Pages

Ads 468x60px

Tuesday 27 November 2012

ಪಪ್ಪಾಯ ಹಣ್ಣು ತಿನ್ನುವ ಉಪಾಯ !





ನಮ್ಮ ಪರಿಸರದಲ್ಲಿ ಏನೂ ಕಾಸು ಖರ್ಚಿಲ್ಲದೆ ಬೆಳೆಸಬಹುದಾದ ಫಲ ಸಸ್ಯ ಪಪ್ಪಾಯಿ ಗಿಡ.   ಏನೇನೋ ಗಿಡಗಂಟಿಗಳು ಮಳೆಗಾಲದಲ್ಲಿ ಹುಲುಸಾಗಿ ಬೆಳೆಯುವ ಹಾಗೆ ಇದೂ ಕೂಡ.   ಎಲ್ಲಿಂದಲೋ ಹಕ್ಕಿಗಳು ತಂದು ಹಾಕಿದ ಬೀಜಗಳಿಂದ ವಿಧ ವಿಧ ಜಾತಿಯ ಪಪ್ಪಾಯಿ ಗಿಡಗಳು ನಮ್ಮ ಅಡಿಕೆ ತೋಟಗಳಲ್ಲಿ ಸಹಜವಾಗಿ ಇವೆ.

ತೋಟದಲ್ಲಿ ಕೃಷಿ ಕೆಲಸಗಳು ಭರಾಟೆಯಿಂದ ಸಾಗುತ್ತಿರುವಾಗ ಕೆಲಸಗಾರರಿಗೆ ಊಟದೊಂದಿಗೆ ಪುಷ್ಕಳ ಭೋಜನ ಈ ಪಪ್ಪಾಯಿ ಕಾಯಿಯಿಂದಲೇ ತಯಾರಿಸುವ ವಾಡಿಕೆ ಹಿಂದಿನಿಂದಲೇ ನಡೆದುಕೊಂಡು ಬಂದಿದೆ.   ತೋಟದೊಳಗೆ ಇರುವ ಪಪ್ಪಾಯಿ ಗಿಡಗಳು ಅಡಿಕೆ ಮರದೊಂದಿಗೆ ಸ್ಪರ್ಧೆಗಿಳಿದು,  ಎತ್ತರಕ್ಕೆ ಬೆಳೆದು,  ಕೊನೆಗೊಮ್ಮೆ ಫಲಭಾರದಿಂದ ಮುರಿದು ಬೀಳುವುದು ಮಾಮೂಲು.   ಅಂಥ ಪ್ರಸಂಗ ಬಂದಲ್ಲಿ,  ಬುಟ್ಟಿ ತುಂಬಾ ಕಾಯಿಗಳನ್ನು ಹೊತ್ತು ತರುವ ಕಲ್ಯಾಣಿ,  ಮಹದಾನಂದದಿಂದ ತಾನೂ ಮನೆಗೆ ಒಯ್ಯುವವಳೇ.   ಅದ್ಯಾಕೋ ನನ್ನ ಮಕ್ಕಳು ಈ ಹಣ್ಣನ್ನು ತಿನ್ನಲು ಒಪ್ತಾನೇ ಇರಲಿಲ್ಲ.

" ನಂಗೆ ಬೇಡಾ ಈ ಪಿಚಿ ಪಿಚಿ ಹಣ್ಣು " 

" ತಿನ್ನೂ ಕಣ್ಣಿಗೆ ಒಳ್ಳೇದು "

ಮಕ್ಕಳು ದೂರದಿಂದಲೇ ಬೇಡವೆನ್ನುವ ಹಣ್ಣನ್ನು ತಿನ್ನಿಸುವ ಉಪಾಯ ತಿಳಿಯದೇ ಹೋಯಿತು.   ಸಮಜಾಯಿಸಿ ತಿಳಿ ಹೇಳುವುದು ಕಠಿಣದ ಕೆಲಸ.   ಅರ್ಥವಾಗುವ ವಯಸ್ಸೂ ಅವರದಲ್ಲ.    ಬಲು ಮೆತ್ತನೆಯ ಹಣ್ಣು.   ಸಿಪ್ಪೆ ತೆಗೆಯ ಹೊರಟರೆ ಕೈ ಬೆರಳಿಗೇ ಗಾಯವಾಗುವ ಅಪಾಯ.   ನಾಜೂಕಿನಲ್ಲಿ ಸಿಪ್ಪೆ ತೆಗೆದು,  ಚೂರಿಯಿಂದ ಕತ್ತರಿಸಿ ಮಕ್ಕಳಿಗೆ ತಿನ್ನಿಸುವ ಸಾಹಸಕ್ಕಿಂತ ತೆಪ್ಪಗಿರುವುದೇ ಲೇಸು.


                                               <><><>           <><><>


ಈಗ ಟೀವಿ ವೀಕ್ಷಣೆಗೆ ನೂರಾರು ಮಾಧ್ಯಮಗಳಿವೆ.  ಕೇಬಲ್ ಜಾಲವಿದೆ,  DTH ಸೌಲಭ್ಯವಿದೆ.   ಆಗ ಡಿಶ್ ಆಂಟೆನಾಗಳ ಕಾಲ.   ಗ್ರಾಮೀಣ ಪ್ರದೇಶಗಳಲ್ಲಿ ಟೀವಿಯಲ್ಲಿ ನೂರಾರು ಚಾನಲ್ ಗಳನ್ನು ನೋಡಬೇಕೆಂದಿದ್ದರೆ ಡಿಜಿಟಲ್ ರಿಸೀವರ್ ಅಳವಡಿಸಿಕೊಳ್ಳಬೇಕಾಗಿತ್ತು.   ಟೀವಿ ತಾಂತ್ರಿಕತೆಯಲ್ಲಿ ಪರಿಣತರಾದ ನಮ್ಮವರ ಮಾರ್ಗದರ್ಶನ ಪಡೆಯಲು ಊರಿನ ಹತ್ತೂ ಮಂದಿ ಮನೆಗೆ ಬರುತ್ತಿದ್ದರು.

ಒಮ್ಮೆ ಹೀಗಾಯಿತು,    ಆಗಿನ್ನೂ ಪ್ರೈಮರಿ ಶಾಲಾ ವಿದ್ಯಾರ್ಥಿಯಾಗಿದ್ದ ನನ್ನ ಮಗ ರಸೀವರ್ ಗಳಲ್ಲಿ ಟೀವಿ ಚಾನಲ್ ಲಿಸ್ಟ್ ಫೀಡ್ ಮಾಡುವುದರಲ್ಲಿ ನಿಷ್ಣಾತನಾಗಿದ್ದ.   ಮನೆಗೆ ಬರುತ್ತಿದ್ದ ಹಲವರು ಇವನ ಮೂಲಕವೇ ತಮ್ಮ ಕೆಲಸ ಮಾಡಿಸಿಕೊಳ್ಳುತ್ತಿದ್ದರು.   ಚಿಕ್ಕ ಹುಡುಗನಿಗೆ ವಿವಿಧ ಗಿಫ್ಟುಗಳೂ ಸಿಗ್ತಾ ಇತ್ತು.   ಹಾಗೆ ಅವನ ಆತ್ಮೀಯ ವರ್ಗಕ್ಕೆ ಸೇರಿದ ಪಿದಮಲೆ ಜಯರಾಮಣ್ಣ ಒಂದು ಬಾರಿ ಬರುವಾಗ ಮನೆಯಲ್ಲೇ ಬೆಳೆದ ಪಪ್ಪಾಯಿ ತಂದರು.   

" ತುಂಬಾ ಸಿಹೀದು,  ಕೆಂಪು ತಿರುಳಿಂದು,  ಹಣ್ಣು ಮಾಡಿ ತಿನ್ನು ಆಯ್ತಾ "  ಎಂದು ತಿಳಿಸಿ ಹೋದರು.

ಭಾರೀ ಗಾತ್ರದ ಆ ಕಾಯಿ ಹಣ್ಣಾದೊಡನೆ ಕತ್ತರಿಸಿ ಹೋಳುಗಳನ್ನು ತಟ್ಟೆಯಲ್ಲಿ ಹಾಕಿ ಮಗನ ಕೈಗಿತ್ತೆ.

" ಇಷ್ಟು ಕೆಂಪಗಿರೋ ಪಪ್ಪಾಯಿ ಕಂಡೇ ಇಲ್ಲ "  ಎನ್ನುತ್ತ ಅಪ್ಪ ಮತ್ತು ಮಕ್ಕಳು ತಟ್ಟೆ ಖಾಲಿ ಮಾಡಿದರು.

" ಬೀಜ ಹಾಕಿ ಸಸಿ ಮಾಡೋಣ "  ಮಗನೇ ಹೊರಟ.

ಬೀಜ ಹಾಕಿಯೂ ಆಯ್ತು.   ಗಿಡವಾಗಿ ಮರವಾಗುವಷ್ಟರಲ್ಲಿ ಘನಗಾತ್ರದ ಪಪ್ಪಾಯಿಗಳು ಮರ ತುಂಬಿ ನಿಂದವು.   ಪ್ರತಿದಿನ ಹಣ್ಣುಗಳನ್ನು ಕತ್ತರಿಸಿ,  ಸಿಪ್ಪೆ ತೆಗೆದು,  ಹೋಳುಗಳನ್ನು ಎಲ್ಲರಿಗೂ ಹಂಚುವ ಕಾರ್ಯಕ್ರಮವನ್ನು ನೆನೆದೇ ದಿಗಿಲಾಯಿತು.   ಕೊನೆಗೂ ಹಣ್ಣುಗಳ ಕಾಲ ಬಂದೇ ಬಿಟ್ಟಿತು.   ನಾನೂ ಬಿಡ್ತೇನಾ......ಅಂತೂ ಗೆದ್ದೆ.

.


ಅಂದ ಹಾಗೆ ನಮ್ಮ ವಾಡಿಕೆಯಲ್ಲಿ ಬಪ್ಪಂಗಾಯಿ ಎಂದು ಹೇಳಲ್ಪಡುವ ಈ ಹಣ್ಣು ದೂರದ ಮೆಕ್ಸಿಕೋ ದೇಶದಿಂದ ಇಲ್ಲಿಯವರೆಗೆ ಸಾಗಿ ಬಂದಿದೆ. ಸಸ್ಯಶಾಸ್ತ್ರಜ್ಞರು Carica papaya ಎಂದು ಹೆಸರಿಟ್ಟುಕೊಂಡಿದ್ದಾರೆ.   ಭಾರೀ ಗಾತ್ರದ ಹಣ್ಣುಗಳಿಂದ ಹಿಡಿದು  ವರ್ಣವ್ಯತ್ಯಾಸದ ತಳಿಗಳೂ  ಬೀಜರಹಿತ ಹಣ್ಣುಗಳೂ  ಪಪ್ಪಾಯದ ಪರಿಮಳವೇ ಇಲ್ಲದ ಜಾತಿಗಳೂ ಇವೆ.   ಸಮತೂಕದ ಆಹಾರದೊಂದಿಗೆ ಹಿತಮಿತವಾಗಿ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

" ಮನೆ ಹಿತ್ತಿಲಲ್ಲಿ ಬೇಕಾದಷ್ಟು ಬೆಳೆದಿದೆ,  ತಿನ್ನುತ್ತೇನೆ "  ಅಂತೀರಾ,

" ತಿನ್ನಿ,  ಎಲ್ಲರೊಂದಿಗೆ ಹಂಚಿಕೊಂಡು ತಿನ್ನಿ "

ಮರದಲ್ಲಿರುವ ಕಾಯಿ ಹಸಿರಿನಿಂದ ಹಳದಿ ವರ್ಣಕ್ಕೆ ತಿರುಗುತ್ತಿದ್ದಂತೆ ಕೊಯ್ದು ಇಟ್ಟುಕೊಳ್ಳಬೇಕು.  ಮರದಲ್ಲೇ ಹಣ್ಣಾಗಲು ಬಿಟ್ಟಿರೋ,  ಹಕ್ಕಿಗಳು ಸೊಗಸಾಗಿ ತಿಂದು ಮುಗಿಸುತ್ತವೆ.  ಮಟ ಮಟ ಬಿಸಿಲಿಗೂ ಕೊಯ್ಯುವ ಗೋಜಿಗೇ ಹೋಗಬಾರದು.  ಬಿಸಿಲ ಶಾಖಕ್ಕೆ ಕಾಯಿಗಳೂ ಬಿಸಿಯೇರಿ,  ' ಏನೋ ಅಡ್ಡ ವಾಸನೆ '  ಅನಿಸೀತು.   ಬೆಳ್ಳಂಬೆಳಗ್ಗೆ ಕೊಯ್ದ ಹಣ್ಣುಗಳು ಶೀತಲೀಕೃತ ವ್ಯವಸ್ಥೆಯಲ್ಲಿರಿಸಿದಷ್ಟು ತಂಪು ತಂಪಾಗಿರುತ್ತವೆ.

ನಮ್ಮ ಪರಿಸರದಲ್ಲಿ ಸುಲಭವಾಗಿ ಲಭ್ಯವಾಗುವ ಹಣ್ಣು ಹಂಪಲುಗಳನ್ನು ತಿನ್ನುವುದು ಉತ್ತಮ.  ದುಬಾರಿ ಬೆಲೆಯ ಆಪ್ಯಲ್ ದ್ರಾಕ್ಷೀಗಳಿಗೆ ಮರುಳಾಗದಿರಿ.   ಅತಿಯಾಗಿ ತಿನ್ನುವುದರಿಂದ ಚರ್ಮದ ಬಣ್ಣ ಬದಲಾಗುವ ಅಪಾಯ ಇದೆ.  ಅದು ರೋಗವಲ್ಲದಿದ್ದರೂ ಡಾಕ್ಟ್ರ ಬಳಿ ಹೋಗಬೇಕಾದೀತು.  ಬಹುಶಃ ಅದೇ ಕಾರಣದಿಂದ ಪರಂಗಿ ಹಣ್ಣು ಎಂಬ ಅನ್ವರ್ಥ ನಾಮಧೇಯವೂ ಇದಕ್ಕಿದೆ !


ಅಡಿಬರಹ:  ಪಪ್ಪಾಯ ಹಣ್ಣುಗಳೊಂದಿಗೆ  ಪಕ್ಕದ ಮನೆಯ ಬಾಲಕ,  ಜುನೈದ್.

Posted via DraftCraft app

Wednesday 21 November 2012

ತೆಂಗಿನಕಾಯಿ ಮುಂಙೆ






Sprouted coconut
Nature's gift
Children's favorite
ready to eat ..!

ಮೊಳಕೆ ಕಟ್ಟಿದ ಕಾಳುಗಳು ಹೇಗೆ ಪೌಷ್ಟಿಕಾಂಶಗಳ ಆಗರವಾಗಿವೆಯೋ ಹಾಗೇನೇ ತೆಂಗಿನಕಾಯಿ ಮೊಳಕೆಯೂ ಕೂಡಾ. ಆಧುನಿಕ ಜೀವನ ವಿಧಾನದಲ್ಲಿ ತೆಂಗಿನ ಮೊಳಕೆ ಸಿಗುವುದು ದುರ್ಲಭ. ಏನಿದ್ದರೂ ಸಿದ್ಧ ವಸ್ತುಗಳಿಗಾಗಿ ಸೂಪರ್ ಮಾರ್ಕೆಟ್ ಗೇ ಓಡಾಟ.

ಮೊಳಕೆ ಬರುವ ಸಸ್ಯೋತ್ಪನ್ನಗಳಲ್ಲಿ ತೆಂಗಿನ ಮೊಳಕೆಯೇ ಭಾರೀ ಗಾತ್ರದ್ದು. ಉನ್ನತ ವೃಕ್ಷವಾಗಿರುವ ತೆಂಗಿನಮರದಿಂದ ಹಣ್ಣಾಗಿ, ಮಾಗಿ, ಬಿದ್ದು, ಹೆಕ್ಕುವವರ ಕಣ್ಣಿಗೆ ಕಾಣಿಸದೇ ಹೋದ ತೆಂಗಿನಕಾಯಿ, ಬಹಳ ನಿಧಾನವಾಗಿ ಮೊಳಕೆ ಬರಲು ಪ್ರಾರಂಭಿಸುತ್ತದೆ. ಅದೂ ಗಿಡವಾಗಿ, ತೆಂಗಿನಗರಿಗಳು ಮೂಡಿದ ನಂತರವೇ ನಮ್ಮ ಕಲ್ಯಾಣಿಯ ಕಣ್ಣಿಗೆ ಗೋಚರವಾಗಿ, ಅವಳು ತೀರಾ ಆಪ್ಯಾಯತೆಯಿಂದ ಹೊಸ ಕಲ್ಪವೃಕ್ಷದ ಜನನವಾಯಿತೆಂದು ತನ್ನ ಗ್ರಾಮ್ಯ ಭಾಷೆಯಲ್ಲಿ ಹಾಡಿಕೊಳ್ಳುತ್ತ, ಇದಕ್ಕೆ ಸೂಕ್ತವಾದ ಜಾಗ ತನ್ನ ಮನೆಹಿತ್ತಿಲೇ ಸರಿ ಎಂದು ಒಯ್ಯುವವಳೇ.

ನನ್ನ ಬಾಲ್ಯದಲ್ಲಿ ತೆಂಗಿನ ಮೊಳಕೆಯನ್ನು ಕಂಡಿದ್ದೇ ಇಲ್ಲ. ಆಗೆಲ್ಲ ಕಾಯಿ ಪಕ್ವವಾದೊಡನೆ ಕೊಯ್ಯಲಾಗುತ್ತಿತ್ತು. ಅಟ್ಟದ ಶೇಖರಣಾ ಕೊಠಡಿಯಲ್ಲಿ ಬೆಚ್ಚಗೆ ಕುಳಿತ ತೆಂಗಿನಕಾಯಿಗಳು ಮೊಳಕೆ ಬರುವುದಾದರೂ ಹೇಗೆ ?

ಈಗ ಮರ ಹತ್ತುವ ನುರಿತ ಕೆಲಸಗಾರರು ವಿರಳವಾಗಿದ್ದಾರೆ. ನಮ್ಮ ಮರವೇರುವ ತಜ್ಞ ಕೆಲಸಗಾರ ಬಾಬು ಆ ವೃತ್ತಿಯನ್ನು ಬಿಟ್ಟು ಎಷ್ಟೋ ವರ್ಷಗಳಾಯಿತು. ವಯಸ್ಸೂ ಆಗಿರುವವರನ್ನು " ಇಂಥಾ ದಿನ ಬಂದು ತೆಂಗಿನಕಾಯಿ ಕೀಳು " ಅನ್ನುವ ಹಾಗೂ ಇಲ್ಲ. ಬಿದ್ದ ಕಾಯಿಗಳನ್ನು ಹೆಕ್ಕಿ ತರಲೂ ಹರಸಾಹಸ ಪಡುವ ಕಾಲ.

ಮೊಳಕೆ ಬಂದ ತೆಂಗಿನಕಾಯಿ
" ಇದು ನನಗೆ " ಮಾಡುವರು ಲಡಾಯಿ
ಮಕ್ಕಳ ಪಾಲಿಗೆ ಸಿಹಿ ಮಿಠಾಯಿ




Photo courtesy : Mahesh Puchchappady

Posted via DraftCraft app





ತೆಂಗಿನಕಾಯಿ ತೆಗೆಯುವಾಗ ತೋಟದೊಳಗೆ ಇರುವ ಕಾರ್ಮಿಕ ವರ್ಗಕ್ಕೆ ಗಮ್ಮತ್ತು. ಎಲ್ಲರೂ ಎಳನೀರು ಗ್ರಾಹಕರು, ಅದೂ ಉಚಿತ ಕೊಡುಗೆ. ಮನೆಯ ಕರೆಯುವ ಹಸುವಿಗೆ ಬನ್ನಂಗಾಯಿ ಪ್ರತ್ಯೇಕವಾಗಿ ತೆಗೆದಿರಿಸುವುದು ಹಿಂದಿನಿಂದಲೇ ನಡೆದು ಬಂದ ಪದ್ಧತಿ. ಬಾಣಂತಿ ಹಸುವಿಗೆ ಕಲಗಚ್ಚಿನೊಂದಿಗೆ ಈ ಕಾಯಿಯ ತಿರುಳನ್ನು ತುರಿದು ಕೊಡುವ ವಾಡಿಕೆ. ಕಾಯಿ ಆಗುವ ಹಿಂದಿನ ಹಂತದ ಎಳನೀರಿಗೆ ಬನ್ನಂಗಾಯಿ ಎಂಬ ರೂಢನಾಮ ಇದೆ. ಇಂತಹ ಆರೋಗ್ಯಕ್ಕೆ ಪುಷ್ಟಿದಾಯಕವಾದ ಬನ್ನಂಗಾಯಿಯಿಂದ ದೋಸೆ ತಯಾರಿಸೋಣ:

ಒಂದು ಬನ್ನಂಗಾಯಿ ತಿರುಳು, ತುರಿದಿಡಿ.
2 ಕಪ್ ಅಕ್ಕಿ.
ರುಚಿಗೆ ಉಪ್ಪು.

ಮೊದಲು ಅಕ್ಕಿಯನ್ನು ನುಣ್ಣಗೆ ಅರೆಯಿರಿ. ತುರಿದ ತಿರುಳನ್ನು ಹಾಕಿ ಪುನಃ ಅರೆದು ಉಪ್ಪನ್ನೂ ಹಾಕಿ. ಹಿಟ್ಟನ್ನು ಹುಳಿ ಬರಿಸುವ ಅವಶ್ಯಕತೆಯೇನೂ ಇಲ್ಲ. ಈ ದಪ್ಪ ಹಿಟ್ಟನ್ನು ಕಾವಲಿಯಲ್ಲಿ ತೆಳ್ಳಗೆ ಪೇಪರ್ ದೋಸೆ ಥರ ಸೌಟಿನಲ್ಲಿ ಹರಡಲೂ ಸಾಧ್ಯವಿದೆ. ಹಾಗೆ ಬೇಡಾಂದ್ರೆ ಅವಶ್ಯವಿದ್ದಷ್ಟು ನೀರು ಸೇರಿಸಿ ನೀರುದೊಸೆಯಂತೆ ಎರೆಯಿರಿ.

Wednesday 14 November 2012

ಕೇಶ ತೈಲ ತಯಾರಿಯ ಕುಶಲ ಕಲೆ



ನೆಲನೆಲ್ಲಿ ,  ಭೃಂಗರಾಜ ,   ಒಂದೆಲಗ ,  ತುಳಸೀ  ಇವಿಷ್ಟು  ಸಸ್ಯಗಳು  ನಿಮ್ಮ  ಕೈದೋಟದಲ್ಲಿವೆಯೇ ,   ಒಮ್ಮೆ  ಗಮನವಿಟ್ಟು  ನೋಡಿ ಬನ್ನಿ .   ತಲೆಗೆ  ಹಾಕುವ  ಎಣ್ಣೆ  ತಯಾರಿಸೋಣ .

ಏನೇನೋ  ಬ್ರಾಂಡ್ ನ   ಕೇಶತೈಲಗಳು  ಮಾರುಕಟ್ಟೆಯಲ್ಲಿ  ಸಿಗುತ್ತವೆ .   ಇಂಥಿಂಥಾ  ಆಯುರ್ವೇದಿಕ್  ಸಸ್ಯಗಳ  ಸಾರದಿಂದ  ಮಾಡಲ್ಪಟ್ಟಿದ್ದು  ಎಂದು  ಬರೆದೂ  ಇರುತ್ತದೆ .   ನಾವು  ಮನೆಯಲ್ಲೇ  ತಯಾರಿಸಿದ್ದು  ಕೊಂಡು ತಂದ  ಬ್ರಾಂಡೆಡ್  ಎಣ್ಣೆಗಿಂತ  ಹೆಚ್ಚು  ಚೆನ್ನಾಗಿರುತ್ತದೆ .

ತೈಲ  ಎಂಬ  ಶಬ್ದ  ಮೂಲತಃ  ಸಂಸ್ಕೃತದಿಂದ  ಬಂದಿದೆ .   ತಿಲ  ಎಂದರೆ  ಎಳ್ಳು  ಎಂದರ್ಥ .   ಎಳ್ಳಿನಿಂದ  ಬಂದದ್ದು  ಎಳ್ಳೆಣ್ಣೆ .   ನಾವು  ತಲೆಕೂದಲಿಗೆ  ತೆಂಗಿನೆಣ್ಣೆಯನ್ನೇ  ಹಾಕುವ  ರೂಢಿ ,   ಹಾಗಾಗಿ  ಎಳ್ಳೆಣ್ಣೆ  ಬೇಡ ,   ತೆಂಗಿನೆಣ್ಣೆಯನ್ನೇ  ಉಪಯೋಗಿಸೋಣ .    ಅದೇ  ಉತ್ತಮ .

ಒಂದು  ಹಿಡಿ  ತುಳಸೀ  ಕುಡಿಗಳನ್ನು  ಚಿವುಟಿ  ಇಡಿ .   ಕೃಷ್ಣ ತುಳಸೀ  ಆದರೆ  ಇನ್ನೂ ಉತ್ತಮ .
ಒಂದು  ಹಿಡಿ  ನೆಲನೆಲ್ಲೀ ,  ಬೇರು  ಸಹಿತ ಕಿತ್ತು  ಇಡಿ .  ಮಣ್ಣು  ಹೋಗಲು  ತೊಳೆಯಿರಿ .
ಇದೇ  ವಿಧವಾಗಿ  ಭೃಂಗರಾಜ  ಹಾಗೂ  ಒಂದೆಲಗಗಳನ್ನು  ಸಂಗ್ರಹಿಸಿ .   ನೆನಪಿಡಿ ,   ಇವಿಷ್ಟೂ  ಕಾರ್ಯಗಳನ್ನು  ಮುಂಜಾನೆಯೇ  ಮಾಡಿಕೊಳ್ಳಿ .    ಮುಂಜಾನೆಯ  ಹೊತ್ತು  ಸಸ್ಯರಾಶಿಗಳು  ರಸಭರಿತವಾಗಿ  ಲಕಲಕಿಸುತ್ತಿರುತ್ತವೆ .




ಸಂಗ್ರಹವಾದ  ಈ  ಪುಟ್ಟ ಸಸ್ಯಗಳನ್ನು  ಚಿಕ್ಕದಾಗಿ  ಕತ್ತರಿಸಿ  ರುಬ್ಬುವ ಕಲ್ಲಿಗೆ  ಹಾಕಿ  ತಿರುಗಿಸಿ .   ಹ್ಞಾಂ ,   ಈಗ ಯಂತ್ರಗಳ  ಯುಗ .   ಮಿಕ್ಸಿಗೇ  ಹಾಕಿ .   ಯಂತ್ರ  ತಿರುಗಲು  ಅವಶ್ಯವಿದ್ದಷ್ಟೇ  ನೀರು  ಹಾಕಿ .  ಹೆಚ್ಚು  ನೀರು  ಹಾಕಬಾರದು .  ಮೆತ್ತಗಾದ  ಈ  ಸಸ್ಯಸಾರವನ್ನು  ಒಂದು  ಬಟ್ಟೆಯಲ್ಲಿ  ಅಥವಾ  ಜಾಲರಿಯಲ್ಲಿ  ಶೋಧಿಸಿ  ಇಟ್ಟುಕೊಳ್ಳಿ .

ಒಂದು ಕಪ್  ರಸಕ್ಕೆ  ಒಂದು ಕಪ್  ತೆಂಗಿನೆಣ್ಣೆಯ  ಅಳತೆಯಲ್ಲಿ  ದಪ್ಪ ತಳದ  ಪಾತ್ರೆಗೆ  ಹಾಕಿಕೊಂಡು  ಉರಿಯಲ್ಲಿಡಿ .    ಸೌಟಿನಲ್ಲಿ  ಕೈಯಾಡಿಸುತ್ತಾ  ಎಣ್ಣೆ  ಹಾಗೂ  ಸಸ್ಯಗಳ  ರಸ  ಕೂಡಿಕೊಳ್ಳುವಂತೆ  ನೋಡಿಕೊಳ್ಳಿ .   ಕುದಿಯಲು  ಪ್ರಾರಂಭವಾದೊಡನೆ  ಉರಿಯನ್ನು  ತಗ್ಗಿಸಿ .   ಹೀಗೆ  ಚಿಕ್ಕ ಉರಿಯಲ್ಲಿ  ಕುದಿಯುತ್ತಿರಲಿ .   ನೀರಿನಂಶ  ಆರಿದೊಡನೆ ಕುದಿಯುವ  ಶಬ್ದ  ನಿಲ್ಲುತ್ತದೆ .   ಕೆಳಗಿಳಿಸಿ  ತಣಿಯಲು  ಬಿಡಿ .  

ಪುನಃ  ಜಾಲರಿಯಲ್ಲಿ  ಶೋಧಿಸಿ  ಶುದ್ಧವಾದ  ಜಾಡಿಗೆ  ತುಂಬಿಸಿ ಭದ್ರವಾಗಿ  ಮುಚ್ಚಿ  ಇಟ್ಟುಕೊಳ್ಳಿ .
ನಿಯಮಿತವಾಗಿ  ಈ  ಎಣ್ಣೆಯನ್ನು  ಉಪಯೋಗಿಸುತ್ತಾ  ಇದ್ದಲ್ಲಿ  ತಲೆ ಹೊಟ್ಟು ,  ಕೂದಲುದುರುವಿಕೆ ,   ನಿದ್ರಾಹೀನತೆಗಳು  ಕ್ರಮೇಣ  ನಿವಾರಣೆಯಾಗುತ್ತವೆ .    ಕೂದಲು  ಕಪ್ಪಾಗಿ  ಹೊಳೆಯುವ ಕೇಶರಾಶಿ  ನಿಮ್ಮದಾಗಿಸಿ .    ಅಕಾಲಿಕ  ಕೂದಲು ನೆರೆಯುವಿಕೆಯನ್ನೂ   ಈ  ಎಣ್ಣೆಯ  ಬಳಕೆಯಿಂದ ತಡೆಗಟ್ಟಬಹುದು .    ಕೂದಲು  ಬೆಳ್ಳಗಾದ ಮೇಲೆ ಎಣ್ಣೆ  ಹಾಕಿ ತಿಕ್ಕುವುದಲ್ಲ ,   ಮೊದಲೇ  ನಿಯಮಿತ  ರೂಢಿ ಮಾಡಿಕೊಳ್ಳಿ .    ಸಣ್ಣ ಪುಟ್ಟ  ಗಾಯಗಳಿಗೆ  ಈ ಎಣ್ಣೆ  ಸವರಿದರೆ ಸಾಕು,  ಬೇರೆ  ಲೋಷನ್,  ಮುಲಾಮು  ಹಚ್ಚಬೇಕಾಗಿಯೇ  ಇಲ್ಲ .





ನೆಲನೆಲ್ಲಿ  ಸಿಗಲಿಲ್ಲವೇ,  ನೆಲ್ಲಿಕಾಯಿ ಬಳಸಬಹುದು.  ಹೇಗೇಂತ ಕೇಳ್ತೀರಾ,   ಧಾರಾಳವಾಗಿ  ನೆಲ್ಲಿಕಾಯಿ ಸಿಗುವ  ಸೀಸನ್ ನಲ್ಲಿ   ಬಿಸಿಲಿಗೆ ಒಣಗಿಸಿ ಇಟ್ಟುಕೊಳ್ಳಿ .   ಈ ಒಣಗಿದ ನೆಲ್ಲಿಕಾಯಿಗಳನ್ನು  ನೀರಿನಲ್ಲಿ  ನೆನೆಸಿ  ಒಂದು ಕಪ್  ನೆಲ್ಲಿಗೆ  ಮೂರು ಕಪ್  ನೀರಿನಂತೆ  ಸೇರಿಸಿ  ಕುದಿಸಿ .   ಮೂರು ಕಪ್ ಇದ್ದದ್ದು  ಒಂದು ಕಪ್ ಗೆ  ಬತ್ತಬೇಕು .   ಈ ರಸವನ್ನು  ಶೋಧಿಸಿ  ಉಪಯೋಗಿಸಿ .

ಈ  ವನಸ್ಪತಿ  ಸಸ್ಯಗಳ  ಅಳತೆಯ  ಪ್ರಮಾಣದಲ್ಲಿ  ಹೆಚ್ಚುಕಮ್ಮಿಯಾದರೂ  ಬಾಧಕವೇನೂ  ಇಲ್ಲ .

ಈ  ಎಣ್ಣೆಗೆ  ತಳಸಿಯನ್ನು  ಸೇರಿಸುವ  ಕ್ರಮ  ವಾಡಿಕೆಯಲ್ಲಿ  ಇಲ್ಲ .   ತುಳಸಿ  ಔಷಧಾಂಶಗಳ  ಆಗರ  ಹಾಗೂ  ಸುವಾಸನಾಯುಕ್ತ  ಸಸ್ಯ .   ಹಾಗಾಗಿ  ನಾನು  ಹೀಗೇ  ಎಣ್ಣೆ  ತಯಾರಿಸುವ  ಪದ್ಧತಿ  ಮಾಡಿಕೊಂಡಿದ್ದೇನೆ .  ಪರಿಮಳಕ್ಕಾಗಿ  ಬೇರೆ  ಸುಗಂಧದ್ರವ್ಯಗಳನ್ನು  ಹಾಕಬೇಕಾಗಿಲ್ಲ .   

ಧಾರಾಳವಾಗಿ  ಲಭ್ಯವಿದ್ದಲ್ಲಿ  ಭೃಂಗರಾಜವೊಂದನ್ನೇ ಹಾಕಿ  ಎಣ್ಣೆ  ತಯಾರಿಸುವ ಕ್ರಮವೂ ಇದೆ .

ಒಂದೆಲಗದಿಂದಲೂ  ಪ್ರತ್ಯೇಕವಾಗಿ  ಎಣ್ಣೆ  ಮಾಡಬಹುದು .   ಆ ಕುರಿತಾಗಿ  ಈ  ಮೊದಲೇ ಬರೆದ   ' ಒಂದೊಂದೇ ಎಲೆಯ  ಒಂದೆಲಗ '  ...ನೋಡಿ .

ನೆನಪಿಡಿ ,   ಸಸ್ಯಗಳ  ರಸಸಾರ ಹೆಚ್ಚಾದಷ್ಟೂ  ಎಣ್ಣೆಯ  ಗುಣಮಟ್ಟವೂ  ಶ್ರೇಷ್ಠವಾಗಿರುತ್ತದೆ .
ಈ  ಎಲ್ಲಾ  ಸಸ್ಯಗಳ  ಸಂಯುಕ್ತ  ಮಿಶ್ರಣವೇ  ಭೃಂಗಾಮಲಕಬ್ರಾಹ್ಮೀ ತೈಲವೆನಿಸಿಕೊಂಡಿದೆ .   

Centella  asiatica  :  ಒಂದೆಲಗ

Eclipta alba  :  ಭೃಂಗರಾಜ

Phyllanthus Niruri  :  ನೆಲನೆಲ್ಲಿ

Ocimum sanctum  :   ಕೃಷ್ಣ ತುಳಸೀ

Posted via DraftCraft app

Monday 5 November 2012

ಕೊಕ್ಕೋ ಚಾಕಲೇಟ್




ಚಿಕ್ಕ  ಮಕ್ಕಳಿಗೆ  ಹೊಸ ತಿಂಡಿಗಳನ್ನು  ಮನೆಯಲ್ಲೇ  ಸ್ವಾದಿಷ್ಟವಾಗಿ  ತಯಾರಿಸಿ  ಕೊಡುವುದು  ಒಂದು  ದೊಡ್ಡ  ಸವಾಲ್ .    ದಿನಕ್ಕೊಂದು  ಹೊಸ ರುಚಿಗಳನ್ನು  ಮಾಡುವ  ಒತ್ತಡದಿಂದ  ನನಗೆ  ಸುಲಭವಾಗಿ  ಲಭ್ಯವಾಗಿದ್ದು  ಟೀವಿ  ಚಾನಲ್  ಕಾರ್ಯಕ್ರಮಗಳು .   ಆ ಕಾಲದಲ್ಲಿ  ಇದ್ದಿದ್ದು  ಕನ್ನಡದ  ಏಕಮೇವ  ' ಚಂದನ ' .    ಕ್ರಮೇಣ  ಇನ್ನಷ್ಟು  ವಾಹಿನಿಗಳು  ಬಂದವು .   ಅನಿವಾರ್ಯವಾಗಿ  ನೋಡ್ತಾ  ಇದ್ದೆ ,     ಬರೆದಿಟ್ಟುಕೊಳ್ಳುವುದೂ  ,  ಪ್ರಯೋಗ  ಮಾಡುವುದೂ ,   ಮಕ್ಕಳಿಂದ  ಶಹಬ್ಬಾಸ್ ಗಿರಿ  ಪಡೆಯುವುದೂ  ,    ಚೆನ್ನಾಗಿಲ್ಲಾಂದ್ರೆ  " ನೀನೇ ತಿನ್ನು "  ಅನ್ನಿಸ್ಕೊಳ್ಳುವುದೂ  ಮಾಮೂಲಿಯಾಗಿತ್ತು .   ಈಗಂತೂ  ಅಡುಗೆ  ಕಾರ್ಯಕ್ರಮಗಳು  ಟೀವಿ  ವಾಹಿನಿಗಳ  ಅವಿಭಾಜ್ಯ  ಅಂಗವಾಗಿವೆ .    


ಅಂತಹ  ಒಂದು  ಸಂದರ್ಭದಲ್ಲಿ  ಕಲಿತದ್ದು....





 ಒಂದು ಪ್ಯಾಕ್ ಖರ್ಜೂರವನ್ನು ಬೀಜ ತೆಗೆದು ಕುಕ್ಕರಿನಲ್ಲಿ ಒಂದು ವಿಸಿಲ್ ಬರುವವರೆಗೆ ನೀರು ಹಾಕದೆ ಬೇಯಿಸಿ .
ಒಂದು ಕಪ್ ಸಕ್ಕರೆ ಪುಡಿ ಮಾಡಿ .
ಒಂದು ಕಪ್ ಕೊಕ್ಕೋ ಹುಡಿ   (ಹೆಚ್ಚಾದರೂ ತೊಂದರೆಯಿಲ್ಲ).

ಬೇಯಿಸಿದ ಖರ್ಜೂರವನ್ನು ಮಿಕ್ಸಿಯಲ್ಲಿ ಸ್ವಲ್ಪ ಸ್ವಲ್ಪವೇ ಹಾಕಿ ಪೇಸ್ಟ್ ಮಾಡಿ.
ಒಲೆಯ ಮೇಲೆ ದಪ್ಪ ಬಾಣಲೆ ಇಡಿ . ನಾಲ್ಕು ಚಮಚ ತುಪ್ಪದೊಂದಿಗೆ ಖರ್ಜೂರದ ಮಿಶ್ರಣ , ಸಕ್ಕರೆ ಸೇರಿಸಿ ಕಾಯಲು ಬಿಡಿ . ಕೊಕ್ಕೋ ಪುಡಿ ಹಾಕಿ ಗಟ್ಟಿ ಪಾಕ ಆಗುವವರೆಗೆ ಕಾಯಿಸಿ .
ಕತ್ತರಿಸಿದ ಗೇರುಬೀಜ, ಬಾದಾಮ್ ಸೇರಿಸಿ   (ಇದ್ದರೆ).

ಮಣೆಯ ಮೇಲೆ ಬಾಳೆಎಲೆ ಇಟ್ಟು, ಬೆಂದ ಪಾಕವನ್ನು ಹಾಕಿ ಹೊರಳಿಸಿ ಬಾಳೆಹಣ್ಣಿನ ಆಕಾರಕ್ಕೆ ತನ್ನಿ.
ತಣಿಯಲು ಬಿಡಿ. ಉರುಟುರುಟಾಗಿ ಕತ್ತರಿಸಿ ತಿನ್ನಿ .

ಫ್ರಿಜ್ ನಲ್ಲಿ ಇಟ್ಟರೆ ಇನ್ನೂ ಚೆನ್ನಾಗಿರುತ್ತದೆ .

' ಕ್ಯಾಂಪ್ಕೋ 'ದವರ  ಲಘು ಪೇಯ  ' ವಿನ್ನರ್ '  ಕೊಕ್ಕೋ  ಹುಡಿ  ಈ  ಸಿಹಿ ತಿಂಡಿ  ತಯಾರಿಕೆಗೆ  ಸೂಕ್ತವಾಗಿದೆ ,  ಇದು  ನನ್ನ  ಅನುಭವ .

ಕೊಕ್ಕೋ  ಇಲ್ಲಾಂದ್ರೆ  ಬಾದಾಮ್ ಹುಡಿ  ಹಾಕಿಯೂ  ಮಾಡಬಹುದು ,   ಅಳತೆಯಲ್ಲಿ  ಹೆಚ್ಚುಕಮ್ಮಿ ಆದರೂ  ರುಚಿಗೆ  ಏನೂ  ತೊಂದರೆಯಿಲ್ಲ .   ' ಬಾದಾಮ್ ಡಿಲೈಟ್ '  ಎಂದು  ಹೆಸರಿಟ್ಟರಾಯ್ತು .



Posted via DraftCraft app

Thursday 1 November 2012

ತಗ್ಗಿ ಗಿಡದ ಮುಂದೆ ತಗ್ಗಿ ಬಗ್ಗಿ ನಡೆಯಿರಿ !


ನೈಸರ್ಗಿಕವಾಗಿ ಲಭಿಸುವ ಕಾಡುಕುಸುಮಗಳೇ ದೇವತಾರ್ಚನೆಯಲ್ಲಿ ಪ್ರಥಮ ಸ್ಥಾನ ಪಡೆದಿವೆ. ಶ್ರಾವಣ ಮಾಸ ಆರಂಭದೊಂದಿಗೆ ಇಂತಹ ವೈವಿಧ್ಯಮಯ ಹೂಗಳು ಅರಳಿ ನಲಿಯುತ್ತಿರುತ್ತವೆ. ಅದು ಕೇರಳೀಯರ ಓಣಂ ಆಗಿರಬಹುದು, ಸಾರಸ್ವತರ ಚೂಡೀ ಹಬ್ಬವೇ ಆಗಿರಬಹುದು, ಈ ಹೂಗಳ ಸಂಗ್ರಹಕ್ಕೇ ಆದ್ಯತೆ. ಈಗ ಅಲ್ಲಿ ಇಲ್ಲಿ ಅಲೆದು ಹೂ ಸಂಗ್ರಹಿಸುವ ಸಂಪ್ರದಾಯ ಹೋಗ್ಬಿಟ್ಟಿದೆ, ಏನಿದ್ದರೂ ಮಾರ್ಕೆಟ್ ಗೆ ಹೋದರಾಯಿತು.




ತೇರಿನಂತೆ ಅರಳಿ ನಿಂತಿರುತ್ತವೆ ರಥ ಹೂಗಳು, Verbenaceae ಕುಟುಂಬಕ್ಕೆ ಸೇರಿದೆ. ಇದೇ ಕುಟುಂಬದ ಇನ್ನೊಂದು ಸಸ್ಯ ತಗ್ಗಿ ಹೂ. ಸಸ್ಯಶಾಸ್ತ್ರೀಯವಾಗಿ Clerodendrum phlomidis ಎಂಬ ಹೆಸರನ್ನು ಸಸ್ಯವಿಜ್ಞಾನಿಗಳು ಇಟ್ಟಿದ್ದಾರೆ.

ಸಾಮಾನ್ಯವಾಗಿ ಆಗಸ್ಟ್ ನಿಂದ ಫೆಬ್ರವರಿವರೆಗೆ ಹೂಗಳು ಅರಳುವ ಸಮಯ. ಬಿಳಿ ಬಣ್ಣದ ಈ ಕುಸುಮಗಳಿಗೆ ಉದ್ದನೆಯ ಕೇಸರ. ಬೆಳಗಾದೊಡನೆ ದುಂಬಿಗಳು ಈ ಹೂವ ಸುತ್ತ ಹಾರಾಡುತ್ತಿರುತ್ತವೆ. ಆಘ್ರಾಣಿಸಿದರೆ ಕಡು ಸುವಾಸನೆ ! ಉತ್ತರ ಭಾರತದ ಶಿವಾಲಯಗಳಲ್ಲಿ ಈ ಹೂವೇ ಶಿವಾರ್ಚನೆಯಲ್ಲಿ ಪ್ರಧಾನ ಪುಷ್ಪ. ಅಲ್ಲಿ ' ಅಲ್ಕಾ ' ಎಂಬ ಹೆಸರೂ ಈ ಹೂಗಳಿಗಿವೆ.



ಭಾರತ ಹಾಗೂ ಶ್ರೀಲಂಕಾಗಳಲ್ಲಿ ಸಾಮಾನ್ಯವಾಗಿ ಕಾಣ ಸಿಗುವ ಸಸ್ಯ. ರಸ್ತೆ ಪಕ್ಕಗಳಲ್ಲಿ, ನಿರುಪಯುಕ್ತ ಜಾಗಗಳಲ್ಲಿ ಬೆಳೆಯುವ ಈ ಸಸ್ಯ 4 ರಿಂದ 5 ಅಡಿ ಎತ್ತರವಿರುತ್ತದೆ. ಬೇರು ಹೋದಲ್ಲೆಲ್ಲ ಗಿಡಗಳು ಮೊಳೆಯುತ್ತವೆ. ನಮ್ಮ ಅಡಿಕೆ ತೋಟಗಳಲ್ಲಿ ಒಂದು ಕಳೆ ಸಸ್ಯದಂತೆ ಕಂಡರೂ ಇದನ್ನು ಕಡಿದು ಹಾಕವ ಗೋಜಿಗೇ ಯಾರೂ ಹೋಗುವುದಿಲ್ಲ, ಅಷ್ಟೂ ಭಯ ಭಕ್ತಿಯಿಂದ ಈ ಗಿಡದೆದುರು ತೋಟದ ಕೆಲಸಗಾರರು ನಡೆದು ಕೊಳ್ಳುವುದನ್ನು ನಾನು ಕಂಡಿದ್ದೇನೆ.

" ಅಡಿಕೆ ಮರದ ಬುಡದಲ್ಲೇ ಸೊಕ್ಕಿ ಬೆಳೆದಿದೆಯಲ್ಲ , ಕಡಿದು ಹಾಕಬಾರದೇ "
"ಹಾಗನ್ಬೇಡಿ ಅಕ್ಕ, ಅದನ್ನು ಕಡೀಬಾರ್ದಂತೆ, ದೇವ್ರಿಗೆ ತುಂಬಾ ಇಷ್ಟವಂತೆ ಈ ಹೂ " ಅನ್ನುತ್ತ ಹುಲ್ಲು ಕತ್ತರಿಸುತ್ತಿದ್ದ ಕಲ್ಯಾಣಿ ಎರಡೂ ಕೈಗಳಿಂದ ಗಿಡದೆದುರು ನಮಸ್ಕರಿಸಿದಳು.
ದೇವರಿಗೆ ಪ್ರಿಯವಲ್ಲದ ಹೂ ಯಾವುದಿದೆ, ಮರು ಮಾತಿಲ್ಲದೇ ಸುಮ್ಮನಾಗಬೇಕಾಯಿತು.

ಕೃಷಿಕರ ಬದುಕಿಗೂ ಬಹಳ ಹತ್ತಿರದ ಸಸ್ಯ. ಗದ್ದೆ ನಾಟಿ ಮಾಡುವಾಗ ಭತ್ತದ ಕಾಳುಗಳ ಮೊಳಕೆ ಬರಿಸುವಲ್ಲಿ ಕೃಷಿಕರು ಹಲವು ತಂತ್ರಗಾರಿಕೆಯನ್ನು ಅನುಸರಿಸುತ್ತಾರೆ. ಬೆಚ್ಚಗೆ ಅಟ್ಟದಲ್ಲಿ ಕುಳಿತಿದ್ದ ಬಿತ್ತನೆ ಭತ್ತದ ಮೂಟೆಯನ್ನು ಮೊದಲು ನೀರಿನಲ್ಲಿ ನೆನೆ ಹಾಕಲಾಗುತ್ತದೆ. ಸಮರ್ಥ ಕೆಲಸಗಾರರು ಭತ್ತ ತುಂಬಿದ ಗೋಣಿಯನ್ನೇ ನೀರಿನಲ್ಲಿ ಇಳಿ ಬಿಡುತ್ತಾರೆ, ಕೆರೆಯೂ ಆದೀತು. ಕರಾರುವಾಕ್ 12 ಘಂಟೆಯ ಅವಧಿಯಲ್ಲಿ ನೆನೆದ ಗೋಣಿಯನ್ನು ಮೇಲೆತ್ತಿ ತರುವ ಶ್ರಮದ ಹಿಂದೆ ಸಂಭ್ರಮವೂ ಇದೆ. ಅಷ್ಟೂ ಭತ್ತದ ಕಾಳುಗಳು ಮುಂದಿನ ವರ್ಷದ ಊಟದ ಸಿದ್ಧತೆಯ ಮೊದಲ ಹಂತ. ಗೋಣಿಯಿಂದ ನೀರು ತಾನಾಗಿಯೇ ಬಸಿದು ಹೋದ ನಂತರ 24 ಘಂಟೆ ಕಳೆದ ಮೇಲೆ, ಈ ಭತ್ತದ ರಾಶಿಗೆ ದಪ್ಪನೆಯ ಸೆಗಣಿ ಲೇಪ ಹಚ್ಚುವ ಕಾಯಕ. ನಂತರ ಬಿದಿರಿನ ಬುಟ್ಟಿಗಳಲ್ಲಿ ತಗ್ಗೀ ಎಲೆಗಳನ್ನು ಹರವಿ, ಕಾಳುಗಳನ್ನು ತುಂಬಿಸಿ, ಮೇಲಿನಿಂದ ಪುನಃ ತಗ್ಗೀ ಎಲೆಗಳನ್ನು ಧಾರಾಳವಾಗಿ ಹರಡಿ ಮುಚ್ಚುತ್ತಾರೆ. ಅತೀ ಉಷ್ಣ ಗುಣವುಳ್ಳ ಈ ಎಲೆಗಳು ಭತ್ತದ ಕಾಳುಗಳು ಮೊಳಕೆಯೊಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸೌತೇಕಾಯಿ ಬೀಜಗಳನ್ನು ನಾಟಿ ಮಾಡಬೇಕಾದರೂ ಈ ವಿಧಾನ ಅನುಸರಿಸುತ್ತಾರೆ.

ಶುಭ ಸಮಾರಂಭದ ಅವಶ್ಯಕತೆಗೆಂದು ಕದಳೀ ಬಾಳೆಗೊನೆಗಳನ್ನು ತೋಟದಿಂದ ಕಡಿದು ತಂದು ಇಟ್ಟಾಗಿದೆ. ಇನ್ನೂ ಹಣ್ಣಾಗುವ ಲಕ್ಷಣವೇ ಕಾಣಿಸುತ್ತಿಲ್ಲ. ಅದಕ್ಕೂ ಇಲ್ಲಿದೆ ಉಪಾಯ. ಬಾಳೆಗೊನೆಗಳ ಮೇಲೆ ಲಕ್ಷಣವಾಗಿ ತಗ್ಗೀ ಎಲೆಗಳನ್ನು ಹರಡಿ ಬಿಡಿ, ಮೇಲಿನಿಂದ ಗೋಣೀ ಚೀಲ ಮುಚ್ಚಿ ಬಿಡಿ, ಆಗುವ ಮ್ಯಾಜಿಕ್ ನೋಡಿ.



ದಶಮೂಲಾರಿಷ್ಟವನ್ನು ಸಾಮಾನ್ಯವಾಗಿ ಎಲ್ಲರೂ ಮನೆಯಲ್ಲಿ ತಂದಿಟ್ಟುಕೂಳ್ಳುತ್ತೇವೆ. ಮಲಬದ್ಧತೆ, ಗ್ಯಾಸ್ ಟ್ರಬಲ್ ಇತ್ಯಾದಿ ಸಮಸ್ಯೆಗಳಿಗೆ ಆಯುರ್ವೇದಿಕ್ ಟಾನಿಕ್. ಇದರ ತಯಾರಿಗೆ ಬೇಕಾಗುವ ಬೇಕಾಗುವ ಗಿಡಮೂಲಿಕೆಗಳಲ್ಲಿ ತಗ್ಗೀ ಬೇರು ಕೂಡಾ ಸೇರಿದೆ.

ಆಯುರ್ವೇದ, ಯುನಾನಿ ಮತ್ತು ಸಿದ್ಧ ವೈದ್ಯ ಚಿಕಿತ್ಸಾ ಪದ್ಧತಿಯಲ್ಲಿ ತಗ್ಗೀ ಗಿಡ ಪ್ರಾಮುಖ್ಯತೆ ಗಳಿಸಿದೆ. ತಗ್ಗೀ ಎಲೆಗಳನ್ನು ಅರೆದ ಲೇಪನದಿಂದ ಚರ್ಮದ ಮೇಲಿನ ಗಾಯ, ಬಾವುಗಳು ಶೀಘ್ರ ಚೇತರಿಕೆ.
ಚರ್ಮರೋಗಗಳಾದ ತೊನ್ನು, ಕುಷ್ಠ ರೋಗಗಳಿಗೂ ಎಲೆಗಳು ಸಿದ್ಧೌಷಧ. ಗಂಭೀರ ಸ್ವರೂಪದ ಕೆಮ್ಮು, ಶ್ವಾಸನಾಳದ ಸೋಂಕು, ಮಲೇರಿಯಾ ಜ್ವರಗಳಿಗೆ ಈ ಎಲೆಗಳಿಂದ ಚಿಕಿತ್ಸೆ.

ಪಾರಂಪರಿಕ ಔಷಧೀಯ ಸಸ್ಯವಾಗಿರುವ ಇದರ ಬಳಕೆಯಲ್ಲಿ ಗ್ರಾಮೀಣ ಮಹಿಳೆಯರು ಬಹಳ ಮುಂದೆ ಇದ್ದಾರೆ. ಅರಿಷ್ಟ ಲೇಹ್ಯಗಳು ಕೈಗೆಟುಕದಿದ್ದಲ್ಲಿ ತಗ್ಗೀ ಬೇರಿನ ತಂಬುಳಿ ಮಾಡಿ ಉಣ್ಣುವ ಚಾಣಾಕ್ಷತನ ಅವರಲ್ಲಿದೆ.

" ತಂಬುಳಿ ಹೀಗೆ ಮಾಡ್ತಿದ್ರು " ಗೌರತ್ತೆ ನೆನಪಿನ ಪುಟ ಬಿಡಿಸಿ ಹೇಳಿದ್ದು ಹೀಗೆ.
ತಗ್ಗೀ ಬೇರಿನ ಹೊರಸಿಪ್ಪೆಯನ್ನು ಚೂರಿಯಿಂದ ಕೆತ್ತಿ ತೆಗೆದಿಟ್ಟು , ಈ ಸಿಪ್ಪೆ ಚೂರುಗಳನ್ನು ತುಪ್ಪದಲ್ಲಿ ಹುರಿಯಬೇಕು. ಕಾಯಿತುರಿ, ಮಜ್ಜಿಗೆಯೊಂದಿಗೆ ನುಣ್ಣಗೆ ಕಡೆದು, ಕುದಿಸಿ, ಒಗ್ಗರಣೆ ಕೊಟ್ಟರಾಯಿತು.
" ಏನು ಪರೀಮಳ ಇರ್ತದೆ ಗೊತ್ತಾ "
" ಹೌದೇ , ನಾನೂ ಮಾಡಿ ನೋಡ್ತೇನೆ "
" ಹಾಗೇ ಸುಮ್ಮನೆ ಮಾಡುವುದು ಬೇಡಾ "
ಔಷಧೀಯ ವನಸ್ಪತಿ ಸಸ್ಯಗಳ ಬಳಕೆ ಅನಿವಾರ್ಯವಾಗಿದ್ದಲ್ಲಿ ಮಾತ್ರ ಎಂಬ ಕಿವಿಮಾತೂ ಹೇಳಿದ್ರು ಗೌರತ್ತೆ.

ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕಾಣ ಸಿಗುವ ತಗ್ಗೀ ಹೂ ಬಿಳಿ ವರ್ಣದ್ದು, ವೃತ್ತಾಕೃತಿಯ ಅಗಲ ಎಲೆಗಳಿಂದ ಕೂಡಿದೆ. ಸಸ್ಯಶಾಸ್ತ್ರೀಯವಾಗಿ ಇದು cleodendrum viscosum/c infortunatum. ಇದೇ ವಿಭಾಗಕ್ಕೆ ಸೇರಿದ ಇನ್ನೂ ನೂರಾರು ವರ್ಣಮಯ ಗಿಡಗಳು ನಿಸರ್ಗದಲ್ಲಿವೆ.


Posted via DraftCraft app


ಟಿಪ್ಪಣಿ: ಈ ಕಳಗೆ ಬರೆದಿದ್ದು ದಿನಾಂಕ 19, ಸಪ್ಟಂಬರ್, 2013.







ಬಂದಿದೆ ಶ್ರಾವಣ
ಹೂಗಳ ತೋರಣ
ಹಸಿರಿನ ಸಿರಿಯ ಉಲ್ಲಾಸ
ನವ ಶೃಂಗಾರ ವಿಳಾಸ|

ಕಾಡು ಕುಸುಮವಿದೇನು
ತೇರಿನಂತರಳಿಹುದೇನು
ದುಂಬಿಗಳ ಗುಂಯ್ ಗುಟ್ಟುವಿಕೆಯೇನು
ಆಘ್ರಾಣಿಸೆ ಸುವಾಸನೆಯಿದೇನು|

ದಿನವೊಂದಾಗೆ ಉದುರಿ ಬೀಳುವಂತಹುದಲ್ಲ
ನೀರೆರೆದಿಲ್ಲ
ಗೊಬ್ಬರವೇನೂ ಬೇಕಿಲ್ಲ
ರೋಗಬಾಧೆ ಇಲ್ಲಿಲ್ಲ
ಕೀಟನಾಶಕಗಳ ಹಂಗಿಲ್ಲ|

ಅರಳಿ ನಿಂತಿಹ ವೈಚಿತ್ರ್ಯವಿದೇನು
ಜೈವಿಕ ಗಡಿಯಾರವಿದೇನು
ಋತುಗಾನವಿದೇನು
ಶ್ರಾವಣ ಮುಗಿಯುವ ತನಕ|