Pages

Ads 468x60px

Tuesday 26 February 2013

ಶೃಂಗೇರಿಯಲ್ಲಿ ಶೃಂಗಾರ ಮಾಸ






ಅಯಾಚಿತವಾಗಿ ಶೃಂಗೇರಿಗೆ ಹೋಗುವ ಯೋಗ ಒದಗಿ ಬಂದಿತು. ಶೃಂಗೇರಿಗೆ ಈ ಹಿಂದೆ ಹೋಗಿದ್ದು ಸುಮಾರು ಇಪ್ಪತೈದು ವರ್ಷಗಳ ಮೊದಲು. ಆಗ ಮಕ್ಕಳುಮರಿ ಎಂಬ ತಾಪತ್ರಯಗಳಿಲ್ಲದೇ ಹಾಯಾಗಿದ್ದ ಕಾಲ. ದಕ್ಷಿಣ ಭಾರತ ಪ್ರವಾಸದ ಹಾದಿಯಲ್ಲಿ ಶೃಂಗೇರಿ ತೀರ್ಥಕ್ಷೇತ್ರವೂ ಲಭಿಸಿತ್ತು. " ಅದಿರ್ಲಿ, ಈಗ ಯಾಕೆ ಹೋಗಿದ್ರೀ " ಅಂತೀರಾ, ಈಗಿನ ಪ್ರಸಂಗವೇ ಬೇರೆ. ಅದನ್ನೇ ಇಲ್ಲಿ ಹೇಳಹೊರಟಿರುವುದು.

ನಮ್ಮ ಹಳ್ಳಿಗಾಡಿನ ಹುಡುಗರಿಗೆ ಮದುವೆಯ ಯೋಗವೇ ಇಲ್ಲದಾಗಿರುವುದು ಎಲ್ಲರಿಗೂ ತಿಳಿದ ವಿಚಾರ. ಇಲ್ಲಿನ ಬಾಯಾರು ಗ್ರಾಮದಲ್ಲೇ ಐವತ್ತಕ್ಕೂ ಹೆಚ್ಚು ಮಂದಿ ಯುವಕರು ಅವಿವಾಹಿತರಾಗಿಯೇ ವೃದ್ಧರಾಗುತ್ತಿದ್ದಾರೆ. ಅದರಲ್ಲೂ ಬ್ರಾಹ್ಮಣ ಹುಡುಗರಿಗೆ, ಕೃಷಿ ಹಾಗೂ ಆಸ್ತಿ ವಹಿವಾಟು ಇದ್ದರಂತೂ ಕಂಕಣ ಭಾಗ್ಯ ಕೂಡಿ ಬರುವುದೇ ಇಲ್ಲ. ಮನೆಯಲ್ಲಿ ವೃದ್ಧ ತಾಯ್ತಂದೆ ಇದ್ದರಂತೂ ಆ ಗಂಡು ಯಾರಿಗೂ ಬೇಡದವನು.

ಹೀಗಿರುವಾಗ ನಮ್ಮ ಒಬ್ಬ ಗಂಡಿಗೂ ಕಲ್ಯಾಣಯೋಗ ಕೂಡಿ ಬಂತು. ಅವನೇ ಮನೆಗೆ ಬಂದು ಹೀಗೆ ಹೇಳಿದ " ಅತ್ತಿಗೇ, ನಾಡಿದ್ದು ಒಂದನೇ ತಾರೀಕಿಗೇ ಮದುವೆ, ಕಾಗದ ಪ್ರಿಂಟ್ ಮಾಡಲೂ ಪುರುಸೊತ್ತಿಲ್ಲ, ಸಿಂಪಲ್ ಆಗಿ ಆಗೂದು, ನಾವು ಒಂದು ಏಳೆಂಟು ಜನ ಹೋಗೂದು, ನೀವು ಬರಲೇ ಬೇಕಾಗ್ತದೆ, ಗಂಡಿನ ಕಡೆಯಿಂದ ಆರತಿ ಎತ್ತೋಕೆ ಒಬ್ಬರು ಬೇಕಲ್ಲ..." ಬಡಬಡನೆ ಉಸುರಿದ.

ಅವನು ಹೇಳಿದ್ದು ಸರಿಯೇ. ಅವನಿಗೂ ಬೇರೆ ಹೆಣ್ಣುದಿಕ್ಕಿಲ್ಲ. ಎಂಬತ್ತು ದಾಟಿದ ಅಮ್ಮ ಒಬ್ಬರೇ ಇರುವುದು. " ಬೆಳಿಗ್ಗೆ ಮೂರು ಗಂಟೆಗೆಲ್ಲಾ ಎದ್ದು ಹೊರಟು ಬಿಡಿ, ವ್ಯಾನ್ ಮೊದಲು ಹಿರಣ್ಯಕ್ಕೇ ಬರ್ತದೆ " ಅಂದ.



ನಮ್ಮವರು ಮನೆಗೆ ಬಂದೊಡನೆ ಶ್ರೀಪಾದ ಹೀಗ್ಹೀಗೆ ಸುದ್ದಿ ಹೇಳಿದಾ... ಅಂತ ವರದಿ ಒಪ್ಪಿಸಿದೆ. ಇವರಿಗೂ ಭಲೇ ಖುಷಿಯಾಗಿ ಬಿಡ್ತು. " ಅವಂಗೂ ಮದ್ವೆ ಆಗ್ದೇ ಇದ್ರೆ ಆ ಮನೆತನಾನೇ ನಿಂತ್ಹಾಗೇ ಅಲ್ವೇ, ನೀನೂ ಹೊತ್ತಿಗೆ ಸರಿಯಾಗಿ ಹೊರಡು ಮತ್ತೆ "

ನಾನೂ ರಾತ್ರಿ ಮೂರು ಗಂಟೆಗೇ ಎದ್ದು ತಯಾರಾಗುವುದೇನೋ ಸರಿ. ಮನೆಯಲ್ಲಿ ಮಗಳೂ ಇದ್ದಳಲ್ಲ, " ನಿನ್ನ ಊಟತಿಂಡಿ ನೀನೇ ಮಾಡ್ಕೋ ಆಯ್ತಾ "

ಅವಳು ಮಹಾಜಾಣೆ, " ಅತ್ತೆ ಬರ್ತಾರಂತೆ " ಅಂದಳು. ನಮ್ಮ ಪಕ್ಕದಮನೆಯಲ್ಲಿ ನಮ್ಮವರ ಅಕ್ಕ ಊರಿಗೆ ಬಂದೋರು ಉಳಕೊಂಡಿದ್ದರು.

" ಆದರೂ ನೋಡಿಕೋ, ಅನ್ನ ಸಾರು ಮಾಡಿಕೊಳ್ಳಲು ತಿಳಿದಿರಬೇಕು " ಅನ್ನುತ್ತಾ ಆ ದಿನದ ಮದ್ಯಾಹ್ನದ ಅಡುಗೆಯನ್ನು ಅವಳ ಮೇಲುಸ್ತುವಾರಿಯಲ್ಲೇ ಮಾಡಿಸಿಯೂ ಆಯ್ತು.

ಮೂರು ಗಂಟೆಗೆಲ್ಲಾ ಎದ್ದು ಕಾಫಿ ತಿಂಡಿ ತಿನ್ನುವ ಹೊತ್ತಲ್ಲ. " ನೀನೇನು ಮಾಡ್ಕೋತೀಯ "

ಅದಕ್ಕೂ " ಅತ್ತೆ ಇದ್ದಾರಲ್ಲ " ಅಂದಳು.

" ಆಯ್ತು, ಅತ್ತೆ ಸೊಸೆ ಏನ್ಬೇಕಾದ್ರೂ ಮಾಡ್ಕೊಳ್ಳಿ "

" ಮಲಗೋ ಮೊದಲು ಹಂಡೆಯಲ್ಲಿ ನೀರು ಕಾಯಿಸಿ ಇಡು ಅಮ್ಮಾ", ಉಚಿತ ಸಲಹೆ ಬೇರೆ ಸಿಕ್ಕಿತು. " ಯಾವ ಸೀರೆ ಉಡ್ತೀಯ? "

" ಯಾವ್ದೋ ಒಂದು, ಮೊನ್ನೆ ಕಾಸರಗೋಡಿಗೆ ಹೋಗಿದ್ವಲ್ಲ, ಆ ಸೀರೇನೇ ಸಾಕೀಗ "



ಎದ್ದು ಈಚೆ ಬರಬೇಕಾದ್ರೆ ಶ್ರೀಪಾದಂದೂ ಫೋನ್ ರಿಂಗಣಿಸಿತು, " ಎದ್ರಾ ಅತ್ತಿಗೇ ?"

ಬೇಗ ಬೇಗ ಸ್ನಾನ ಮುಗಿಸಿ, ಒಳ ಬರುತ್ತಿದ್ದ ಹಾಗೇ ಹೊರಗಿನಿಂದ ವ್ಯಾನ್ ಬಂದೆನೆಂದು ಕೂಗಿಕೊಂಡಿತು.

ನಮ್ಮವರೂ ಪಂಚೆ ಸುತ್ತಲೋ ಇಲ್ಲ ಪ್ಯಾಂಟ್ ಧರಿಸಲೋ ಎಂದು ಮೀನಮೇಷ ಎಣಿಸುತ್ತಿದ್ದಂತೆ ಬರ್ಮುಡಾ ಮೇಲೊಂದು ಬಿಳೀ ಪಂಚೆಯೇರಿಸಿ ಸಿದ್ಧರಾದರು.

ಆತುರಾತುರವಾಗಿ ಹೊರಟು, ಮಲಗಿದ್ದ ಮಗಳನ್ನು ಎಬ್ಬಿಸಿ, ಅವಳೂ ಬಾಗಿಲು ಹಾಕಿ ಪುನಃ ಮಲಗಿಕೊಂಡಳು. ರಸ್ತೆ ಪಕ್ಕ ನಿಂತಿದ್ದ ವ್ಯಾನ್ ಬಳಿ ಬಂದೆವು. ನೋಡಿದ್ರೆ ಡ್ರೈವರು ಗೊರಕೆ ಹೊಡೆಯುತ್ತಿದ್ದಾನೆ. ನಮಗೊಂದು ಹಾರ್ನ್ ಬೆಲ್ ಮಾಡ್ಬಿಟ್ಟು ಇವನು ಹಾಯಾಗಿ ಕಾಲು ಚಾಚಿ ಮಲಗಿದ್ದು ನೋಡಿ ಸಿಟ್ಟು ಬಂತು, ಜೊತೆಗೇ ಮರುಕವೂ ಕೂಡ.

" ಇವನನ್ನು ಏಳ್ಸೂದು ಹೇಗೆ ?"




ನಮ್ಮವರು ಹಿಂದಿನಿಂದ ಬರ್ತಾ ಇದ್ದರು. " ಏನು, ನಿದ್ದೆ ಮಾಡಿದ್ದಾನಾ ? ಓಽಽಽಯ್ ಡ್ರೈವರೇ, ಲಕ್ಕ್ ಲೇಽಽಽ "

ಊಹುಂ, ಅವನು ಜಗ್ಗಲಿಲ್ಲ. ಬಾಗಿಲು ಸದ್ದು ಮಾಡಿದ್ರೂ ಇಲ್ಲ, ಕಿಟಿಕಿ ಕುಟ್ಟಿದ್ರೂ ಇಲ್ಲ. ಅಂತೂ ಏಳಿಸುವಷ್ಟರಲ್ಲಿ ನಾವು ಸುಸ್ತು.

ವ್ಯಾನು ಹೊರಟಿತು. ದಾರಿಯಲ್ಲಿ ಮದುಮಗ, ಜೊತೆಗೆ ಪುರೋಹಿತರು, ಸ್ನೇಹಿತ ಇಷ್ಟು ಮಂದಿ ಅಲ್ಲಲ್ಲಿ ವಾಹನವೇರಿದರು. ಶೃಂಗೇರಿ ಪ್ರಯಾಣ ಮುಂದುವರಿಯಿತು. ಬಜೆಗೋಳಿ ತಲಪುವಾಗ ಗಂಟೆ ಆರೂ ಮುಕ್ಕಾಲು. " ಕಾಫೀ ಹೊತ್ತು ಇನ್ನೂ ಆಗಿಲ್ಲ, ಇಲ್ಲೇ ತಿಂಡಿ ತಿನ್ನೋಣ ". ಹೋಟಲ್ ಇಡ್ಲೀ ಕಾಫೀ ಪ್ರಸಾದ ಆಯ್ತು. ನಿಗದಿತ ವೇಳೆಗೆ ಶೃಂಗೇರಿ ತಲಪಿದೆವು. ಅಲ್ಲಿಯೂ ಉಪ್ಪಿಟ್ಟು, ಶಿರಾ ನಮ್ಮನ್ನು ಕಾಯುತ್ತಾ ಇತ್ತು.

ಮದುವೆಯ ವಿಧಿ ವಿಧಾನಗಳನ್ನು ಅಲ್ಲಿನ ಅರ್ಚಕರು ಚುಟುಕಾಗಿ ಮುಗಿಸಿದರು. ಶ್ಲೋಕಗಳನ್ನು ಹೇಳುತ್ತ, " ಹೀಗ್ಹೀಗೆ ಮಾಡು " ಎಂದು ಕನ್ನಡದಲ್ಲೂ ಬೋಧಿಸುತ್ತ ಮಾಡಿದ ವಿವಾಹವಿಧಿಯ ಕ್ರಮ ಕುವೆಂಪು ಅವರ ಆದರ್ಶವನ್ನು ನೆನಪಿಗೆ ತಂದಿತು.

ಊಟದ ವೇಳೆಗೆ ಮುಂಚಿತವಾಗಿ ದೇವಸ್ಥಾನಕ್ಕೆ ಹೊರಟೆವು. ಪ್ರದಕ್ಷಿಣೆ ಬಂದು, ಪ್ರಸಾದಗಳಿಗೂ ಚೀಟಿ ಮಾಡಿಸಿ, ಮಂಗಳಾರತಿ ಆಗುವ ತನಕ ಗೋಪುರದಲ್ಲಿ ಚಕ್ಕಳಮಕ್ಕಳ ಹಾಕಿ ಕುಳಿತು ಒಳಾಂಗಣದ ಸೊಬಗು, ಶಿಲಾಕೆತ್ತನೆ ಕೆಲಸಗಳನ್ನು ನೋಡುತ್ತಾ ಕಾಲ ಕಳೆದೆವು. ಎಲ್ಲವೂ ಅಚ್ಚುಕಟ್ಟು. " ಶಿಲೆಯಲ್ಲವೀ ಗುಡಿಯು, ಕಲೆಯ ಬಲೆಯು... ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ.." ಇತ್ಯಾದಿ ಕವನದ ಸಾಲುಗಳು ಮನದೊಳಗೆ ಆಲಾಪನೆ. ಹೊಸ ಪ್ರವೇಶದ್ವಾರದ ನಿರ್ಮಾಣಕಾರ್ಯ ಆಗುತ್ತಾ ಇತ್ತು, ಹಾಗಾಗಿ ದೇಗುಲದ ಸೌಂದರ್ಯ ಗೋಚರವಾಗುತ್ತಿರಲಿಲ್ಲ



ಇದಕ್ಕಿಂತಲೂ ಪುರಾತನ ದೇವಾಲಯ ಕಣ್ಗೋಚರದಲ್ಲೇ ಇದೆ. ಅಲ್ಲಿ ಬಾಗಿಲು ತೆರೆಯೋದು ಸಂಜೆ ಐದರ ನಂತರವಂತೆ. ದೇಗುಲದ ಹೊರನೋಟ ಮಾತ್ರದಿಂದಲೇ " ಹಂಸಗೀತೆ " ಚಲನಚಿತ್ರದ ಕೊನೆಯ ದೃಶ್ಯದ ಹಾಡು ನೆನಪಾಯಿತು. ಡಾ. ಬಾಲಮುರಳೀಕೃಷ್ಣ ಹಾಡಿರೂದು, ಅನಂತನಾಗ್ ಅಭಿನಯದ ಈ ಚಿತ್ರದಲ್ಲಿ ಸಂಗೀತ ಕಲಾವಿದ ತಾನು ದೇವರ ಮುಂದೆ ಮಾತ್ರ ಹಾಡುವುದಾಗಿ ಹೇಳಿಕೊಳ್ಳುತ್ತ ಭೈರವೀ ರಾಗದಲ್ಲಿ ಕೀರ್ತನೆಯೊಂದನ್ನು ಹಾಡಿ, ಕೊನೆಯದಾಗಿ ತನ್ನ ನಾಲಗೆಯನ್ನೇ ಕತ್ತರಿಸಿಕೊಳ್ಳುವ ದೃಶ್ಯದ ಚಿತ್ರೀಕರಣ ಇಲ್ಲಿಯೇ ಮಾಡಿದ್ದಾಗಿರಬೇಕು ಎಂದು ಆ ಕ್ಷಣದಲ್ಲೇ ಹೊಳೆಯಿತು.

ಅಂತೂ ಮದ್ಯಾಹ್ನದ ಭೋಜನಕೂಟವೂ ಮುಗಿಯಿತು. ಅದಾಗಲೇ ಮದುಮಗಳ ಸೋದರತ್ತೆ ನನ್ನ ಬಳಿ ಆತ್ಮೀಯತೆ ಬೆಳೆಸಿಕೊಂಡಾಗಿತ್ತು. ಊಟವಾಗಿ ಕುಳಿತಿದ್ದಂತೆ ಅವರು ತಮ್ಮ ಚೀಲದಿಂದ ಪುಟ್ಟ ಗಂಟು ಬಿಡಿಸಿದರು.



" ಇದೇನು ಅಡಿಕೆಪುಡಿಯಾ ?"

" ಹೂಂ, ನಾನೇ ಮಾಡಿರೂದು, ನೋಡಿ ಸ್ವಲ್ಪ " ನನ್ನ ಕೈಗೂ ಬಿತ್ತು ಅಡಿಕೆಪುಡಿ. " ಕೊಬ್ರೀ ತುರಿ, ಸಕ್ರೆ ಹಾಕಿದ್ದೀನಿ ನೋಡ್ರೀ "

" ಇದಕ್ಕೆ ಏಲಕ್ಕಿ, ಲವಂಗ ಹಾಕಿದ್ರೆ ಇನ್ನೂ ಚೆನ್ನಾಗಿರುತ್ತೆ ಅಲ್ವಾ ?"

" ಹೌದ್ಹೌದು "

" ಹೀಗೆ ಕೆಂಪು ಬಣ್ಣ ಬರೂದು ಹೇಗೆ ?"

" ಅದೂ ಬೇಯಿಸ್ತೀವಲ್ಲ, ಆಗ ಬಣ್ಣ ಬರೂದಿಕ್ಕೆ ಒಂದು ಪುಡಿ ಹಾಕ್ತೀವಿ " ಯಾವ್ದೋ ಮರದ ಕೆತ್ತೆಯ ಹೆಸರೂ ಹೇಳಿದ್ರು.

" ಆಗ್ಲಿ, ನಾನೂ ಮನೆಗೆ ಹೋಗಿ ಮಾಡ್ತೇನೆ " ಅಂದೆ.

" ಇದನ್ನ ನೀವು ಇಟ್ಕೊಳ್ರೀ " ಅಡಿಕೇಪುಡಿ ಗಂಟು ನನ್ನ ಕೈ ಸೇರಿತು.

ಊಟವಾಗಿ ವಿಶ್ರಾಂತಿ ಬೇಡವೇ, ಅಲ್ಲೇ ಇದ್ದ ಅರ್ಚಕರ ಮನೆಯೊಳಗೆ ಹೊಕ್ಕೆವು. ಚೊಕ್ಕವಾಗಿದ್ದ ಮನೆ. " ಮಲಗ್ತೀರಾ ಆಂಟೀ " ಅನ್ನುತ್ತಾ ಅರ್ಚಕರ ಮಗಳು ದಿಂಬು ಕೊಟ್ಟಳು. ಸ್ವಲ್ಪ ಹೊತ್ತಿನಲ್ಲಿ ನಮ್ಮವರೂ ಬಂದ್ರು, ಅರ್ಚಕರೂ ಇವರೂ ಮತಾಡ್ತಾ ಇದ್ದದ್ದು ಕೇಳಿಸ್ಕೊಳ್ಳುತ್ತಾ ಒಂದು ಸಣ್ಣ ನಿದ್ದೆ ತೆಗೆದೆ.

" ಏಳು, ಎಲ್ಲಾರ್ದೂ ಊಟ ಆಯ್ತು, ಇನ್ನು ಮಠ ನೋಡ್ಕೊಂಡು ವಾಪಸ್ಸಾಗೋದೇ "

ಪುನಃ ಹೊರಟೆವು. ಚಪ್ಪಲಿ ಹಾಕೂ ಹಾಗಿಲ್ಲ, ಕಾಲು ಬಿಸಿಯ ತಾಪವನ್ನು ಸಹಿಸಕೊಳ್ಳುತ್ತ ನಡಿಗೆ ಮುಂದುವರಿಯಿತು. ಬಂದ ಕೆಲಸದ ಒತ್ತಡ ಮುಗಿದಿದ್ದರಿಂದ ಎಲ್ಲರೂ ನಿರಾಳವಾಗಿ ಅಂಗಡಿಗಳಿಗೂ ಹೊರಟರು. ನನಗೂ ಒಂದು ಕೆಜಿ ಕಾಫೀ ಹುಡಿ, ಚಹಾ ಹುಡಿ ಬಂತು, ಬೇಡಾ ಅನ್ನೋದು ಯಾಕೆ ? ಇರಲಿ ಅಲ್ವೇ.

ವಾಪಸ್ ಹೊರಡುವಾಗ ನಮ್ಮೊಂದಿಗೆ ನವವಧು ಹಾಗೂ ಅವಳ ತಮ್ಮ ಜೊತೆಯಾಗಿ ಸೇರಿದರು. ಮೂಡಬಿದ್ರೆ ತಲಪುವಾಗ ಗಂಟೆ ಒಂಭತ್ತು. ಎಲ್ಲರೂ ಹೋಟಲ್ ಹೊಕ್ಕರು. ಮಧ್ಯಾಹ್ನದ ಊಟವೇ ಇನ್ನೂ ಅಲುಗಾಡಿಲ್ಲ, ನಂಗೇನೂ ಬೇಡವೆಂಬ ಕಣ್ಸನ್ನೆ ಹೋಯಿತು.

" ಏನೂ ಬೇಡ್ವೇ, ಅಲ್ಲೊಂದು ಕಬ್ಬಿನಹಾಲು ಇರೋ ಹಂಗಿದೆ, ಬಾ "

" ಒಂಚೂರು ಶುಂಠಿಯೂ ಹಾಕು " ಅನ್ನುತ್ತಾ ಅಲ್ಲಿ ಹೋಗಿ ಕುಕ್ಕರಿಸಿದೆ.

ಕಬ್ಬಿನ ಹಾಲು ಹಿಂಡುತ್ತಿದ್ದ ಧಡಿಯನಿಗೂ ಕಿರುನಗು. ನಿಂಬೆಹಣ್ಣು ಕೂಡಾ ಹಾಕ್ದ. ಉಳಿದವರೆಲ್ಲ ಸಾವಕಾಶವಾಗಿ ಹೋಟಲ್ ಭೋಜನ ಸವಿಯುತ್ತಾ ಇನ್ನಷ್ಟು ಹೊತ್ತು ಕಳೆದರು. ಎಲ್ಲರನ್ನೂ ಅವರವರ ತಾಣದಲ್ಲಿ ಇಳಿಸಿದ ವ್ಯಾನ್ ಕೊನೆಯದಾಗಿ ನಮ್ಮನ್ನು ಮನೆಗೆ ತಲಪಿಸುವಷ್ಟರಲ್ಲಿ ಗಂಟೆ ರಾತ್ರಿ ಹತ್ತೂವರೆಯಾಗಿತ್ತು.

ಗಂಡಿಗೊಂದು ಹೆಣ್ಣು ತಂದು
ಹೆಣ್ಣಿಗೊಂದು ಬಾಳು ಬಂದು
ಬದುಕ ಪಯಣ ಸಾಗುತಿಹುದು|



Posted via DraftCraft app

Tuesday 19 February 2013

ಸಂಜೆಗೊಂದು ತಿನಿಸು





ಗೋಳೀ ಬಜೆ ಮಕ್ಕಳ ನೆಚ್ಚಿನ ತಿಂಡಿ. ಈ ತಿಂಡಿ ಮಾಡಲು ಬಹಳ ಸುಲಭ, ಹೆಚ್ಚಿನ ಶ್ರಮವೂ ಬೇಡ. ಇದಕ್ಕೆ ಬೇಕಾಗುವ ಸಾಮಗ್ರಿ:

3 ಕಪ್ ಮೈದಾ
1 ಕಪ್ ಕಡ್ಲೇ ಹಿಟ್ಟು
1 ಚಿಕ್ಕ ಚಮಚ ಸೋಡಾ ಹುಡಿ
ರುಚಿಗೆ ಉಪ್ಪು, ಮಸಾಲೆ ಹುಡಿ, ಇಂಗು,
2 ಚಮಚಾ ಸಕ್ಕರೆ
2 ಕಪ್ ನೀರು

ಮೊದಲು ಕಡ್ಲೇ ಹಿಟ್ಟನ್ನು ಕಾಳು ಕಟ್ಟದಂತೆ ನೀರಿನಲ್ಲಿ ಕಲಸಿಕೊಳ್ಳಿ.
ಉಪ್ಪು, ಸೋಡಾಹುಡಿ, ಇಂಗು, ಸಕ್ಕರೆ, ಮಸಾಲಾಹುಡಿಗಳನ್ನು ಹಾಕಿಕೊಳ್ಳಿ.
ಮೈದಾ ಸೇರಿಸಿ ನೀರಿನ ಅಗತ್ಯ ನೋಡಿಕೊಂಡು ಎರೆದು ಕಲಸಿಕೊಳ್ಳಿ. ಹಿಟ್ಟು ತುಂಬಾ ಗಟ್ಟಿಯಾಗಬಾರದು. ಇಡ್ಲೀ ಹಿಟ್ಟಿಗಿಂತ ದಪ್ಪ ಇದ್ದರೆ ಸಾಕು.
ಇನ್ನೇಕೆ ತಡ, ಎಣ್ಣೆ ಕಾಯಲಿಟ್ಟು, ಬಿಸೀ ಎಣ್ಣೆಗೆ ಸ್ವಲ್ಪ ಸ್ವಲ್ಪವೇ ಹಿಟ್ಟನ್ನು ಇಳಿಸುತ್ತಾ ಬನ್ನಿ. ಉರುಟುರುಟಾಗಿ ಉಬ್ಬಿ ಹೊಂಬಣ್ಣ ಬಂದೊಡನೆ ತೆಗೆಯಿರಿ.

ಮೊದಲ ಬಾರಿ ಗೋಳೀ ಬಜೆ ಮಾಡುವಾಗ ತುಂಬ ಮಾಡಬಾರದು. ಚಿಕ್ಕ ಅಳತೆಯಲ್ಲಿ ಮೈದಾ ಹಾಗೂ ಕಡ್ಲೆ ಹಿಟ್ಟು ತಗೆದಿಟ್ಟು ಕೊಳ್ಳಿ. ಒಟ್ಟಿನಲ್ಲಿ ಅಳತೆ 3 : 1 ಆದರಾಯಿತು. ಕಡ್ಲೇ ಹಿಟ್ಟು ತುಸು ಕಮ್ಮಿ ಹಾಕಿದರೂ ತೊಂದರೆಯಿಲ್ಲ.

ಇದು ಅಪ್ಟಟ ದಕ್ಷಿಣ ಕನ್ನಡಿಗರ ತಿಂಡಿ. ಗೋಳೆ ಎಂದರೆ ನಮ್ಮ ಆಡುಮಾತಿನಲ್ಲಿ ಸೊನ್ನೆ ಅಥವಾ ಶೂನ್ಯ ಎಂದರ್ಥ. ಉಬ್ಬಿರುವ ಒಂದು ಗೋಳೀಬಜೆಯನ್ನು ತುಂಡು ಮಾಡಿದಾಗ ಒಳಗಡೆ ಶೂನ್ಯವಾಗಿರುತ್ತದೆ !

ಮೊಸರು, ಮಜ್ಜಿಗೆ, ಬಾಳೆಹಣ್ಣು, ಈರುಳ್ಳಿ ಯಾವುದನ್ನೂ ಈ ಹಿಟ್ಟಿಗೆ ಸೇರಿಸುವ ಅವಶ್ಯಕತೆ ಇಲ್ಲ. ಹಾಕಿದ್ರೆ ಹೆಚ್ಚು ಎಣ್ಣೆ ಕುಡಿಯುತ್ತೆ... Original taste ಬರೂದಿಲ್ಲ.

ಕರಿದ ತಿಂಡಿಗಳಿಗೆ ಉಪ್ಪು ಆದಷ್ಟು ಕಡಿಮೆ ಹಾಕುವುದು ಉತ್ತಮ. ಖಾರ ಜಾಸ್ತಿ ಬೇಕಿದ್ದರೆ ಮೆಣಸಿನ ಹುಡಿ ಹಾಕಬಹುದು. ಸಿಹಿ ಖಾರಗಳ ಸಂಯುಕ್ತ ಮಿಶ್ರಣದಿಂದ ತಟ್ಟೆ ತುಂಬಾ ಇದ್ದ ಗೋಳೀಬಜೆ ಕ್ಷಣ ಮಾತ್ರದಲ್ಲಿ ಖಾಲಿಯಾಗುವುದನ್ನು ನೋಡಿ. ಎಣ್ಣೆಗೆ ಹಾಕಿದಾಗ ವಿಧವಿಧವಾದ ಆಕೃತಿಯನ್ನು ತಳೆಯುವ ಗೋಳೀಬಜೆಯ ರೂಪಕ್ಕೆ ಮಕ್ಕಳು ಮನ ಸೋಲದಿದ್ದರೆ ಮತ್ತೇನು ಕಮ್ಮಿ !

Posted via DraftCraft app

ಟಿಪ್ಪಣಿ: ದಿನಾಂಕ 17, ಆದಿತ್ಯವಾರ, ಮಾರ್ಚ್ 2013ರಂದು ವಿಸ್ತರಿಸಿ ಬರೆದದ್ದು.


ಎಂದಿನಂತೆ ವಾರಾಂತ್ಯದಲ್ಲಿ ಮಗಳು ಬಂದಳು.

" ಅಮ್ಮಾ, ಗೋಳೀಬಜೆ ಮಾಡ್ಸಿ ತಗೊಂಡ್ ಬಾ ಅಂತ ಫ್ರೆಂಡ್ಸ್ ಹೇಳಿದಾರೆ "

" ಅಲ್ಲ, ಕಾಲೇಜ್ ಕ್ಯಾಂಟೀನ್ ಯಾಕಿರೂದು, ಅಲ್ಲೇ ತಿಂದ್ಕೊಳ್ಳೀ "

" ಅಲ್ಲಿ ಒಂದು ಪ್ಲೇಟಿಗೆ ಏಳು ರೂಪಾಯಿ ಗೊತ್ತಾ, ನೀನು ಮಾಡಿದ ಹಾಗೆ ಆಗುತ್ತಾ ಅದು.."

" ನಂಗೆಲ್ಲಿ ಟೈಮಿದೇ, ಈಗ ನೀನು ಬೇರೆ ಬಂದಿದೀಯಲ್ಲ, ಬರೂವಾಗ್ಲೇ ಬಟ್ಟೆ ತೊಳೆಯೂದಿದೆ ಅಂತ ಬೇರೆ ಹೇಳ್ತೀಯಲ್ಲ "

" ಅದೆಲ್ಲ ನಂಗೊತ್ತಿಲ್ಲ, ಕಳೆದ ಸರ್ತಿ ಬಂದಿದ್ದಾಗ ಮೈದಾ ಇಲ್ಲ, ಕಡ್ಲೇ ಹುಡಿ ಇಲ್ಲ ಅಂದೀ, ಈಗ ತರ್ಸಿದೀಯ ತಾನೇ "

" ಆಯ್ತಾಯ್ತು ಮಾಡುವಾ, ನಾಳೆ ಹತ್ತು ಗಂಟೆಗೆ ಟೀ ಜತೆ ಮಾಡ್ಕೊಡ್ತೇನೆ "

ಗೋಳೀಬಜೆ ಪುನಃ ಸಿದ್ಧವಾಗಿದೆ. ಅಪ್ಪ ಮಗಳು ಸೇರಿ ಖಾಲಿ ಮಾಡೂದೊಂದೇ ಬಾಕಿ.






Tuesday 12 February 2013

ಫೋಟೋ _______ ಶೀರ್ಷಿಕೆ




 ಅರುವತ್ತರ ದಶಕದ  ' ಚಂದಮಾಮಾ ' ಮಕ್ಕಳ ಮಾಸಪತ್ರಿಕೆಯಲ್ಲಿ ಫೋಟೋ ಶೀರ್ಷಿಕೆಯ ಸ್ಪರ್ಧಾ ವಿಭಾಗ ಇತ್ತು.  ಪ್ರಸಿದ್ಧ ಛಾಯಾಗ್ರಾಹಕರ ಎರಡು ಚಿತ್ರಗಳು.  ಆ ಎರಡೂ ಚಿತ್ರಗಳಿಗೆ ಹೊಂದಿಕೆಯಾಗುವಂತೆ ಸೀಮಿತ ಅಕ್ಷರಗಳಲ್ಲಿ ಒಂದೇ ವಾಕ್ಯದ ಎರಡು ಶೀರ್ಷಿಕೆಗಳನ್ನು ಬರೆದು ಪೋಸ್ಟ್ ಕಾರ್ಡಿನಲ್ಲಿ ಕಳುಹಿಸಿದರಾಯಿತು.  ಅತ್ಯುತ್ತಮ ಬರಹಗಳಿಗೆ ನಗದು ಬಹುಮಾನವೂ ಇದ್ದಿತು.  ನನ್ನಮ್ಮ ಹಾಗೂ ಚಿಕ್ಕಪ್ಪ ಈ ಪುಟವನ್ನು ಅತ್ಯುತ್ಸಾಹದಿಂದ ನೋಡಿಕೊಂಡು ಏನೇನೋ ವಾಕ್ಯಗಳನ್ನು ಬರೆಯುತ್ತಾ ಇದ್ದಿದ್ದನ್ನು ಆಗ ಚಿಕ್ಕ ಬಾಲಕಿಯಾಗಿದ್ದ ನಾನೂ ಕಾಣುತ್ತಿದ್ದೆ. ಇರಲಿ, ನನ್ನದೂ ಹೀಗೇ ಸುಮ್ಮನೆ ......

ನೋಡುತ್ತೀರಿ ಚಿತ್ರಪಟ 
ಬಿಡಿಸುತ್ತೀರಿ ನೆನಪಿನ ದೃಶ್ಯಪುಟ






























Posted via DraftCraft app

Tuesday 5 February 2013

ಬದನೇ ಹುಳಿ






ಅದ್ಯಾಕೋ ಬದನೆ ನನಗೆ ಸೇರುತ್ತಾ ಇರಲಿಲ್ಲ. ಅಮ್ಮ ಬದನೆಹುಳಿ ಮಾಡಿದ ದಿನ ನನಗೊಂದು ಟೊಮ್ಯಾಟೋ ಸಾರು ಮಾಡಿ ಹಾಕ್ತಿದ್ದರು. ಉಳಿದವರೆಲ್ಲ ಬದನೆ ವೈವಿಧ್ಯಗಳನ್ನು ತಿಂದು ಬಾಯಿ ಚಪ್ಪರಿಸುತ್ತಿದ್ದರೆ " ಛೀ, ಥೂ, ನಂಗೆ ಬೇಡಾ " ಅನ್ನುತ್ತಿರಬೇಕಾದರೆ ಬಾಲ್ಯ ಕಳೆದು ಯುವತಿಯಾಗಿ, ಮದುವೆಯಾಗಿ ಅತ್ತೆಮನೆಗೆ ಬಂದೆ.

ನನ್ನ ಮಾವ ಬದನೆ ಪ್ರಿಯರು. ಮನೆಯಂಗಳದಲ್ಲಿ ನೆಟ್ಟು, ತಾವೂ ತಿಂದು ಉಳಿದವರಿಗೂ ಹಂಚುವ ಸ್ವಭಾವದವರು. ಒಮ್ಮೆ ಪುತ್ತೂರಿನಿಂದ ಬರುತ್ತಿರಬೇಕಾದರೆ ಸಂತೆಯಲ್ಲಿ ಗುಳ್ಳಬದನೆ ಕಂಡು ಚೀಲ ತುಂಬಾ ಹೊತ್ತು ತಂದರು. ಹೊಸ ಸೊಸೆಯಾಗಿ ಬಂದಿದ್ದ ನಾನು " ಈ ಬದನೆ ಏಕೆ ತಂದಿರಿ " ಎಂದು ಕೇಳಲುಂಟೇ ? ಮಾತನಾಡದೇ ಸಾಂಬಾರು ಮಾಡಬೇಕಾಯಿತು. ಒಗ್ಗದ ತರಕಾರಿ, ಹಾಗೂ ಹೀಗೂ ಕತ್ತರಿಸಿ, ಏನೋ ಮಸಾಲೆ ಹುರಿದು, ಕಾಯಿತುರಿಯೊಂದಿಗೆ ಅರೆದು ' ಸಾಂಬಾರಾಯಿತು ' ಅನ್ನಿಸಿ ಊಟಕ್ಕೆ ಸಿದ್ಧ ಪಡಿಸಿ ಆಯ್ತು. ಅವರ ಬಾಯಿರುಚಿಗೆ ಹಿತವಾಗುವಂತೆ ಆಗಿರಲಿಲ್ಲ ಆ ದಿನದ ಹುಳಿ. ಹೇಗೋ ತಿಂದರು ಪಾಪ...

ನಾನೇ ಮಾಡಿದ ಹುಳಿಯನ್ನು ನಿರ್ವಾಹವಿಲ್ಲದೆ ತಿನ್ನಬೇಕಾಯಿತು. ನನ್ನದೂ ಊಟವಾದ ಮೇಲೆ ಕೆಲಸದಾಕೆ ಕಲ್ಯಾಣಿಗೂ ಊಟ ಬಡಿಸುತ್ತಾ, ಈ ತರಕಾರಿ ತಿನ್ನುವುದೇ ಇಲ್ಲವೆಂದು ಆಕೆಗೆ ಹೇಳಿದ್ದು ಮಾವನವರ ಕಿವಿಗೂ ಬಿತ್ತು. ನಾನೇ ತಯಾರಿಸಿದ ಬದನೆಹುಳಿಯನ್ನು ಯಾವಾಗ ತಿಂದೆನೋ ಆಗಲೇ ನನ್ನೊಳಗಿದ್ದ ಅದೇನೋ ತಪ್ಪುಕಲ್ಪನೆ ಹೋಗಿ ಬಿಟ್ಟಿತು. ಬದನೇಕೃಷಿಯಲ್ಲಿ ನಾನೂ ತೊಡಗಿಸಿಕೊಂಡು ವರ್ಷಪೂರ್ತಿ ಬದನೇಹುಳಿ ತಿಂದು ತೇಗಿದ್ದೇ ತೇಗಿದ್ದು.


<><><> <><><> <><><>


ಮಳೆಗಾಲ ಆರಂಭವಾಗುತ್ತಿದ್ದ ಹಾಗೇ ಬದನೇ ಗಿಡಗಳ ಅವಲೋಕನ. ಒಮ್ಮೆ ಫಲರಹಿತ ಗೆಲ್ಲುಗಳನ್ನು ಕತ್ತರಿಸಿ, ಬುಡಕ್ಕೆ ಸ್ವಲ್ಪ ನೈಸರ್ಗಿಕ ಗೊಬ್ಬರ ಹಾಕಿ ಬಿಟ್ಟರೆ ಸೈ, ದೊಡ್ಡ ಗಾತ್ರದ ಬದನೆ ಫಸಲು ನಿಶ್ಚಿತ.
ಅರೆ, ತನ್ನ ಪಾಡಿಗೆ ಹೊಸ ಗಿಡ ಈ ಗುಳ್ಳಬದನೆ ಸಾಲಿನಲ್ಲಿ ತಲೆಯೆತ್ತುತ್ತಾ ಇದೆ, ಯಾರು ಬೀಜ ಬಿತ್ತಿದವರು ? ಇರಲಿ, ನೋಡಿಕೊಳ್ಳೋಣ, ಬಹುಶಃ ಕುದನೆಯಿರಬೇಕು. ಮನಸ್ಸಿನಲ್ಲೇ ಮಂಥನ. ಅತ್ತೆಯವರಿದ್ದಾಗ ಕುದನೆಕಾಯಿ ಸಾರು, ಗೊಜ್ಜು ತಿಂದಿದ್ದೇ ಬಂತು.

ಗಿಡ ನಿರಾತಂಕವಾಗಿ ದೊಡ್ಡದಾಯಿತು. ಬದನೆಹೂವಿನಂತಹ ಬಿಡಿ ಬಿಡಿ ಹೂಗಳು ಅರಳಿದವು. ಕಾಯಿ ಮೂಡಿತೇ, ಕಾಣಬೇಕಲ್ಲ, ಗೆಲ್ಲು ಎತ್ತಿ ನೋಡೋಣಾಂದ್ರೆ ಮುಳ್ಳಿನ ಮಾರಿ. ಎಲೆಯೂ ಮುಳ್ಳು. ಏನೋ ಸಂದೇಹ, ಇದ್ಯಾವ ಕಾಯಿ?

ದೊಡ್ಡ ನೆಲ್ಲಿಕಾಯಿ ಗಾತ್ರದ ಕಾಯಿಗಳು ಕಂಡ ಕೂಡಲೇ ಒಂದು ಫೋಟೋ ನಮ್ಮ Agriculturist ಗುಂಪಿನ ಸ್ನೇಹಿತರಿದ್ದಲ್ಲಿಗೆ ಹೋಯಿತು. ಕ್ಷಣ ಮಾತ್ರದಲ್ಲಿ ಉತ್ತರವೂ ದೊರೆಯಿತು.




" ಇದು ಕುದನೆಯಲ್ಲ, ಉಮಿಗುಳ್ಳ "

" ಉಪಯೋಗಿಸಬಹುದೇ ?"

" ರುಚಿಕರವಾದ ಅಡುಗೆ ಮಾಡಬಹುದು "

" ನಮ್ಮ ಬೆಂಗಳೂರು ರಸ್ತೆ ಪಕ್ಕದಲ್ಲಿ ಈ ಗಿಡಗಳೇ ಇರೂದು, ನಾವು ಮೊನ್ನೆ ಬೋಳುಹುಳೀ ಮಾಡಿ ತಿಂದೆವು "

ಅಬ್ಬ, ಧೈರ್ಯ ಬಂದಿತು.

" ಹಣ್ಣಾದಾಗ ಹಳದೀ ಬಣ್ಣ ಬರುವಂತಾದ್ದು ಮಾತ್ರ ತಿನ್ನಬಹುದು " ಇನ್ನೊಬ್ಬರು ಎಚ್ಚರಿಕೆಯ ಗಂಟೆ ಹೊಡೆದರು.

ಮೊದಲನೇ ಪ್ರಯತ್ನವಾಗಿ ಗೊಜ್ಜು ತಯಾರಾಯಿತು. ತುಸು ಕಹಿ ರುಚಿ. ಇನ್ನೊಮ್ಮೆ ಮಾಡುವಾಗ ಅಚ್ಚುಕಟ್ಟಾಗಿ ಬೀಜಗಳನ್ನು ತೆಗೆದು ಮೆಣಸ್ಕಾಯಿ ಪ್ರಯೋಗ ನಡೆಯಿತು. ಏನೂ ತೊಂದರೆಯಿಲ್ಲ, ಹುಳಿಮೆಣಸು ಕೂಡಾ ಮಾಡಬಹುದು.

ಅಪ್ಪಟ ಭಾರತೀಯ ಸಸ್ಯವಾಗಿರುವ ಬದನೆಯಲ್ಲಿ ಲೆಕ್ಕವಿಲ್ಲದಷ್ಟು ಪ್ರಬೇಧಗಳಿವೆ. ಕಾಡುಸಸ್ಯದ ಬದನೆ ಜಾತಿಯಲ್ಲಿ ವೈದ್ಯಕೀಯ ಗುಣಧರ್ಮಗಳೂ ಇವೆ. ಉಮಿಗುಳ್ಳವೂ ಅಂತಹ ಒಂದು ವಿಶಿಷ್ಟ ಸಸ್ಯ. ಕೆಲವು ಧಾರ್ಮಿಕ ವಿಧಿಗಳಲ್ಲೂ ಇದರ ಬಳಕೆ ಸಾಮಾನ್ಯ.

ಉಮಿಗುಳ್ಳದ ಕಥೆ ಹಾಗಿರಲಿ, ಈಗ ಬಿಟಿ ಬದನೆ ಎಂಬ ಆಧುನಿಕ ತಂತ್ರಜ್ಞಾನದ ಬದನೆ ಬರಲಿದೆಯಂತೆ. ಅದನ್ನು ತಿನ್ನುವುದು ಹೇಗೇ ಎಂದು ಸಂಶೋಧನೆ ಮಾಡುವುದು ಒತ್ತಟ್ಟಿಗಿರಲಿ, ಯಾಕೋ ಗೊತ್ತಿಲ್ಲ, ನಮ್ಮ ದೇಸೀ ತಳಿಗಳನ್ನು ನಿರ್ನಾಮ ಮಾಡಲಿದೆಯಂತೆ, ತಿಂದೋರಿಗೂ ಸುಖವಿಲ್ಲವಂತೆ, ಬೆಳೆದೋನ ಪಾಡು ದೇವರಿಗೇ ಪ್ರೀತಿಯಂತೆ, ಹಾಗಂತೆ, ಹೀಗಂತೆ..... ನಮ್ಮ ಸರ್ಕಾರೀ ಕೃಷಿ ಮಂತ್ರಿಗಳಿಗೆ ಆಗೊಮ್ಮೆ ಈಗೊಮ್ಮೆ ಹೇಳಿಕೆ ಕೊಡುವ ಅಭ್ಯಾಸ, ಕೃಷಿ ಪಂಡಿತರಿಗೆ ಈ ಹೇಳಿಕೆಗಳನ್ನು ವಿರೋಧಿಸುವ ಅಭ್ಯಾಸ. ಹೌದೂ, ನನಗೂ ಒಂದು ಸಂದೇಹ, ನಮ್ಮ ದೇಸೀಯ ಕಾಡುಸಸ್ಯವಾಗಿದ್ದ ಈ ಬದನೆಯನ್ನು ನಾಡತಳಿಯಾಗಿಸಿದ್ದು ಯಾರು? ನಾವೇ ಅಲ್ಲವೇ, ಗುಳ್ಳಬದನೆಯ ಆವಿಷ್ಕಾರ ನಮ್ಮ ಯತಿಶ್ರೇಷ್ಠರದ್ದೇ. ಯಾರು ಏನೇ ಅನ್ನಲಿ, ನಾವು ಬದನೇ ಹುಳಿ ತಿನ್ನೋಣ.




Posted via DraftCraft app