. ಅವನ ಸ್ನೇಹಿತರು ಬಂದೂ ಹೋಗೀ ಮಾಡ್ತಿರ್ತಾರೆ, ಅದೇನೂ ಹೊಸದಲ್ಲ ಬಿಡಿ, ಈಗ ಬರ್ತಿರೋನು ನನ್ನ ತಂಗಿಯ ಮಗ,
" ಹಾಗಿದ್ರೆ ನಿನ್ನ ಚಿಕ್ಕಮ್ಮ ಬರ್ತಾಳೇನೋ...?"
" ಇಲ್ಲ, ಶ್ಯಾಮ ಮಾತ್ರ ಬರೂದು "

" ಹೌದಾ.. " ಅನ್ನುತ್ತಾ ಒಳ ನಡೆದೆ. ಅಡುಗೆಮನೆಯಲ್ಲಿ ತಪಲೆಯ ಉಳಿದಿದ್ದ ನೀರುದೋಸೆಯ ಹಿಟ್ಟು ಎದುರಾಯಿತು. ಪಾಯಸ ಮಾಡಲು ಐಡಿಯಾ ಕೂಡಾ ಹೊಳೆಯಿತು. ಆಲೋಚನೆ ಕಾರ್ಯರೂಪಕ್ಕೂ ಇಳಿಯಿತು.

ನೀರುದೋಸೆಯ ಹಿಟ್ಟು ಒಂದು ದೊಡ್ಡ ಲೋಟ ಅಳೆದಿರಿಸಿದ್ದಾಯಿತು.
ಒಂದು ತೆಂಗಿನಕಾಯಿ ತುರಿಯಿಂದ ಕಾಯಿಹಾಲು, ದಪ್ಪ ಹಾಲು ತೆಗೆದಿಟ್ಟು, ಕಾಯಿ ಚರಟಕ್ಕೆ ಇನ್ನೂ ಎರಡು ಬಾರಿ ನೀರೆರೆದು ತೆಳ್ಳಗಿನ ಹಾಲನ್ನೂ ತೆಗೆದಿರಿಸಿದ್ದಾಯಿತು.

ನನ್ನ ಇಂಡಕ್ಷನ್ ಒಲೆ ಅತಿ ಶೀಘ್ರವಾಗಿ ದೋಸೆ ಹಿಟ್ಟನ್ನು ಉಂಡೆ ಕಟ್ಟುವ ಹದಕ್ಕೆ ತಂದು ಕೊಟ್ಟಿತು.
ಚಕ್ಕುಲಿಯ ಒರಲಿನಲ್ಲಿ ಒತ್ತಿದಾಗ ಶಾವಿಗೆಯ ರೂಪ ಬಂದಿತು.
ನೀರುಕಾಯಿಹಾಲು ಹಾಗೂ ಮೂರು ಅಚ್ಚು ಬೆಲ್ಲ ಒಲೆಗೇರಿ ಕುದಿಯಿತು.
ಬೆಲ್ಲದ ಘಮಘಮ ಬರುತ್ತಲೂ ಶಾವಿಗೆ ಇಳಿಯಿತು.
ಈಗ ದಪ್ಪ ಕಾಯಿಹಾಲು ಎರೆಯಬೇಕಾಗಿದೆ.
" ಮಧೂ, ಬಾ ಇಲ್ಲಿಗೇ.."
" ಏನಮ್ಮಾ.."
" ನೋಡೂ, ಪಾಯಸಕ್ಕೆ ಕಾಯಿಹಾಲು ಎರೆಯವ ಫೊಟೋ ಆಗ್ಬೇಕಾಗಿದೆ..."
" ಅಷ್ಟೇನಾ.." ಅನ್ನುತ್ತಾ iPhone6 ಒಳ ಬಂದಿತು.
" ಇದು ಬೇಡಾ.. iPadAir2 ತಾ "
ಫೊಟೋ ತೆಗೆದಿದ್ದಾಯಿತು.
ಹಳೆಯ ಕ್ರಮದ ಈ ಸಿಹಿ ಹಾಲಿಟ್ಟು ಪಾಯಸ, ಆಧುನಿಕ ಜೀವನಶೈಲಿಗೆ ಒಗ್ಗಿಕೊಂಡಿರುವವರಿಗೂ ಮಾಡಬಹುದು. ಏಲಕ್ಕಿ, ದ್ರಾಕಿ್ಷ, ಗೋಡಂಬಿ ಇತ್ಯಾದಿಗಳಿಂದ ಅಲಂಕರಿಸಬಹುದು.

" ಹೌದೂ, ಹಾಲಿಟ್ಟು ಅಂದ್ರೇನೂ...?"
ಕಾಯಿಹಾಲು+ಅಕ್ಕಿಹಿಟ್ಟು = ಕಾಯಿಹಾಲಿನೊಂದಿಗೆ ಬೆರೆತ ಅಕ್ಕಿಹಿಟ್ಟು. ಆಡುಮಾತಿನಲ್ಲಿ ಹಾಲಿಟ್ಟು ಆಗಿದೆ ಅನ್ನಲಡ್ಡಿಯಿಲ್ಲ.